ಚಿತ್ರೀಕರಣದ ಅಖಾಡಕ್ಕಿಳಿದ ” ಬಿಲ್ಲ ರಂಗ ಭಾಷಾ”
ಕಿಚ್ಚ ಸುದೀಪ್ ಅಭಿಮಾನಿಗಳು ಕಾಯ್ತಿದ್ದ ಆ ಕ್ಷಣ ಬಂದೇ ಬಿಟ್ಟಿದ್ದೆ. ಬಹು ನಿರೀಕ್ಷಿತ ” ಬಿಲ್ಲ ರಂಗ ಭಾಷಾ” ಚಿತ್ರದ ಚಿತ್ರೀಕರಣ ಆರಂಭವಾಗಿದೆ. ವಿಶೇಷವಾದ ಪೋಸ್ಟರ್ ಮೂಲಕ ಚಿತ್ರತಂಡ ಶೂಟಿಂಗ್ ಆರಂಭವಾಗಿದೆ ಎಂದು ಹೇಳಿದೆ.
ವಿಕ್ರಾಂತ್ ರೋಣಾ ಚಿತ್ರದ ಬಳಿಕ ನಟ ಕಿಚ್ಚ ಸುದೀಪ್ ಮತ್ತು ನಿರ್ದೇಶಕ ಅನೂಪ್ ಭಂಡಾರಿ ಕಾಂಬಿನೇಷನ್‍ನ ಎರಡನೇ ಚಿತ್ರ. ಹೀಗಾಗಿ ಚಿತ್ರ ಮತ್ತಷ್ಟು ಕುತೂಹಲ ಹೆಚ್ಚು ಮಾಡಿದೆ

ನಿರ್ದೇಶಕ ಅನೂಪ್ ಭಂಡಾರಿ ಮಾತನಾಡಿ, 20 ದಿನಗಳ ಕಾಲ ಮೊದಲ ಹಂತದ ಚಿತ್ರೀಕರಣ ನಡೆಸುತ್ತೇವೆ. ಚಿತ್ರದ ಪ್ರಮುಖ ಆಕ್ಷನ್ ಚಿತ್ರೀಕರಣ ನಡೆಯಲಿದೆ. ಅದಕ್ಕಾಗಿ ಅದ್ಭುತ ಸೆಟ್ ಕೆಲಸ ನಡೆಯುತ್ತಿತ್ತು.ಈಗ ಪೂರ್ಣಗೊಂಡಿದ್ದು ಚಿತ್ರೀಕರಣಕ್ಕೆ ಸಿದ್ಧವಾಗಿದೆ. ಮೊದಲ ಹಂತದ ಚಿತ್ರೀಕರಣ ಮುಗಿಸಿದ ಬಳಿಕ ಬ್ರೇಕ್ ತೆಗೆದುಕೊಂಡು ಮುಂದಿನ ಹಂತದ ಶೂಟಿಂಗ್ ಗೆ ಸಜ್ಜಾಗುತ್ತೇವೆ ಎಂದು ತಿಳಿಸಿದ್ದಾರೆ.
ಈ ಹಿಂದೆ ಸುದೀಪ್ ಅವರೇ ಹೇಳಿಕೊಂಡಿರುವಂತೆ ಅವರ ಸಿನಿಕರಿಯರ್ ನ ಬಹುದೊಡ್ಡ ಬಜೆಟ್ ಚಿತ್ರ ಇದಾಗಿದೆ. ಟಾಲಿವುಡ್ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ಹನುಮಾನ್ ನಿರ್ಮಾಪಕರಾದ ನಿರಂಜನ್ ರೆಡ್ಡಿ ಹಾಗೂ ಚೈತನ್ಯ ರೆಡ್ಡಿ ಅವರು ಬಿಲ್ಲ ರಂಗ ಭಾಷಾ ಚಿತ್ರಕ್ಕೆ ಹಣ ಹಾಕುತ್ತಿದ್ದಾರೆ. ತಮ್ಮದೇ ಪ್ರೈಮ್ ಶೋ ಎಂಟರ್ ಟೈನ್ಮೆಂಟ್ ಬ್ಯಾನರ್ ನಡಿ ಚಿತ್ರವನ್ನು ಅವರು ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ.

