Even across the ocean, the movie "Kenda" is moving: Expectations increase

ಸಾಗರದಾಚೆಗೂ “ ಕೆಂಡ” ಚಿತ್ರದ ಕಂಪು :ನಿರೀಕ್ಷೆ ಹೆಚ್ಚಳ - CineNewsKannada.com

ಸಾಗರದಾಚೆಗೂ “ ಕೆಂಡ” ಚಿತ್ರದ ಕಂಪು :ನಿರೀಕ್ಷೆ ಹೆಚ್ಚಳ

ಸಹದೇವ್ ಕೆಲವಡಿ ನಿರ್ದೇಶನ ಮತ್ತು ರೂಪಾ ರಾವ್ ನಿರ್ಮಾಣದಲ್ಲಿ ಮೂಡಿ ಬಂದಿರುವ ಚಿತ್ರ ಕೆಂಡ. ಈ ಚಿತ್ರವೀಗ ಬಿಡುಗಡೆಗೆ ತಯಾರಾಗಿದೆ. ಇದೇ ಹೊತ್ತಿನಲ್ಲಿ ವಿದೇಶದಲ್ಲಿ ಪ್ರೀಮಿಯರ್ ಶೋ ಮೂಲಕ ಕೆಂಡ ಮನಗೆದ್ದಿದೆ.

ಮಾರ್ಟಿನ್ ಸ್ಕಾರ್ಸೆಸೆ, ಆಂಗ್ ಲೀ, ಜಿಮ್ ಜರ್ಮುಷ್, ಸ್ಟೈಕ್ ಲೀ, ಕೋಯೆನ್ ಬ್ರದರ್ಸ್ ಮುಂತಾದ ಘಟಾನುಘಟಿ ನಿರ್ದೇಶಕರಿಗೆ ತರಬೇತಿ ಕೊಟ್ಟಿರುವ ನ್ಯೂಯಾರ್ಕ್‍ನ ಟಿಶ್ ಸ್ಕೂಲ್ ಆಫ್ ಆರ್ಟ್‍ನಲ್ಲಿ ಕೆಂಡ ಚಿತ್ರದ ಪ್ರೀಮಿಯರ್ ಶೋ ನಡೆದಿದೆ. ನೋಡುಗರೆಲ್ಲರ ಕಡೆಯಿಂದ ಸಿಕ್ಕ ಭರಪೂರ ಮೆಚ್ಚುಗೆಯಲ್ಲಿ ಚಿತ್ರತಂಡ ಮಿಂದೆದ್ದಿದೆ.

ಮೊದಲು ನ್ಯೂಯಾರ್ಕ್‍ನ ಟಿಶ್ ಸ್ಕೂಲ್ ಆಫ್ ಆರ್ಟ್‍ನಲ್ಲಿ ಪ್ರದರ್ಶನಗೊಂಡ ಕನ್ನಡ ಚಿತ್ರವಾಗಿ ಕೆಂಡ ದಾಖಲಾಗಿದೆ. ಇನ್ನುಳಿದಂತೆ ಈ ಹಿಂದೆ ಕನ್ನಡ ಚಿತ್ರರಂಗದ ಹೆಮ್ಮೆಯಂತಿರೋ `ತಿಥಿ’ ಪ್ರದರ್ಶನಗೊಂಡಿದ್ದ ಸ್ವಿಟ್ಜರ್ ಲ್ಯಾಂಡಿನಲ್ಲಿಯೂ ಕೆಂಡ ಪ್ರೀಮಿಯರ್ ಶೋ ನಡೆದಿದೆ. ಅಲ್ಲಿಯೂ ಪ್ರೇಕ್ಷಕರು ಈ ಚಿತ್ರವನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಈ ಹಿಂದೆ ಪ್ರತಿಷ್ಠಿತ ಸಿನಿಮೋತ್ಸವಗಳಲ್ಲಿಯೂ ಈ ಚಿತ್ರ ಪ್ರದರ್ಶನ ಕಂಡು, ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು. ಈಗ ಪ್ರೀಮಿಯರ್ ಶೋ ಮೂಲಕ ಕೆಂಡದ ಪ್ರಭೆ ಸಾಗರದಾಚೆಗೂ ಹಬ್ಬಿಕೊಂಡಿದೆ.

ಅಮೇಯುಕ್ತಿ ಸ್ಟುಡಿಯೋಸ್ ಬ್ಯಾನರಿನಡಿಯಲ್ಲಿ ರೂಪಾ ರಾವ್ ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಕೆಂಡ ಶೀಘ್ರದಲ್ಲೇ ಕನ್ನಡ ತಾಯ್ನಾಡಿನಲ್ಲಿ ತೆರೆಗಾಣಲಿದೆ. ರಿತ್ವಿಕ್ ಕಾಯ್ಕಿಣಿ ಸಂಗೀತ ನಿರ್ದೇಶನ, ಪ್ರದೀಪ್ ನಾಯಕ್ ಸಂಕಲನ, ಲಕ್ಷ್ಮಿಕಾಂತ್ ಜೋಶಿ ಕಲಾ ನಿರ್ದೇಶನವಿರುವ ಈ ಚಿತ್ರದಲ್ಲಿ ಬಿ.ವಿ ಭರತ್, ಪ್ರಣವ್ ಶ್ರೀಧರ್, ವಿನೋದ್ ಸುಶೀಲ, ಗೋಪಾಲಕೃಷ್ಣ ದೇಶಪಾಂಡೆ, ಸಚಿನ್ ಶ್ರೀನಾಥ್, ಬಿಂದು ರಕ್ಷಿದಿ, ಶರತ್ ಗೌಡ, ಸತೀಶ್ ಕುಮಾರ್, ಅರ್ಚನ ಶ್ಯಾಮ್, ಪೃಥ್ವಿ ಬನವಾಸಿ, ದೀಪ್ತಿ ನಾಗೇಂದ್ರ ಮುಂತಾದವರ ತಾರಾಗಣವಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin