ಡಾಕ್ಟರೇಟ್ ಪದವಿ ತಂದೆಗೆ ಅರ್ಪಣೆ: ನಟಿ ಡಾ.ಮೇಘನಾ ಗಾವಂಕರ್
“ನಮ್ ಏರಿಯಾಲ್ ಒಂದ್ ದಿನ ” ಅಂತಾ ಸ್ಯಾಂಡಲ್‍ವುಡ್‍ಗೆ ಪ್ರೀತಿಯ ಚಿನ್ನು ಆಗಿ ಬಲಗಾಲಿಟ್ಟು ಯಾವುದೇ ತಂಟೆ, ತಕರಾರು, ಗಾಸಿಪ್‍ಗಳಿಗೆ ಆಸ್ಪದ ಕೊಡದೆ ತಾವಾಯಿತು ತಮ್ಮ ಕೆಲಸವಾಯಿತು ಎಂದು ಮಾಡುವ ಕೆಲಸದಲ್ಲಿ ಕಾಯಕ ಕಂಡುಕೊಂಡ “ವಿನಾಯಕ ಗೆಳೆಯರ ಬಳಗ’ದ ಮೆಚ್ಚಿನ ಕಾವ್ಯ, “ಛೂಮಂಥರ್”ನ ಕ್ಯಾಥರೀನ್ ತನಕ ನಡೆದು ಬಂದ ಹಾದಿ ಕನ್ನಡದ ಇತರೆ ¸ನಟಿಯರಿಗೆ ಮಾದರಿ ಮತ್ತು ಅನುಕರಣೀಯ.

“ತುಘಲಕ್ “ನ ಸಾನಿಯಾ, ‘ಚಾರ್‍ಮಿನಾರ್’ನ ರಾಧೆ, ‘ಸಿಂಪಲ್ಲಾಗ್ ಇನ್ನೊಂದು ಲವ್ ಸ್ಟೋರಿ’ಯ ಖುಷಿ, ‘ಕಾಳಿದಾಸ ಕನ್ನಡ ಮೇಷ್ಟ್ರು’ ಚಿತ್ರದ ಸುಮಾ, ‘ಶುಭಮಂಗಳ’ದ ಅನು, ‘ಶಿವಾಜಿ ಸೂರತ್ಕಲ್-2’ ನ ಡಿಸಿಪಿ ದೀಪಾ ಕಾಮತ್, ‘ಜಡ್ಜ್ ಮೆಂಟ್’ ಚಿತ್ರದ ರಾಜ್ಯಶಾಸ್ತ್ರದ ಉಪನ್ಯಾಸಕಿ ಸೇರಿದಂತೆ ಸಿಕ್ಕ ಚಿತ್ರಗಳ ಪೈಕಿ ವೈವಿದ್ಯಮಯ ಪಾತ್ರಗಳ ಮೂಲಕ ಮನಸೋರೆಗೊಂಡ ನಾಯಕಿ ಮೇಘನಾ ಗಾವಂಕರ್, ಈಗ ಡಾ, ಮೇಘನಾ ಗಾವಂಕರ್ ಆಗಿದ್ಧಾರೆ

ಕನ್ನಡ ಚಿತ್ರರಂಗದ ಚೆಂದದ ನಟಿ ಮೇಘನಾ ಗಾಂವಕರ್ ಇದೀಗ ಡಾಕ್ಟರ್ ಮೇಘನಾ ಗಾವಂಕರ್ ಆಗಿದ್ಧಾರೆ, ಇದಕ್ಕಾಗಿ 6 ವರ್ಷಗಳ ಸಮಯ ತೆಗೆದುಕೊಂಡಿದ್ದಾರೆ, ಮುಂಬೈ ವಿಶ್ವವಿದ್ಯಾಲಯದಲ್ಲಿ ಡಾ. ಶಿವಾಜಿ ಡಿ ಸರ್ಗರ್ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ ಸಿನಿಮಾ ಕುರಿತು `The Metamorphosis of Literature into Cinema: A Study in Adaptation” ವಿಷಯಕ್ಕೆ ಡಾಕ್ಟರೇಟ್ ಸಿಕ್ಕಿದೆ.
ಈ ಮೂಲಕ ಕನ್ನಡದ ಕೆಲವೇ ಕೆಲವು ನಟಿಯರ ಪೈಕಿ ಅಧ್ಯಯನಕ್ಕಾಗಿ ಡಾಕ್ಟರೇಟ್ ಪದವಿ ಪಡೆದ ಹಿರಿಮೆಗೆ ಪಾತ್ರರಾಗಿದ್ದಾರೆ. 2008ರಲ್ಲಿ ಹಿರಿಯ ನಟಿ ಜಯಮಾಲ ರಾಮಚಂದ್ರ ಅವರು ಗ್ರಾಮೀಣ ಭಾಗದಲ್ಲಿನ ಮಹಿಳೆಯರ ಪುನರ್ವಸತಿ ಮೇಲೆ ಪ್ರಬಂಧ ಬರೆದು ಡಾಕ್ಟರೇಟ್ ಪಡೆದಿದ್ದಾರೆ. 2008 ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಡಾ. ಅಬ್ಡುಲ್ ಕಲಾಂ ಇವರಿಗೆ ಡಾಕ್ಟರೇಟ್ ಪ್ರಧಾನ ಮಾಡಿದರು. ಇದೀಗ ನಟಿ ಮೇಘನಾ ಗಾಂವಕರ್ ಅವರು ಮುಂಬೈ ವಿಶ್ವವಿದ್ಯಾಲಯಕ್ಕೆ ಕಳೆದ ವರ್ಷ ಸಲ್ಲಿಸಿದ ಪ್ರೌಢ ಪ್ರಬಂಧಕ್ಕೆ ಡಾಕ್ಟರ್ ಪದವಿ ದೊರೆತಿದೆ.
ತಂದೆಯ ಕನಸಾಗಿತ್ತು : ಡಾ. ಮೇಘನಾ ಗಾವಂಕರ್
ಮುಂಬೈ ವಿಶ್ವವಿದ್ಯಾಲಯದಿಂದ ಡಾಕ್ಟರ್ ಪಡೆದ ಸಂತಸ ಹಂಚಿಕೊಂಡಿರುವ ನಟಿ ಮೇಘನಾ ಗಾವಂಕರ್, ಕಳೆದ 6 ವರ್ಷದಿಂದ ಪಿಎಚ್ ಡಿ ಅಧ್ಯಯನ ಮಾಡುತ್ತಿದ್ದೆ. ಕಳೆದ ವರ್ಷ ವಿಶ್ವವಿದ್ಯಾಲಯಕ್ಕೆ ಪ್ರೌಢ ಪ್ರಬಂಧ ಸಲ್ಲಿಸಿದ್ದೆ. ಕಳೆದ ವಾರ ಕನ್ನಡ ಮೌಖಿಕ ಸಂದರ್ಶನ- ವೈವಾ ಕೂಡ ಆಗಿತ್ತು. ಇದೀಗ ಡಾಕ್ಟರೇಟ್ ಪದವಿಯನ್ನು ವಿಶ್ವವಿದ್ಯಾಲಯದಿಂದ ಸ್ವೀಕಾರ ಮಾಡಿದ್ದೇನೆ. ಈ ಜರ್ನಿ ಸುಲಭದ್ದಾಗಿರಲಿಲ್ಲ. ನನ್ನ ಪಿಎಚ್‍ಡಿ ಪದವಿಯನ್ನು ತಂದೆ ಮಾರುತಿ ಗಾವಂಕರ್ ಅವರಿಗೆ ಅರ್ಪಿಸುತ್ತೇನೆ. ಡಾಕ್ಟರೇಟ್ ಮಾಡಬೇಕು ಎನ್ನುವುದು ತಂದೆಯ ಕನಸಾಗಿತ್ತು ಎಂದು ಹೇಳಿದ್ದಾರೆ.

ಸಿನಿಮಾ ಸಾಹಿತ್ಯ ವಿಷಯವಾಗಿ ಪ್ರೌಢ ಪ್ರಬಂಧ ಮಂಡಿಸಿದ್ದೆ. ನಟಿಯಾಗಿ ಗುರಿತಿಸಿಕೊಂಡ ಹಿನ್ನೆಲೆಯಲ್ಲಿ ತುಂಬಾ ಆಪ್ತವಾದ ವಿಷಯವಾಗಿತ್ತು. ಪಿಎಚ್‍ಡಿಗೆ ನೋಂದಣಿ ಮಾಡಿಕೊಂಡ ದಿನದಿಂದ ಇಲ್ಲಿಯ ತನಕ ಸಹಕಾರ ಪ್ರೋತ್ಸಾಹ ಮತ್ತು ಬೆಂಬಲ ನೀಡಿದ ಕುಟುಂಬದ ಮಂದಿ, ಸಿನಿಮಾದ ಸ್ನೇಹಿತರು, ಮಾದ್ಯಮದವರು, ಸ್ನೇಹಿತರು, ಸಹದ್ಯೋಗಿಗಳು ಸೇರಿದಂತೆ ಎಲ್ಲರಿಗೂ ಧನ್ಯವಾದ ಅರ್ಪಿಸುವುದಾಗಿ ತಿಳಿಸಿದ್ಧಾರೆ
ನಟನೆಗಾಗಿ ಮೊದಲ ಡಾಕ್ಟರೇಟ್
1976ರ ಫೆಬ್ರವರಿ 8 ರಂದು ಮೈಸೂರು ವಿಶ್ವವಿದ್ಯಾಲಯ ಕನ್ನಡದ ವರನಟ ಡಾ. ರಾಜ್ ಕುಮಾರ್ ಅವರಿಗೆ ಮೈಸೂರು ವಿಶ್ವವಿದ್ಯಾಲಯದ ಮಾನಸ ಗಂಗೋತ್ರಿ ಬಯಲು ರಂಗಮಂದಿರದಲ್ಲಿ ಡಾ.ರಾಜ್ ಕುಮಾರ್ ಅವರಿಗೆ ಮೊದಲ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗಿತ್ತು.

ಡಾಕ್ಟರೇಟ್ ಪಡೆದ ಕಾರ್ಯಕ್ರಮದಲ್ಲಿ ಮತನಾಡಿದ್ದ ರಾಜ್ ಕುಮಾರ್ ಅವರು ‘ಏನನ್ನ ನೋಡಿ ನನಗೆ ಡಾಕ್ಟರೇಟ್ ಕೊಡ್ತಿದ್ದೀರಾ, ನಾನು ವಿದ್ಯಾವಂತನಲ್ಲ, ಓದಿದವನಲ್ಲ. ನಾನೇನು ಎಂ.ಎ ಆಗಲಿ, ಪಿ.ಎಚ್.ಡಿ ಆಗಲಿ ಮಾಡಿದ್ದೀನಾ ಬಾಲ್ಯದಲ್ಲಿ ನಾನು ಹಳ್ಳಿಯಲ್ಲಿ ಎಮ್ಮೆ ಮೇಯಿಸ್ತಾ ಇದ್ದೆ ಎಂದು ಹೇಳಿದ್ದರಂತೆ. ಅಣ್ಣಾವ್ರು ಏನೇ ಹೇಳಿದ್ರರೂ ಅವರ ಹೆಸರಿನ ಮುಂದೆ ಡಾಕ್ಟರ್ ಹೊಂದಿಕೊಂಡಷ್ಟು ಮತ್ಯಾರಿಗೆ ಅಷ್ಟು ಸೂಕ್ತ ಅನ್ನಿಸಿರಲಿಲ್ಲ ಎನ್ನುವುದು ಅತಿಶಯೋಕ್ತಿ ಆಗಲಾರದು.
ಆ ಬಳಿಕ ಪಾರ್ವತಮ್ಮ ರಾಜ್ ಕುಮಾರ್, ಬಿ,ಸರೋಜಾ ದೇವಿ, ಸಾಹಸ ಸಿಂಹ ವಿಷ್ಣುವರ್ಧನ್, ಅಂಬರೀಷ್, ಭಾರತಿ ವಿಷ್ಣುವರ್ಧನ್, ಶಿವರಾಜ್ ಕುಮಾರ್,ತಾರಾ ಅನುರಾಧ ಸೇರಿದಂತೆ ಅನೇಕ ಚಿತ್ರರಂಗದ ನಟ, ನಟಿಯರಿಗೆ ಗೌರವ ಡಾಕ್ಟರೇಟ್ ಅನ್ನುವ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳು ಪ್ರಧಾನ ಮಾಡಿವೆ. ಇನ್ನೂ ಕೆಲವು ಮಂದಿಗೆ ಖಾಸಗೀ ಸಂಸ್ಥೆಗಳೂ ಗೌರವ ಡಾಕ್ಟರೇಟ್ ಪಡೆದಿದ್ದಾರೆ.
ಆದರೆ ನಿರ್ಧಿಷ್ಠ ವಿಷಯದ ಬಗ್ಗೆ ಪ್ರೌಢ ಪ್ರಬಂಧ ಮಂಡಿಸಿ ಡಾಕ್ಟರೇಟ್ ಪಡೆದ ಕೆಲವೇ ಕೆಲವು ನಟಿಯರ ಸಾಲಿಗೆ ಡಾ, ಮೇಘನಾ ಗಾವಂಕರ್ ಸೇರ್ಪಡೆಯಾಗಿದ್ದಾರೆ. ಇದು ಕನ್ನಡದ ನಟಿಯರು ಹಾಗು ಚಿತ್ರರಂಗದ ಮಟ್ಟಿಗೆ ಹೆಮ್ಮೆಯ ಸಂಗತಿಯೂ ಹೌದು.

