"Vaishampayana Theera film" trailer release

“ವೈಶಂಪಾಯನ ತೀರ” ಟ್ರೇಲರ್ ಬಿಡುಗಡೆ - CineNewsKannada.com

“ವೈಶಂಪಾಯನ ತೀರ” ಟ್ರೇಲರ್ ಬಿಡುಗಡೆ

ರಂಗಕರ್ಮಿ ರಮೇಶ್ ಬೇಗಾರು ನಿರ್ದೇಶಿಸಿರುವ ‘ವೈಶಂಪಾಯನ ತೀರ’ ಚಿತ್ರದ ಟ್ರೇಲರ್ ಹಲವು ಗಣ್ಯರ ಸಮ್ಮುಖದಲ್ಲಿ ಬಿಡುಗಡೆಯಾಗಿದೆ. ಚಿತ್ರ ಜನವರಿ 6 ರಂದು ತೆರೆಗೆ ಬರಲಿದೆ.

ಸದ್ಯ ಸಿನಿಮಾದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇತ್ತೀಚಿಗೆ ‘ವೈಶಂಪಾಯನ ತೀರ’ ಸಿನಿಮಾದ ಟ್ರೇಲರ್ ಮತ್ತು ಹಾಡುಗಳನ್ನು ಬಿಡುಗಡೆ ಮಾಡಿದೆ.

ಹಿರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ, ಸಾಹಿತಿ ಮಹಾಬಲಮೂರ್ತಿ ಕೊಡ್ಲೆಕೆರೆ, ಸಂಗೀತ ನಿರ್ದೇಶಕ ಗುರುಕಿರಣ್, ಹಿರಿಯ ಪತ್ರಕರ್ತ ಎನ್. ಎಸ್ ಶ್ರೀಧರಮೂರ್ತಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ. ಮ ಹರೀಶ್ ಸೇರಿದಂತೆ ಹಲವು ಗಣ್ಯರು ಸೇರಿ ‘ವೈಶಂಪಾಯನ ತೀರ’ ಸಿನಿಮಾದ ಟ್ರೇಲರ್ ಬಿಡುಗಡೆ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು.

ಸಾಹಿತಿ ಮಹಾಬಲಮೂರ್ತಿ ಕೊಡ್ಲೆಕೆರೆ ಅವರ ಸಣ್ಣಕತೆಯನ್ನು ಆಧರಿಸಿ ಈ ಸಿನಿಮಾ ನಿರ್ಮಾಣವಾಗಿದೆ. ಯಕ್ಷಗಾನವನ್ನು ಹಿನ್ನೆಲೆಯಾಗಿಟ್ಟುಕೊಂಡು ಪ್ರಕೃತಿ ಮತ್ತು ಪುರುಷನ ಸಂಬಂಧವನ್ನು ವಿಭಿನ್ನವಾದ ಧಾಟಿಯಲ್ಲಿ ನಿರೂಪಿಸಲಾಗಿದೆ. ಇಡೀ ಸಿನಿಮಾವನ್ನು ಕೊಪ್ಪ ಮತ್ತು ಶೃಂಗೇರಿ ಸುತ್ತಮುತ್ತ ಚಿತ್ರೀಕರಿಸಲಾಗಿದೆ. ಮಲೆನಾಡ ಭಾಷೆ, ಜನಜೀವನ ಮತ್ತು ಸಂಸ್ಕೃತಿಯನ್ನು ತೆರೆಯ ಮೇಲೆ ತರಲಾಗಿದೆ ಎಂದು ಚಿತ್ರದ ಬಗ್ಗೆ ನಿರ್ದೇಶಕ ರಮೇಶ್ ಬೇಗಾರು ವಿವರಣೆ ನೀಡಿದರು.

ರಮೇಶ್ ಬೇಗಾರು ಸುಮಾರು ಮೂರು ದಶಕಗಳಿಂದ ಕಲಾಕ್ಷೇತ್ರದಲ್ಲಿ ಸಕ್ರಿಯವಾಗಿದ್ದಾರೆ. ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಅವರಿಗೆ ಹೆಚ್ಚಿನ ಅನುಭವವಿದೆ. ಯಕ್ಷಗಾನದಂತಹ ಕಲೆಯನ್ನು ಹೊಸ ಆಯಾಮದಲ್ಲಿ ನೋಡುವಂತ ಅಪರೂಪದ ಪ್ರತಿಭಾವಂತ ರಮೇಶ್ ಅವರು. ನಾನು ಕೂಡ ಈ ಚಿತ್ರವನ್ನು ನೋಡಲು ಕಾತುರನಾಗಿದ್ದೇನೆ ಎಂದರು ಹಿರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ.

ಇದೊಂದು ವಿಭಿನ್ನ ಕಥೆಯ ಚಿತ್ರ. ಮಲೆನಾಡ ಸಂಸ್ಕೃತಿಯನ್ನು ನಿರ್ದೇಶಕರು ಮನಮುಟ್ಟುವಂತೆ ತೋರಿಸಿದ್ದಾರೆ. ನಾನು ಈ ಚಿತ್ರದಲ್ಲಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೀನಿ ಎಂದು ನಟ ಪ್ರಮೋದ್ ಶೆಟ್ಟಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ
ಕಲಾವಿದರು ಹಾಗೂ ತಂತ್ರಜ್ಞರು ಚಿತ್ರ, ಪಾತ್ರ ಮತ್ತು ಚಿತ್ರೀಕರಣದ ಅನುಭವಗಳನ್ನು ಹಂಚಿಕೊಂಡರು.

‘ಸ್ವರಸಂಗಮ ಎಂಟರ್‌ಟೈನ್‌ಮೆಂಟ್ ಲಾಂಛನದಲ್ಲಿ ಆರ್.ಸುರೇಶ ಬಾಬು ಈ ಚಿತ್ರವನ್ನು ನಿರ್ಮಿಸಿದ್ದಾರೆ. ‘ವೈಶಂಪಾಯನ ತೀರ’ ಸಿನಿಮಾದಲ್ಲಿ ವೈಜಯಂತಿ ಅಡಿಗ ನಾಯಕಿಯಾಗಿದ್ದು, ಉಳಿದಂತೆ ಪ್ರಮೋದ್ ಶೆಟ್ಟಿ, ಬಾಬು ಹಿರಣ್ಣಯ್ಯ, ರಮೇಶ್ ಪಂಡಿತ್, ರವೀಶ್ ಹೆಗಡೆ, ಪ್ರಸನ್ನ ಶೆಟ್ಟಿಗಾರ್, ರಮೇಶ್ ಭಟ್, ಗುರುರಾಜ ಹೊಸಕೋಟೆ, ಶೃಂಗೇರಿ ರಾಮಣ್ಣ, ರವಿಕುಮಾರ್, ಸತೀಶ್ ಪೈ, ಸಂತೋಷ್ ಪೈ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಶ್ರೀನಿಧಿ ಕೊಪ್ಪ ಸಂಗೀತ ಸಂಯೋಜಿಸಿದ್ದು, ವಿನು ಮನಸು ಹಿನ್ನೆಲೆ ಸಂಗೀತ ನೀಡಿದ್ದಾರೆ. ಚಿತ್ರಕ್ಕೆ ಶಶೀರ ಶೃಂಗೇರಿ ಛಾಯಾಗ್ರಹಣ ಹಾಗೂ ಅವಿನಾಶ್ ಶೃಂಗೇರಿ ಅವರ ಸಂಕಲನವಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin