ಗದಗದಲ್ಲಿ ವಿರಾಟಪುರ ವಿರಾಗಿ ಟ್ರೈಲರ್ ಬಿಡುಗಡೆ

ವಿರಾಟಪುರ ವಿರಾಗಿ ಸಿನಿಮಾವನ್ನು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತವಾಗಿ ಒಂದು ವಾರ ಸಿನಿಮಾ ತೋರಿಸುವೆ ಎಂದ ಸಚಿವ ಸಿ.ಸಿ. ಪಾಟೀಲ್
ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಬಿ.ಎಸ್.ಲಿಂಗದೇವರು ನಿರ್ದೇಶನದಲ್ಲಿ ಮೂಡಿ ಬಂದಿರುವ, ಹಾನಗಲ್ಲ ಕುಮಾರಸ್ವಾಮಿಗಳ ಜೀವನವನ್ನು ಆಧರಿಸಿದ ವಿರಾಟಪುರ ವಿರಾಗಿ ಸಿನಿಮಾದ ಟ್ರೈಲರ್ ಗದಗನಲ್ಲಿ ಅದ್ಧೂರಿಯಾಗಿ ಬಿಡುಗಡೆ ಆಯಿತು. ಈ ಟ್ರೈಲರ್ ಬಿಡುಗಡೆ ಸಮಾರಂಭಕ್ಕೆ ಐದು ಸಾವಿರಕ್ಕೂ ಹೆಚ್ಚು ಜನರು, ನಾಡಿನ ಅನೇಕ ಮಠಾಧೀಶರು ಹಾಗೂ ಜನಪ್ರತಿನಿಧಿಗಳು ಸಾಕ್ಷಿಯಾಗಿದ್ದರು.
6 ರಥಗಳು ರಾಜ್ಯದ ವಿವಿಧ ಭಾಗಗಳಿಂದ ಹೊರಟು 7000 ಕಿಮೀ ಪ್ರಯಾಣ ಮಾಡಿ, 400ಕ್ಕೂ ಹೆಚ್ಚು ಸಭೆ ನಡೆಸಿ ಸುಮಾರು ಒಂದು ಕೋಟಿ ಜನರಿಗೆ ಹಾನಗಲ್ ಶ್ರೀಗಳು ಮತ್ತು ವಿರಾಟಪುರ ವಿರಾಗಿ ಸಿನಿಮಾ ಬಗ್ಗೆ ಜಾಗೃತಿ ಮೂಡಿಸಿ ಗದಗದಲ್ಲಿ ಬಂದಿದ್ದ 6 ರಥಗಳನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲಾಯಿತು. ಸುಮಾರು 500ಕ್ಕೂ ಹೆಚ್ಚು ಮಹಿಳೆಯರು ಪೂರ್ಣ ಕುಂಬದಿಂದ ಸ್ವಾಗತ ಮಾಡಿದರೆ, ಜಾನಪದ ವಾದ್ಯ, ಕಲಾಮೇಳಗಳ ಮೆರವಣಿಗೆ ಕಾರ್ಯಕ್ರಮಕ್ಕೆ ಮತ್ತಷ್ಟು ರಂಗು ತುಂಬಿತ್ತು.

ವಿರಾಟಪುರ ವಿರಾಗಿ ಸಿನಿಮಾದ ಟ್ರೈಲರ್ ಅನ್ನು ಬಿಡುಗಡೆ ಮಾಡಿ ಮಾತನಾಡಿದ ಜನಪ್ರಿಯ ಯುವ ನಾಯಕ ಬಿ.ವೈ ವಿಜಯೇಂದ್ರ ‘ಇಂಥದ್ದೊಂದು ಸಿನಿಮಾ ಆಗಿದೆ ಎನ್ನುವುದೇ ನಮಗೊಂದು ಹೆಮ್ಮೆ. ಈ ಸಿನಿಮಾವನ್ನು ನಾವೆಲ್ಲರೂ ಗೆಲ್ಲಿಸಬೇಕು. ಟ್ರೈಲರ್ ನೋಡಿದ ಮೇಲೆ ಸಿನಿಮಾ ನೋಡಬೇಕು ಎನ್ನುವ ಕುತೂಹಲ ಇನ್ನೂ ಹೆಚ್ಚಾಗಿದೆ. ಅಪರೂಪದ ಸಿನಿಮಾ ಮಾಡಿರುವ ಬಿ.ಎಸ್.ಲಿಂಗದೇವರು ಮತ್ತು ಮೌನತಪಸ್ವಿ ಜಡೆಯ ಶಾಂತಲಿಂಗೇಶ್ವರ ಮಹಾಸ್ವಾಮಿಗಳಿಗೆ ನಾವೆಲ್ಲರೂ ಋಣಿಯಾಗಿರಬೇಕು’ ಎಂದರು.
ವಿರಾಟಪುರ ವಿರಾಗಿ ಮೇಕಿಂಗ್ ಪುಸ್ತಕವನ್ನು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಲೋಕೋಪಯೋಗಿ ಸಚಿವರಾದ ಸಿ.ಸಿ.ಪಾಟೀಲ್ ರಿಲೀಸ್ ಮಾಡಿ, ‘ಹಾನಗಲ್ಲ ಕುಮಾರ ಶಿವಯೋಗಿಗಳ ಜೀವನ ಚರಿತ್ರೆ ಆಧರಿತ ವಿರಾಟಪುರ ವಿರಾಗಿ ಸಿನಿಮಾ ವೀಕ್ಷಿಸಿ, ಯುವಕರು ವರ್ತನೆಗಳನ್ನು ತಿದ್ದುಕೊಳ್ಳಬೇಕು. ಈ ನಿಟ್ಟಿನಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಒಂದು ವಾರ ಚಿತ್ರಮಂದಿರದಲ್ಲಿ ಉಚಿತವಾಗಿ ಸಿನಿಮಾ ವೀಕ್ಷಣೆ ಮಾಡಲು ಅವಕಾಶ ಕಲ್ಪಿಸಿಕೊಡಲಾಗುವುದು’ ಎಂದರು.

ನಿರ್ದೇಶಕ ಬಿ.ಎಸ್.ಲಿಂಗದೇವರು ಮಾತನಾಡುತ್ತಾ, ‘ಆಧುನಿಕ ಜಗತ್ತಿನಲ್ಲಿ ಧಾರ್ಮಿಕ, ಭಕ್ತಿಪ್ರಧಾನ ಸಿನಿಮಾಗಳನ್ನು ಜನರಿಗೆ ಮುಟ್ಟಿಸುವುದೇ ಸವಾಲಿನ ಕೆಲಸವಾಗಿದೆ. ಹಾಗಾಗಿ ಈ ಸಿನಿಮಾವನ್ನು ಜನರಿಗೆ ತಲುಪಿಸುವ ಕೆಲಸ ಎಲ್ಲರಿಂದಲೂ ನಡೆಯಬೇಕು. ಈ ಸಿನಿಮಾವಾಗಲು ಅನೇಕ ಗುರುಗಳ, ಪಂಡಿತರು ಮಾರ್ಗದರ್ಶನ ಮಾಡಿದ್ದಾರೆ. ಜನವರಿ 13ರಂದು ಸಿನಿಮಾ ತೆರೆಗೆ ಬರಲಿದೆ’ ಎಂದರು.
ಈ ಸಿನಿಮಾಗೆ ಸರಕಾರವು ತೆರಿಗೆ ವಿನಾಯಿತಿ ಜೊತೆಗೆ ಸರ್ಕಾರದಿಂದ ಸಬ್ಸಿಡಿ ಕೊಡಿಸಲು ಸಚಿವರಾದ ಸಿ.ಸಿ. ಪಾಟೀಲ್ ಅವರಿಗೆ ಮನವಿ ಮಾಡಿಕೊಂಡರು ಮುಖಂಡ ಅಲ್ಲಂ ವೀರಭದ್ರಪ್ಪ. ಈ ಕಾರ್ಯಕ್ರಮದಲ್ಲಿ ತೋಂಟದಾರ್ಯ ಮಠದ ಡಾ.ಸಿದ್ದರಾಮ ಸ್ವಾಮೀಜಿ, ಹುಬ್ಬಳ್ಳಿಯ ಮೂರುಸಾವಿರ ಮಠದ ಗುರುಸಿದ್ದೇಶ್ವರ ರಾಜಯೋಗೀಂದ್ರ ಸ್ವಾಮೀಜಿ, ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಕಲ್ಲಯ್ಯಜ್ಜನವರು, ಸಮಾಜಸೇವಕಿ ಸಂಯುಕ್ತಾ ಕಳಕಪ್ಪ ಬಂಡಿ, ಶಾಸಕ ಎಚ್.ಕೆ.ಪಾಟೀಲ್, ಯುವ ಮುಖಂಡ ಅನಿಲ್ ಮೆಣಸಿನಕಾಯಿ, ಮಾಜಿ ಶಾಸಕ ಜಿ.ಎಸ್.ಪಾಟೀಲ್, ಕಲಾವಿದ ಸುಚೇಂದ್ರ ಪ್ರಸಾದ್, ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದರು. ಜಡೆಯ ಶಾಂತಲಿಂಗೇಶ್ವರ ಸ್ವಾಮೀಜಿಗಳು ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿದ್ದರು.