“ಎಲ್ಟು ಮುತ್ತಾ” ಚಿತ್ರದ ಟೀಸರ್ ಬಿಡುಗಡೆ: ಕುತೂಹಲ ಹೆಚ್ಚಳ
ಹೈ5 ಸ್ಟುಡಿಯೋಸ್ ಲಾಂಛನದಲ್ಲಿ ಸತ್ಯ ಶ್ರೀನಿವಾಸನ್ ನಿರ್ಮಿಸಿರುವ, ರಾ.ಸೂರ್ಯ ಬರೆದು ನಿರ್ದೇಶಿಸಿರುವ ಹಾಗೂ ರಾ.ಸೂರ್ಯ – ಶೌರ್ಯ ಪ್ರತಾಪ್ ಪ್ರಮುಖಪಾತ್ರದಲ್ಲಿ ನಟಿಸಿರುವ “ಎಲ್ಟು ಮುತ್ತಾ” ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ಗಮನ ಸೆಳೆದಿದೆ.

ಹೊಂಬಾಳೆ ಸಂಸ್ಥೆಯ ಶೈಲಜಾ ವಿಜಯ್ ಕಿರಂಗದೂರ್, ಅಕ್ಷಯ್ ಗಂಗಾಧರ್ ಹಾಗೂ ಎಲ್ ವೈ ರಾಜೇಶ್ ಪಾಲ್ಗೊಂಡು ಚಿತ್ರಕ್ಕೆ ಶುಭಹಾರೈಸಿದರು
ನಿರ್ದೇಶಕ ರಾ ಸೂರ್ಯ ಮಾತನಾಡಿ “ಎಲ್ಟು ಮುತ್ತಾ”, ಸಾವಿಗೆ ಡೋಲು ಹೊಡೆಯುವವರ ಸುತ್ತಲ್ಲಿನ ಕಥೆ. “ಎಲ್ಟು ಮುತ್ತಾ” ಅಂದರೆ ಎರಡು ಪಾತ್ರಗಳು. ಎಲ್ಟು ಪಾತ್ರದಲ್ಲಿ ನಟಿಸಿದ್ದೇನೆ. ಜೊತೆಗೆ ನಿರ್ದೇಶನ ಮಾಡಿದ್ದೇನೆ . ಮುತ್ತಾ ಪಾತ್ರದಲ್ಲಿ ಶೌರ್ಯ ಪ್ರತಾಪ್ ಅಭಿನಯಿಸಿದ್ದಾರೆ. ನವೀನ್ ಪಡೀಲ್, ಕಾಕ್ರೋಜ್ ಸುಧೀ, ಯಮುನ ಶ್ರೀನಿಧಿ ಅವರಂತಹ ಅನುಭವಿ ಕಲಾವಿದರ ಜೊತೆಗೆ ಬಹುತೇಕ ನೂತನ ಪ್ರತಿಭೆಗಳು ಈ ಚಿತ್ರದಲ್ಲಿ ನಟಿಸಿದ್ದಾರೆ. ಇದೊಂದು ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರ ಎಂದರು.
ನವೀಲು ಹಾಗೂ ಸರ್ಪದ ನಡುವೆ ನಡೆಯುವ ಸಂಘರ್ಷದ ಕಥೆಯೂ ಚಿತ್ರದ ಕಥೆಗೆ ಸ್ಪೂರ್ತಿ. ತನ್ನ ಕುಣಿತದಿಂದ ಎಲ್ಲರ ಗಮನ ಸೆಳೆಯುವ ಮುಗ್ದ ಸ್ವಭಾವದ ನವೀಲು, ಕೆರಳಿದರೆ ಕಾಳಿಂಗ ಸರ್ಪವನ್ನು ಕೊಲ್ಲುತ್ತದೆ. ಇದನ್ನೇ ಪಾತ್ರಗಳ ಮೂಲಕ ಹೇಳಿದ್ದೇವೆ. ಕೊಡಗು ಭಾಗದಲ್ಲಿ ನಡೆಯುವ ಕಥೆ. ಹೆಚ್ಚಿನ ಚಿತ್ರೀಕರಣ ಕೊಡಗಿನಲ್ಲೇ ಆಗಿದೆ. ಸಂಭಾಷಣೆ ಕೂಡ ಮಡಿಕೇರಿ ಕನ್ನಡ ಭಾಷೆಯಲ್ಲೇ ಇರುತ್ತದೆ ಎಂದು ಮಾಹಿತಿ ಹಂಚಿಕೊಂಡರು.
ನಟ ಶೌರ್ಯ ಪ್ರತಾಪ್ ಮಾತನಾಡಿ ಕಲಾವಿದ ಆಗುವುದು ತಂದೆಗೆ ಇಷ್ಟವಿರಲಿಲ್ಲ. ಹಾಗೆ ಆಯಿತು ತಂದೆಯ ಇಚ್ಚೆಯಂತೆ ಓದಿ ಒಳ್ಳೆಯ ಸ್ಥಾನಕ್ಕೆ ಬಂದು ಈಗ ನಟ ಆಗಿದ್ದೀನಿ. ನನ್ನ ಹಾಗೂ ನನ್ನ ತಂದೆ ಇಬ್ಬರ ಆಸೆಯೂ ಈಡೇರಿದೆ. ಮುತ್ತಾ ನನ್ನ ಪಾತ್ರದ ಹೆಸರು. ನಟನಾಗಷ್ಟೇ ಅಲ್ಲದೆ ಸಹ ನಿರ್ದೇಶಕನಾಗಿ ಹಾಗೂ ಸಹ ಬರಹಗಾರನಗೂ ಕಾರ್ಯ ನಿರ್ವಹಿಸಿದ್ದೇನೆ ಹೇಳಿದರು.

ನಿರ್ಮಾಪಕ ಸತ್ಯ ಶ್ರೀನಿವಾಸನ್ ಮಾತನಾಡಿ ಐಟಿ ಉದ್ಯೋಗಿ. ವೈಲ್ಡ್ ಫೆÇಟೊಗ್ರಾಫಿ ಹವ್ಯಾಸಿ. ನನ್ನ ತಂದೆ ಶ್ರೀನಿವಾಸನ್ ತಮಿಳು ಚಿತ್ರರಂಗದಲ್ಲಿ ವಿತರಕರಾಗಿದ್ದರು. ಸಿನಿಮಾ ನಿರ್ಮಾಣ ನನ್ನ ಆಸೆ. ಅದು ಈಗ ಈಡೇರಿದೆ. ಹೈ5 ಸ್ಟುಡಿಯೋಸ್ ಲಾಂಛನದಲ್ಲಿ ಚಿತ್ರ ನಿರ್ಮಾಣವಾಗಿದೆ. ಚಿತ್ರೀಕರಣಕ್ಕೂ ಮುನ್ನ ನಾವು ಅನೇಕ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದೆವು. ಚಿತ್ರತಂಡದ ಪ್ರತಿಯೊಬ್ಬರಿಗೂ ಆರೋಗ್ಯ ಹಾಗೂ ಜೀವವಿಮೆ ಮಾಡಿಸಿದ್ದೆವು. ನಮ್ಮಿಂದ ಯಾರಿಗೂ ತೊಂದರೆ ಆಗಬಾರದು ಎಂಬ ಉದ್ದೇಶವಷ್ಟೇ. ದೇವರ ದಯೆಯಿಂದ ಸಣ್ಣ ಅಡಚಣೆಯೂ ಆಗದೆ ನಮ್ಮ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿ ಬಿಡುಗಡೆ ಹಂತ ತಲುಪಿದೆ ಎಂದರು
ಜುಲೈ ಅಂತ್ಯದಲ್ಲಿ ಚಿತ್ರ ತೆರೆಗೆ ಬರಲಿದೆ. ಅದಕ್ಕೂ ಮುನ್ನ ಹಾಡುಗಳು ಹುಬ್ಬಳ್ಳಿಯಲ್ಲಿ ಹಾಗೂ ಟ್ರೇಲರ್ ಬೆಂಗಳೂರಿನಲ್ಲಿ ಬಿಡುಗಡೆಯಾಗಲಿದೆ. ಚಿತ್ರತಂಡದ ಸಹಕಾರದಿಂದ ಒಂದೊಳ್ಳೆ ಚಿತ್ರ ಮೂಡಿಬಂದಿದೆ ಎಂದು ಮಾಹಿತಿ ಹಂಚಿಕೊಂಡರು
ಕಾಕ್ರೋಜ್ ಸುಧೀ ಮಾತನಾಡಿ ಒಳ್ಳೆಯ ತಂಡದ ಜೊತೆಗೆ ಕೆಲಸ ಮಾಡಿದ ಖುಷಿ ಇದೆ. ಅಲೆಕ್ಸ್ ಚಟ್ವಾ ನನ್ನ ಪಾತ್ರದ ಹೆಸರು ಎಂದರು.
ಸಂಗೀತ ನಿರ್ದೇಶಕ ಪ್ರಸನ್ನ ಕೇಶವ ಮಾತನಾಡಿ ಸಂಗೀತ ನಿರ್ದೇಶಕನಾಗಲೂ ಗುರುಗಳಾದ ಸಂಗೀತ ಕಟ್ಟಿ ಹಾಗೂ ರವಿ ಬಸ್ರೂರ್ ಅವರು ಕಾರಣ. ಈ ಚಿತ್ರದಲ್ಲಿ ಐದು ಹಾಡುಗಳಿದೆ ಎಂದು ತಿಳಿಸಿದರು.

ನಾಯಕಿ ಪ್ರಿಯಾಂಕ ಮಲಾಲಿ, ಪವೀಂದ್ರ ಮುತ್ತಪ್ಪ ಕೋಪದಿರ, ಕಾರ್ಯಕಾರಿ ನಿರ್ಮಾಪಕ ಹಾಗೂ ನಟ ರುಹಾನ್ ಆರ್ಯ ಹಾಗೂ ಧನು ದೇವಯ್ಯ ಮುಂತಾದವರು “ಎಲ್ಟು ಮುತ್ತಾ” ಚಿತ್ರದ ಕುರಿತು ಮಾಹಿತಿ ಹಂಚಿಕೊಂಡರು

