Veteran actor Ganesh Rao Kesarkar starrer "Tarakeshwar" trailer released

ಹಿರಿಯ ನಟ ಗಣೇಶ್ ರಾವ್ ಕೇಸರ್‍ಕರ್ ನಟನೆ “ತಾರಕೇಶ್ವರ” ಚಿತ್ರದ ಟ್ರೇಲರ್ ಬಿಡುಗಡೆ - CineNewsKannada.com

ಹಿರಿಯ ನಟ ಗಣೇಶ್ ರಾವ್ ಕೇಸರ್‍ಕರ್ ನಟನೆ “ತಾರಕೇಶ್ವರ” ಚಿತ್ರದ ಟ್ರೇಲರ್ ಬಿಡುಗಡೆ

ಕನ್ನಡ ಚಿತ್ರರಂಗದಲ್ಲಿ ಸರಿ ಸುಮಾರು 350ಕ್ಕೂ ಅಧಿಕ ಚಿತ್ರಗಳಲ್ಲಿ ತರೇವಾರಿ ಪಾತ್ರದ ಮೂಲಕ ಗಮನ ಸೆಳೆದಿರುವ ಹಿರಿಯ ಕಲಾವಿದ ಗಣೇಶ್ ರಾವ್ ಕೇಸರ್‍ಕರ್ ಅವರು ನಿರ್ಮಾಣ ಮಾಡಿರುವ “ ತಾರಕೇಶ್ವರ” ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಗಮನ ಸೆಳೆದಿದೆ. ಚಿತ್ರದ ಅಡಿಬರಹದಲ್ಲಿ ‘ಅಸುರ ಕುಲತಿಲಕ’ ಅಂತ ಅಡಿಬರಹವಿದೆ.

ಭಕ್ತಿ ಪ್ರಧಾನ ‘ತಾರಕೇಶ್ವರ’ ಚಿತ್ರದ ಟ್ರೇಲರ್ ಬಿಡುಗಡೆಗೆ ವೇದಾಂತ ಆಚಾರ್ಯ ಶ್ರೀ ಮಂಜುನಾಥ ಭಾರತಿ ಸ್ವಾಮಿಗಳು ಮೊದಲ ಟ್ರೇಲರ್, ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಎರಡನೇ ಟ್ರೇಲರ್‍ನ್ನು ಬಿಡುಗಡೆ ಮಾಡಿ ತಂಡಕ್ಕೆ ಶುಭಹಾರೈಸಿದರು.

ನಿರ್ದೇಶಕರ ಸಂಘದ ಅಧ್ಯಕ್ಷ ಎನ್ನಾಕೆ ವಿಶ್ವನಾಥ್, ಅಂಬೇಡ್ಕರ್ ಸೇನೆಯ ಅಧ್ಯಕ್ಷ ಮೂರ್ತಿ, ಕನ್ನಡ ಸಂಘದ ಅಧ್ಯಕ್ಷ ಬಸವರಾಜ ಪಡುಕೋಟೆ ಮುಂತಾದ ಗಣ್ಯರುಗಳು ಉಪಸ್ತಿತರಿದ್ದರು.

ಈ ವೇಳೆ ಮಾತಿಗಿಳಿದ ನಟ, ನಿರ್ಮಾಪಕ ಗಣೇಶ್‍ರಾವ್ ಕೇಸರ್‍ಕರ್ ಸಿನಿಮಾ ತೆರೆಗೆ ಬರಲು ಸಿದ್ದವಾಗಿದೆ. ಸೆನ್ಸಾರ್ ಮಂಡಳಿ ಪ್ರಶಂಸೆ ವ್ಯಕ್ತಪಡಿಸಿ ಯಾವುದೇ ದೃಶ್ಯಕ್ಕೆ ಆಕ್ಷೇಪ ವ್ಯಕ್ತಪಡಿಸದೆ ‘ಯು’ ಪ್ರಮಾಣ ಪತ್ರ ನೀಡಿದ್ದಾರೆ. ಯಾವತ್ತೂ ಹಣಕ್ಕೆ ಪ್ರಾಮುಖ್ಯತೆ ಕೊಟ್ಟಿಲ್ಲ. ಉತ್ತಮ ಚಿತ್ರವನ್ನು ಕನ್ನಡಿಗರಿಗೆ ಕೊಡಬೇಕೆಂಂದು ನಿರ್ಮಾಣ ಮಾಡಿದ್ದೇನೆ. ಇಲ್ಲಿ ಬಂದಿರುವ ಅತಿಥಿಗಳು ನನ್ನ ಮೇಲಿನ ಪ್ರೀತಿಯಿಂದ ಬಂದಿದ್ದಾರೆ ಎಂದರು

ಪೌರಾಣಿಕ ಚಿತ್ರ ಮಾಡುವುದು ಸುಲಭದ ಮಾತಲ್ಲ. ಸೆಟ್‍ನಲ್ಲಿ ಲೈಟಿನ ಕಂಬ ಕಾಣುವಂತಿಲ್ಲ. ನಿರ್ಮಾಪಕರ ಕಷ್ಟ ಏನೆಂದು ಈಗ ಅರ್ಥವಾಗಿದೆ. ಹೊಸ ಆಲೋಚನೆ ಎನ್ನುವಂತೆ ಈಗಾಗಲೇ ಟಿಕೆಟ್‍ನ್ನು ಮುದ್ರಣ ಮಾಡಿಸಲಾಗಿ, ದರ ನೂರು ರೂಪಾಯಿ ಇರುತ್ತದೆ. ಇದನ್ನು ಖರೀದಿಸಿದವರಿಗೆ ಕರ್ನಾಟಕದ ಯಾವುದೇ ಜಿಲ್ಲೆ, ತಾಲ್ಲೋಕು ಕೇಂದ್ರದಲ್ಲಿ ಸಿನಿಮಾ ವೀಕ್ಷಿಸಬಹುದು. ನಿಮ್ಮೆಲ್ಲರ ಪ್ರೋತ್ಸಾಹಿಸದಿಂದಇಲ್ಲಿಯವರೆಗೂ 333 ಚಿತ್ರಗಳಲ್ಲಿ ನಟಿಸಿದ್ದೇನೆ ಎಂದು ಹೇಳಿದರು

ನಿರ್ಮಾಪಕರ ಕೋರಿಕೆಗೆ ಮನ್ನಣೆ ನೀಡಿದ ಆಹ್ವಾನಿತರು ಒಂದಷ್ಟು ಸಗಟು ಟಿಕೆಟ್‍ಗಳನ್ನು ಸ್ಥಳದಲ್ಲೇ ಖರೀದಿಸಿದರು. ಅಂದಾಜು ಟಿಕೆಟ್ ಮೌಲ್ಯ ಐವತ್ತು ಸಾವಿರ ಆಗಿತ್ತು. ಹಾಗೂ ಭಾರತೀಯ ಅಂಚೆ ಇಲಾಖೆಯವರು ಹೊರತಂದಿರುವ ‘ತಾರಕೇಶ್ವರ’ ಚಿತ್ರ ಇರುವ ಅಂಚೆಚೀಟಿಯನ್ನು ಗಣ್ಯರುಗಳು ಅನಾವರಣಗೊಳಿಸಿದರು.

ಕಥೆ,ಚಿತ್ರಕಥೆ,ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿರುವ ಪುರುಷೋತ್ತಮ್ ಓಂಕಾರ್ ಮಾತನಾಡಿ ಶಿವಪುರಾಣದ ಕಥೆಯಲ್ಲಿ ತಾರಕಾಸುರ ಅಸುರ ಆದರೂ ಕೂಡ, ತಂದೆ ಕೊಂದವನ ಮೇಲೆ ಸೇಡು ತೀರಿಸಿಕೊಳ್ಳಲು ತಪ್ಪಸ್ಸು ಮಾಡಿ ತನಗೆ ಸಾವು ಬರಬಾರದೆಂದು ಬ್ರಹ್ಮನಿಂದ ವರ ಪಡೆದುಕೊಳ್ಳುತ್ತಾನೆ. ಮುಂದೆ ಯಾವ ರೀತಿ ಹೋರಾಟ ಮಾಡುತ್ತಾನೆಂದು ಕುತೂಹಲದ ಸನ್ನಿವೇಶಗಳೊಂದಿಗೆ ತೋರಿಸಲಾಗಿದೆ ಎಂದರು

ಗಣೇಶ್‍ರಾವ್ ಕೇಸರ್‍ಕರ್ ಶಿವ, ಕುರುಡ, ತಾರಕೇಶ್ವರ ಮತ್ತು ಮಹಾರಾಜ ಹೀಗೆ ನಾಲ್ಕು ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಅವರ ಪುತ್ರ ಪ್ರಜ್ವಲ್ ಕೇಸರ್‍ಕರ್ ಇಂದ್ರನಾಗಿ ಕಾಣಿಸಿಕೊಂಡಿದ್ದಾರೆ. ಬೆಂಗಳೂರು, ಶ್ರೀರಂಗಪಟ್ಟಣ, ಮೈಸೂರು ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು

ರಾಜನ ಮಗಳು, ಶಿವ ಭಕ್ತೆ, ಪಾರ್ವತಿಯಾಗಿ ರೂಪಾಲಿ ನಾಯಕಿ. ತಾರಾಕೇಶ್ವರನನ್ನು ಸಂಹಾರ ಮಾಡುವ ಬಾಲ ಸುಬ್ರಹ್ಮಣ್ಯನಾಗಿ ಬಾಲನಟಿ ಋತುಸ್ಪರ್ಶ ಕಾಣಿಸಿಕೊಂಡಿರುವುದು ವಿಶೇಷ. ಇವರೊಂದಿಗೆ ಸುಮಿತ ಪ್ರವೀಣ್, ಅನ್ನಪೂರ್ಣ, ರತಿಮನ್ಮಥರಾಗಿ ವಿಕ್ರಂಸೂರಿ-ನಮಿತಾರಾವ್, ಉಳಿದಂತೆ ಶಂಕರಭಟ್,ಶ್ರೀವಿಷ್ಣು, ಜಿಮ್‍ಶಿವು, ಎನ್.ಟಿ.ರಾಮಸ್ವಾಮಿ, ಗುರುರಾಜ್, ಹೆಜ್ಜಾಜಿ ಮಹಾದೇವ, ಬಸವರಾಜದೇಸಾಯಿ, ವೀರೇಂದ್ರ ಬೆಳ್ಳಿಚುಕ್ಕಿ, ಮಧು ಕಾರ್ತಿಕ್, ಗೀತಾ, ರಾಜೇಶ್ವರಿ ಪಾಂಡೆ, ರಕ್ಷಾಗೌಡ, ರಂಜಿತ, ಶ್ರೀರಾಮ್, ರೂಪ ಮುಂತಾದವರು ಅಭಿನಯಿಸಿದ್ದಾರೆ.

ತುಳಜಾಬಾಯಿ, ರೂಪ.ಎಸ್.ದೊಡ್ಮನಿ, ಡಾ.ಸುಮಿತ ಪ್ರವೀಣ್, ಬಸವರಾಜ್ ದೇಸಾಯಿ ಸಹ ನಿರ್ಮಾಪಕರುಗಳಾಗಿ ಗುರುತಿಸಿಕೊಂಡಿದ್ದಾರೆ. ಸಂಗೀತ ರಾಜ್‍ಭಾಸ್ಕರ್, ಛಾಯಾಗ್ರಹಣ ಮುತ್ತುರಾಜ್, ಸಂಕಲನ ಅನಿಲ್‍ಕುಮಾರ್, ನೃತ್ಯ ಕಪಿಲ್, ನಿರ್ಮಾಣ ನಿರ್ವಹಣೆ ದೀಪಕ್‍ಬಾಬು ನಿರ್ವಹಿಸಿದ್ದಾರೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin