Interview: ಪಾತ್ರಗಳೇ ಜೀವಾಳ, ನಮ್ಮ ಆತ್ಮ, ಕಾಮಿಡಿ ಪಾತ್ರಗಳನ್ನು ಬಿಡುವುದಿಲ್ಲ : ನಟ ಧರ್ಮಣ್ಣ ಕಡೂರು

ರಾಜಯೋಗ”ದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಬಡ್ತಿ ಪಡೆದ ಪ್ರತಿಭಾನ್ವಿತ ಕಲಾವಿದ ಧರ್ಮಣ್ಣ ಕಡೂರು ಕ್ಯಾಮರಾ ಬಗಲಲ್ಲಿ ಹಾಕಿಕೊಂಡು ” ಹಂಪಿಎಕ್ಸ್‍ಪ್ರೆಸ್ ” ಹತ್ತಿದ್ದಾರೆ.
ರಂಜಿತಾ ಜೊತೆ ಹಾಕಿಕೊಂಡು ಆನೆಗುಂದಿ, ಹೊಸಪೇಟೆ, ಹಂಪಿ, ಕಮಲಾಪುರ, ಮಲ್ಲಪ್ಪನಗುಂಡಿ, ಹೊಸಕಮಲಾಪುರ,ಮತ್ತಿತರಕಡೆ ಸುತ್ತಾಡಿಕೊಂಡು ಬರಲು ಸಜ್ಜಾಗಿದ್ದಾರೆ. ಅವರ ಜೊತೆಗೆ ಹರೀಶ್ ಶೆರ್ವಾ, ಮೌನ ಕೂಡ ಜೊತೆಗೂಡಿಕೊಂಡಿದ್ದಾರೆ.
ಅಂದಹಾಗೆ ಧರ್ಮಣ್ಣ ಹೊಸ ಚಿತ್ರದ ಹೆಸರು “ಹಂಪಿ ಎಕ್ಸ್‍ಪ್ರೆಸ್” ಚಿತ್ರದ ಮುಹೂರ್ತ ನಡೆದಿದ್ದು ಚಿತ್ರೀಕಕರಣ ಭರದಿಂದ ಸಾಗುತ್ತಿದೆ. ಈ ಹಿನ್ನೆಲೆಯಲ್ಲಿ ತಮ್ಮ ಹೊಸ ಚಿತ್ರ ಮತ್ತು ಮುಂಬರುವ ಚಿತ್ರಗಳ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ “ಧರ್ಮಣ್ಣ ಕಡೂರು”.

• ರಾಜಯೋಗ ಚಿತ್ರದ ಬಳಿಕ ಹಂಪಿ ಎಕ್ಸ್‍ಪ್ರೆಸ್ ಹತ್ತಿದ್ದೀರಾ, ಕಥೆ ಏನು?
ರಾಜಯೋಗ ಚಿತ್ರದ ಬಳಿಕ ಹಲವು ಕಥೆಗಳನ್ನು ಕೇಳಿದ್ದೆ. ಕೆಲವು ಇಷ್ಟ ಆಗಿತ್ತು. ಅದರಲ್ಲಿ ಹಂಪಿ ಎಕ್ಸ್‍ಪ್ರೆಸ್ ಕೂಡ. ಚಿತ್ರದ ಮುಹೂರ್ತ ನಡೆದಿದೆ. ಇದೊಂದು ನೈಜ ಘಟನೆ ಆಧರಿಸಿದ ಚಿತ್ರ. ಚಿತ್ರದಲ್ಲಿ ಎರಡು ಪ್ರಮುಖ ಕಥೆಗಳು ಬರುತ್ತವೆ. ಅದರಲ್ಲಿ ಒಂದು ಕಥೆಯ ನಾಯಕ ನಾನು ನಿರ್ವಹಿಸುತ್ತಿದ್ದೇನೆ. ಒಳ್ಳೆಯ ಪಾತ್ರ ಸಿಕ್ಕಿದೆ.
• ಚಿತ್ರದಲ್ಲಿ ನಿಮ್ಮ ಪಾತ್ರ ಏನು?
ಚಿತ್ರದಲ್ಲಿ ನನ್ನದು ಫೋಟೋಗ್ರಾಫರ್ ಪಾತ್ರ. ಆತನ ಜೀವನದಲ್ಲಿ ನಡೆಯುವ ಘಟನೆಗಳ ಸುತ್ತ ಚಿತ್ರದ ಕಥೆ ಸಾಗಲಿದೆ. ಮೊದಲೇ ಹೇಳಿದ ಹಾಗೆ ನೈಜ ಘಟನೆ ಆಧರಿಸಿ ತಯಾರಾಗುತ್ತಿರುವ ಚಿತ್ರ. ಅಪ್ಪ ಅಮ್ಮ ಇರಲ್ಲ, ಮಾವನ ಆಶ್ರಯದಲ್ಲಿ ಬೆಳೆದಿರುತ್ತಾನೆ. ಅವನಿಗೆ ಲವ್ ಆಗುತ್ತದೆ. ಅದು ಅಂತಿಂಥ ಲವ್ ಅಲ್ಲ, ಈ ಕಾಲಮಾನದ ಪ್ರೇಮಕಥೆ. ಎಲ್ಲರಿಗೂ ಇಷ್ಟವಾಗಲಿದೆ ಎನ್ನುವ ವಿಶ್ವಾಸವಿದೆ.
- ಎಲ್ಲೆಲ್ಲಿ ಚಿತ್ರೀಕರಣ ಮಾಡುವ ಉದ್ದೇಶವಿದೆ.
ಹಂಪಿ ಎಕ್ಸ್‍ಪ್ರೆಸ್ ಎಂದು ಚಿತ್ರಕ್ಕೆ ಹೆಸರಿಟ್ಟಿರುವ ಹಿನ್ನೆಲೆಯಲ್ಲಿ ಆನೆಗುಂದಿ, ಹೊಸಪೇಟೆ, ಹಂಪಿ, ಕಮಲಾಪುರ, ಮಲ್ಲಪ್ಪನಗುಂಡಿ, ಹೊಸ ಕಮಲಾಪುರ,ಸುತ್ತ ಚಿತ್ರೀಕರಣ ಮಾಡಲಾಗುವುದು ಅದರಲ್ಲಿಯೂ ಹಂಪಿ ಮತ್ತು ಹೊಸಪೇಟೆ ಸುತ್ತ ಮುತ್ತ ಹೆಚ್ಚಾಗಿ ಚಿತ್ರೀಕರಣ ಮಾಡುವ ಗುರಿ ಹೊಂದಲಾಗಿದೆ.ಈ ತಿಂಗಳ 6ನೇ ತಾರೀಖಿನಿಂದಲೇ ಚಿತ್ರೀಕರಣ ಆರಂಭವಾಗಿದೆ.

• ಚಿತ್ರದಲ್ಲಿ ಎರಡು ಕಥೆ ಬರುತ್ತವೆ ಅಂದ್ರಿ, ನಿಮ್ಮ ಜೋಡಿ ಯಾರು, ಮತ್ತೊಂದು ಕಥೆಯ ಜೋಡಿ ಯಾರು..?
ಹಂಪಿ ಎಕ್ಸ್‍ಪ್ರೆಸ್ ಎರಡು ಕಥೆಗಳು ಇರುವ ಮುದ್ದಾದ ಪ್ರೇಮಕಥೆ ಮತ್ತು ಹಾಸ್ಯಪ್ರಧಾನ ಚಿತ್ರ. ಈ ಚಿತ್ರದಲ್ಲಿ ಎರಡು ಕಥೆಗಳು ಬರಲಿವೆ. ಅದರಲ್ಲಿ ಒಂದು ಕಥೆಯಲ್ಲಿ ನಾನು ನಾಯಕ. ನನ್ನ ಜೋಡಿಯಾಗಿ ರಂಜಿತಾ ಕಾಣಿಸಿಕೊಳ್ಳುತ್ತಿದ್ದಾರೆ. ಮತ್ತೊಂದು ಕಥೆಗೆ ಹರೀಶ್ ಶೆರ್ವಾ ನಾಯಕ. ಅವರ ಜೊತೆ ಮೌನ ನಾಯಕಿಯಾಗಿ ನಟಿಸುತ್ತಿದ್ದಾರೆ
• ಚಿತ್ರದಲ್ಲಿ ಉಳಿದಂತೆ ಯಾರೆಲ್ಲಾ ಕಲಾವಿದರು ಇದ್ದಾರೆ.
ಹಾಸ್ಯ ಕಲಾವಿದರಾದ ಮಹಂತೇಶ್ ಹಿರೇಮಠ,ರಾಜು ಬೆಳವಾಡಿ, ಚನ್ನಬಸಪ್ಪ, ಜೊತೆಗೆ ಸ್ಥಳೀಯ ಕಲಾವಿದರೂ ಇದ್ದಾರೆ. ಪಾತ್ರಕ್ಕೆ ತಕ್ಕಂತೆ ಸ್ಥಳೀಯ ಕಲಾವಿದರನ್ನು ಹೆಚ್ಚಾಗಿ ಬಳಸಿಕೊಳ್ಳುವ ಉದ್ದೇಶ ಹೊಂದಲಾಗಿದೆ
• ಯಾವ ಜಾನರ್ ಚಿತ್ರ, ನಿಮ್ಮ ಚಿತ್ರ ಎಂದರೆ ನಗುವಿಗೆ ಬರ ಇಲ್ಲಾ ಅಲ್ವಾ

ಖಂಡಿತಾ, ಚಿತ್ರದಲ್ಲಿ ನಗುವಿಗೆ ಬರ ಇರಲ್ಲ, ನನ್ನ ಚಿತ್ರ ಎಂದ ಮೇಲೆ ಅಲ್ಲಿ ಕಾಮಿಡಿ ಇದ್ದೇ ಇರುತ್ತದೆ. ಹಂಪಿ ಎಕ್ಸ್‍ಪ್ರೆಸ್ ಚಿತ್ರ ಕಾಮಿಡಿ, ಎಮೋಷನ್,ಲವ್,ಫ್ಯಾಮಿಲಿ ಡ್ರಾಮ ಅಂತ ಹೇಳಬಹುದು. ನಗಲಿಕ್ಕೇನು ಕೊರತೆ ಇಲ್ಲ ಜನರನ್ನು ಮನರಂಜಿಸುವುದಷ್ಟೇ ನಮ್ಮ ಉದ್ದೇಶ.
• ಚಿತ್ರದ ನಿರ್ದೇಶಕರು ಯಾರು, ನಿರ್ಮಾಣ ಯಾರದ್ದು
ಅಮರಪ್ರೇಮಿ ಅರುಣ್ ಚಿತ್ರದಲ್ಲಿ ಸಹನಿರ್ದೇಶಕರಾಗಿದ್ದ ಲಿಂಗರಾಜ ಪಾಟೀಲ್ ಹಂಪಿಎಕ್ಸ್‍ಪ್ರೆಸ್ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ.ಅವರಿಗೆ ಇದು. ಮೊದಲಚಿತ್ರ. ಇನ್ನೂ ಹಂಪಿ ಟಾಕೀಸ್ ಅಡಿ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು ಈಗಾಗಲೇ ಚಿತ್ರೀಕರಣ ಆರಂಭವವಾಗಿದೆ.
• ನಾಯಕ ಆಗಿದ್ದೀರಿ, ಹಾಸ್ಯ ಪಾತ್ರಗಳು ಬರುತ್ತಿವೆಯಾ, ಬೇರೆ ಬೇರೆ ಪಾತ್ರ ಮಾಡುತ್ತಿದ್ದೀರಾ ಹೇಗೆ?
ನಾಯಕನಾಗಿ ಕಾಣಿಸಿಕೊಂಡಿದ್ದರೂ ಹಾಸ್ಯ ಪ್ರಧಾನ ಪಾತ್ರಗಳು ಮತ್ತು ಬೇರೆ ಬೇರೆ ಪಾತ್ರಗಳಲ್ಲಿ ನಟಿಸುವುದನ್ನು ನಿಲ್ಲಿಸುವುದಿಲ್ಲ ಅದು ಮುಂದುವರಿದುಕೊಂಡು ಸಾಗಲಿದೆ. ನಟ ಗುರುನಂದನ್ ಜೊತೆ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಅದಕ್ಕಿನ್ನು ಹೆಸರಿಟ್ಟಿಲ್ಲ, ಬಹುತೇಕ ಚಿತ್ರೀಕರಣ ಮುಗಿಯುವ ಹಂತಕ್ಕೆ ಬಂದಿದೆ. ಡಾಲಿಪಿಕ್ಚರ್ಸ್ ಅಡಿ ನಾಗಭೂಷಣ್ ಪತೆ ವಿದ್ಯಾಪತಿ ಚಿತ್ರದಲ್ಲಿ ನಟಿಸಿದ್ದೇನೆ. ಜೊತೆಗೆ ಡಿ ಸತ್ಯಪ್ರಕಾಶ್ ಅವರ ಎಕ್ಸ್ ಅಂಡ್ ವೈ , ಚಿಕ್ಕಣ್ಣ ನಾಯಕನಾಗಿರುವ ಹೊಸ ಚಿತ್ರದಲ್ಲಿಯೂ ನಟಿಸುತ್ತಿದ್ದೇನೆ. ಇದೂ ಸೇರಿದಂತೆ ಅನೇಕ ಚಿತ್ರದಲ್ಲಿ ನಟಿಸಿದ್ದೇನೆ. ನಾಯಕನಾದರೂ ಪಾತ್ರಗಳಲ್ಲಿ ನಟಿಸುವುದನ್ನು ಬಿಡುವುದಿಲ್ಲ. ಪಾತ್ರಗಳೇ ನಮ್ಮ ಜೀವಾಳ, ಆತ್ಮ, ಕಾಮಿಡಿ ರೋಲ್ ಪಾತ್ರಗಳನ್ನು ಮುಂದುವರಿಸುವೆ
• ಹೊಸ ಅವಕಾಶಗಳ ಬಗ್ಗೆ ಹೇಳುವುದಾದರೆ
ಹಂಪಿ ಎಕ್ಸ್‍ಪ್ರೆಸ್ ಚಿತ್ರದ ನಂತರ ಇನ್ನೂ ಮೂರು ನಾಲ್ಕು ಸಿನಿಮಾಗಳ ಜೊತೆ ಮಾತುಕತೆ ಆಗಿದೆ. ಆ ಪೈಕಿ ಜನವರಿ ಅಥವಾ ಫೆಬ್ರವರಿಯಲ್ಲಿ ಚಿತ್ರ ಆರಂಭವಾಗಲಿದೆ. ಎಕ್ಟ್ರಾಡನರಿ ಕಥೆ ಹೊಂದಿದೆ. ಸಿಂಧನೂರಿನಲ್ಲಿ ನಡೆದ ನೈಜ ಘಟನೆಯ ಚಿತ್ರ, ರಾಮ ರಾಮ ರೇ ಹಾಗು ತಿಥಿ ಜಾನರ್ ಸಿನಿ, ಚಿತ್ರೀಕರಣದ ಸಮಯದಲ್ಲಿ ನೈಜ ಪಾತ್ರಗಳನ್ನು ಕರೆಸುತ್ತೇವೆ. ಎಲ್ಲರಿಗೂ ಚಿತ್ರ ಇಷ್ಟವಾಗಲಿದೆ ಎನ್ನುವ ವಿಶ್ವಾಸ ಅವರದು.
