ನವಂಬರ್ 14ಕ್ಕೆ ‘ಬ್ರಾಟ್’ ಚಿತ್ರ ಬಿಡುಗಡೆ: ಸಿನಿಮಾದ “ಗಂಗಿ ಗಂಗಿ” ಹಾಡಿಗೆ ಮೆಚ್ಚುಗೆ ಮಹಾಪೂರ
ಕನ್ನಡ ಸೇರಿದಂತೆ ಪಂಚಭಾಷೆಯಲ್ಲಿ ಮೂಡಿಬರುತ್ತಿರುವ “ಬ್ರಾಟ್” ಚಿತ್ರದ ‘ಗಂಗಿ ಗಂಗಿ ಕಟ್ಕೋಬೇಡ ಲುಂಗಿ..” ಹಾಡು ಬಿಡುಗಡೆಯಾಗಿದ್ದು ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ. ಈ ಹಾಡಿಗೆ ಬಾಳು ಬೆಳಗುಂದಿ ಸಾಹಿತ್ಯ ಬರೆದು ಧ್ವನಿಯಾಗಿದ್ದಾರೆ. ಗಾಯಕಿ ಇಂದು ನಾಗರಾಜ್ ಜೊತೆಯಾಗಿದ್ದಾರೆ

ಹಿರಿಯ ನಿರ್ದೇಶಕ ಶಶಾಂಕ್ ಆಕ್ಷನ್ ಕಟ್ ಹೇಳಿರುವ “ಬ್ರಾಟ್” ಚಿತ್ರದಲ್ಲಿ ನಟ ಡಾರ್ಲಿಂಗ್ ಕೃಷ್ಣ ಮತ್ತು ಮನಿಶಾ ಕಂದಕೂರ್ ನಾಯಕ ನಾಯಕಿಯಾಗಿ ಕಾಣಿಸಿಕೊಂಡಿದ್ದು “ಫಸ್ಟ್ ರ್ಯಾಂಕ್ ರಾಜು” ಚಿತ್ರ ನಿರ್ಮಿಸಿದ್ದ ಮಂಜುನಾಥ್ ಕಂದಕೂರ್ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ, ಸಂಗೀತ ಮಾಂತ್ರಿಕ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ
ಗಂಗಿ ಗಂಗಿ ಹಾಡಿನಲ್ಲಿ ಡಾರ್ಲಿಂಗ್ ಕೃಷ್ಣ ಹಾಗೂ ಅನೈರಾ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಬಾಳು ಬೆಳಗುಂದಿ ಗಾಯನಕ್ಕೆ ಹಾಗೂ ಸಾಹಿತ್ಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಹಾಡು ಬಿಡುಗಡೆ ಬಳಿಕ ಮಾತಿಗಿಳಿದ ಗಾಯಕ ಬಾಳು ಬೆಳಗುಂದಿ, ಕುರಿ ಕಾಯುವ ವೇಳೆ ಅನೇಕ ಜನಪದ ಗೀತೆ ರಚಿಸಿ ಹಾಡುತ್ತಿದ್ದೆ. “ಸರಿಗಮಪ” ಸ್ಪರ್ಧಿಯಾದೆ.ಅರ್ಜುನ್ ಜನ್ಯ ಅವರು ಸಿನಿಮಾದಲ್ಲಿ ಹಾಡಿಸುವುದಾಗಿ ಹೇಳಿದ್ದರು ಅದರಂತೆ ಬ್ರಾಟ್ ಚಿತ್ರದಲ್ಲಿ ಅವಕಾಶ ನೀಡಿದ್ದಾರೆ,ಇಡೀ ತಂಡಕ್ಕೆ ಧನ್ಯವಾದ ಎಂದು ಹೇಳಿದರು
ನಿರ್ದೇಶಕ ಶಶಾಂಕ್ ಮಾತನಾಡಿ “ಬ್ರ್ಯಾಟ್” ಎಂದರೆ ತರ್ಲೆ ಹುಡುಗ ಹಾಗೂ ದಾರಿ ತಪ್ಪಿದ ಮಗ ಎನ್ನಬಹುದು. ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿದ್ದರೂ ಅಪ್ಪ – ಮಗನ ಕಥೆಯೂ ಚಿತ್ರದಲ್ಲಿದೆ. ಸಿದ್ ಶ್ರೀರಾಮ್ ಹಾಡಿರುವ “ನಾನೇ ನೀನಂತೆ” ಹಾಡು ಮಿಲಿಯನ್ ಗಟ್ಟಲೆ ವೀಕ್ಷಣೆಯಾಗಿದೆ. ಈಗ “ಗಂಗಿ ಗಂಗಿ” ಹಾಡು ಬಿಡುಗಡೆಯಾಗಿದೆ. ನನ್ನ ಹಾಗೂ ಡಾರ್ಲಿಂಗ್ ಕೃಷ್ಣ ಅವರ ಕಾಂಬಿನೇಷನ್ ನಲ್ಲಿ ಬಂದಿದ್ದ “ಕೌಸಲ್ಯ ಸುಪ್ರಜಾ ರಾಮ” ಎಲ್ಲರ ಮನ ಗೆದ್ದಿತ್ತು. “ಬ್ರ್ಯಾಟ್” ಚಿತ್ರ ನವೆಂಬರ್ 14 ರಂದು ಬಿಡುಗಡೆಯಾಗುತ್ತಿದೆ ಎಂದರು.
ನಾಯಕ ಡಾರ್ಲಿಂಗ್ ಕೃಷ್ಣ ಮಾತನಾಡಿ ಹಾಡಿಗೆ ಹೆಜ್ಜೆ ಹಾಇ ಮೂರುನಾಲ್ಕು ವರ್ಷಗಳೇ ಆಗಿತ್ತು. ಈ ಹಾಡಿಗೆ ಈ ರೀತಿ ನೃತ್ಯ ಮಾಡಿದ್ದೇನೆ . ಅದಕ್ಕೆ ನಿರ್ದೇಶಕ ಶಶಾಂಕ್ ಅವರೆ ಕಾರಣ. ಚಿತ್ರದಲ್ಲಿ ನನ್ನ ಲುಕ್ ಕೂಡ ಹೊಸತಾಗಿದೆ . ಈ ಎಲ್ಲಾ ಕ್ರೆಡಿಟ್ ನಿರ್ದೇಶಕರಿಗೆ ಸೇರಬೇಕು. “ಗಂಗಿ ಗಂಗಿ” ಹಾಡು ಇಷ್ಟು ಅದ್ದೂರಿಯಾಗಿ ಮೂಡಿ ಬರಲು ನಿರ್ಮಾಪಕ ಮಂಜುನಾಥ್ ಕಂದಕೂರ್ ಅವರಿಗಿರುವ ಸಿನಿಮಾ ಪ್ರೀತಿ. ಇಡೀ ಸಿನಿಮಾ ಇಷ್ಟೇ ಅದ್ದೂರಿಯಾಗಿ ಮೂಡಿಬಂದಿದೆ. ಬಾಳು ಬೆಳಗುಂದಿ ಅವರ ಸಾಹಿತ್ಯ, ಗಾಯನ ಹಾಗೂ ಅರ್ಜುನ್ ಜನ್ಯ ಅವರ ಸಂಗೀತ ಸಂಯೋಜನೆ ಸೊಗಸಾಗಿದೆ ಎಂದು ತಿಳಿಸಿದರು.

ನಾಯಕಿ ಮನಿಶಾ ಕಂದಕೂರ್ ಮಾತನಾಡಿ ಕನ್ನಡದಲ್ಲಿ ನನ್ನ ಮೊದಲ ಚಿತ್ರ. ಚಿತ್ರದಲ್ಲಿ ನನ್ನದು ಮಧ್ಯಮವರ್ಗದ ಹುಡುಗಿ ಪಾತ್ರ. ಚಿತ್ರದಲ್ಲೂ ಪಾತ್ರದ ಹೆಸರು ಮನಿಶಾ. “ಗಂಗಿ ಗಂಗಿ” ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು
ನಿರ್ಮಾಪಕ ಮಂಜುನಾಥ್ ಕಂದಕೂರ್ ಮಾಹಿತಿ ನೀಡಿ `ಫಸ್ಟ್ ರ್ಯಾಂಕ್ ರಾಜು” ಚಿತ್ರದ ನಂತರ ನಿರ್ಮಿಸಿರುವ ಚಿತ್ರ “ಬ್ರ್ಯಾಟ್”. ಶಶಾಂಕ್ ಕಥೆ ಕೇಳಿ ಬಹಳ ಇಷ್ಟವಾಯಿತು. ಹಾಗಾಗಿ ನಿರ್ಮಾಣಕ್ಕೆ ಮುಂದಾದೆ. ಡಾರ್ಲಿಂಗ್ ಕೃಷ್ಣ ಹಾಗೂ ಶಶಾಂಕ್ ಅವರ ಕಾಂಬಿನೇಶನ್ ನ ಮತ್ತೊಂದು ಸೂಪರ್ ಹಿಟ್ ಚಿತ್ರ ಇದಾಗಲಿದೆ ಎಂದು ಭವಿಷ್ಯ ನುಡಿದರು
ಚಿತ್ರದಲ್ಲಿ ನಟಿಸಿರುವ ಡ್ಯಾಗನ್ ಮಂಜು, ಕಿದ್ವಾಯ್ ಸಂಸ್ಥೆಯ ವೈದ್ಯ ರಾಮಚಂದ್ರ ಹಾಗೂ ಬದರಿನಾಥ್ ಮತ್ತಿತರಿದ್ದರು, ಆನಂದ್ ಆಡಿಯೋ ಮೂಲಕ “ಬ್ರ್ಯಾಟ್” ಚಿತ್ರದ ಹಾಡುಗಳು ಬಿಡುಗಡೆಯಾಗಿದೆ.


