'Just Married' trailer released: Film to hit screens on August 22

‘ಜಸ್ಟ್ ಮ್ಯಾರೀಡ್’ ಟ್ರೇಲರ್ ಬಿಡುಗಡೆ : ಆಗಸ್ಟ್ 22ಕ್ಕೆ ಚಿತ್ರ ತೆರೆಗೆ - CineNewsKannada.com

‘ಜಸ್ಟ್ ಮ್ಯಾರೀಡ್’ ಟ್ರೇಲರ್ ಬಿಡುಗಡೆ : ಆಗಸ್ಟ್ 22ಕ್ಕೆ ಚಿತ್ರ ತೆರೆಗೆ

ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಹಾಗೂ ಸಿ.ಆರ್ ಬಾಬಿ ನಿರ್ಮಿಸಿರುವ, ಸಿ.ಆರ್.ಬಾಬಿ ನಿರ್ದೇಶನದಲ್ಲಿ ಬಿಗ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ ಹಾಗೂ ಅಂಕಿತ ಅಮರ್ ನಾಯಕ-ನಾಯಕಿಯಾಗಿ ನಟಿಸಿರುವ ಬಹು ನಿರೀಕ್ಷಿತ “ಜಸ್ಟ್ ಮ್ಯಾರೀಡ್” ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ, ಚಿತ್ರ ಇದೇ ತಿಂಗಳ 22ಕ್ಕೆ ರಾಜ್ಯಾದ್ಯಂತ ತೆರೆಗೆ ಬರಲಿದೆ.

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಆನ್‍ಲೈನ್ ಮೂಲಕ ಟ್ರೇಲರ್ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು, ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮದುವೆ ಮನೆ ವಾತಾವರಣ ನಿರ್ಮಾಣವಾಗಿತ್ತು. ಮುಂಭಾಗಲಿನಲ್ಲೇ ಮಂಗಳದ್ರವ್ಯಗಳನ್ನು ನೀಡಿ ಮುತ್ತಿನ ಹಾರ ಹಾಕಿ ಬಂದ ಅತಿಥಿಗಳನ್ನು ಸ್ವಾಗತಿಸಲಾಯಿತು. ಹೆಣ್ಣುಮಕ್ಕಳು ಮೆಹಂದಿ ಹಾಕಿಸಿಕೊಂಡು ಸಂಭ್ರಮಿಸುತ್ತಿದ್ದದ್ದು ಅಲ್ಲಿ ಕಂಡು ಬಂತು.

ನಿರ್ಮಾಪಕ ಹಾಗೂ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಮಾತನಾಡಿ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಲು ನೆರವಾಗಿ ನಿಂತ ಸಿ.ಆರ್ ಬಾಬಿ ಅವರಿಗೆ ಚಿತ್ರ ನಿರ್ದೇಶನ ಮಾಡಬೇಕೆಂಬ ಆಸೆ ಮೊದಲಿನಿಂದಲೂ ಇತ್ತು. ನಾನು ಕೂಡ ಚಿತ್ರ ನಿರ್ದೇಶನ ಮಾಡಿ ಅಂತ ಹೇಳುತ್ತಿದ್ದೆ. ಆದರೆ ಈಗ ಕಾಲ ಕೂಡಿ ಬಂದಿದೆ. ಚಿತ್ರ ಆರಂಭವಾದ ದಿನದಿಂದಲೂ ನನಗೆ ಚಿತ್ರತಂಡ ನೀಡುತ್ತಿರುವ ಸಹಕಾರ ಅಪಾರ ಎಂದರು

ನಟರಾದ ಶಿವರಾಜಕುಮಾರ್, ಉಪೇಂದ್ರ, ಕಿಚ್ಚ ಸುದೀಪ್, ರಕ್ಷಿತ್ ಶೆಟ್ಟಿ, ರಾಜ್ ಬಿ ಶೆಟ್ಟಿ, ರಿಷಬ್ ಶೆಟ್ಟಿ , ನಿಥಿಲನ್, ಅಜಯ್ ಭೂಪತಿ ಸೇರಿದಂತೆ ಅನೇಕ ಗಣ್ಯರು ಚಿತ್ರದ ಹಾಡುಗಳು, ಟೀಸರ್ ಹಾಗೂ ಟ್ರೇಲರ್ ಬಿಡುಗಡೆ ಮಾಡಿ ಕೊಟ್ಟಿದ್ದಾರೆ. ನಿರ್ಮಾಪಕ ವಿಜಯ್ ಕಿರಗಂದೂರು ಚಿತ್ರ ವಿತರಣೆ ಮಾಡುತ್ತಿದ್ದಾರೆ. ಆಗಸ್ಟ್ 22 ರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ ಎಂದು ಮಾಹಿತಿ ಹಂಚಿಕೊಂಡರು

ನಿರ್ದೇಶಕಿ ಸಿ.ಆರ್.ಬಾಬಿ ಮಾತನಾಡಿ ನಿರ್ದೇಶನ ಮಾಡಬೇಕೆಂಬ ಹಲವು ವರ್ಷಗಳ ಕನಸು “ಜಸ್ಟ್ ಮ್ಯಾರೀಡ್” ಚಿತ್ರದ ಮೂಲಕ ನೆರವೇರಿದೆ. ಬಹು ತಾರಾಬಳಗವಿರುವ ನಮ್ಮ ಚಿತ್ರದ ಚಿತ್ರೀಕರಣ ನಿಗದಿತ ಯೋಜನೆಗೂ ಮೂರು ದಿನಗಳ ಮುಂಚೆ ಪೂರ್ಣವಾಗಿದೆ. ಅದಕ್ಕೆ ಕಾರಣ ಕಲಾವಿದರ ಹಾಗೂ ತಂತ್ರಜ್ಞರ ಸಹಕಾರ. ಅದರಲ್ಲೂ ಛಾಯಾಗ್ರಾಹಕ ಪಿ.ಜಿ ಮುಖ್ಯ ಕಾರಣ. ನಿರ್ಮಾಪಕ ಅಜನೀಶ್ ಅವರಂತೂ ಯಾವುದೇ ಕೊರತೆ ಬಾರದ ಹಾಗೆ ಚಿತ್ರ ನಿರ್ಮಾಣ ಮಾಡಿದ್ದಾರೆ. ಇಂದು ಟ್ರೇಲರ್ ಬಿಡುಗಡೆಯಾಗಿದೆ ಎಲ್ಲರ ಪೆÇ್ರೀತ್ಸಾಹವಿರಲಿ ಎಂದರು.

ಹಿರಿಯ ನಟಿ ಶೃತಿ ಮಾತನಾಡಿ ಕಳೆದ ಒಂದು ವರ್ಷದಿಂದ ನನ್ನ ಹತ್ತಿರ ಯಶಸ್ವಿ ಚಿತ್ರಗಳಾದ “ಕಾಟೇರ”, “ಕೃಷ್ಣಂ ಪ್ರಣಯ ಸಖಿ”, “ಮಾದೇವ” ಚಿತ್ರಗಳ ಫಲಕಗಳಿದೆ. “ಎಕ್ಕಾ” ಚಿತ್ರ ಕೂಡ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದೆ. ಈಗ ಆ ಸಾಲಿಗೆ ಸೇರುವ ಮತ್ತೊಂದು ಚಿತ್ರ “ಜಸ್ಟ್ ಮ್ಯಾರೀಡ್” ಆಗಲಿದೆ. ನಿರ್ದೇಶಕಿ ಸಿ.ಆರ್ ಬಾಬಿ ಅವರ ಕಾರ್ಯ ವೈಖರಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು

ಹಿರಿಯ ನಟಿ ಮಾಳವಿಕ ಅವಿನಾಶ್ ಮಾತನಾಡಿ ನಿರ್ದೇಶಕರು ನನ್ನ ಪಾತ್ರ ಗೌಪ್ಯವಾಗಿಟ್ಟಿದ್ದಾರೆ. ಹಾಗಾಗಿ ಪಾತ್ರದ ಬಗ್ಗೆ ಹೇಳುವ ಹಾಗಿಲ್ಲ. ಆದರೆ ಚಿತ್ರೀಕರಣದ ಅನುಭವ ಹೇಳಬಹುದು. ಖಂಡಿತವಾಗಿಯೂ ಸಿ.ಆರ್ ಬಾಬಿ ಅವರ ಮೊದಲ ನಿರ್ದೇಶನದ ಚಿತ್ರ ಅಂತ ಹೇಳಲು ಸಾಧ್ಯವಿಲ್ಲ. ಅನುಭವಿ ನಿರ್ದೇಶಕರ ಹಾಗೆ ಕಾರ್ಯ ನಿರ್ವಹಿಸಿದ್ದಾರೆ. ಚಿತ್ರರಂಗದಲ್ಲಿ ನಿರ್ದೇಶಕಿಯರ ಸಂಖ್ಯೆ ಕಡಿಮೆ. ಅಂತಹುದರಲ್ಲಿ ಮಹಿಳೆಯೊಬ್ಬರಿಗೆ ನಿರ್ದೇಶನ ನೀಡಲು ಅವಕಾಶ ನೀಡಿದ ಅಜನೀಶ್ ಲೋಕನಾಥ್ ಅವರಿಗೆ ಅಭಿನಂದನೆ ತಿಳಿಸುತ್ತೇನೆ ಎಂದರು

ನಾಯಕ ಶೈನ್ ಶೆಟ್ಟಿ ಮಾತನಾಡಿ ಆಗಷ್ಟೇ “ಕಾಂತಾರ” ಸಿನಿಮಾ ಬಿಡುಗಡೆಯಾಗಿತ್ತು. ಆ ಸಮಯದಲ್ಲಿ ಅಜನೀಶ್ ಅವರಿಂದ ನನಗೊಂದು ಕರೆ ಬರುತ್ತದೆ. ನಾನೊಂದು ಚಿತ್ರ ನಿರ್ಮಾಣ ಮಾಡುತ್ತಿದ್ದೇನೆ. ನಾಯಕನಾಗಿ ನಟಿಸಬೇಕು ಎಂದು. ಆನಂತರ ಸಿ.ಆರ್.ಬಾಬಿ ಹಾಗೂ ಅಜನೀಶ್ ಈ ಚಿತ್ರದ ಕಥೆ ಹೇಳುತ್ತಾರೆ. ನನಗಂತೂ ಕಥೆ ಬಹಳ ಇಷ್ಟವಾಗುತ್ತದೆ. ನಂತರ ಚಿತ್ರೀಕರಣ ಪ್ರಾರಂಭವಾಗುತ್ತದೆ. ಚಿತ್ರದಲ್ಲಿ ದೇವರಾಜ್, ಶೃತಿ, ಮಾಳವಿಕ ಅವಿನಾಶ್, ಶ್ರೀಮನ್ ಹೀಗೆ ಅನುಭವಿ ಕಲಾವಿದರ ದೊಡ್ಡ ತಾರಾಬಳಗವೇ ಇದೆ. ಇಂತಹ ಹಿರಿಯರೊಡನೆ ನಟಿಸಿದ್ದು ಬಹಳ ಖುಷಿಯಾಗಿದೆ. ಅವಕಾಶ ನೀಡಿದ ಸಿ.ಆರ್.ಬಾಬಿ ಹಾಗೂ ಅಜನೀಶ್ ಅವರಿಗೆ ಧನ್ಯವಾದ ಎಂದರು

ನಾಯಕಿ ಅಂಕಿತ ಅಮರ್ ಮಾತನಾಡಿ ಸಿನಿಮಾ ಜರ್ನಿಯ ಮೂರು ಅಂಶಗಳ ಬಗ್ಗೆ ಮಾತನಾಡುತ್ತೇನೆ. ಅದು ಕನಸು, ಕೆಲಸ ಹಾಗೂ ಕಥೆ. ಚಿಕ್ಕಂದಿನಿಂದಲೂ ನನಗೆ ನಟನೆಯಲ್ಲಿ ಆಸಕ್ತಿ. ಟಿವಿ ಅಥವಾ ದೊಡ್ಡ ಪರದೆಯಲ್ಲಿ ತಾರೆಯರನ್ನು ನೋಡಿದಾಗ ಇವರೆಲ್ಲಾ ಇಷ್ಟು ಚೆನ್ನಾಗಿ ಹೇಗೆ ಅಭಿನಯಿಸುತ್ತಾರೆ. ಹೀಗೆ, ಸಾಕಷ್ಟು ಪ್ರಶ್ನೆಗಳು ಮೂಡುತ್ತಿದ್ದವು. ಇದು ನನ್ನ ಎರಡನೇ ಚಿತ್ರ. ಎರಡನೇ ಚಿತ್ರದಲ್ಲೇ ಇಂತಹ ಮಹಾನ್ ತಾರೆಗಳ ಜೊತೆಗೆ ನಟಿಸುವ ಅವಕಾಶ ಒದಗಿ ಬಂತು. ಈ ಅವಕಾಶ ನೀಡಿದ ಸಿ.ಆರ್ ಬಾಬಿ ಹಾಗೂ ಅಜನೀಶ್ ಅವರಿಗೆ ಅನಂತ ಧನ್ಯವಾದ ಎಂದರು

ಚಿತ್ರದಲ್ಲಿ ನಟಿಸಿರುವ ಶ್ರೀಮಾನ್, ವಾಣಿ ಹರಿಕೃಷ್ಣ, ಅಭಿನವ್, ವೇದಿಕಾ, ನೃತ್ಯ ನಿರ್ದೇಶಕಿ ಶಾಂತಿ ಮಾಸ್ಟರ್, ಕಲಾ ನಿರ್ದೇಶಕ ಅಮರ್ ಹಾಗೂ ವಿ.ಕೆ.ಫಿಲಂಸ್ ನ ರಾಜೇಶ್ ಅವರು ಸೇರಿದಂತೆ ಚಿತ್ರತಂಡದ ಅನೇಕ ಸದಸ್ಯರು “ಜಸ್ಟ್ ಮ್ಯಾರೀಡ್” ಕುರಿತು ಮಾತನಾಡಿದರು.

ಖ್ಯಾತ ಗಾಯಕ ಜಸ್ಕರಣ್ ಸಿಂಗ್ ಚಿತ್ರದ ಹಾಡು ವೇದಿಕೆಯಲ್ಲಿ ಹಾಡಿದರು. ಈ ಚಿತ್ರದ ಹಾಡುಗಳು ಹಾಗೂ ಟ್ರೇಲರ್ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin