ನಟ ಶ್ರೀನಗರ ಕಿಟ್ಟಿಹುಟ್ಟುಹಬ್ಬಕ್ಕೆ ವೇಷಗಳು ಚಿತ್ರದ ವಿಶೇಷ ಹಾಡು ಬಿಡುಗಡೆ
ನಟ ಶ್ರೀನಗರ ಕಿಟ್ಟಿ ಹುಟ್ಟುಹಬ್ಬದ ಅಂಗವಾಗಿ ಪತ್ರಕರ್ತ ರವಿ ಬೆಳಗೆರೆ ಅವರ ಜೋಗತಿಯರ ಜೀವನದ ಬಗ್ಗೆ ರಚಿಸಿದ ‘ವೇಷಗಳು’ ಕಥೆಯನ್ನಾಧರಿಸಿ ನಿರ್ಮಾಣವಾಗುತ್ತಿರುವ ವೇಷಗಳು, ಲವ್ ಕೇಸ್ ಹಾಗೂ ಮದರ್ ಲವ್ ಚಿತ್ರಗಳ ಪತ್ರಿಕಾಗೋಷ್ಠಿ ಏಕಕಾಲದಲ್ಲಿ ನಡೆಯಿತು

ಕಿಟ್ಟಿ ಅವರ ಬಹುನಿರೀಕ್ಷಿತ ವೇಷಗಳು ಚಿತ್ರದಲ್ಲಿ ಕಿಟ್ಟಿ ಅವರೇ ದನಿಯಾಗಿರುವ ವಿಶೇಷ ಹಾಡನ್ನು ಬಿಡುಗಡೆ ಮಾಡಲಾಯಿತು. ಕಿಶನ್ ರಾವ್ ದಳವಿ ಈ ಚಿತ್ರಕ್ಕೆ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.ಚಿತ್ರದಲ್ಲಿ ಬಸಪ್ಪ ಹಾಗೂ ಬಸಮ್ಮ ಜೋಗತಿ ಹೀಗೆ ಎರಡು ಶೇಡ್ ಇರುವ ಪಾತ್ರ ನಿರ್ವಹಿಸಿದ್ದಾರೆ. ವೇಷಗಳು ಚಿತ್ರದಲ್ಲಿ ನಮ್ಮ ಜೋಗತಿಯರ ಬಗ್ಗೆ ಹಾಗೂ ಅವರ ಜೀವನ ಶೈಲಿಯ ಕುರಿತಂತೆ ಹೇಳಲಾಗುತ್ತಿದೆ. ಈಗಾಗಲೇ 12 ದಿನಗಳ ಮೊದಲ ಹಂತದ ಚಿತ್ರೀಕರಣ ಮುಗಿದಿದೆ.
ನಿರ್ದೇಶಕ ಕಿಶನ್ ರಾವ್ ಮಾತನಾಡಿ ಸದ್ಯ ಒಂದು ಹಂತದ ಶೂಟಿಂಗ್ ಆಗಿದ್ದು, ಕಿಟ್ಟಣ್ಣನವರ ಭಾಗ ಇನ್ನೂ ಆರಂಭವಾಗಿಲ್ಲ. ಎರಡನೇ ಹಂತದ ಚಿತ್ರೀಕರಣಕ್ಕಾಗಿ ಸವದತ್ತಿ ಹಾಗೂ ಉತ್ತರ ಭಾರತದ ಮಹಾಕಾಲೇಶ್ವರ ಇಲ್ಲೆಲ್ಲ ಹೋಗಬೇಕಾಗಿದೆ. ಚಿತ್ರದಲ್ಲಿ ಬಹುತೇಕ ಬಳ್ಳಾರಿ ಕನ್ನಡ ಭಾಷೆಯನ್ನು ಬಳಸಲಾಗಿದೆ ಎಂದು ಮಾಹಿತಿ ನೀಡಿದರು.
ನಟ ಶ್ರೀನಗರ ಕಿಟ್ಟಿ ಮಾತನಾಡಿ ಈ ಮೂರೂ ಚಿತ್ರಗಳು ತುಂಬಾ ಚೆನ್ನಾಗಿ ಮೂಡಿ ಬರ್ತಿವೆ. ಅದರಲ್ಲೂ ವೇಷಗಳು ತುಂಬಾ ವಿಶೇಷವಾದ ಚಿತ್ರ. ಎರಡನೇ ಹಂತದ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದೇನೆ. 3 ಜನ ನಿರ್ದೇಶಕರಿದ್ದಾರೆ, ಬರೀ ಬೇರೆ ಭಾಷೆಯ ಚಿತ್ರಗಳನ್ನು ಹೊಗಳುವುದಲ್ಲ, ಕನ್ನಡದಲ್ಲೂ ಒಳ್ಳೆಯ ನಿರ್ದೇಶಕರಿದ್ದಾರೆ. ರವಿ ಬೆಳಗೆರೆ ಉದ್ದೇಶ ಹಾಗೂ ಆಶಯಗಳನ್ನು ಇಟ್ಟುಕೊಂಡು ಸೌಜನ್ಯ ಹಾಗೂ ಕಿಶನ್ ತುಂಬಾ ಚೆನ್ನಾಗಿ ಕೆಲಸ ಮಾಡ್ತಿದಾರೆ ಸುಮಾರು 5 ರಿಂದ 5.5 ಕೋಟಿ ಬಜೆಟ್ ನಲ್ಲಿ ಚಿತ್ರ ಮುಗಿಸಿಕೊಡುತ್ತೇವೆ ಎಂದರು

ಇಡೀ ಚಿತ್ರದಲ್ಲಿ ಬಸಪ್ಪ ಪಾತ್ರವೇ ಬಹುತೇಕ ಆವರಿಸಿಕೊಂಡಿದೆ. ಶ್ರೀನಗರ ಕಿಟ್ಟಿ ಅವರು ಜೋಗತಿ ಪಾತ್ರಕ್ಕಾಗಿ ಸಾಕಷ್ಟು ಮಾಹಿತಿ ಪಡೆದುಕೊಂಡು ಸಿದ್ದತೆ ಮಾಡಿಕೊಂಡಿದ್ದಾರೆ.
ಸಂಗೀತ ನಿರ್ದೇಶಕ ಕೌಶಿಕ್ ಹರ್ಷ ಮಾತನಾಡಿ ತತ್ವಪದ ಆಗಿರಬೇಕು. ಆದರೆ ಕಥೆಯನ್ನು ಹೇಳಬಾರದು ಎಂದುಕೊಂಡು ಮಾಡಿದ ಹಾಡಿದು. ಕಿಟ್ಟಿ ಅವರ ಕೇವಲ 3 ಗಂಟೆಯೊಳಗೆ ಹಾಡನ್ನು ಹಾಡಿದರು ಎಂದು ಹೇಳಿದರು.
ರಾಜ್ ಗುರು ದತ್ತರಾಜ್ ಸಂಭಾಷಣೆ, ಅಕ್ಷಯ್ ಪಿ.ರಾವ್ ಸಂಕಲನ ಈ ಚಿತ್ರಕ್ಕಿದೆ.

