Interview: ದರೋಡೆಕೋರ, ಆಧ್ಯಾತ್ಮಿಕ ಮಿಶ್ರಣದ “ಸಹ್ಯಾದ್ರಿ” : ಬಹುಭಾಷೆಯಲ್ಲಿ ಬಿಡುಗಡೆಗೆ ಯೋಜನೆ: ಆರ ರೋಹಿತ್

ದರೋಡೆಕೋರ, ಆಧ್ಯಾತ್ಮಿಕ ಡ್ರಾಮಾದ ಸುತ್ತ ಸಾಗುವ ಕಥೆಯನ್ನು “ಸಹ್ಯಾದ್ರಿ” ಮೂಲಕ ಬಹುಭಾಷೆಯಲ್ಲಿ ಪ್ರೇಕ್ಷಕರ ಮುಂದೆ ತರಲು ನಟ, ನಿರ್ದೇಶಕಕ ಆರ ರೋಹಿತ್ ಮುಂದಾಗಿದ್ದಾರೆ. ಮೊದಲ ಹಂತದ ಚಿತ್ರೀಕರಣ ಪೂರ್ಣಗೊಂಡಿದ್ದು ಪೋಸ್ಟರ್ ಬಿಡುಗಡೆಯಾಗಿದ್ದು ಗಮನ ಸೆಳೆದಿದೆ.

ಸದ್ಯ ಹಾಡುಗಳ ರೆಕಾರ್ಡಿಂಗ್ ಕೆಲಸ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ನಟ, ನಿರ್ದೇಶಕ ಆರ ರೋಹಿತ್, ಸದ್ಯದಲ್ಲಿಯೇ ಟೀಸರ್ ಬಿಡುಗಡೆ ಮಾಡುವ ಉದ್ದೇಶ ಹೊಂದಿದ್ದಾರೆ. ಕೈಯಲ್ಲಿ ಬಿಲ್ಲು ಮತ್ತು ರಕ್ತದಲ್ಲಿ ತೊಯ್ದ ಪಾದಗಳೊಂದಿಗೆ ಧ್ವಜ ಹಿಡಿದು ನಿಂತಿರುವ ಪೋಸ್ಟರ್ ಕುತೂಹಲ ಕೆರಳಿಸಿದೆ.
“ಸಹ್ಯಾದ್ರಿ”ಅಂದರೆ ಏನು ಅದರ ಹಿನ್ನೆಲೆ ಏನು, ಯಾಕಾಗಿ ಹೆಸರು ಇಡಲಾಗಿದೆ ಎನ್ನುವುದೂ ಸೇರಿದಂತೆ ಹಲವು ವಿಷಯಗಳ ಕುರಿತು “ಆರ ರೋಹಿತ್ ಮಾಹಿತಿ ಹಂಚಿಕೊಂಡಿದ್ದಾರೆ

• ನಿಮ್ಮ ಹಿನ್ನೆಲೆ ಏನು, ಈ ಬಗ್ಗೆ ಮಾಹಿತಿ ನೀಡಬಹುದಾ
ನಾನು ಮೂಲತಃ ಉಡುಪಿ ಜಿಲ್ಲೆಯವನು, ಏಳೆಂಟು ವರ್ಷಗಳ ಹಿಂದೆ ಸೀರಿಯಲ್ ನಲ್ಲಿ ನಟಿಸಿದ್ದೆ, ಜೊತೆಗೆ ಸಹಾಯಕ, ಸಹ ನಿರ್ದೇಶಕ ಹೀಗೆ ಹಲವು ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವವಿದೆ, ಇದರ ಆಧಾರದ ಮೇಲೆ “ಆರ’ ಚಿತ್ರ ಮಾಡಿದ್ದೆ. ಆ ಚಿತ್ರದಲ್ಲಿ ಪ್ರತಿಯೊಂದು ವಿಭಾಗದಲ್ಲಿ ಕೆಲಸ ಮಾಡಿದ್ದೆ. ಹೀಗಾಗಿ ನನ್ನ ಹೆಸರು, ಆರ ರೋಹಿತ್.
• ಸಹ್ಯಾದ್ರಿ ಅಂದರೆ ಏನು, ಯಾವೆಲ್ಲಾ ಅಂಶಗಳು ಚಿತ್ರದಲ್ಲಿವೆ
ಸಹ್ಯಾದ್ರಿ ಎನ್ನುವುದು ಜಾಗದ ಹೆಸರು, 1996ರಲ್ಲಿ ನಡೆಯುವ ಕಥೆ, ನೈಜ ಘಟನೆಯ ಜೊತೆಗೆ ಕಾಲ್ಪನಿಕ ಕಥೆಯೂ ಇದೆ. ಕಮರ್ಷಿಯಲ್ ಚಿತ್ರ ಮಾಡುತ್ತಿದ್ದೇವೆ. ಹೀಗಾಗಿ ಅದಕ್ಕೆ ಬೇಕಾದ ಎಲ್ಲಾ ಅಂಶಗಳನ್ನು ಸೇರಿಸಿದ್ದೇವೆ. ಪ್ರೇಕ್ಷಕರಿಗೆ ಉತ್ತಮ ಚಿತ್ರ ನೀಡಬೇಕು ಎನ್ನುವುದು ನಮ್ಮ ಉದ್ದೇಶ. ಈ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ
• ಯಾವ ಜಾನರ್ ಸಿನಿಮಾ, ಎಲ್ಲೆಲ್ಲಿ ಚಿತ್ರೀಕರಣ ಮಾಡುವ ಗುರಿ ಇದೆ.
ಸಹ್ಯಾದ್ರಿ ಚಿತ್ರ ಗ್ಯಾಂಗ್‍ಸ್ಟರ್ ಮತ್ತು ಆದ್ಯಾತ್ಮಿಕತೆಯನ್ನು ಬೆಸದ ಚಿತ್ರ, ಈ ಮಾದರಿಯ ಚಿತ್ರ ಮಾಡಲು ಧೈರ್ಯ ಬೇಕು, ಕಥೆಯನ್ನು ಅಂದುಕೊಂಡಂತೆ ತೆರೆಯ ಮೇಲೆ ತೆರಬೇಕು ಇಲ್ಲದಿದ್ದರೆ ಕಷ್ಟ ಆಗಲಿದೆ, ಈ ಹಿನ್ನೆಲೆಯಲ್ಲಿ ಒಳ್ಳೆಯ ಚಿತ್ರ ನೀಡುವ ಉದ್ದೇಶದಿಂದ ಎಲ್ಲಾ ಪ್ರಯತ್ನ ಹಾಕುತ್ತಿದ್ದು ಉತ್ತಮ ಚಿತ್ರ ನೀಡುವ ಉದ್ದೇಶ ನಮ್ಮದು. ಚಿತ್ರದಲ್ಲಿ ನಾಯಕ ಗ್ಯಾಂಗ್‍ಸ್ಟರ್, ಕ್ರಿಮಿನಲ್, ಸರ್ಕಾರದ ವಿರುದ್ದ ನಿಲ್ತಾನೆ, ಆತ ಯಾಕೆ ನಿಲ್ತಾನೆ ಎನ್ನುವುದು ಕುತೂಹಲದ ಸಂಗತಿ. ಚಿತ್ರವನ್ನು ಬೈಂದೂರು, ಮಂಗಳೂರು, ಶಿವಮೊಗ್ಗ, ಮಂಗಳೂರು, ತೀರ್ಥಹಳ್ಳಿ, ಕಳಸ, ಸಹ್ಯಾದ್ರಿ ಸೇರಿದಂತೆ ಕರಾವಳಿ ಭಾದಲ್ಲಿ ಹೆಚ್ಚಾಗಿ ಚಿತ್ರೀಕರಣ ನಡೆಯಲಿದೆ.

• ಸದ್ಯ ಚಿತ್ರ ಯಾವ ಹಂತದಲ್ಲಿದೆ, ಎಷ್ಟು ಶೆಡೂಲ್ಡ್‍ನಲ್ಲಿ ಚಿತ್ರೀಕರಣ ಮಾಡುವ ಉದ್ದೇಶವಿದೆ.
ಸದ್ಯ ಮೊದಲ ಹಂತದ ಚಿತ್ರೀಕರಣ ಮುಗಿದಿದೆ, ಟೀಸರ್ ರೆಡಿಯಾಗಿದೆ, ಪಾತ್ರಗಳನ್ನು ಪರಿಚಯ ಮಾಡುವ ಟೀಸರ್ ಅನ್ನು ಸದ್ಯದಲ್ಲಿಯೇ ಬಿಡುಗಡೆ ಮಾಡುವ ಉದ್ದೇಶ ಹೊಂದಲಾಗಿದೆ. ಸಹ್ಯಾದ್ರಿ ದೊಡ್ಡ ಕ್ಯಾನ್ವಾಸ್‍ನಲ್ಲಿ ಮೂಡಿಬರುತ್ತಿರುವ ಚಿತ್ರವಾದ ಹಿನ್ನೆಲೆಯಲ್ಲಿ 9 ರಿಂದ 10 ಶೆಡ್ಯೂಲ್ ನಲ್ಲಿ ಚಿತ್ರೀರಕಣ ಮಾಡುವ ಉದ್ದೇಶವಿದೆ. ಜೊತೆಗೆ ಅದಕ್ಕೆ ತಕ್ಕಂತೆ ಬಜೆಟ್ ಕೂಡ ಆಗಲಿದೆ.
• ಚಿತ್ರೀಕರಣಕ್ಕೆ ಹೆಚ್ಚು ಶೆಲ್ಡೂಲ್ಡ್ ಅಂದುಕೊಂಡಿರುವುದು ಯಾಕೆ
ಚತ್ರದ ಮೇಕಿಂಗ್, ಪಾತ್ರದ ಆಯ್ಕೆ ಮತ್ತು ಕಥೆ, ಪ್ರತಿಯೊಂದು ಅಂಶವೂ ಮನವರಿಕೆಯಾಗಬೇಕು ಅನ್ನುವ ಉದ್ದೇಶದಿಂದ ಚಿತ್ರೀಕರಣಕ್ಕೆ ಹೆಚ್ಚು ಸಮಯದ ಅಗತ್ಯವಿದೆ. ಜೊತೆಗೆ ವಿ ಎಫ್ ಎಕ್ಸ್ ಹೆಚ್ಚು ಇದೆ, 6 ಭಾಷೆಯಲ್ಲಿ ಸಿನಿಮಾ ಮೂಡಿ ಬರುತ್ತಿರುವ ಹಿನ್ನೆಲೆಯಲ್ಲಿ ಆಯಾ ಭಾಷೆಯ ಸೊಗಡಿನಲ್ಲಿ ಸಂಭಾಷಣೆ ಬರೆಯಬೇಕಾಗಿದೆ. ಇದಕ್ಕಾಗಿ ಹೆಚ್ಚು ಸಮಯ ತೆಗೆದುಕೊಳ್ಳಲಿದೆ
• ಚಿತ್ರ ಎಷ್ಟು ಭಾಷೆಯಲ್ಲಿ ಬರುತ್ತದೆ, ಎಷ್ಟು ಭಾಷೆಯಲ್ಲಿ ಡಬ್ ಮಾಡುತ್ತಿರಾ
ಈಗ ಸದ್ಯ 6 ಭಾಷೆಯಲ್ಲಿ ಚಿತ್ರ ಬಿಡುಗಡೆ ಮಾಡುವ ಉದ್ದೇಶವಿದೆ, ಕನ್ನಡದಲ್ಲಿ ಮೂಲ ಚಿತ್ರೀಕರಣವಾಗಿದ್ದು ಆ ನಂತರ ತೆಲುಗು, ತಮಿಳು, ಮಲೆಯಾಳಂ, ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಚಿತ್ರ ಮೂಡಿಬರುತ್ತಿದೆ, ಇದರ ಜೊತೆಗೆ ಗುಜರಾತಿ, ಅಸ್ಸಾಮಿ, ಬೋಜಪುರಿ ಮತ್ತು ಚೀನಾ ಭಾಷೆಯಲ್ಲಿ ಚಿತ್ರವನ್ನು ಡಬ್ ಮಾಡುವ ನಿಟ್ಟಿನಲ್ಲಿ ಮಾತುಕತೆ ನಡೆಯುತ್ತಿದೆ. ಮಾತುಕತೆ ಅಂತಿಮವಾದ ನಂತರ ಎಷ್ಟು ಭಾಷೆಯಲ್ಲಿ ಬಿಡುಡಗೆ ಆಗಲಿದೆ ಎನ್ನುವುದು ನಿಖರವಾಗಲಿದೆ

• ಚಿತ್ರದಲ್ಲಿ ಎಷ್ಟು ಹಾಡುಗಳಿವೆ ಯಾರು ಸಂಗೀತ ನೀಡುತ್ತಿದ್ದಾರೆ
ಸಹ್ಯಾದ್ರಿ ಚಿತ್ರದಲ್ಲಿ ಮೂರು ಹಾಡುಗಳಿವೆ ಅದರಲ್ಲಿ ಒಂದು ಇಂಗ್ಲೀಷ್ ಹಾಡು, ಇನ್ನುಳಿದ ಎರಡು ಹಾಡು ಎಲ್ಲಾ ಭಾಷೆಯಲ್ಲಿ ಬರುತ್ತವೆ.ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರ ಬಳಿ ಕೆಲಸ ಮಾಡಿದ ನವನಾಥ್ ವಾಸುದೇವ್ ಸಂಗೀತ ನೀಡುತ್ತಿದ್ದಾರೆ. ಮೂರು ಹಾಡುಗಳು ಒಂದಕ್ಕಿಂತ ಒಂದು ಚೆನ್ನಾಗಿವೆ.
• ಚಿತ್ರದಲ್ಲಿ ಯಾವೆಲ್ಲಾ ಕಲಾವಿದರಿದ್ದಾರೆ, ಆ ಬಗ್ಗೆ ಮಾಹಿತಿ ನೀಡುವುದಾದರೆ
ಚಿತ್ರದಲ್ಲಿ ಯಾವ ಯಾವ ಕಲಾವಿದರಿದ್ದಾರೆ ಎನ್ನುವುದು ಸದ್ಯಕ್ಕೆ ಕುತೂಹಲವಾಗಿಯೇ ಇರಲಿ, ಚಿತ್ರದಲ್ಲಿ ತೆಲುಗು, ಮಲೆಯಾಳಂ ಸೇರಿದಂತೆ ವಿವಿಧ ಭಾಷೆಯ ಕಲಾವಿದರಿದ್ಧಾರೆ. ಅವರ ಪಾತ್ರ ಪರಿಚಯ ಮಾಡುವ ಟೀಸರ್ ಅನ್ನು ಶೀಘ್ರದಲ್ಲಿ ಬಿಡುಡಗೆ ಮಾಡಲಾಗುವುದು ಆಗ ಚಿತ್ರದಲ್ಲಿ ಯಾವೆಲ್ಲಾ ಕಲಾವಿದರು ಇದ್ದಾರೆ ಎನ್ನುವುದು ತಿಳಿಯಲಿದೆ
ಸಹ್ಯಾದ್ರಿ ಎಆರ್ ಫಿಲ್ಮ್ಸ್ ಬ್ಯಾನರ್ ನಡಿಯಲ್ಲಿ ರೇಣುಕಾ ಪಿ ಎನ್ ನಿರ್ಮಿಸ್ತಿದ್ದಾರೆ. ಆರ ರೋಹಿತ್ ಚಿತ್ರವನ್ನ ಬರೆದು ನಿರ್ದೇಶಿಸಿ,ನಟಿಸ್ತಿದ್ದಾರೆ. ವಿಲಿಯಲ್ ಡೇವಿಡ್ ಸಹಾಯಕ ವಿನೋದ್ ಲೋಕಣ್ಣನವರ್ ಛಾಯಾಗ್ರಹಣ ಮಾಡ್ತಿದ್ದಾರೆ.