“ಕವಳ” ಶೀರ್ಷಿಕೆ ಅನಾವರಣ ಮಾಡಿದ ಶಿವಣ್ಣ
ಮಾಸ್, ಆಕ್ಷನ್ ಕಂಟೆಂಟ್ ಇರುವ ಚಿತ್ರಗಳು ಹೆಚ್ಚಾಗಿ ಟೈಟಲ್ ನಿಂದಲೇ ಹೆಚ್ಚು ಗಮನ ಸೆಳೆಯುತ್ತವೆ. ತಿಂಗಳ ಕೊನೆಯಲ್ಲಿ ಚಿತ್ರ ಸೆಟ್ಟೇರಲಿರುವ “ಕವಳ” ಚಿತ್ರದ ಶೀರ್ಷಿಕೆಯನ್ನಯ ನಟ ಶಿವರಾಜ್ ಕುಮಾರ್ ಅನಾವರಣ ಮಾಡಿ ಶುಭ ಹಾರೈಸಿದ್ದಾರೆ
ಇದೇ ತಿಂಗಳ 26ರಂದು ಮುಹೂರ್ತ ನಡೆಯಲಿದೆ. ಕವಳ ಎಂದರೆ ಭಿಕ್ಷೆ. ಮಾಸ್ ಚಿತ್ರಕ್ಕೆ ಟೈಟಲ್ ಎಷ್ಟು ಸೂಕ್ತ ಎಂಬುದಕ್ಕೆ ಮುಹೂರ್ತದ ದಿನ ಉತ್ತರ ನೀಡುತ್ತೇನೆ ಎನ್ನುತ್ತಾರೆ ನಿರ್ದೇಶಕ ಶ್ರೀ ಜೈ. ಚಿತ್ರವನ್ನು ಲೋಕೇಶ್ ಬಿ. ಹಾಗೂ ಅಡವಯ್ಯ ಪೂಜಾರ್ ನಿರ್ಮಿಸುತ್ತಿದ್ದಾರೆ.
ನಟ ಶಿವಣ್ಣ ಮಾತನಾಡಿ ಚಿತ್ರದ ಟೈಟಲ್ ತುಂಬಾ ಆಕರ್ಷಕವಾಗಿದೆ. ನಿರ್ದೇಶಕರ ಹಿಂದಿನ ಸಿನಿಮಾ ನೋಡಿದ್ದೇನೆ, ಇದೇ ತಿಂಗಳ 26ಕ್ಕೆ ಈ ಚಿತ್ರದ ಮುಹೂರ್ತ ನಡೆಯಲಿದೆ, ಚಿತ್ರ ಚೆನ್ನಾಗಿ ಮೂಡಿಬರಲಿ ಎಂದು ಶುಭ ಹಾರೈಸಿದ್ದಾರೆ.

ದುನಿಯಾ ವಿಜಯ್ ಅಭಿನಯದ ಆರ್.ಎಕ್ಸ್.ಸೂರಿ, ರಾಧಿಕಾ ಕುಮಾರಸ್ವಾಮಿ ಅಭಿನಯದ ಭೈರಾದೇವಿ ಚಿತ್ರಗಳನ್ನು ನಿರ್ದೇಶಿಸಿದ್ದ ಶ್ರೀ ಜೈ ಚಿತ್ರದ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಸಂದೀಪ್ ನಾಗರಾಜ್ ನಾಯಕನಾಗಿ ನಟಿಸುತ್ತಿರುವ ಚಿತ್ರದ ಪೋಸ್ಟರ್ ಅಷ್ಟೇ ವಿಭಿನ್ನವಾಗಿದೆ. ನೀಲ ವರ್ಣದ, ರುದ್ರಾಕ್ಷಿ ಧರಿಸಿದ ಕೈಯಲ್ಲಿ ಮಚ್ಚು ಕೊಟ್ಟಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ. ಈ ಚಿತ್ರಕ್ಕೆ ಎ.ಕರುಣಾಕರನ್ ಛಾಯಾಗ್ರಹಣ, ಕೆಕೆ.ಸೆಂಥಿಲ್ ಪ್ರಸಾದ್ ಸಂಗೀತ, ಅರ್ಜುನ್ ರಾಜ್, ವಿಕ್ರಮ್ ಮೋರ್ ಸಾಹಸ, ಕಲೈ, ಮುರಳಿ ನೃತ್ಯ, ದೀಪು ಎಸ್.ಕುಮಾರ್ ಅವರ ಸಂಕಲನವಿದೆ.
ಕವಳ ಚಿತ್ರದಲ್ಲಿ ಹಿರಿಯ ನಟರಾದ ಅಚ್ಯುತ್ ಕುಮಾರ್, ರಂಗಾಯಣ ರಘು, ನಾಜರ್, ಸಮುದ್ರಖನಿ, ಈಶ್ವರಿರಾವ್, ಬಲ ರಾಜವಾಡಿ, ಕಿಶೋರ್, ಶ್ರವಣ್,ಗಿಲ್ಲಿ, ಪ್ರಕಾಶ್ ತುಮ್ಮಿನಾಡ್ ಹಾಗೂ ಇತರರು ನಟಿಸುತ್ತಿದ್ದಾರೆ.

