ನಟ ಪ್ರಣಮ್ ದೇವರಾಜ್ ಜತೆಗೆ ಪುರಾತನ ಫಿಲಂಸ್ ಮತ್ತೊಂದು ಚಿತ್ರ
ಇತ್ತೀಚೆಗಷ್ಟೇ ಪ್ರಣಮ್ ದೇವರಾಜ್ ನಟನೆಯ ಸನ್ ಆಫ್ ಮುತ್ತಣ್ಣ’ ಎಂಬ ಚಿತ್ರ ನಿರ್ಮಿಸಿದ್ದ ಪುರಾತನ ಫಿಲಂಸ್ ಇದೀಗ ಮತ್ತೊಂದು ಚಿತ್ರ ಪ್ರಕಟಿಸಿದೆ

ಕನ್ನಡ ಚಿತ್ರೋದ್ಯಮದಲ್ಲಿ ಉತ್ತಮ ಸದಭಿರುಚಿಯ ಸಿನಿಮಾಗಳನ್ನು ನಿರ್ಮಾಣ ಮಾಡಬೇಕೆಂಬ ಆಶಯ ಇಟ್ಟುಕೊಂಡು ಬಂದಿರುವ ಪುರಾತನ ಫಿಲಂಸ್ “ಪ್ರೊಡಕ್ಷನ್ ನಂ.2” ಎಂಬ ತಾತ್ಕಾಲಿಕ ಶೀರ್ಷಿಕೆಯಡಿ ಮತ್ತೊಂದು ಚಿತ್ರವನ್ನು ಪ್ರಕಟಿಸಿದೆ.
ಈ ಚಿತ್ರದಲ್ಲೂ ಸಹ ಪ್ರಣಮ್ ದೇವರಾಜ್ ಅವರೇ ನಾಯಕನಾಗಿ ನಟಿಸುತ್ತಿದ್ದಾರೆ. ಬ್ಯಾನರ್ ನ ಎರಡೂ ಚಿತ್ರಗಳಲ್ಲಿ ನಾಯಕನಾಗಿ ನಟಿಸುತ್ತಿರುವ ಯುವನಟ ಪ್ರಣಮ್ ದೇವರಾಜ್ ಅವರಿಗೆ ಈ ಮೂಲಕ ಹುಟ್ಟುಹಬ್ಬದ ಶುಭಾಶಯಗಳನ್ಬು ತಿಳಿಸಿದೆ. ಈ ಚಿತ್ರಕ್ಕೂ ಸಹ ಶ್ರೀಕಾಂತ್ ಹುಣಸೂರು ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

ಮೊದಲ ಚಿತ್ರದಲ್ಲಿ ತಂದೆ – ಮಗನ ಬಾಂಧವ್ಯದ ಕಥೆ ಹೇಳಿದ್ದ ನಿರ್ದೇಶಕ ಶ್ರೀಕಾಂತ್ ಹುಣಸೂರು, ಈ ಚಿತ್ರದ ಮೂಲಕ ಆಕ್ಷನ್ ಹಿನ್ನೆಲೆಯಲ್ಲಿ ನಡೆಯೋ ಪ್ರೇಮ ಕಥೆಯೊಂದನ್ನು ಹೇಳಹೊರಟಿದ್ದಾರೆ.
ನಾಯಕ ಪ್ರಣಮ್ ದೇವರಾಜ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿಯೇ ಪ್ರಣಮ್ – ಶ್ರೀಕಾಂತ್ ಕಾಂಬಿನೇಶನ್ ನ ಹೊಸ ಚಿತ್ರ ಘೋಷಿಸಿದ್ದು, ಇದೇ ಮಾರ್ಚ್ ತಿಂಗಳಲ್ಲಿ ಚಿತ್ರದ ಚಿತ್ರೀಕರಣ ಪ್ರಾರಂಭಿಸಲಾಗುವುದು ಎಂದು ನಿರ್ಮಾಪಕರು ತಿಳಿಸಿದ್ದಾರೆ.
ಸದ್ಯದಲ್ಲೇ ನೂತನ ಚಿತ್ರ ಸೆಟೇರಲಿದ್ದು ಮುಂದಿನ ದಿನಗಳಲ್ಲಿ ಉಳಿದ ಕಲಾವಿದರು ಹಾಗೂ ತಾಂತ್ರಿಕ ವರ್ಗದ ವಿವರಗಳನ್ನು ಪ್ರಕಟಿಸಲಾಗುವುದು.

