” ಪಾಠಶಾಲ’ ಚಿತ್ರದ ಟೀಸರ್ ಬಿಡುಗಡೆ ಮಾಡಿದ ಪಾಕಶಾಲ ಪ್ರವೀಣ ಸಿಹಿಕಹಿ ಚಂದ್ರು ದಂಪತಿ
ಕಿರುತೆಯ ಕಲಾವಿದ,ನಿರ್ದೇಶಕ ಹೆದ್ದೂರು ಮಂಜುನಾಥ್ ಶೆಟ್ಟಿ ಅಭಿನಯದ ” ಪಾಠಶಾಲ” ಚಿತ್ರದ ಟೀಸರ್ ಬಿಡುಗಡೆಯಾಗಿದೆ. ತೀರ್ಥಹಳ್ಳಿ ಸೇರಿದಂತೆ ಮಲೆನಾಡಿನ ಸುಂದರ ಪರಿಸರದಲ್ಲಿ ಚಿತ್ರೀಕರಣ ಮಾಡಲಾಗಿದ್ದು ಚಿತ್ರದ ಕಥಾ ವಸ್ತು ಕುತೂಹಲ ಮೂಡಿಸಿದೆ.

ಸಿಹಿ ಕಹಿ ಚಂದ್ರು , ಸಿಹಿ ಕಹಿ ಗೀತಾ ಅವರ ಫೈನಲ್ ಕಟ್ ಸಂಸ್ಥೆಯಲ್ಲಿ ಕೆಲಸ ಮಾಡಿದ ಮಂಜುನಾಥ್ ಶೆಟ್ಟಿ ಆ ಕೃತಜ್ಞತೆಗಾಗಿ ಪಾಕಶಾಲ ಪ್ರವೀಣ ದಂತಿಯನ್ನು ಕರೆಸಿ ಅವರಿಂದ ಚಿತ್ರದ ಟೀಸರ್ ಬಿಡುಗಡೆ ಮಾಡಿಸುವ ಮೂಲಕ ಗುರುಗಳಿಗೆ ಕೃತಜ್ಞತೆ ಸಲ್ಲಿಸುವ ಕೆಲಸ ಮಾಡಿದರು.
ಟೀಸರ್ ಬಿಡುಗಡೆಯಲ್ಲಿ ಮಾಜಿ ಶಾಸಕ ಹಾಗು ಕಲಾವಿದ ನೆ.ಲ ನರೇಂದ್ರ ಬಾಬು , ನಟ ಗೌರಿಶಂಕರ್ , ಭಂಟ ಸಮುದಾಯದ ಸಂಘದ ಹಲವು ಮುಖಂಡರು ಆಗಮಿಸಿ ಮಂಜುನಾಥ್ ಶೆಟ್ಟಿ ಮತ್ತು ಪ್ರೀತಿ ಮಂಜುನಾಥ್ ಶೆಟ್ಟಿ ದಂಪತಿ ಪ್ರಯತ್ನಕ್ಕೆ ಶುಭಹಾರೈಸಿದರು. ಈ ದಂಪತಿ ಪ್ರಯತ್ನಕ್ಕೆ ಹಲವು ಮಂದಿ ಕಾರ್ಯಕಾರಿ ನಿರ್ಮಾಪಕರಾಗಿ ಕೈ ಜೋಡಿಸಿದ್ದಾರೆ.

ಟೀಸರ್ ಬಿಡುಗಡೆ ಮಾಡಿ ಮಾತನಾಡಿದ ಸಿಹಿಕಹಿ ಚಂದ್ರು, ಸಿಹಿಕಹಿ ಗೀತಾ ದಂಪತಿ, ಮಂಜುನಾಥ್ ಶೆಟ್ಟಿ ಪ್ರತಿಭಾವಂತ. ಆತನಲ್ಲಿರುವ ಪ್ರತಿಭೆಗೆ ಇಷ್ಟೊತ್ತಿಗೆ ದೊಡ್ಡಮಟ್ಟದಲ್ಲಿ ಸಾಧನೆ ಮಾಡಬಹುದಿತ್ತು.ತಡವಾದರೂ ಪರವಾಗಿಲ್ಲ. ಒಳ್ಳೆಯದಾಗಲಿ. ನಮ್ಮ ಸಂಸ್ಥೆಯಲ್ಲಿ ಮಂಜುನಾಥ್, ತುತ್ತೂರಿ ಮಂಜ ಎಂದೇ ಖ್ಯಾತಿ ಪಡೆದಿದ್ದರು. ಪಾಠಶಾಲ ಚಿತ್ರದ ಕಥೆ ನೋಡಿದರೆ ಚಿತ್ರದಲ್ಲಿ ಕಥಾ ವಸ್ತು ಬೇರೆನೋ ಇದೆ ಎನ್ನುವ ಕುತೂಹಲ ಮೂಡಿಸಿದೆ. ಚಿತ್ರಕ್ಕೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.
ನಿರ್ದೇಶಕ ಹೆದ್ದೂರು ಮಂಜುನಾಥ್ ಶೆಟ್ಟಿ ಮಾತನಾಡಿ, ತೀರ್ಥಹಳ್ಳಿ ಸೇರಿದಂತೆ ಸುತ್ತಮುತ್ತಲ ಭಾಗದಲ್ಲಿ ಚಿತ್ರೀಕರಣ ಮಾಡಲಾಗಿದೆ. ಚಿತ್ರಕ್ಕಾಗಿ 30 ರಿಂದ. 40 ಮಕ್ಕಳನ್ನು ಆಡಿಷನ್ ಮೂಲಕ ಆಯ್ಕೆ ಮಾಡಿಕೊಂಡು ಅವರಿಗೆ ತರಬೇತಿ ನೀಡಿ ಚಿತ್ರೀಕರಣ ಮಾಡಿದ್ದೇವೆ. ಇನ್ನು ಎರಡು ಹಾಡು ಬಾಕಿ ಇದೆ ಅನ್ನು ಶೀಘ್ರದಲ್ಲೇ ಚಿತ್ರೀಕರಣ ಮಾಡಿ ಬೇಸಿಗೆ ರಜೆ ಒಳಗೆ ಚಿತ್ರವನ್ನು ಬಿಡುಗಡೆ ಮಾಡುವ ಉದ್ದೇಶವಿದೆ ಎಂದು ಹೇಳಿದರು.
, ಮೊದಲ ಬಾರಿಗೆ ಗ್ಯಾಪಲ್ಲಿ ಒಂದು ಸಿನಿಮಾ ಮಾಡಿದ್ದೆ., ಆ ಬಳಿಕ ಓಮಿನಿ ಚಿತ್ರ ಕೈಗೆತ್ತಿಕೊಂಡಿದ್ದೆ, ಕೊರೋನಾದಿಂದ ಅರ್ಧಕ್ಕೆ ನಿಂತಿದೆ. ಆರಂಭ ಆಗುತ್ತೋ ಇಲ್ಲವೋ ಗೊತ್ತಿಲ್ಲ, ಪಾಠಶಾಲ ನನ್ನ ಮೂರನೇ ಚಿತ್ರ. ತೀರ್ಥಹಳ್ಳಿಯ ಭಾಷೆ, ಸೊಗಡು,ಶಿಕ್ಷಕರು ಮತ್ತು ಮಕ್ಕಳ ನಡುವಿನ ಬಾಂಧವ್ಯ ಸೇರಿದಂತೆ ಮತ್ತಿತರ ವಿಷಯಗಳನ್ನು ಇಟ್ಟುಕೊಂಡು ಸಿನಿಮಾ ಮಾಡಿದ್ದೇನೆ. 80-90ರ ದಶಕದಲ್ಲಿ ಶಿಕ್ಷಕರು ಮತ್ತು ಪೋಸಕರ ನಡುವಿನ ಬಾಂಧವ್ಯ ಇತ್ತು. ಅದನ್ನು ತೆರೆಯ ಮೇಲೆ ತರುವ ಉದ್ದೇಶದಿಂದ ಪಾಠಶಾಲ ಸಿನಿಮಾ ಮಾಡಿದ್ದೇನೆ. ಹೊಸಬ ಕಲಾವಿದರೇ ಹೆಚ್ಚಾಗಿದ್ದಾರೆ. ಇದಕ್ಕೆ ಸ್ಪೂರ್ತಿ ಸಿಹಿ ಕಹಿ ಚಂದ್ರು ದಂಪತಿ ಎಂದರು
ತೀರ್ಥಹಳ್ಳಿ ಸುತ್ತ ಮುತ್ತಲ ಪ್ರದೇಶದಲ್ಲಿ ನೈಜ ಮಳೆ ಸೇರಿದಂತೆ ಸುಂದರ ಪ್ರಕೃತಿಯ ಮಡಿಲಲ್ಲಿ ಚಿತ್ರೀಕರಣ ಮಾಡಲಾಗಿದೆ ಚಿತ್ರೀಕರಣಕ್ಕೆ ಮಳೆಯೂ ನಮಗೆ ಸಹಕಾರ ನೀಡಿದೆ. ಪಾಠಶಾಲಗೆ ಕಮರ್ಷಿಯಲ್ ಟಚ್ ಇರಲಿ ಎನ್ನುವ ಕಾರಣಕ್ಕೆ ಬಾಲಾಜಿ ಮನೋಹರ್ ಕಿರಣ್ ನಾಯಕ್ ಸೇರಿದಂತೆ ಮತ್ತಿತರರನ್ನು ಆಯ್ಕೆ ಮಾಡಿಕೊಳ್ಳಲಾಯಿತು. ಕಥೆ ಕೇಳಿ ನಂಬಿಕೆ ಇಟ್ಟು ಮಾಡಿದ್ದಾರೆ. ಚಿತ್ರ ಈ ಹಂತಕ್ಕೆ ಬರಲು ಸಹ ನಿರ್ಮಾಪಕರು ಅದಕ್ಕೆ ಅವರಿಗೆ ಅಬಾರಿ, ಚಿತ್ರಕ್ಕೆ ಸಹಕಾರ ಮತ್ತು ಪ್ರೊತ್ಸಾಹ ಇರಲಿ ಎಂದು ಕೇಳಿಕೊಂಡರು.

ಪ್ರೀತಿ ಮಂಜುನಾಥ್ ಶೆಟ್ಟಿ ಮಾತನಾಡಿ, ಚಿತ್ರ ಉತ್ತಮವಾಗಿ ಮೂಡಿ ಬರಲು ಚಿತ್ರದಲ್ಲಿ ನಟಿಸಿರುವ ಮಕ್ಕಳು ಮತ್ತು ಅವರ ಪೋಷಕರು ಕಾರಣ, ಚಿತ್ರೀಕರಣ ಸಮಯದಲ್ಲಿ ಯಾರಿಗಾದರೂ ಬೇಜಾರು ಮಾಡಿದ್ದರೆ ಕ್ಷಮೆ ಇರಲಿ ಎಂದರು.
ಮಾಜಿ ಶಾಸಕ ನೆ.ಲ ನರೇಂದ್ರ ಬಾಬು ಮಾತನಾಡಿ, ಕನ್ನಡ ಚಿತ್ರಗಳು ಹೆಚ್ಚು ಪ್ರದರ್ಶನ ಕಾಣಬೇಕಾಗಿದೆ. ವಿಧಾನಸಭೆಯಲ್ಲಿ ಇದ್ದಿದ್ದರೆ ತಮಿಳುನಾಡು ಮತ್ತು ಕೇರಳ ಮಾದರಿಯಲ್ಲಿ ಚಿತ್ರದ ಟಿಕೆಟ್ ದರ ನಿಗಧಿ ಮಾಡಲು ಹೋರಾಟ ಮಾಡುತ್ತಿದೆ., ಪಾಠಶಾಲ ಚಿತ್ರಕ್ಕೆ ಹೆಚ್ಚಿನ ಬೆಂಬಲ ಸಿಗಲಿ ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದ್ದಾರೆ.

ಕಲಾವಿದ ಸುಧಾಕರ್ ಬನ್ನಂಜೆ, ನಟ ಗೌರಿಶಂಕರ್ ಸೇರಿದಂತೆ ಮತ್ತಿತರು ಚಿತ್ರಕ್ಕೆ ಒಳ್ಳೆಯದಾಗಲಿ ಎಂದು ಶುಭ ಕೋರಿದರು.

