ಎಸ್ ವಿ ರಾಜೇಂದ್ರಸಿಂಗ್ ಬಾಬು ಸುವರ್ಣ ಸಂಭ್ರಮ : ಅಕ್ಟೋಬರ್ 23 ರಿಂದ “ಎಸ್ ವಿ ಆರ್ 50”
ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಎಸ್ ವಿ ರಾಜೇಂದ್ರಸಿಂಗ್ ಬಾಬು ನಿರ್ದೇಶಕರಾಗಿ 50 ವರ್ಷಗಳು ಪೂರೈಸಿರುವ ಹಿನ್ನೆಲೆಯಲ್ಲಿ ಕನ್ನಡ ಚಿತ್ರರಂಗದಿಂದ ಅದ್ದೂರಿ ಸಮಾರಂಭ ಆಯೋಜಿಸಿದೆ, ಸುವರ್ಣ ಸಂಭ್ರಮದಲ್ಲಿರುವ ಹಿರಿಯ ನಿರ್ದೇಶಕರನ್ನು ಗೌರವಿಸಲು ಇಡೀ ಚಿತ್ರರಂಗ ಮುಂದಾಗಿದೆ,

ರ್ದೇಶಕರಾಗಿ ಅಕ್ಟೋಬರ್ ತಿಂಗಳಿಗೆ 50 ವರ್ಷಗಳಾಗಿದೆ. ಈ ಸಂಭ್ರಮವನ್ನು ಸಂಭಮಿಸಲು ಕನ್ನಡ ಚಿತ್ರರಂಗದಿಂದ “ಎಸ್ ವಿ ಆರ್ 50” ಎಂಬ ಅದ್ದೂರಿ ಸಮಾರಂಭ ಆಯೋಜಿಸಿ ರಾಜೇಂದ್ರಸಿಂಗ್ ಬಾಬು ಅವರನ್ನು ಆತ್ಮೀಯವಾಗಿ ಸನ್ಮಾನಿಸಲಿದೆ. ಐದು ದಿನಗಳ ಕಾಲ ಅದ್ದೂರಿಯಾಗಿ ಈ ಸಮಾರಂಭ ನಡೆಯಲಿದೆ.
ಚಿತ್ರರಂಗದ ಹಿರಿಯ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ, ನಾಗತಿಹಳ್ಳಿ ಚಂದ್ರಶೇಖರ್, ಪಿ.ಶೇಷಾದ್ರಿ, ನಂಜುಂಡೇಗೌಡ, ವಿಜಯಲಕ್ಷ್ಮಿ ಸಿಂಗ್, ಸಂಗೀತ ನಿರ್ದೇಶಕ ಹಂಸಲೇಖ, ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ಪತ್ರಕರ್ತ ಗಂಗಾಧರ್ ಮೊದಲಿಯರ್, ಲಿಂಗದೇವರು, ನಿರ್ದೇಶಕರ ಸಂಘದ ಅಧ್ಯಕ್ಷ ಎನ್ನಾರ್ ಕೆ ವಿಶ್ವನಾಥ್, ಸಂಕಲನಕಾರ ಕೆಂಪರಾಜ್ ಹಾಗೂ ಸಮಾರಂಭದ ಆಯೋಜಕರಾದ ಕೃಷ್ಣೇಗೌಡ( ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ) ಉಪಸ್ಥಿತರಿದ್ದರು.
ಕರ್ನಾಟಕ ಮಾತ್ರವಲ್ಲ, ಇಡೀ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಈವರೆಗೂ 50 ವರ್ಷಗಳ ಸಕ್ರಿಯವಾಗಿ ನಿರ್ದೇಶಕರಾಗಿರುವವರು ಯಾರು ಇಲ್ಲ. ರಾಜೇಂದ್ರಸಿಂಗ್ ಬಾಬು ಅವರು ಒಬ್ಬರೆ. ಈಗಲೂ ಅವರ ನಿರ್ದೇಶನದ ಎರಡು ಚಿತ್ರಗಳು ತೆರೆಗೆ ಬರಲು ಸಿದ್ದಾವಾಗಿದೆ.
ಈ ಸುವರ್ಣ ಸಂಭ್ರಮ ಸಂಭ್ರಮಿಸಲು ಅಕ್ಟೋಬರ್ 23 ರಿಂದ 5 ದಿನಗಳ ಕಾಲ “ಎಸ್ ವಿ ಆರ್ 50” ಎಂಬ ಅದ್ದೂರಿ ಸಮಾರಂಭ ನಡೆಸಲಾಗುತ್ತಿದೆ. 23 ರಂದು ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಅಲ್ಲಿಂದ ನಾಲ್ಕು ದಿನಗಳ ಕಾಲ ಕಲಾವಿದರ ಸಂಘದಲ್ಲಿ ರಾಜೇಂದ್ರಸಿಂಗ್ ಬಾಬು ನಿರ್ದೇಶನದ ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿ ಚಿತ್ರಗಳ ಚಿತ್ರೋತ್ಸವ ನಡೆಯಲಿದೆ. ದಿನಕ್ಕೆ ಎರಡು ಚಿತ್ರಗಳ ಪ್ರದರ್ಶನವಿರುತ್ತದೆ. ಈ ಸಂದರ್ಭದಲ್ಲಿ ಕನ್ನಡ ಹಾಗೂ ಇತರ ಭಾಷೆಗಳ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಆಯೋಜಕ ಕೃಷ್ಣೇಗೌಡ ಮಾತನಾಡಿ ಅಕ್ಟೋಬರ್ 27 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ರಾಜೇಂದ್ರಸಿಂಗ್ ಬಾಬು ಅವರಿಗೆ ಚಿತ್ರರಂಗದ ಪರವಾಗಿ ಆತ್ಮೀಯವಾಗಿ ಸನ್ಮಾನ ಸಮಾರಂಭ ನಡೆಯಲಿದೆ. ಅದಕ್ಕೂ ಮುನ್ನ ಬೆ.11ರಿಂದ ಮಧ್ಯಾಹ್ನ 3 ಗಂಟೆವರಗೂ ರಾಜೇಂದ್ರಸಿಂಗ್ ಬಾಬು ಅವರ ಜನಪ್ರಿಯ ಹಾಡುಗಳ ಥೀಮ್ ಮ್ಯೂಸಿಕ್ ಬಳಸಿಕೊಂಡು ನುರಿತ ಮಾಡಲ್ ಗಳು ಫ್ಯಾಷನ್ ಶೋ ಸಹ ನಡೆಸಲಿದ್ದಾರೆ ಇದೇ ಸಂದರ್ಭದಲ್ಲಿ ಗಂಗಾಧರ್ ಮೊದಲಿಯರ್ ಅವರು ಬರೆದಿರುವ ಪುಸ್ತಕ ಸೇರಿದಂತೆ ಎರಡು ಪುಸ್ತಕಗಳ ಬಿಡುಗಡೆ ಹಾಗೂ ಲಿಂಗದೇವರು ನಿರ್ದೇಶಿಸಿರುವ ಸಾಕ್ಷ್ಯಚಿತ್ರದ ಪ್ರದರ್ಶನವಿರಲಿದೆ.

ಸಂಗೀತ ಬ್ರಹ್ಮ ಹಂಸಲೇಖ ನೇತೃತ್ವದಲ್ಲಿ ರಾಜೇಂದ್ರಸಿಂಗ್ ಬಾಬು ನಿರ್ದೇಶನದ ಚಿತ್ರಗಳ ಜನಪ್ರಿಯ ಹಾಡುಗಳನ್ನು ಹಂಸಲೇಖ ತಂಡದವರು ಹಾಡಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಸಮಾರಂಭದ ತಿಳಿಸಿದರು.
ಹಿರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ ಮಾತನಾಡಿ, ರಾಜೇಂದ್ರಸಿಂಗ್ ಬಾಬು ಅವರು ಸಿನಿಮಾ ನಿರ್ದೇಶನ ಹೊರತುಪಡಿಸಿ, ಚಿತ್ರರಂಗಕ್ಕಾಗಿ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ಕನ್ನಡ ಚಲನಚಿತ್ರ ನಿರ್ದೇಶಕರ ಸಂಘದ ಸ್ಥಾಪನೆ, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿದ್ದಾಗ “ಬೆಳ್ಳಿ ಹೆಜ್ಜೆ” ಅಂತಹ ಕಾರ್ಯಕ್ರಮದ ಮುಂದುವರಿಕೆ ಹಾಗೂ ವಿಧಾನಸೌಧದ ಮುಂದೆ ಚಲನಚಿತ್ರೋತ್ಸವದ ಉದ್ಘಾಟನೆ ಹಾಗೂ ಮೈಸೂರಿನ ಅರಮನೆ ಬಳಿ ಸಮರೋಪ ಸಮಾರಂಭದ ಆಯೋಜನೆ ಹೀಗೆ ಹಲವು ಕಾರ್ಯಕ್ರಮಗಳನ್ನು ಬಾಬು ಅವರು ಮಾಡಿದ್ದಾರೆ. ತಮ್ಮ ಚಿತ್ರಗಳ ಮೂಲಕವೂ ಅವರು ಎಲ್ಲರ ಮನೆ ಮಾತಾಗಿದ್ದಾರೆ. ರಾಜೇಂದ್ರಸಿಂಗ್ ಬಾಬು ಅವರು ನಿರ್ದೇಶಕರಾಗಿ 50 ವರ್ಷಗಳು ಪೂರೈಸಿರುವ ಈ ಸಂದರ್ಭದಲ್ಲಿ ಅವರನ್ನು ಅಭಿನಂದಿಸುತ್ತೇನೆ ಎಂದು ತಿಳಿಸಿದರು.
ನಾನು ರಾಜೇಂದ್ರಸಿಂಗ್ ಬಾಬು ಅವರ ಆತ್ಮೀಯ ಸ್ನೇಹಿತ. ಆದರೆ ಈ ಕಾರ್ಯಕ್ರಮಕ್ಕೆ ಅಭಿಮಾನಿ. ಮೂರು ತಲೆಮಾರುಗಳಿಂದ ಅವರ ಕುಟುಂಬ ಚಿತ್ರರಂಗಕ್ಕೆ ನೀಡಿರುವ ಕೊಡುಗೆ ಅಪಾರ. ವಿಶೇಷವೆಂದರೆ ನಮ್ಮಿಬ್ಬರ ಕಾಂಬಿನೇಶನ್ ನಲ್ಲಿ ಬಂದ ‘ಮಹಾಕ್ಷತ್ರಿಯ’ ಚಿತ್ರದ “ಈ ಭೂಮಿ ಬಣ್ಣದ ಬುಗುರಿ” ಹಾಡು ಏಳನೇ ತರಗತಿಯ ಪಠ್ಯವಾಗಿತ್ತು. ಮತ್ತೊಂದು ವಿಷಯ ನಮ್ಮ ಐದನಿ ಸಂಸ್ಥೆಯಿಂದ ಕನ್ನಡ ಚಿತ್ರರಂಗದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಚಿನ್ನದ ಪದಕ ನೀಡಲಾಗುತ್ತಿದೆ. ಮೊದಲ ಪದಕವನ್ನು ಶಿವರಾಜಕುಮಾರ್ ಅವರಿಗೆ ನೀಡಲಾಗಿದೆ. ಈಗ ಎರಡನೇ ಪದಕವನ್ನು ರಾಜೇಂದ್ರಸಿಂಗ್ ಬಾಬು ಅವರಿಗೆ ನೀಡಲಾಗುವುದು ಹಾಗೂ ಸಮಾರಂಭದ ದಿನ ರಾಜೇಂದ್ರಸಿಂಗ್ ಬಾಬು ನಿರ್ದೇಶನದ ಚಿತ್ರಗಳ ಜನಪ್ರಿಯ ಹಾಡುಗಳನ್ನು ನಮ್ಮ ತಂಡದವರು ಹಾಡಲಿದ್ದಾರೆ ಎಂದು ಸಂಗೀತ ನಿರ್ದೇಶಕ ಹಂಸಲೇಖ ಹೇಳಿದರು.
ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರು ರಾಜೇಂದ್ರಸಿಂಗ್ ಬಾಬು ಅವರು ಕನ್ನಡ ಚಿತ್ರರಂಗಕ್ಕೆ ನೀಡಿರುವ ಕೊಡುಗೆಯ ಕುರಿತು ಮಾತನಾಡಿದರು.

