Exclusive Interview: ನಟನೆ ಜೀವನದ ಭಾಗ ಉತ್ತಮ ಪಾತ್ರಗಳಲ್ಲಿ ಕಾಣಿಸಿಕೊಳ್ಳುವಾಸೆ: “ಪುಟ್ಟಕ್ಕನ ಮಕ್ಕಳು” ಧಾರಾವಾಹಿ ನಟ ಪವನ್
ಕಲೆ ಎಲ್ಲರನ್ನು ಕೈ ಬೀಸಿ ಕರೆಯುತ್ತದೆ ಆದರೆ ಕೆಲವರನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತಿದೆ ಎನ್ನುವುದಕ್ಕೆ ತಾಜಾ ಉದಾಹರಣೆ “ಪುಟ್ಟಕ್ಕನ ಮಕ್ಕಳು” ಧಾರಾವಾಹಿಯ ನಟ ಪವನ್ ಕುಮಾರ್. ಪವನ್ ಕುಮಾರ್ ಅಂದರೆ ತಕ್ಷಣ ಅರ್ಥವಾಗುವುದಿಲ್ಲ ಮೃದು ಸ್ವಭಾವ ಮುರುಳಿ ಮೇಷ್ಟ್ರು ಅಂದಾಕ್ಷಣ ಥಟ್ಟನೆ ನೆನಪಾಗುವ ಹೆಸರು.
ಸ್ಟಾಕ್ ಬ್ರೋಕರ್ ಆಗಿದ್ದ ಪವನ್, ತನ್ನ ಕಚೇರಿ ಬಳಿ ಇದ್ದ ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ “ಟೆಂಟ್” ಸಿನಿಮಾ ತರಬೇತಿ ಶಾಲೆಯಲ್ಲಿ ವಾರಾಂತ್ಯದ ನಾಲ್ಕು ತಿಂಗಳ ತರಬೇತಿ ಪಡೆದು ಕಲಾಬದುಕಿನತ್ತು ಆಕರ್ಷಿತರಾದವರು. ಆರಂಭದ ಹೆಜ್ಜೆ ಎನ್ನುವಂತೆ “ಶನಿ” ಧಾರಾವಾಹಿಯಲ್ಲಿ ಬಣ್ಣ ಹಚ್ಚುವ ಮೂಲಕ ಬಣ್ಣದ ಲೋಕ ಪಾದಾರ್ಪಣೆ ಮಾಡಿದ ಪವನ್ ಕುಮಾರ್, ಕಿರಣ್ ರಾಜ್ ಧಾರಾವಾಹಿಯಿಂದ ಹೊರಬಂದ ನಂತರ “ಕಿನ್ನರಿ” ಧಾರಾವಾಹಿಗೆ ಭೂಮಿ ಶೆಟ್ಟಿ ಎದುರು ನಾಯಕನಾಗಿ ಕಾಣಿಸಿಕೊಂಡವರು.
ಅದಾದ ನಂತರ ಜಾಹೀರಾತು, ಹೊಸ ಪ್ರಾಜೆಕ್ಟ್ ಎನ್ನುವ ಚರ್ಚೆಯಲ್ಲಿದ್ದಾಗ ಸಿಕ್ಕ ಅವಕಾಶವೇ “ ಆರೂರು ಜಗದೀಶ್ ನಿರ್ಮಾಣ ಮತ್ತು ನಿರ್ದೇಶನದಲ್ಲಿ ಮೂಡು ಬರುತ್ತಿರುವ “ ಪುಟ್ಟಕ್ಕನ ಮಕ್ಕಳು” ಧಾರಾವಾಹಿ, ಸದ್ಯಕ್ಕೆ ಈ ಧಾರಾವಾಹಿಯ ಕಡಗೆ ಹೆಚ್ಚು ಗಮನ ಹರಿಸಿದ್ದು ನಟನೆಯನ್ನು ಬದುಕಿನ ಭಾಗವಾಗಿಸಿಕೊಳ್ಳಲು ಮುಂದಾಗಿದ್ದಾರೆ.
ಬಣ್ಣದ ಲೋಕದ ಪ್ರವೇಶದ ಕುರಿತು ಹಾಗು ಇದುವರೆಗೆ ನಟಿಸಿರುವ ಕಿರುತೆರೆ,ಸಿನಿಮಾ, ಜಾಹೀರಾತು ಹಾಗು ಆಲ್ಬಂ ಹಾಡುಗಳು ಬಗ್ಗೆ ಪವನ್ ಕುಮಾರ್ , ಸಿನಿ ನ್ಯೂಸ್ ಕನ್ನಡ ವೆಬ್‍ಸೈಟ್ ನೊಂದಿಗೆ ಮುಕ್ತವಾಗಿ ಮಾತು ಹಂಚಿಕೊಂಡಿರುವ ಅವರು ಆಕಸ್ಮಿಕವಾಗಿ ಚಿತ್ರರಂಗಕ್ಕೆ ಬಂದರೂ ನಟನೆಯೇ ಜೀವಾಳ. ಉತ್ತಮ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಆಸೆ ಇದೆ ಎಂದಿದ್ದಾರೆ.
• ಬಣ್ಣದ ಬದುಕಿ ಆರಂಭ ಹೇಗಾಯಿತು?
ವೃತ್ತಿಯಲ್ಲಿ ಸ್ಟಾಕ್ ಬ್ರೋಕರ್. ನಟನೆಯ ಬಗ್ಗೆ ಆಸಕ್ತಿ ಇತ್ತು. ಆದರೆ ಹೇಗೆ, ಏನು ಯಾವ ರೀತಿ ಯಾರನ್ನು ಸಂಪರ್ಕ ಮಾಡಬಹುದು ಎನ್ನುವ ಯಾವುದೇ ಐಡಿಯಾ ಇರಲಿಲ್ಲ. ಬನಶಂಕರಿಯಲ್ಲಿ ನಿತ್ಯ ನಮ್ಮ ಕಛೇರಿಗೇ ಹೋಗಿ ಬರುವಾಗ ಕಂಡದ್ದದೇ ಹಿರಿಯ ನಿರ್ದೇಶಕ ನಾಗತಿಗಹಳ್ಳಿ ಚಂದ್ರಶೇಖರ್ ಅವರ “ಟೆಂಟ್” ಸಿನಿಮಾ ತರಬೇತಿ ಶಾಲೆ ಕೆಲಸ ಮಾಡುತ್ತಿದ್ದರಿಂದ ವಾರಾಂತ್ಯದ ಅಭಿನಯ ಶಾಲೆಗೆ ಸೇರಿಕೊಂಡೆ. ನಾಲ್ಕು ತಿಂಗಳ ಕಾಲ ತರಬೇತಿಯನ್ನು ಮುಗಿಸಿದೆ. ಹೀಗೆ ಹುಡುಕಾಟದಲ್ಲಿದ್ದಾಗ ಸಿಕ್ಕ ಅವಕಾಶವೇ “ಶನಿ” ಧಾರಾವಾಹಿಯ ಚಂದ್ರನ ಪಾತ್ರ ಮಾಡಿದ್ದೆ. ಈ ನಡುವೆ “ಕಿನ್ನಡಿ” ಧಾರಾವಾಹಿಗೆ ಅವಕಾಶ ಸಿಕ್ಕಿತು. ಎರಡೂ ಧಾರಾವಾಹಿಯಲ್ಲಿ ನಟನೆ ಮಾಡಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ ಶನಿ ಧಾರಾವಾಹಿ ಬಿಡುವಂತಾಯಿತು.
• ಕಿನ್ನರಿ ಧಾರಾವಾಹಿಯ ಅನುಭವ ಹೇಗಿತ್ತು. ಅವಕಾಶ ಸಿಕ್ಕ ಬಗೆ ಹೇಗೆ?
“ಶನಿ” ಧಾರಾವಾಹಿಯಲ್ಲಿ ನಟನೆ ಮಾಡುತ್ತಿದ್ದ ವೇಳೆ “ಕಿನ್ನರಿ” ಧಾರಾವಾಹಿಯಲ್ಲಿ ನಟಸುವ ಅವಕಾಶ ಸಿಕ್ಕಿತು. ಆ ಧಾರಾವಾಹಿಯಲ್ಲಿ ನಟಿಸುತ್ತಿದ್ದ ಕಿರಣ್ ರಾಜ್ ಬದಲಾದ ಹಿನ್ನೆಲೆಯಲ್ಲಿ ಅವರ ಜಾಗಕ್ಕೆ ನಟಿ ಭೂಮಿ ಶೆಟ್ಟಿ ಎದುರು ನಾಯಕನಾಗಿ ಅವಕಾಶ. ಜನರೊಂದಿಗೆ ಹೆಚ್ಚು ಬೆರೆಯಲು ಬಸುತ್ತೇನೆ. ಆದರೆ ಜನ ನನ್ನನ್ನು ಗುರುತಿಸಲು ಪ್ರಾರಂಭಿಸಿದರು, ಅದನ್ನು ನನ್ನಲ್ಲಿ ಮತ್ತಷ್ಟು ಖುಷಿ ಹೆಚ್ಚು ಮಾಡಿತು.
• ಪುಟ್ಟಕ್ಕನ ಮಕ್ಕಳು ಧಾರಾವಾಹಿಗೆ ಆಯ್ಕೆಯಾದ ಬಗೆ ಹೇಗೆ? ನಿಮ್ಮ ಪಾತ್ರ ಏನು?
ಧಾರಾವಾಹಿ ನಿರ್ಮಾಪಕ ಆರೂರು ಜಗದೀಶ್ ಅವರು ಬೇರೊಂದು ಪ್ರಾಜೆಕ್ಟ್ ವಿಷಯಕ್ಕೆ ನನ್ನ ಜೊತೆ ಚರ್ಚೆ ನಡೆಸಿದ್ದರು.ಅದು ಆರಂಭವಾಗುವುದು ವಿಳಂಬವಾದ ಹಿನ್ನೆಲೆಯಲ್ಲಿ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಮೃಧು ಸ್ವಭಾವದ ಪಾತ್ರವೊಂದಿದೆ ಮಾಡುತ್ತೀರಾ ಎಂದು ಕೇಳಿದರು. ನಾನು ಒಪ್ಪಿಕೊಂಡೆ. ಹೀಗೆ ನನಗೆ ಧಾರಾವಾಹಿಯಲ್ಲಿ ನಟನೆ ಮಾಡುವ ಅವಕಾಶ ಸಿಕ್ಕಿತು. ಇದುವರೆಗೂ 450 ಎಪಿಸೋಡ್ ದಾಟಿದೆ 50 ರಿಂದ 60 ಎಪಿಸೋಡ್ ಹೊರತು ಪಡಿಸಿದರೆ ಬಹುತೇಕ ಎಪಿಸೋಡ್‍ನಲ್ಲಿ ನಾನಿದ್ದೇನೆ.
ಮುರುಳಿ ಮೇಷ್ಟ್ರು ಎನ್ನುವ ಪಾತ್ರ ನನ್ನದು. ನ್ಯಾಯವಾದಿ. ಸತ್ಯ ಎಲ್ಲಿ ಇರುತ್ತದೋ ಆ ಕಡೆ. ವರದಕ್ಷಿಣೆ ವಿರೋದಿ. ಇದೇ ಕಾರಣಕ್ಕೆ ಅಪ್ಪ ಅಮ್ಮನನ್ನು ವಿರೋಧಿಸಿ ಪ್ರೀತಿಸಿದ ಹುಡುಗಿಯನ್ನು ಕೈಹಿಡಿಯುವ ಪಾತ್ರ ಹಾಗಂತ. ಅಪ್ಪ-ಅಮ್ಮನ ಮೇಲೆ ಗೌರವ ಇಲ್ಲ ಅಂತಲ್ಲ. ಅವರನ್ನು ಪ್ರೀತಿಯಿಂದ ಕಾಣುವ ಪ್ರೀತಿಸಿದ ಹುಡುಗಿಯ ಮನ ನೋಯಿಸದ ಪಾತ್ರ. ಈಗಷ್ಟೇ ನಮ್ಮ ಸಂಸಾರ ಆರಂಭವಾಗಿದೆ. ಮುಂದೆ ಏನಾಗಲಿದೆ ನೋಡಬೇಕಾಗಿದೆ.
• ಧಾರಾವಾಹಿಯಲ್ಲಿ ಹಿರಿಯ ಕಲಾವಿದೆ ಉಮಾಶ್ರೀ ಅವರ ಜೊತೆ ನಟಿಸುತ್ತಿದ್ದೀರಾ ಅನುಭವ ಹೇಗಿತ್ತು? ತಂಡ ಹಾಗು ಅವರೇನಾದರೂ ನಿಮಗೆ ಸಲಹೆ ನೀಡಿದ್ದುಂಟಾ?
“ಪುಟ್ಟಕ್ಕನ ಮಕ್ಕಳು” ಧಾರಾವಾಹಿಯಲ್ಲಿ ನಟಿಸುತ್ತಿರುವ ಹಿರಿಯ ನಟಿ ಉಮಾಶ್ರೀ ಅವರು ನಟನೆಯಲ್ಲಿ ವಿಶ್ವವಿದ್ಯಾಲಯವಿದ್ದಂತೆ ಅವರ ಬಳಿ ಕಲಿಯುವುದು ಸಾಕಷ್ಟಿದೆ. ಸಣ್ಣ ಪುಟ್ಟ ವಿಷಯಗಳನ್ನು ಹೇಳಿಕೊಡುತ್ತಾರೆ. ಅವರ ಜೊತೆ ಒಂದು ಸಾವಿರ ಎಪಿಸೋಡ್ ಮಾಡಿದರೂ ಅಂತಹ “ ಅಮ್ಮ”ನಿಂದ ಕಲಿಯುವುದು ಸಾಕಷ್ಟಿದೆ. ಅವರ ಜೊತೆ ನಟನೆಗೆ ಅವಕಾಶ ಸಿಕ್ಕಿರುವುದಕ್ಕೆ ನಾನೇ ಅದೃಷ್ಠವಂತ.ಜೊತೆಗೆ ನಿರ್ಮಾಪಕ, ನಿರ್ದೇಶಕರೂ ಆಗಿರುವ ಆರೂರು ಜಗದೀಶ್ ಸೇರಿದಂತೆ ಧಾರಾವಾಹಿಯ ಎಲ್ಲಾ ಕಲಾವಿದರ ಸಹಕಾರದಿಂದ ಕಲಿಕೆಗೆ ಮತ್ತಷ್ಟು ಸಹಕಾರಿಯಾಗಿದೆ.
• ಸಿನಿಮಾ ಮಾಡುತ್ತಿದ್ದೀರಂತೆ. ಯಾವುದು,ಯಾವ ಹಂತದಲ್ಲಿದೆ.
ಸ್ಟಾ ಬ್ರೆರಿ ಎನ್ನುವುದು ಚಿತ್ರದ ಹೆಸರು. ಶೃತಿ ಹರಿಹರನ್ ನಾಯಕಿ. ವಿಭಿನ್ನ ಚಿತ್ರ. ಹೆಣ್ಣು ತನ್ನ ಜೀವನದಲ್ಲಿ ಮುಂದ ಸಾಗಲು ಯಾವ ಹಾದಿ ತುಳಿಯುತ್ತಾಳೆ ಎನ್ನುವ ಕಥಾ ಹಂದರವನ್ನು ಒಳಗೊಂಡಿದೆ.ಒಳ್ಳೆಯ ಕಥೆ. ಅದೇ ರೀತಿ ಗಂಡು ತನ್ನ ಆಸೆ ತೀರಿಸಿಕೊಳ್ಳಲು ಏನೆಲ್ಲಾ ಮಾಡುತ್ತಾನೆ ಎನ್ನುವುದು ಚಿತ್ರದ ಕಥೆ. ನನ್ನದು ನೆಗೆಟೀವ್ ಶೇಡ್ ಆದರೂ ಕೆಟ್ಟ ಪಾತ್ರ ಅಲ್ಲ. ಬೆಂಗಳೂರು.ಮಂಗಳೂರು ಸೇರಿದಂತೆ ಮತ್ತಿತರ ಕಡೆ ಚಿತ್ರೀಕರಣ ಮಾಡಲಾಗಿದೆ. ವೇಶ್ಯಾವಾಟಿಕೆ ಮತ್ತು ಅದರ ಸುತ್ತ ನಡೆಯುವ ಕಥೆಯ ತಿರುಳನ್ನು ಚಿತ್ರ ಹೊಂದಿದೆ. ಚಿತ್ರೀಕರಣ ಪೂರ್ಣಗೊಂಡಿದ್ದು ಸದ್ಯದಲ್ಲಿಯೇ ಚಿತ್ರ ಬರುವ ಸಾಧ್ಯತೆಗಳಿವೆ .ರಕ್ಷಿತ್ ಶೆಟ್ಟಿ ಅವರ ಪರಂವಃ ನಿರ್ಮಾಣ ಸಂಸ್ಥೆ ಬೆನ್ನೆಲುಬಾಗಿ ನಿಂತಿದೆ.
• ಆಲ್ಬಂ ಯಾವುದು, ಅದರ ಬಗ್ಗೆ ಮಾಹಿತಿ ನೀಡಿ
ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ನಟಿಸುತ್ತಿರುವ ನಟಿ ಸಂಜನಾ ಬುರ್ಲಿ ಅವರೊಂದಿಗೆ ಆಲ್ಬಂ ಹಾಡಿನಲ್ಲಿಯೂ ಕಾಣಿಸಿಕೊಂಡಿದ್ದೇನೆ. ಈ ಹಾಡನ್ನು ಡಾ.ವಿ ನಾಗೇಂದ್ರ ಪ್ರಸಾದ್ ಬರೆದಿದ್ದಾರೆ ಎಂದು ಮಾಹಿತಿ ನೀಡಿದರು.
• ಬಣ್ಣದ ಬದುಕಿನಲ್ಲಿ ಮುಂದುವರೆಯುವ ಆಲೋಚನೆ ಇದೆಯಾ
ಖಂಡಿತಾ ಇದೆ. ಬಣ್ಣದ ಬದುಕಿನಲ್ಲಿ ಮುಂದುವರಿಯುವ ಆಸೆ ಇದೆ, ಇದರ ಜೊತೆಗೆ ನಾನು ಕಲಿತಿರುವ ಹಣಕಾಸಿನ ವಿಷಯದ ಬಗ್ಗೆ ಜನರಿಗೆ ಮಾಹಿತಿ ನೀಡುವ ಉದ್ದೇಶವೂ ಇದೆ. ಈ ಬಗ್ಗೆ ಸದ್ಯದಲ್ಲಿಯೇ ಮಾಹಿತಿ ನೀಡಲಾಗುದು ಎಂದರು.