“ಬಾನ ದಾರಿಯಲ್ಲಿ” ಬಂತು ಇಂಪಾದ ಹಾಡು..
ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ನಿರ್ದೇಶಕ ಪ್ರೀತಂ ಗುಬ್ಬಿ ಜೋಡಿ “ಬಾನದಾರಿಯಲ್ಲಿ” ಚಿತ್ರದ ಮೂಲಕ ಮತ್ತೊಮ್ಮೆ ಮೋಡಿ ಮಾಡಲಿದೆ. ಇತ್ತೀಚೆಗೆ ಈ ಚಿತ್ರಕ್ಕಾಗಿ ಕವಿರಾಜ್ ಅವರು ಬರೆದಿರುವ “ನಿನ್ನನ್ನು ನೋಡಿದ ನಂತರ” ಎಂಬ ಗೀತೆ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ.
ಹಿರಿಯ ಪತ್ರಕರ್ತ ಬಿ.ಎನ್ ಸುಬ್ರಹ್ಮಣ್ಯ ಈ ಹಾಡನ್ನು ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದರು. ಹಾಡು ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು “ಬಾನ ದಾರಿಯಲ್ಲಿ” ಬಗ್ಗೆ ಮಾತನಾಡಿದರು.
ಇದು ಕೊರೋನ ಸಮಯದಲ್ಲಿ ಅಂದರೆ ಸುಮಾರು ಎರಡುವರೆ ವರ್ಷಗಳ ಹಿಂದೆ ನಾನು ಹಾಗೂ ಪ್ರೀತಾ ಜಯರಾಂ ಸೇರಿ ಮಾಡಿದ ಕಥೆ. ಈಗ ಚಿತ್ರೀಕರಣ ಮುಕ್ತಾಯವಾಗಿದೆ. ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡುತ್ತಿದ್ದೇವೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ಪ್ರೀತಂ ಗುಬ್ಬಿ.
ನಾನು ಮೊದಲು ಆನಂದ್ ಆಡಿಯೋ ಅವರಿಗೆ ಧನ್ಯವಾದ ಹೇಳುತ್ತೇನೆ. ಏಕೆಂದರೆ ನನ್ನ ಸಿನಿಜರ್ನಿಯಲ್ಲೇ ಅತೀ ಹೆಚ್ಚು ಮೊತ್ತ ಕೊಟ್ಟು ಈ ಚಿತ್ರದ ಆಡಿಯೋ ರೈಟ್ಸ್ ಪಡೆದುಕೊಂಡಿದ್ದಾರೆ. ಇನ್ನು ಈ ಹಾಡನ್ನು ಕವಿರಾಜ್ ಬರೆದಿದ್ದಾರೆ. “ಹುಡುಗಾಟ” ಚಿತ್ರದ “ಮಂದಾಕಿನಿ ಯೇ” ಹಾಡಿನಿಂದ ಶುರುವಾದ ನಮ್ಮ ಜರ್ನಿ ಈ ಹಾಡಿನ ತನಕ ಮುಂದುವರೆದಿದೆ. ನನ್ನ ಅನೇಕ ಹಿಟ್ ಹಾಡುಗಳನ್ನು ಕವಿರಾಜ್ ಅವರೆ ಬರೆದಿದ್ದಾರೆ. ಅರ್ಜುನ್ ಜನ್ಯ ಸಂಗೀತ ಚಿತ್ರದ ಮತ್ತೊಂದು ಹೈಲೆಟ್ . ನಿರ್ದೇಶಕ ಪ್ರೀತಂ ಗುಬ್ಬಿ ಈ ಚಿತ್ರವನ್ನು ಉತ್ತಮವಾಗಿ ನಿರ್ದೇಶಿಸಿದ್ದಾರೆ. ಸಾಮಾನ್ಯವಾಗಿ ನಾನು ಡಬ್ಬಿಂಗ್ ಸಮಯದಲ್ಲಿ ಚಿತ್ರದ ಬಗ್ಗೆ ಹೇಳಿ ಬಿಡುತ್ತೇನೆ. ಈ ಚಿತ್ರದ ಡಬ್ಬಿಂಗ್ ಮಾಡಬೇಕಾದರೆ ಕೆಲವೊಮ್ಮೆ ತುಂಬಾ ಭಾವುಕನಾದೆ.
ನಾಯಕಿಯರಾದ ರುಕ್ಮಿಣಿ ವಸಂತ್ ಹಾಗೂ ರೀಷ್ಮಾ ನಾಣಯ್ಯ ಸೇರಿದಂತೆ ಚಿತ್ರದಲ್ಲಿ ಅಭಿನಯಿಸಿರುವ ಎಲ್ಲಾ ಕಲಾವಿದರ ಅಭಿನಯ ಚೆನ್ನಾಗಿದೆ. ಪ್ರೀತಾ ಜಯರಾಮ್ – ಪ್ರೀತಂ ಗುಬ್ಬಿ ಸೇರಿ ಒಳ್ಳೆಯ ಕಥೆ ಬರೆದಿದ್ದಾರೆ. ತಂತ್ರಜ್ಞರ ಕಾರ್ಯವೈಖರಿ ಕೂಡ ಅದ್ಭುತವಾಗಿದೆ. ಕೀನ್ಯಾ ಭಾಗದ ಚಿತ್ರೀಕರಣವನ್ನು ಮರೆಯಲು ಸಾಧ್ಯವಾಗುತ್ತಿಲ್ಲ. ನಾನು ಈ ಚಿತ್ರದಲ್ಲಿ ಕ್ರಿಕೆಟ್ ಆಟಗಾರನಾಗಿ ಕಾಣಿಸಿಕೊಂಡಿದ್ದೇನೆ. ಹಾಗಾಗಿ ನಮ್ಮ ಚಿತ್ರ ತಂಡ ಹಾಗೂ ಸ್ಟಾರ್ ರಿಪೋರ್ಟರ್ಸ್ ತಂಡದ ನಡುವೆ ಕ್ರಿಕೆಟ್ ಪಂದ್ಯ ಏರ್ಪಡಿಸಲಾಗಿತ್ತು. ಆನಂತರ ಹಾಡು ಬಿಡುಗಡೆ ಮಾಡಿದ್ದೇವೆ ಎಂದು ನಾಯಕ ಗೋಲ್ಡನ್ ಸ್ಟಾರ್ ಗಣೇಶ್ ಹಾಡು ಹಾಗೂ ಚಿತ್ರದ ಕುರಿತು ಮಾತನಾಡಿದರು.ಚಿತ್ರ ತುಂಬಾ ಚೆನ್ನಾಗಿದೆ. ಇಂದು ಬಿಡುಗಡೆಯಾಗಿರುವ ಹಾಡು ಅಷ್ಟೇ ಇಂಪಾಗಿದೆ. ನಾನು ಈ ಹಾಡಿಗಾಗಿ ಸರ್ಫಿಂಗ್ ಅಭ್ಯಾಸ ಮಾಡಿದ್ದೇನೆ ಎಂದರು ನಾಯಕಿ ರುಕ್ಮಿಣಿ ವಸಂತ್.
ಹಾಡು ಅದ್ಭುತವಾಗಿದೆ. ಗಣೇಶ್ ಹಾಗೂ ರಂಗಾಯಣ ರಘು ಅವರು ನನಗೆ ಸಾಕಷ್ಟು ಹೇಳಿಕೊಟ್ಟಿದ್ದಾರೆ. ಕಳೆದವರ್ಷ ಅನೇಕ ಕನ್ನಡ ಚಿತ್ರಗಳು ಗೆದ್ದು ದಾಖಲೆ ನಿರ್ಮಿಸಿದೆ. ಈ ವರ್ಷವೂ ಎಲ್ಲಾ ಕನ್ನಡ ಚಿತ್ರಗಳು ದೊಡ್ಡಮಟ್ಟದ ಯಶಸ್ಸು ಕಾಣಲಿ. ಅದರಲ್ಲಿ “ಬಾನದಾರಿಯಲ್ಲಿ” ಚಿತ್ರವೂ ಇರಲಿ ಎನ್ನುತ್ತಾರೆ ಚಿತ್ರದ ಮತ್ತೊಬ್ಬ ನಾಯಕಿ ರೀಷ್ಮಾ ನಾಣಯ್ಯ.
“ಬಾನದಾರಿಯಲ್ಲಿ” ಹಾಡು ಹುಟ್ಟಿದ ಸಮಯವನ್ನು ವರ್ಣಿಸಿದ ಗೀತರಚನೆಕಾರ ಕವಿರಾಜ್, ಮುಂಬೈನ ಖ್ಯಾತ ಯಶ್ ರಾಜ್ ಸ್ಟುಡಿಯೋದಲ್ಲಿ ಈ ಹಾಡಿನ ರೆಕಾರ್ಡಿಂಗ್ ನಡೆದಿದೆ. ಖ್ಯಾತ ಗಾಯಕ ಸೋನು ನಿಗಮ್ ಸುಮಧುರವಾಗಿ ಹಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ ಎಂದು ತಿಳಿಸಿದರು. ಛಾಯಾಗ್ರಾಹಕ ಅಭಿಲಾಷ್ ಕಲ್ಲತ್ತಿ ಸೇರಿದಂತೆ ಅನೇಕ ತಂತ್ರಜ್ಞರು ತಮ್ಮ ಅನುಭವ ಹಂಚಿಕೊಂಡರು. ಶ್ರೀವಾರಿ ಟಾಕೀಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಸಂತೋಷ್ ಹಾಗೂ ವೇಣು ಬಂಡವಾಳ ಹಾಕಿದ್ದಾರೆ.