"Preetiya Hucchha "based on a true story to release in April

ನೈಜ ಘಟನೆ ಆಧಾರಿತ “ಪ್ರೀತಿಯ ಹುಚ್ಚ “ಏಪ್ರಿಲ್‍ನಲ್ಲಿ ಬಿಡುಗಡೆ - CineNewsKannada.com

ನೈಜ ಘಟನೆ ಆಧಾರಿತ “ಪ್ರೀತಿಯ ಹುಚ್ಚ “ಏಪ್ರಿಲ್‍ನಲ್ಲಿ ಬಿಡುಗಡೆ

ನೈಜ ಘಟನೆ ಆಧರಿಸಿದ “ಪ್ರೀತಿಯ ಹುಚ್ಚ” ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು ಏಪ್ರಿಲ್ ತಿಂಗಳಲ್ಲಿ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ. ಕನ್ನಡ ತೆಲುಗು, ತಮಿಳು ಸೇರಿದಂತೆ ಐದು ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಯು/ಎ ಪ್ರಮಾಣಪತ್ರ ನೀಡಿದೆ.

ಕುಮಾರ್ ಮೂವೀಸ್ ಬ್ಯಾನರ್ ಅಡಿಯಲ್ಲಿ ವಿ.ಕುಮಾರ್, ಬಿ.ಜಿ.ನಂದಕುಮಾರ್ ನಿರ್ಮಿಸಿರುವ ಪ್ರೀತಿಯ ಹುಚ್ಚ ಚಿತ್ರ ಎಲ್ಲಾ ಅಂದುಕೊಂಡಂತೆ ಆದರೆ ಏಪ್ರಿಲ್ ತಿಂಗಳ ಎರಡನೇ ವಾರ ತೆರೆಕಾಣುತ್ತಿದೆ.

ಮ್ಯೂಸಿಕಲ್ ಲವ್ ಸ್ಟೋರಿ ಒಳಗೊಂಡ ಈ ಚಿತ್ರಕ್ಕೆ ಗಾಯತ್ರಿ ಎಂಬ ಹಾರರ್ ಸಿನಿಮಾ ನಿರ್ದೇಶಿಸಿದ್ದ ವಿ.ಕುಮಾರ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ.

1998-90ರಲ್ಲಿ ಹಾಸನದಲ್ಲಿ ನಡೆದ ನೈಜ ಘಟನೆ ಚಿತ್ರಕ್ಕೆ ಪ್ರೇರಣೆ. ಅಮಾಯಕ ಯುವತಿಯೊಬ್ಬಳ ದಾರುಣ ಕಥೆ ಇದಾಗಿದ್ದು, ಮದುವೆಯಾದ ಮೊದಲ ರಾತ್ರಿಯೇ ದುಷ್ಟರ ಜಾಲಕ್ಕೆ ಸಿಕ್ಕು ಮುಂಬೈನ ರೆಡ್‍ಲೈಟ್ ಏರಿಯಾಕ್ಕೆ ಮಾರಾಟವಾಗುವ ನಾಯಕಿಯ ಜೀವನ ಮುಂದೆ ಯಾವೆಲ್ಲ ತಿರುವು ಪಡೆದುಕೊಂಡಿತು, ಪ್ರೀತಿಸಿ ಮದುವೆಯಾದ ಪತ್ನಿಯನ್ನು ಕಳೆದುಕೊಂಡ ನಾಯಕ ಯಾವ ಸ್ಥಿತಿ ತಲುಪಿದ ಎಂಬುದನ್ನು ನಿರ್ದೇಶಕ ಕುಮಾರ್ ಅವರು ಪ್ರೀತಿಯ ಹುಚ್ಚ ಚಿತ್ರದ ಮೂಲಕ ಹೇಳಹೊರಟಿದ್ದಾರೆ.

ಚಿತ್ರಕ್ಕೆ ಬೆಂಗಳೂರು. ಮಂಡ್ಯ, ಚಿಕ್ಕಮಗಳೂರು, ಹಾಸನ, ಶ್ರವಣಬೆಳಗೊಳ ಹಾಗೂ ಮುಂಬೈನ ಕಾಮಾಟಿಪುರದಲ್ಲಿ 65 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಚಿತ್ರದಲ್ಲಿ ಸುಂಟಿಸ್ಟಾರ್ ವಿಜಯ್ ನಾಯಕನಾಗಿ ನಟಿಸಿದ್ದು, ಮುಂಬೈ ಮೂಲದ ಕುಂಕುಮ್ ನಾಯಕಿಯ ಪಾತ್ರ ನಿರ್ವಹಿಸಿದ್ದಾರೆ. ಐಟಂ ಸಾಂಗ್ ಮಾಡುತ್ತಿದ್ದ ಅಲಿಶಾ ಮುಂಬೈ ರೆಡ್ ಲೈಟ್ ಏರಿಯಾದ ಡಾನ್ ಆಗಿ ಕಾಣಿಸಿಕೊಂಡಿದ್ದಾರೆ.

ಚಿತ್ರದ 4 ಹಾಡುಗಳಿಗೆ ಜೆ.ಎನ್. ರಂಗರಾಜನ್ ಸಂಗೀತ ಸಂಯೋಜನೆ, ಸುನಿಲ್ ಕೆ.ಆರ್.ಎಸ್. ಅವರ ಛಾಯಾಗ್ರಹಣ, ಸುಪ್ರೀಂ ಸುಬ್ಬು ಅವರ ಸಾಹಸ, ಪ್ರವೀಣ್ ವಿಷ್ಣು ಅವರ ಸಂಕಲನವಿದೆ. ಉಳಿದ ತಾರಾಗಣದಲ್ಲಿ ದಶಾವರ ಚಂದ್ರು, ದುಬೈ ರಫೀಕ್, ಉಮೇಶ್ ಪುಂಗ, ಅಲಿಶಾ, ಆರ್.ಚಂದ್ರು, ಪುಷ್ಪಲತಾ, ಜೋಗಿ ನಾಗರಾಜ್, ಪೂರ್ಣಿಮಾ, ವಿ.ಭಾಸ್ಕರರಾಜ್, ಮಹದೇವಸ್ವಾಮಿ. ಗೀತಾ, ಸುನಿತಾ, ಪ್ರಮೋದ್, ಮಹದೇವ, ಆನಂದ್ ಮುಂತಾದವರಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin