Teaser released of "Namobharat", which tells the story of a patriotic soldier

ದೇಶಪ್ರೇಮಿ ಸೈನಿಕನ ಕಥೆ ಹೇಳುವ “ನಮೋಭಾರತ್` ಟೀಸರ್ ಬಿಡುಗಡೆ - CineNewsKannada.com

ದೇಶಪ್ರೇಮಿ ಸೈನಿಕನ ಕಥೆ ಹೇಳುವ “ನಮೋಭಾರತ್` ಟೀಸರ್ ಬಿಡುಗಡೆ

ಶ್ರೀ ಚೌಡೇಶ್ವರಿ ಫಿಲಂಸ್ ಮೂಲಕ ರಮೇಶ್ ಎಸ್. ಪರವಿನಾಯ್ಕರ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿ, ನಿರ್ಮಿಸಿ, ನಾಯಕನಾಗಿಯೂ ನಟಿಸಿರುವ `ನಮೋ ಭಾರತ್’ ಚಿತ್ರದ ಟೀಸರ್ ಬಿಡುಗಡೆ ಮತ್ತು ಎರಡು ಹಾಡುಗಳ ಪ್ರದರ್ಶನ ಕಾರ್ಯಕ್ರಮ ಈಚೆಗೆ ನಡೆಯಿತು. ಹಿರಿಯ ಸಾಹಿತಿ ಡಾ. ಡಾ.ದೊಡ್ಡರಂಗೇಗೌಡ, ಲಹರಿ ವೇಲು, ಹಿರಿಯನಟಿ ಭವ್ಯ ಟೀಸರ್ ರಿಲೀಸ್ ಮಾಡಿ ಮಾಡಿ ಶುಭ ಹಾರೈಸಿದರು.

ಈ ವೇಳೆ ಮಾತನಾಡಿದ ಡಾ.ದೊಡ್ಡರಂಗೇಗೌಡ, `ಇದೊಂದು ಅಪ್ಪಟ ದೇಶಪ್ರೇಮದ ಕಥೆ. ನಾನೂ ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದೇನೆ. ಯೋಧರ ಕಥೆಯ ಜೊತೆಗೆ ರೈತರ ಸಮಸ್ಯೆಯ ಬಗ್ಗೆಯೂ ಹೇಳಲಾಗಿರುವ ಈ ಚಿತ್ರದ ಶೀರ್ಷಿಕೆಗೆ ಎರಡು ಅರ್ಥಗಳಿವೆ. ದೇಶಕ್ಕೆ ನಮಸ್ಕಾರ ಎನ್ನುವುದರ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೂ ನಮಸ್ಕಾರ ಎಂದು ಅರ್ಥೈಸುತ್ತದೆ. ಉಜ್ವಲವಾದ ರಾಷ್ಟ್ರಪ್ರೇಮ ಇರುವ ಕಡೆ ಇಂತಹ ವಿಷಯಗಳು ಕಾಣಿಸುತ್ತವೆ’ ಎಂದು ಶುಭ ಹಾರೈಸಿದರು.

ಲಹರಿ ವೇಲು ಮಾತನಾಡಿ, ಕಾಶ್ಮೀರದಲ್ಲಿ ಚಿತ್ರೀಕರಣ ಮಾಡುವುದು ಕಷ್ಟ. ನಮ್ಮ ಕಾಶ್ಮೀರ ಯಾವ ಸ್ವಿಟ್ಜರ್ಲೆಂಡ್ ಗೂ ಕಡಿಮೆ ಇಲ್ಲ. 38 ವರ್ಷದ ಹಿಂದೆ ನಾನು ಮೊದಲಬಾರಿಗೆ ಕಾಶ್ಮೀರಕ್ಕೆ ಹೋಗಿದ್ದೆ. ಅದಾದ ಮೇಲೆ ಕೆಲ ತಿಂಗಳುಗಳ ಹಿಂದೆ ಕಾಶ್ಮೀರಕ್ಕೆ ಹೋಗಿದ್ದೆ. ಈಗ ಅಲ್ಲಿನ ಪರಿಸ್ಥಿತಿ ಸಾಕಷ್ಟು ಬದಲಾಗಿದೆ. ಆಗಿನ ಮತ್ತು ಈಗಿನ ಪರಿಸ್ಥಿತಿಯಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸೈನ್ಯವನ್ನು ಅತ್ಯಂತ ಬಲಿಷ್ಠವನ್ನಾಗಿ ಮಾಡಿದ್ದಾರೆ ಎಂದು ಹೇಳಿದರು.

ನಿರ್ದೇಶಕ ರಮೇಶ್ ಎಸ್. ಪರವಿನಾಯ್ಕರ್ ಮಾತನಾಡಿ, ನಾನು ಕೆಳದಿ ಚೆನ್ನಮ್ಮನ ವಂಶಸ್ಥ. 2015ರಲ್ಲಿಗಾಂಧಿ ಕನಸು’ ಎಂಬ ಚಿತ್ರ ಮಾಡಿದ್ದೆ. ಬಡ ರೈತನೊಬ್ಬನ ಮಗ ಸೈನ್ಯಕ್ಕೆ ಸೇರಿಕೊಂಡಾಗ ದೇಶದ ಗಡಿ ಭಾಗದಲ್ಲಿ ಆತ ಅನುಭವಿಸುವ ಒಂದಷ್ಟು ಸಮಸ್ಯೆಗಳು, ಅಲ್ಲಿ ನಡೆದ ಕಾಶ್ಮೀರಿ ಪಂಡಿತರ ಮಾರಣಹೋಮ, ಆತನಿಗಾದ ಭಯೋತ್ಪಾದನೆಯ ಅನುಭವಗಳನ್ನು ಚಿತ್ರದಲ್ಲಿ ಹೇಳಲಾಗಿದೆ. ಈ ಮಧ್ಯೆ, ಆ ಸೈನಿಕನಿಗೆ ಕಾಡುವ ತನ್ನ ತಂದೆ-ತಾಯಿಯ ನೆನಪುಗಳು, ಜೊತೆಗೆ ಊರಲ್ಲಿ ತಾನು ಪ್ರೀತಿಸಿದ ಹುಡುಗಿಯ ನೆನಪು ಇವೆಲ್ಲವೂ ಈ ಚಿತ್ರದಲ್ಲಿದೆ’ ಎಂದರು.

ಕಾಶ್ಮೀರದಲ್ಲಿ ಚಿತ್ರೀಕರಣ ಮಾಡಿದ ಅನುಭವ ಹಂಚಿಕೊಳ್ಳುತ್ತ, ಅಲ್ಲಿ 48 ದಿನ ಚಿತ್ರೀಕರಣ ನಡೆಸಿದ್ದೇವೆ. ಕೊರೆವ ಚಳಿಯ ನಡುವೆ ಶೂಟಿಂಗ್ ನಿಜಕ್ಕೂ ಕಷ್ಟವಾಗಿತ್ತು. ಅಲ್ಲದೆ ಕೊಪ್ಪಳ, ಅಂಜನಾದ್ರಿ ಬೆಟ್ಟದಲ್ಲೂ ಚಿತ್ರೀಕರಣ ಮಾಡಿದ್ದೇವೆ, ಮಾರ್ಚ್ 1ಕ್ಕೆ ರಿಲೀಸಾಗಲಿದೆ'ಎಂದರು.

ಇಬ್ಬರು ನಾಯಕಿಯರಲ್ಲೊಬ್ಬರಾದ ಸುಷ್ಮಾರಾಜ್ ಮಾತನಾಡಿ,ಹಳ್ಳಿಯಲ್ಲಿ ನಾಯಕನನ್ನು ಪ್ರೀತಿಸುವ ಹುಡುಗಿಯ ಪಾತ್ರ ನನ್ನದು ಎಂದರು.

ಹಿರಿಯ ನಟಿ ಭವ್ಯ ಮಾತನಾಡಿ, ಮಗನಲ್ಲಿ ಚಿಕ್ಕಂದಿನಿಂದಲೇ ದೇಶ ಪ್ರೇಮವನ್ನು ಬೆಳೆಸುವ ತಾಯಿಯಾಗಿ ಕಾಣಿಸಿಕೊಂಡಿದ್ದೇನೆ. ಸೆಂಟಿಮೆಂಟ್ ಸನ್ನಿವೇಶಗಳು ಚೆನ್ನಾಗಿ ಮೂಡಿಬಂದಿವೆ’ ಎಂದರು.

ಶಂಕರ್ ಪಾಗೋಜಿ, ಸಹ ನಿರ್ದೇಶಕ ರಾಜರತ್ನ, ಛಾಯಾಗ್ರಾಹಕ ಎಸ್ ಟಿವಿ ವೀರೇಶ್ , ವಿತರಕ ವೆಂಕಟ್ ಗೌಡ ಮತ್ತಿತರು ಚಿತ್ರದ ಕುರಿತು ಮಾಹಿತಿ ಹಂಚಿಕೊಂಡರು.

`ನಮೋ ಭಾರತ್’ ಚಿತ್ರಕ್ಕೆ ಎ.ಟಿ. ರವೀಶ್ ಸಂಗೀತ, ಡಾ. ದೊಡ್ಡರಂಗೇಗೌಡ, ಡಾ.ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ, ವೀರೇಶ್ ಎಸ್.ಟಿ.ವಿ. ಹಾಗೂ ಗೌರಿ ವೆಂಕಟೇಶ್ ಛಾಯಾಗ್ರಹಣ, ರುದ್ರೇಶ್ ನಾಗಸಂದ್ರ ಸಂಭಾಷಣೆ, ಹೈಟ್ ಮಂಜು, ನಾಗೇಶ್ ಅವರ ನೃತ್ಯ ನಿರ್ದೇಶನ, ರಾಜರತ್ನ, ವಿನಾಯಕ, ಅಂಜಿತ ಅವರ ಸಹನಿರ್ದೇಶನವಿದೆ. ತಾರಗಣದಲ್ಲಿ ರಮೇಶ್ ಪರವಿನಾಯ್ಕರ್, ಸೋನಾಲಿ ಪಂಡಿತ್, ಸುಷ್ಮಾ ರಾಜ್, ಭವ್ಯ, ಮೈಕೋ ನಾಗರಾಜ್, ಬಿರಾದಾರ್, ಶಂಕರ್ ಭಟ್, ನವನೀತ, ಶ್ರವಣ ಪಂಡಿತ್, ರವೀಂದ್ರ ಸಿಂಗ್ ಶರ್ಮಾ, ಮಾಸ್ಟರ್ ಯುವರಾಜ್ ಪರವಿನಾಯ್ಕರ್ ಮತ್ತಿತರರಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin