ಫೆಬ್ರವರಿ 6ಕ್ಕೆ ಕ್ರೈಮ್ ಥ್ರಿಲ್ಲರ್ ಘಾರ್ಗಾ ಚಿತ್ರ ತೆರೆಗೆ
ಜೋಗಿ, ಪ್ರೀತಿ ಏಕೆ ಭೂಮಿ ಮೇಲಿದೆ ಇಂಥ ಯಶಸ್ವೀ ಚಿತ್ರಗಳನ್ನು ನಿರ್ಮಿಸಿದ ಅಶ್ವಿನಿ ರಾಮ್ ಪ್ರಸಾದ್ ನಿರ್ಮಾಣದ ಬಹು ನಿರೀಕ್ಷಿತ ಚಿತ್ರ ಘಾರ್ಗಾ ಇದೇ ಶುಕ್ರವಾರ ರಾಜ್ಯಾದ್ಯಂತ ತೆರೆಕಾಣುತ್ತಿದೆ. ಎಂ. ಶಶಿಧರ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಜತೆಗೆ ಸಂಕಲನ ಮಾಡಿದ್ದಾರೆ.
ಫಾರ್ಗಾ ಒಂದು ಊರಿನ ಹೆಸರು, ದ ಲ್ಯಾಂಡ್ ಆಫ್ ಶಾಡೋ ಎಂಬ ಅಡಿಬರಹ ಇರುವ ಈ ಚಿತ್ರದಲ್ಲಿ ಅರುಣ್ ರಾಮ್‍ಪ್ರಸಾದ್ ಮೊದಲಬಾರಿಗೆ ನಾಯಕನಾಗಿ ಪರಿಚಯವಾಗುತ್ತಿದ್ದಾರೆ. ಇದೊಂದು ಅಡ್ವೆಂಚರಸ್ ಡ್ರಾಮಾ, ಹಾರರ್
ಕ್ರೈಮ್, ಥ್ರಿಲ್ಲರ್ ಚಿತ್ರವಾಗಿದ್ದು, ಅರುಣ್ ಒಬ್ಬ ರೈಟರ್, ಸಂಶೋಧಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಪಾತ್ರಕ್ಕೆ ರೈಟರ್, ಅಂಡರ್‍ವರ್ಡ್ಲ್ ಹೀಗೆ ಹಲವಾರು ಶೇಡ್ಸ್ ಇದೆ, ಜತೆಗೆ ನಾಯಕಿ ಪಾತ್ರದಲ್ಲಿ ರೆಹಾನ ಕಾಣಿಸಿಕೊಂಡಿದ್ದಾರೆ.
ಮಂಗಳೂರು, ಚಿಕ್ಕಮಗಳೂರು, ದಾಂಡೇಲಿ, ಆಗುಂಬೆ ಹಾಗೂ ಬೆಂಗಳೂರಲ್ಲಿ ಈ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.
ವಿಭಿನ್ನ ಕಂಟೆಂಟ್, ಟ್ರೈಲರ್ ಮೂಲಕವೇ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿರುವ ಈ ಚಿತ್ರದಲ್ಲಿ ವಿಶೇಷವಾಗಿ ದರ್ಶನ್ ಅಭಿಮಾನಿಗಳಿಗಾಗಿ ಗಜ ಚಿತ್ರದ ಬಂಗಾರಿ ಯಾರೇ ನೀ ಬುಲ್ ಬುಲ್ ಹಾಡನ್ನು ರೀಮಿಕ್ಸ್ ಮಾಡಿ ಬಳಸಿಕೊಳ್ಳಲಾಗಿದೆ.ಡೈಲಾಗ್ ಕಿಂಗ್ ಸಾಯಿಕುಮಾರ್, ಸಂಪತ್ ರಾಜ್, ರಾಹುಲ್ ದೇವ್, ಅರುಣ್ ಸಾಗರ್, ದೇವ್ ಗಿಲ್, ಮಿತ್ರ ಉಳಿದ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಗುರುಕಿರಣ್, ಆರ್.ಪಿ.ಪಟ್ನಾಯಕ್ ಅವರ ಸಂಗೀತ ಸಂಯೋಜನೆ, ಗುರುಪ್ರಸಾದ್ ನರ್ನಾಡ್ ಅವರ ಛಾಯಾಗ್ರಹಣ, ನಾಗೇಂದ್ರ ಪ್ರಸಾದ್, ಚೇತನ್ ಕುಮಾರ್, ಶಂಕರ್ ಅವರ ಸಂಭಾಷಣೆ, ಥ್ರಿಲ್ಲರ್ ಮಂಜು, ಜಾಲಿ ಬಾಸ್ಟಿನ್ ಅವರ ಸಾಹಸ ಸಂಯೋಜನೆ ಈ ಚಿತ್ರಕ್ಕಿದೆ. ವಿತರಕ ಎನ್. ಕುಮಾರ್ ಅವರು ಈ ಚಿತ್ರವನ್ನು ರಿಲೀಸ್ ಮಾಡುತ್ತಿದ್ದಾರೆ.

