ವಿಚ್ಚೇಧನದ ನಂತರ ರೀಲ್ ಲೈಫ್‍ನಲ್ಲಿ ಮುಖಾಮುಖಿಯಾದ ಚಂದನ್-ನಿವೇದಿತಾ ಗೌಡ

ಡೈವೋರ್ಸ್ ನಂತರ ಮೊದಲಬಾರಿಗೆ ಮುಖಾಮಖಿಯಾದ ರಾಪರ್ ಚಂದನ್ ಶೆಟ್ಟಿ ಮತ್ತು ಕಿರುತೆರೆ ಕಲಾವಿದೆ ನಿವೇದಿತಾ ಗೌಡ ಜೊತೆಯಾಗಿ ಕಾಣಿಸಿಕೊಂಡಿದ್ದು ಮತ್ತೆ ಒಂದಾಗುತ್ತಾರೆ ಎನ್ನುವ ಕುತೂಹಲ ಮನೆ ಮಾಡಿದೆ
ಅರೆ ಅವರು ಒಂದಾಗಿರುವುದು ರಿಯಲ್ ಲೈಫ್‍ನಲ್ಲಿ ಅಲ್ಲ, ಬದಲಾಗಿ ರೀಲ್ ಲೈಫ್‍ನಲ್ಲಿ. ಅದುವೇ ” ಮುದ್ದು ರಾಕ್ಷಿಸಿ” ಚಿತ್ರದಲ್ಲಿ. ಮಾಜಿ ದಂಪತಿ ಕಾಣಿಸಿಕೊಂಡಿದ್ದಾರೆ. ಇಬರಿಬ್ಬರ ಜೋಡಿ ಮತ್ತೆ ಕಾಣಿಸಿಕೊಂಡಿದ್ದು ಒಂದಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಪುನೀತ್ ಶ್ರೀನಿವಾಸ್ ಅವರ ನಿರ್ದೇಶನದ ಸೈಕೋ ಥ್ರಿಲ್ಲರ್ ಕಥಾಹಂದರ ಹೊಂದಿದ ಚಿತ್ರ ‘ಮುದ್ದು ರಾಕ್ಷಸಿ’. ಶ್ರೀಚೌಡೇಶ್ವರಿ ಸಿನಿ ಕಂಬೈನ್ಸ್ ಮೂಲಕ ಮೋಹನ್ ಕುಮಾರ್ ಬಿಗ್ ಬಜೆಟ್ ನಲ್ಲಿ ನಿರ್ಮಾಣ ಮಾಡುತ್ತಿರುವ ಈ ಚಿತ್ರದಲ್ಲಿ ಬಿಗ್ ಬಾಸ್ ಖ್ಯಾತಿಯ ಚಂದನ್ ಶೆಟ್ಟಿ ಹಾಗೂ ನಿವೇದಿತಾಗೌಡ ಮೊದಲಬಾರಿಗೆ ಒಟ್ಟಿಗೇ ನಟಿಸಿದ್ದಾರೆ.
ರಿಯಲ್ ಲೈಫ್ ಜೋಡಿಯಾಗಿದ್ದ ಚಂದನ್ ಶೆಟ್ಟಿ- ನಿವೇದಿತಾಗೌಡ ವಿಚ್ಚೇದನ ಪಡೆದ ನಂತರ ಬಾಕಿ ಉಳಿದಿದ್ದ ಕೆಲ ಭಾವನಾತ್ಮಕ ದೃಶ್ಯಗಳ ಚಿತ್ರೀಕರಣವನ್ನು ಇತ್ತೀಚೆಗೆ ಬನ್ನೇರುಘಟ್ಟ ರಸ್ತೆಯ ವಜ್ರಮುನಿ ಫಾರಂ ಹೌಸ್ ನಲ್ಲಿ ನಡೆಸಲಾಯಿತು. ಈ ವೇಳೆ ಡೈವೋರ್ಸ್ ನಂತರ ಮೊದಲಬಾರಿಗೆ ಚಂದನ್, ನಿವೇದಿತಾ ಮುಖಾಮುಖಿಯಾದರು.
ಅಲ್ಲಿ ಇಬ್ಬರೂ ಒಬ್ಬರನ್ನೊಬ್ಬರು ಅಪ್ಪಿಕೊಂಡು ಬೀಳ್ಕೊಡುವ ಸೀನ್ ಚಿತ್ರೀಕರಿಸಲಾಯಿತು. ಈ ಸಂದರ್ಭದಲ್ಲಿ ಗ್ಲಿಸರಿನ್ ಹಾಕದಿದ್ದರೂ ನಿವೇದಿತಾ ಕಣ್ಣಂಚಲ್ಲಿ ನೀರು ತುಂಬಿಬಂತು. ಅಲ್ಲಿ ನೆರೆದಿದ್ದ ಚಿತ್ರತಂಡದ ಎಲ್ಲರೂ ಒಂದು ಕ್ಷಣ ಭಾವುಕರಾದರು. ಅಲ್ಲಿದ್ದ ಎಲ್ಲರ ಮನದಲ್ಲೂ ಓಡುತ್ತಿದ್ದುದು ಒಂದೇ, ಈ ಜೋಡಿ ಮತ್ತೆ ಒಂದಾಗಬೇಕು ಅನ್ನೋದು. ಇದರೊಂದಿಗೆ ಮುದ್ದುರಾಕ್ಷಸಿ ಚಿತ್ರದ ಶೂಟಿಂಗ್ ಬಹುತೇಕ ಮುಕ್ತಾಯಗೊಂಡಿತು.
ಪುನೀತ್ ಶ್ರೀನಿವಾಸ್ ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕೆ ಬೆಂಗಳೂರು ಸುತ್ತಮುತ್ತ ಶೂಟಿಂಗ್ ನಡೆಸಲಾಗಿದೆ. ವಿಭಿನ್ನ ರೊಮ್ಯಾಂಟಿಕ್ ಲವ್ ಸ್ಟೋರಿ ಜೊತೆಗೆ ಸೈಕೋಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರ ಮುದ್ದುರಾಕ್ಷಸಿ. ಈ ಚಿತ್ರದ ಹಾಡುಗಳಿಗೆ ಎಂ.ಎಸ್. ತ್ಯಾಗರಾಜ್ ಸಂಗೀತ ಸಂಯೋಜನೆ ಮಾಡಿದ್ದು, ಎ.ಕರುಣಾಕರ್ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ.