“ಲವ್ ಮಾಕ್ಟೇಲ್-3” ಚಿತ್ರದ `ಒಬ್ಬಂಟಿಯಾದೆ ನಾ’ ಲಿರಿಕಲ್ ವಿಡಿಯೋ ಬಿಡುಗಡೆ
ಡಾರ್ಲಿಂಗ್ ಕೃಷ್ಣ ನಿರ್ದೇಶನದ ಜೊತೆಗೆ ನಾಯಕನಾಗಿಯೂ ನಟಿಸಿರುವ “ಲವ್ ಮಾಕ್ಟೇಲ್-3” ಚಿತ್ರದ `ಒಬ್ಬಂಟಿಯಾದೆ ನಾ’ ಲಿರಿಕಲ್ ವಿಡಿಯೋ ಬಿಡುಗಡೆಯಾಗಿದ್ದು ಕುತೂಹಲ ಕೆರಳಿಸಿದೆ

ತಂದೆ ಮಗಳ ಬಾಂಧವ್ಯದ ಸೆಲೆಯಂತಿದ್ದ ಸಿನಿಮಾದ ಹಾಡು ಇತ್ತೀಚೆಗೆ ಬಿಡುಗಡೆಯಾಗಿತ್ತು. ಇದೀಗ ಪ್ರೇಮಿಗಳ ದಿನಕ್ಕೆ `ಒಬ್ಬಂಟಿಯಾದೆ ನಾ’ ಎಂಬ ಲಿರಿಕಲ್ ವೀಡಿಯೋ ಹಾಡು ಬಿಡುಗಡೆಯಾಗಿದ್ದು ಚಿತ್ರದ ಮೇಲಿನ ಕುತೂಹಲ ಹೆಚ್ಚು ಮಾಡಿದೆ.
ಮಾತು ಮೌನವಾಗಿದೆ ಶೋಕ ಭಾವ ಮೂಡಿದೆ ಎಂಬ ಸಾಲುಗಳೊಂದಿಗೆ ಶುರುವಾಗುವ ಹಾಡನ್ನು ರಾಘವೇಂದ್ರ ಕಾಮತ್ ಬರೆದಿದ್ದಾರೆ. ನಕುಲ್ ಅಭಯಂಕರ್ ಸಂಗೀತ ಸಂಯೋಜನೆ ಮಾಡಿ, ಸ್ವತಃ ಧ್ವನಿಯಾಗಿದ್ದಾರೆ.
ಡಾರ್ಲಿಂಗ್ ಕೃಷ್ಣ ಲವ್‍ಮಾಕ್ಟೇಲ್ ಸರಣಿಯ ಮೊದಲ ಆವೃತ್ತಿಯಲ್ಲಿಯೇ ಹಾಡುಗಳಿಗೆ ವಿಶೇಷ ಒತ್ತು ಕೊಟ್ಟಿದ್ದರು. ಎರಡನೇ ಆವೃತ್ತಿಯಲ್ಲಿಯೂ ಆ ಪರಿಪಾಠ ಮುಂದುವರೆದಿದೆ ಆ ಎರಡೂ ಸರಣಿಗಳ ಗೆಲುವಿನಲ್ಲಿ ಹಾಡುಗಳ ಪಾತ್ರ ಇತ್ತು. ಇದೀಗ ಮೂರನೇ ಭಾಗದಲ್ಲಿಯೂ ಕೂಡಾ ಅದು ಮುಂದುವರೆದಿದೆ.
ಈಗಾಗಲೇ ಹಾಡುಗಳ ಮೂಲಕ ಪ್ರೇಕ್ಷಕರಿಗೆ ಹತ್ತಿರಾಗಿರುವ ಲವ್ ಮಾಕ್ಟೇಲ್3 ಇದೇ ಏಪ್ರಿಲ್ 10ರಂದು ರಾಜ್ಯಾದ್ಯಂತ ತೆರೆಗಾಣಲಿದೆ. ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಚಿತ್ರ ನಿರ್ಮಾಣ ಮಾಡಿದ್ದಾರೆ. ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ಸಂವೃತ, ಅಮೃತಾ ಅಯ್ಯಂಗಾರ್, ರಚೆಲ್ ಡೇವಿಡ್, ಅಭಿಲಾಶ್ ದಳಪತಿ ಮುಂತಾದವರು ಚಿತ್ರದಲ್ಲಿದ್ದಾರೆ

