ರಾಜೀವ್ ಕೃಷ್ಣ ನಿರ್ದೇಶನದ “ಚಂದ್ರಗಿರಿ” ಚಿತ್ರದ ವಿಶೇಷ ಪಾತ್ರದಲ್ಲಿ ಹಿರಿಯ ನಟ ದೇವರಾಜ್
ಈಗಾಗಲೇ ಬಿಡುಗಡೆಗೆ ಸಿದ್ದವಾಗಿರುವ “ಮುಗಿಲ ಮಲ್ಲಿಗೆ” ಚಿತ್ರದ ನಿರ್ದೇಶಕ ರಾಜೀವ್ ಕೃಷ್ಣ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿರುವ ಮತ್ತೊಂದು ಚಿತ್ರ “ಚಂದ್ರಗಿರಿ” .ಶಿಲ್ಪಾ ಶ್ರೀನಿವಾಸ್ ನಿರ್ಮಿಸುತ್ತಿದ್ದು ಹಿರಿಯ ನಟ ದೇವರಾಜ್ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ

ಇತ್ತೀಚೆಗಷ್ಟೇ ಚಂದ್ರಗಿರಿ ಚಿತ್ರದ ಹಾಡುಗಳ ಧ್ವನಿಮುದ್ರಣ ಕಾರ್ಯ ಮುಗಿದಿದ್ದು ಮೂರು ಹಾಡುಗಳಿಗೆ ಅನಿರುದ್ಧ ಶಾಸ್ತ್ರಿ, ಕಾರುಣ್ಯ.ಮತ್ತು ಶ್ರೀಕೃಷ್ಣ ದನಿಯಾಗಿದ್ದಾರೆ,ದೈವ ಮತ್ತು ಆತ್ಮವೊಂದರ ನಡುವಿನ ಹೋರಾಟದ ಕಥೆ ಈ ಚಿತ್ರದಲ್ಲಿದೆ.
ಪ್ರತಿ ಅಮಾವಾಸ್ಯೆಯ ದಿನ ಕಾಣಿಸಿಕೊಳ್ಳುವ ಎರಡು ಶವಗಳು, ಮತ್ತು ಚಂದ್ರಗಿರಿ ಊರಿನ ಬೀದಿ ಬೀದಿಗಳಲ್ಲಿ ರಕ್ತದ ಕಲೆ, ಆ ಇಬ್ಬರು ಹೇಗೆ ಸತ್ತರು ಎಂಬ ನಿಗೂಢ,ಅದನ್ನು ಭೇದಿಸಲು ಬರುವವರಿಗೆ ಗೋಚರವಾಗುವ ಅಗೋಚರ ಶಕ್ತಿ. ಆ ಅಗೋಚರ ಶಕ್ತಿಯು ದೈವದ ನೆಲೆಯನ್ನು ಧ್ವಂಸ ಮಾಡಲು ಆತ್ಮಗಳನ್ನು ಸಿದ್ದಪಡಿಸುವ ದುಷ್ಟರನ್ನು ಹೇಗೆ ದಮನಗೊಳಿಸುತ್ತದೆ ಎಂಬುದನ್ನು ಈ ಚಿತ್ರದಲ್ಲಿ ಹೇಳಲಾಗಿದೆ.

ಹಾರರ್, ಸಸ್ಪೆನ್ಸ್, ಥ್ರಿಲ್ಲರ್ ಜಾನರ್ ಒಳಗೊಂಡ ಚಂದ್ರಗಿರಿ ಚಿತ್ರಕ್ಕೆ ಚಿಕ್ಕಬಳ್ಳಾಪುರ ,ಬೆಳ್ಳಿಕೆರೆ ಮತ್ತು ಹೊಸಕೋಟೆ ಸುತ್ತುಮುತ್ತ ಜ. 8ರಿಂದ ಚಿತ್ರೀಕರಣ ಪ್ರಾರಂಭವಾಗಲಿದೆ.
ಈ ಚಿತ್ರದಲ್ಲಿ ಬಾಹುಬಲಿ ಖ್ಯಾತಿಯ ಕಾಲಕೇಯ ಪ್ರಭಾಕರ್, ಶೋಭರಾಜ್,ಪ್ರಿಯ, ಧನ್ಯ, ಭೂಮಿಕಾಶ್ರೀ, ಮರಿಸ್ವಾಮಿ, ಪಂಚಾಕ್ಷರಯ್ಯ, ಬೆಂಗಳೂರು ಮನು, ಕಿಶೋರ್ ಕಾಸರಗೋಡು, ಮಂಜುನಾಥ್ ಸಾರೊಟ ಹಾಗೂ ಇತರರು ನಟಿಸುತ್ತಿದ್ದು ಉಳಿದ ಕಲಾವಿದರ ಆಯ್ಕೆ ನಡೆಯುತ್ತಿದೆ,ಪ್ರಮೋದ್ ಭಾರತೀಯ ಅವರ ಛಾಯಾಗ್ರಹಣ, ಎಂ. ಎಲ್. ರಾಜ ಅವರ ಸಂಗೀತ, ಆರ್. ಕೆ. ಗಾಂಧಿ ಅವರ ಸಾಹಿತ್ಯ,ವಿನಯ್ ಜಿ. ಆಲೂರು ಅವರ ಸಂಕಲನ, ಮೋಹನ್ ಕುಮಾರ್ ಅವರ ಪ್ರಸಾದನ, ಮಲ್ಲಿಖಾರ್ಜುನ ಅವರ ಕಲೆ, ಮಾರುತಿ ಅವರ ಸಾಹಸ ಈ ಚಿತ್ರಕ್ಕಿದೆ.


