ಶಭ್ಬಾಷ್ ಎರಡನೇ ಹಂತದ ಚಿತ್ರೀಕರಣ ಮುಕ್ತಾಯ

ರುದ್ರಶಿವ ನಿರ್ದೇಶನದ `ಶಭ್ಬಾಷ್’ ಚಿತ್ರ ಮೊದಲ ಹಂತದ ಚಿತ್ರೀಕರಣ ಮುಗಿಸಿಕೊಂಡ ಸುದ್ದಿ ಇತ್ತೀಚೆಗಷ್ಟೇ ಹೊರಬಿದ್ದಿತ್ತು. ಅದಾಗಲೇ ಚಿತ್ರತಂಡ ಎರಡನೇ ಹಂತದ ಚಿತ್ರೀಕರಣ ಸಹ ಸಾಂಘವಾಗಿ ಮುಕ್ತಾಯಗೊಂಡ ಖುಷಿಯ ಸಂಗತಿಯನ್ನು ಹಂಚಿಕೊಂಡಿದೆ.

ಚನ್ನಗಿರಿಯಲ್ಲಿ ಮೊದಲನೇ ಹಂತದ ಚಿತ್ರೀಕರಣ ಮುಗಿಸಿಕೊಂಡಿದ್ದ ಚಿತ್ರತಂಡ ಮಡಿಕೇರಿ ಸುತ್ತಮುತ್ತಲ ಚೆಂದದ ಪರಿಸರದಲ್ಲಿ ಎರಡನೇ ಹಂತದ ಚಿತ್ರೀಕರಣವನ್ನು ಸಮಾಪ್ತಿಗೊಳಿಸಿಕೊಂಡಿದೆ. ಈ ಹಂತದಲ್ಲಾದ ಅಮೋಘ ಅನುಭವಗಳನ್ನೂ ಹಂಚಿಕೊಂಡಿದೆ.
ನಿರ್ದೇಶಕ ರುದ್ರಶಿವ ಅತ್ಯಂತ ಅಚ್ಚುಕಟ್ಟಾಗಿ ಪ್ಲಾನು ಮಾಡಿಕೊಂಡು, ಅದಕ್ಕೆ ತಕ್ಕುದಾಗಿಯೇ ಮುಂದಡಿ ಇಡುತ್ತಿದ್ದಾರೆ. ಅದರ ಭಾಗವಾಗಿಯೇ ಮಡಿಕೇರಿಯ ಗೋಣಿಕೊಪ್ಪ, ಬಿರನಾಣಿ ಮುಂತಾದ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಸಿದ್ದಾರೆ. ಈ ಭಾಗದ ಟಾಟ ಟೀ ಎಸ್ಟೇಟ್, ಬೆಟ್ಟಗುಡ್ಡ, ಜಲಪಾತ ಮುಂತಾದೆಡೆಗಳಲ್ಲಿ ಬಹುಮುಖ್ಯ ಭಾಗಗಳನ್ನು ಸೆರೆಹಿಡಿಯಲಾಗಿದೆ. ದುರ್ಗಮವಾದ ಪ್ರದೇಶಗಳಲ್ಲಿ ಒಂದಿಡೀ ಚಿತ್ರತಂಡ ಅತ್ಯಂತ ಉತ್ಸಾಹದಿಂದ ಈ ಚಿತ್ರೀಕರಣದಲ್ಲಿ ಭಾಗಿಯಾಗಿದೆ.

ವಿಶೇಷವಾಗಿ, ಎರಡು ಹಾಡುಗಳನ್ನು ಈ ಸಂದರ್ಭದಲ್ಲಿ ಚಿತ್ರೀಕರಿಸಿಕೊಳ್ಳಲಾಗಿದೆ. ಇಲ್ಲಿ ವಾಸವಾಗಿರುವ ಜೇನುಕುರುಬರ ಹಾಡಿಗಳಿಗೆ ಭೇಟಿ ನೀಡಿದ್ದ ಚಿತ್ರತಂಡ, ಆ ಬುಡಕಟ್ಟು ಜನಾಂಗದ ಹಾಡೊಂದನ್ನು ಚಿತ್ರೀಕರಿಸಿಕೊಂಡಿದೆ. ಅದಕ್ಕೆ ಸಾಹಿತ್ಯ, ಸಂಗೀತವೆಲ್ಲ ಆ ಬುಡಕಟ್ಟು ಜನರದ್ದೇ ಎಂಬುದು ಅಸಲೀ ವಿಶೇಷ. ಒಟ್ಟಾರೆ ಶಭ್ಬಾಷ್ ಚಿತ್ರದ ಪ್ರಧಾನ ಆಕರ್ಷಣೆಗಳಲ್ಲಿ ಜೇನುಕುರುಬರ ಆ ಹಾಡೂ ಕೂಡಾ ಪ್ರಧಾನವಾಗಿ ಸೇರಿಕೊಂಡಿದೆ.
ಅಂದಹಾಗೆ, ಆರು ದಿನಗಳ ಕಾಲ ಮಡಿಕೇರಿ ಭಾಗದಲ್ಲಿಯೇ ಚಿತ್ರತಂಡ ಬೀಡುಬಿಟ್ಟಿತ್ತು. ಡ್ಯಾನ್ಸರ್ ಗಳು ಸೇರಿದಂತೆ ಇಡೀ ಚಿತ್ರತಂಡವೇ ಎರಡನೇ ಹಂತರ ಚಿತ್ರೀಕರಣದಲ್ಲಿ ಭಾಗಿಯಾಗಿತ್ತು. ಅದರಲ್ಲಿಯೂ ಒಂದು ದಿನ ಸಂಜೆ ಆರು ಗಂಟೆಯಿಂದ ಮಾರನೇ ದಿನ ಮುಂಜಾನೆ ಆರು ಗಂಟೆಯವರೆಗೂ ಅವ್ಯಾಹತವಾಗಿ ಚಿತ್ರೀಕರಣ ನಡೆಸಲಾಗಿದೆ. ಮಡಿಕೇರಿ ಅಂದಮೇಲೆ ಅಲ್ಲಿನ ಮಂಜು, ಚಳಿಯ ತೀವ್ರತೆ ಎಂಥಾದ್ದೆಂಬುದು ಎಲ್ಲರಿಗೂ ತಿಳಿದಿರುತ್ತೆ. ಅದರ ನಡುವೆಯೂ ಅಹೋರಾತ್ರಿ ಚಿತ್ರೀಕರಣ ನಡೆಸಿದ ರೋಮಾಂಚಕ ಕ್ಷಣಗಳಿಗೆ ಚಿತ್ರತಂಡ ಸಾಕ್ಷಿಯಾಗಿದೆ.

ಓಂ ಸಾಯಿ ಪ್ರಕಾಶ್ ಸೇರಿದಂತೆ ಘಟಾನುಘಟಿ ನಿರ್ದೇಶಕರ ಗರಡಿಯಲ್ಲಿ ಪಳಗಿಕೊಂಡಿರುವ ರುದ್ರಶಿವ ನಿರ್ದೇಶನದ ಮೊದಲ ಚಿತ್ರವಿದು. ಪವೀಂದ್ರ ಮುತ್ತಪ್ಪ ಈ ಚಿತ್ರವನ್ನು ಏಸ್ 22 ಬ್ಯಾನರಿನಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಕ' ಮತ್ತು
ಮಳೆಬಿಲ್ಲು’ ಸಿನಿಮಾಗಳಲ್ಲಿ ನಟಿಸಿರುವ ಶರತ್ ನಾಯಕನಾಗಿ ನಟಿಸಿದ್ದರೆ, ನಿಸರ್ಗ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ಇದೀಗ ಎರಡನೇ ಹಂತದ ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸಿಕೊಂಡಿರುವ ಚಿತ್ರತಂಡ, ಮೂರನೇ ಹಂತದ ಚಿತ್ರೀಕರಣದತ್ತ ಸಾಗುತ್ತಿದೆ.