90 percent shooting for the film "Sanju Weds Geeta-2" is completed

“ಸಂಜುವೆಡ್ಸ್ ಗೀತಾ-2” ಚಿತ್ರಕ್ಕೆ ಶೇಕಡಾ 90 ರಷ್ಟು ಚಿತ್ರೀಕರಣ ಪೂರ್ಣ - CineNewsKannada.com

“ಸಂಜುವೆಡ್ಸ್ ಗೀತಾ-2” ಚಿತ್ರಕ್ಕೆ ಶೇಕಡಾ 90 ರಷ್ಟು ಚಿತ್ರೀಕರಣ ಪೂರ್ಣ

ಕನ್ನಡ ಚಿತ್ರರಂಗ ಕಂಡ ಅಪ್ರತಿಮ ಪ್ರತಿಭಾವಂತ ಹಾಸ್ಯ ನಟ, ಯಶಸ್ವಿ ಚಿತ್ರಗಳ ನಿರ್ದೇಶಕ ನಾಗಶೇಖರ್ ಬಹುದಿನಗಳ ನಂತರ ಆಕ್ಷನ್ ಕಟ್ ಹೇಳಿರುವ ಬಹು ನಿರೀಕ್ಷಿತ ಚಿತ್ರ “ಸಂಜು ವೆಡ್ಸ್ ಗೀತಾ-2” ಚಿತ್ರದ ಚಿತ್ರೀಕರಣ ಶೇಕಡಾ 90 ರಷ್ಟು ಪೂರ್ಣಗೊಂಡಿದೆ.

“ಸಂಜು ವೆಡ್ಸ್ ಗೀತಾ-2” ಚಿತ್ರ ಪ್ರಾರಂಭದಿಂದಲೂ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಸಂಜು ಹಾಗೂ ಗೀತಾರ ನವೀನ ಪ್ರೇಮಕಥೆಯನ್ನು ರೇಶ್ಮೆ ಬೆಳೆಯುವ ರೈತರ ಹೋರಾಟದ ಹಿನ್ನೆಲೆ ಇಟ್ಟುಕೊಂಡು ನಾಗಶೇಖರ್ ಹೇಳಹೊರಟಿದ್ದಾರೆ.

ಚಿತ್ರದಲ್ಲಿ ನಟ ಶ್ರೀನಗರ ಕಿಟ್ಟಿ ಜೊತೆ ಮೋಹಕ ತಾರೆ ರಮ್ಯಾ ಬದಲು ರಚಿತಾರಾಮ್ ಎಂಟ್ರಿಯಾಗಿದ್ದಾರೆ. ಈ ಚಿತ್ರದ ಪ್ರೀ ಕ್ಲೈಮ್ಯಾಕ್ಸ್ ದೃಶ್ಯದ ಚಿತ್ರೀಕರಣ ಕಂಠೀರವ ಸ್ಟುಡಿಯೋದಲ್ಲಿ ನಡೆದಿತ್ತು. ಅಲ್ಲಿ ನಾಯಕ ಶ್ರೀನಗರ ಕಿಟ್ಟಿ ಒಬ್ಬ ಸೈನಿಕನ ಗೆಟಪ್ ನಲ್ಲಿದ್ದರು. ಜರ್ಮನ್ ಸೈನಿಕರ ವಿರುದ್ದ ಸೆಣೆಸಾಟ ನಡೆಸಿ ಅವರ ಹಿಡಿತದಿಂದ ರಾಣಿಯನ್ನು ಬಿಡಿಸಿಕೊಂಡು ಬರುವ ಸನ್ನಿವೇಶವದು. ಆ ದೃಶ್ಯವನ್ನು ಗ್ರೀನ್ ಮ್ಯಾಟ್ ನಲ್ಲಿ ಚಿತ್ರೀಕರಿಸಲಾಗುತ್ತಿತ್ತು.

ರೇಶ್ಮೆ ನೂಲಿಗೆ ಉತ್ತಮ ಬೆಲೆ ಸಿಗಬೇಕೆಂದು ಹೋರಾಡುವ ನಮ್ಮ ಮಣ್ಣಿನ ಪ್ರೇಮಿಗಳ ಪ್ರೇಮಕಾವ್ಯವನ್ನು ನಾಗಶೇಖರ್ ಈ ಚಿತ್ರದಲ್ಲಿ ಹೇಳಹೊರಟಿದ್ದಾರೆ. ನಟಿ ರಾಗಿಣಿ ಜೋಡಿಯಾಗಿ ಕಾಣಿಸಿಕೊಳ್ಳುತ್ತಿರುವ ನಟ ಚೇತನ್ ಚಂದ್ರ ಕೂಡ ಈ ಸಂದರ್ಭದಲ್ಲಿ ಹಾಜರಿದ್ದರು.

ಈ ವೇಳೆ ಮಾತಿಗಿಳಿದ ನಿರ್ದೇಶಕ ನಾಗಶೇಖರ್, ಈಗಾಗಲೇ ಚಿತ್ರದ ಶೇಕಡಾ 90 ರಷ್ಟು ಭಾಗದ ಚಿತ್ರೀಕರಣ ಮುಗಿದಿದೆ. ಇದು ಚಿತ್ರದ ಪ್ರಿ ಕ್ಲೈಮ್ಯಾಕ್ಸ್ ಸೀನ್. ಇದರ ನಂತರ ನೆದರ್ ಲ್ಯಾಂಡ್ನಲ್ಲಿ ಚಿತ್ರೀಕರಣ ಮುಂದುವರಿಯುತ್ತದೆ. ನಿರ್ಮಾಪಕ ಕುಮಾರ್ ಅವರ ಸಹಕಾರದಿಂದ ಚಿತ್ರದ ಚಿತ್ರೀಕರಣ ಅಂದುಕೊಂಡ ಪ್ಲಾನ್ ಪ್ರಕಾರ ಸರಾಗವಾಗಿ ಮುಗಿಯುತ್ತಿದೆ. ಹನ್ನೆರಡು ಕೋಟಿ ಅಂದುಕೊಂಡ ಬಜೆಟ್ ಈಗ ಹದಿನೈದು ಕೋಟಿ ಮೊತ್ತವಾಗಿದೆ ಎಂದರು

ಶೂಟಿಂಗ್ ಜೊತೆಗೇ ಎಡಿಟಿಂಗ್ ಸೇರಿದಂತೆ ಚಿತ್ರದ ಪೋಸ್ಟ್ ಪ್ರೊಡಕ್ಷನ್ಸ್ ಕೆಲಸಗಳು ಬಹುತೇಕ ಮುಗಿದಿವೆ ಅಂದುಕೊಂಡ ಹಾಗೆ ದಸರಾ ವೇಳೆಗೆ ಚಿತ್ರವನ್ನು ತೆರೆಗೆ ತರಲು ಪ್ರಯತ್ನ ಮಾಡುತ್ತಿದ್ದೇವೆ. ಈಗಾಗಲೇ ಸ್ವಿಟ್ಜರ್ ಲ್ಯಾಂಡ್ ನಲ್ಲಿ 15 ದಿನ ಹನ್ನೊಂದು ಲೊಕೇಶನ್ ಗಳಲ್ಲಿ ಚಿತ್ರೀಕರಣ ಮಾಡಿದ್ದೇವೆ. ಈಗ ನೆದರ್ ಲ್ಯಾಂಡ್ ಗೆ ಹೋಗ್ತಿದ್ದೇವೆ ಎಂದು ಹೇಳಿದರು.

ನಿರ್ಮಾಪಕ ಛಲವಾದಿ ಕುಮಾರ್, ಈಗಾಗಲೇ ನಾವು ಶೂಟಿಂಗ್ ಕೊನೇ ಹಂತಕ್ಕೆ ಬಂದಿದ್ದೇವೆ. ಅಂದುಕೊಂಡ ಹಾಗೆ ಚಿತ್ರ ಮೂಡಿಬರುತ್ತಿದೆ. ಒಂದು ಅದ್ಭುತ ದೃಶ್ಯಕಾವ್ಯವಾಗಿ ಸಂಜು ವೆಡ್ಸ್ ಗೀತಾ ಚಿತ್ರ ಮೂಡಿಬರಬೇಕು ಎನ್ನುವುದೇ ನಮ್ಮ ಉದ್ದೇಶ ಎಂದು ಮಾಹಿತಿ ಹಂಚಿಕೊಂಡರು

ಪವಿತ್ರಾ ಇಂಟರ್ ನ್ಯಾಷನಲ್ ಮೂವೀಮೇಕರ್ಸ್ ಅಡಿಯಲ್ಲಿ ನಿರ್ಮಾಪಕ ಛಲವಾದಿ ಕುಮಾರ್ ಅವರು ಚಿತ್ರವನ್ನು ಅದ್ದೂರಿ ಬಜೆಟ್ ನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ನಾಗಶೇಖರ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

ಸಂಗೀತ ನಿರ್ದೇಶಕ ಶ್ರೀಧರ ವಿ. ಸಂಭ್ರಮ 5 ಸುಂದರವಾದ ಹಾಡುಗಳನ್ನು ಮಾಡಿದ್ದು, ಸೋನು ನಿಗಂ, ಶ್ರೇಯಾ ಘೋಷಾಲ್, ಮಂಗ್ಲಿ ದನಿಯಾಗಿದ್ದಾರೆ.

ರಾಗಿಣಿ ದ್ವಿವೇದಿ, ಚೇತನ್ ಚಂದ್ರ, ರಂಗಾಯಣ ರಘು, ಸಾಧು ಕೋಕಿಲ , ತಬಲಾನಾಣಿ, ಗಿಚ್ಚಿಗಿಲಿಗಿಲಿ ವಿನೋದ್ ಅಲ್ಲದೆ ಖಳನಟ ಸಂಪತ್ ಕುಮಾರ್ ಸೇರಿದಂತೆ ಹೆಸರಾಂತ ಕಲಾವಿದರ ತಾರಾಗಣ ಈ ಚಿತ್ರಕ್ಕಿದೆ. ಎ24 ಕ್ರಿಯೇಶನ್ಸ್ ಥ್ರೂ ಗೋಕುಲ್ ಫಿಲಂಸ್ ಈ ಚಿತ್ರವನ್ನು ಪ್ರಪಂಚದಾದ್ಯಂತ ಬಿಡುಗಡೆ ಮಾಡುತ್ತಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin