ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ಜನ್ಮದಿನೋತ್ಸವ ಅರ್ಥ ಪೂರ್ಣ ಆಚರಣೆ

1984ರಲ್ಲಿ ‘ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ’ಕ್ಕೆ ಬುನಾದಿ ಹಾಕಿದ ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ 90ನೇ ಜನ್ಮ ದಿನೋತ್ಸವ ಸಂಘದ ಅಧ್ಯಕ್ಷ ಎನ್ನಾರ್.ಕೆ.ವಿಶ್ವನಾಥ್ ಸಾರಥ್ಯದಲ್ಲಿ ಅದ್ದೂರಿಯಾಗಿ ನಡೆಯಿತು. ಹಿರಿಯ ನಟ ಶ್ರೀನಾಥ್, ನಟಿ ಪದ್ಮವಾಸಂತಿ ಮತ್ತು ನಾಗಲಕ್ಷೀ ಪುಟ್ಟಣ್ಣ ಕಣಗಾಲ್ ದೀಪ ಹಚ್ಚುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪ್ರಣಯರಾಜ ಶ್ರೀನಾಥ್ ಮಾತನಾಡಿ ಪುಟ್ಟಣ್ಣಜೀ ಎಂದಿಗೂ ರಾಜಿಯಾಗುತ್ತಿರಲಿಲ್ಲ. ಆ ದೃಶ್ಯಕ್ಕೆ ಇದು ಬೇಕು ಅಂದರೆ ಯಾವುದೇ ಕಾರಣಕ್ಕೂ ರಾಜಿಯಾಗದೆ ಕಲಾವಿದರಿಂದ ಅಭಿನಯವನ್ನು ತೆಗೆಸುತ್ತಿದ್ದರು. ಚೆನ್ನಾಗಿ ಮಾಡಿದರೂ ಇನ್ನು ಬೇಕು ಎನ್ನುತ್ತಿದ್ದರು.
ಕಲಾವಿದನಿಗೆ ನಟನೆ ಸೂಪರ್ ಎಂದರೆ ಆತ ಮುಂದಕ್ಕೆ ಕಲಿಯಲು ಆಸಕ್ತಿ ತೋರಿಸುತ್ತಿರಲಿಲ್ಲ. ಅದಕ್ಕಾಗಿ ಅವರು ಎಂದಿಗೂ ಸಾಕು ಅನ್ನದೆ ಬೇಕು ಎನ್ನುತ್ತಿದ್ದರು. ದಿನದ 24 ಗಂಟೆ ಸಿನಿಮಾದಲ್ಲಿ ತೊಡಗಿಕೊಂಡಿದ್ದರು. ಎಲ್ಲೋ ಇದ್ದ ನನ್ನನ್ನು ‘ಶುಭಮಂಗಳ’ದಲ್ಲಿ ಅವಕಾಶ ನೀಡಿದ್ದರು. ಅಂದಿನಿಂದ ಇಲ್ಲಿಯವರೆಗೂ ತಿರುಗಿ ನೋಡದೆ ಚಿತ್ರರಂಗದಲ್ಲಿ 50 ವರ್ಷ ಸೇವೆ ಸಲ್ಲಿಸುತ್ತಿದ್ದೇನೆ. ಹೆಚ್ಚಾಗಿ ಮಹಿಳಾ ಪ್ರಧಾನ ಕಥೆಯನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಅವರು ಬಿಟ್ಟುಹೋದ ಐಡಿಯಾಗಳನ್ನು ಇಂದಿನ ನಿರ್ದೇಶಕರು ತಿಳಿದುಕೊಳ್ಳಬೇಕು. ಅದಕ್ಕೆ ಪ್ರತಿವರ್ಷ ಅವರನ್ನು ನೆನಪು ಮಾಡಿಕೊಳ್ಳುತ್ತಾ, ಮುಂದಕ್ಕೆ ಹೋಗುತ್ತಿದ್ದೇವೆ ಎಂದರು.
ಪುಟ್ಟಣ್ಣಕಣಗಾಲ್ ಅವರಿಗೆ ಮೈಯೆಲ್ಲಾ ಕಣ್ಣಾಗಿತ್ತು. ಸಾಕಷ್ಟು ಕಲಾವಿದರನ್ನು ಬಣ್ಣದಲೋಕಕ್ಕೆ ಪರಿಚಯಿಸಿದ್ದಾರೆ. ಅಂತವರಲ್ಲಿ ನಾನು ಒಬ್ಬಳಾಗಿ 40 ವರ್ಷ ಪೂರೈಸಿದ್ದೇನೆ. ಅವರ ಗರಡಿಯಲ್ಲಿ ಬೆಳೆದವರೇ ಪುಣ್ಯವಂತರು. ಕ್ಯಾಮಾರ ಮುಂದೆ ಅಭಿನಯ ಉತ್ತಮವಾಗಿ ಬಂದಲ್ಲಿ ಭೇಷ್ ಅನ್ನುತ್ತಿದ್ದರು. ಅವರ ನೆನಪಿನಲ್ಲಿ ನಾವೆಲ್ಲಾ ಬದುಕು ಸಾಗಿಸುತ್ತಿದ್ದೇವೆಂದು ಪದ್ಮವಾಸಂತಿ ಹೇಳಿದರು.
ನಿರ್ದೇಶಕರ ಪಟ್ಟಕ್ಕೆ ತಾರಾಮೌಲ್ಯ ತಂದುಕೊಟ್ಟವರು ಪುಟ್ಟಣ್ಣಕಣಗಾಲ್ ಎಂದು ಹಿರಿಯ ಪತ್ರಕರ್ತ ಹಾಗೂ ಮಾದ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವಶಣೈ ಬಣ್ಣಿಸಿದರು.
ಇದೇ ಸಂದರ್ಭದಲ್ಲಿ ಉಚಿತ ಆರೋಗ್ಯ ತಪಾಸಣೆ, ನಂತರ ಪುಟ್ಟಣ್ಣಕಣಗಾಲ್ ಚಿತ್ರದ ಹಾಡುಗಳ ರಸಮಂಜರಿ ಕಾರ್ಯಕ್ರಮ ನಡೆಯಿತು. ಸಮಾರಂಭದಲ್ಲಿ ಹಿರಿಯ ನಿರ್ದೇಶಕರುಗಳಾದ ಸಾಯಿಪ್ರಕಾಶ್, ನಾಗಣ್ಣ, ಬಿ.ರಾಮಮೂರ್ತಿ, ಜೋಸೈಮನ್, ಜೆಜೆ.ಕೃಷ್ಣ, ಸಬಾಸ್ಟಿಯನ್‍ಡೇವಿಡ್, ಚಿಕ್ಕಣ್ಣ, ಪದಾಧಿಕಾರಿಗಳು, ಮುಂತಾದ ನಿರ್ದೇಶಕರುಗಳ ಉಪಸ್ತಿತಿ ಇತ್ತು.