ಬಿಗ್‍ಬಾಸ್ ಸೀಸನ್ 12ಕ್ಕೆ ಕಿಚ್ಚ ಸುದೀಪ್ ನಿರೂಪಣೆ : ಷರತ್ತಿನ ಬದಲಾಗಿ ಕನ್ನಡಕ್ಕೆ ಪ್ರೀತಿ ತೋರಿಸಲು ಸಲಹೆ
ಬಿಗ್‍ಬಾಸ್ 11ನೇ ಆವೃತ್ತಿಯ ರಿಯಾಲಿಟಿ ಶೋ ಮುಗಿಯುತ್ತಿದ್ದಂತೆ ಮುಂದಿನ ಬಾರಿಯಿಂದ ಬಿಗ್ ಬಾಸ್ ರಿಯಾಲಿಟಿ ಶೋ ನಡೆಸಿಕೊಡುವುದಿಲ್ಲ ಎಂದು ಅಧಿಕೃತವಾಗಿ ಪ್ರಕಟಿಸಿದ್ದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಬೇರೋಬ್ಬರನ್ನು ನೋಡಿಕೊಳ್ಳುವಂತೆ ಶೋ ಆಯೋಜಕರು ಮತ್ತು ಕಲರ್ಸ್ ಕನ್ನಡ ವಾಹಿನಿಗೆ ಕಡ್ಡಿ ಮುರಿದಂತೆ ಸೂಚಿಸಿದ್ದರು. ಇದಾದ ಬಳಿಕ ಅಭಿಮಾನಿಗಳು, ಬಿಗ್ ಬಾಸ್ ವೀಕ್ಷಕರು ಕಿಚ್ಚ ಸುದೀಪ್ ಅವರೇ ಬೇಕು ಎನ್ನುವ ಕೂಗು ಕೇಳಿಬಂದಿತ್ತು.

ಈ ನಡುವೆ ವಾಹಿನಿ ಮತ್ತು ಬಿಗ್‍ಬಾಸ್ ಆಯೋಜಕರು ಕಿಚ್ಚ ಸುದೀಪ್ ಮನವೊಲಿಸಿ 12ನೇ ಆವೃತ್ತಿಯನ್ನು ನಿರೂಪಣೆ ಮಾಡಲು ಮನವೊಲಿಸಿದ್ದಾರೆ. ಜೊತೆಗೆ ಕಿಚ್ಚ ಸುದೀಪ್ ನೀಡಿದ ಸಲಹೆ ಸೂಚನೆಯನ್ನು ಒಪ್ಪಿಕೊಂಡಿದ್ದಾರೆ. ಹೀಗಾಗಿ ಈ ಬಾರಿಯೂ ಕಿರುತೆರೆ ಅಭಿಮಾನಿಗಳು ಬಿಗ್‍ಬಾಸ್ ಶೋ ಮೂಲಕ ಕಿಚ್ಚ ಸುದೀಪ್ ಅವರನ್ನು ನಾನಾ ವೇಷದಲ್ಲಿ ವೀಕ್ಷಿಸಲಿದ್ದಾರೆ.
ಬಿಗ್‍ಬಾಸ್ ರಿಯಾಲಿಟಿ ಶೋ ಅನ್ನು ಕಿಚ್ಚ ಸುದೀಪ್ ನಡೆಸಿಕೊಡಲಿದ್ದಾರೆ ಎನ್ನುವದರ ಕುರಿತು ಮಾಹಿತಿ ಹಂಚಿಕೊಳ್ಳಲು ಕಲರ್ಸ್ ಕನ್ನಡ ವಾಹಿನಿ ಹಾಗು ಶೋ ಆಯೋಜಕರು ಪತ್ರಿಕಾಗೋಷ್ಠಿ ಕರೆದಿದ್ದರು. ಈ ವೇಳೆ ಮಾತಿಗಳಿದ ಕಿಚ್ಚ ಸುದೀಪ್, ಬಿಗ್ ಬಾಸ್ ಶೋಗೆ ಮರಳಿ ಬಂದಿರುವುದಕ್ಕೆ ಯಾವುದೇ ಷರತ್ತು ಹಾಕಿಲ್ಲ ಬದಲಾಗಿದೆ, ಕನ್ನಡ ಭಾಷೆಗೆ ಪ್ರೀತಿ ತೋರಿಸಿ ಎಂದಷ್ಟೇ ಹೇಳಿದ್ದೇನೆ. ಅದಕ್ಕೆ ಒಪ್ಪಿದ್ದಾರೆ. 12 ರಿಂದ 15ನೇ ಆವೃತ್ತಿಯ ತನಕ ನಾನೇ ನಿರೂಪಣೆ ಮಾಡಲಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಶೋ ಆಯೋಜಕರಿಂದ ಕನ್ನಡವನ್ನು ಕಡೆಗಣಿಸುವುದು ಇಷ್ಟ ಆಗಿರಲಿಲ್ಲ, ಹೀಗಾಗಿ ಶೋ ನಿರೂಪಣೆಯಿಂದ ನಿರ್ಗಮಿಸಲು ನಿರ್ಧರಿಸಿದೆ, ನನ್ನದು ತಿದ್ದುವ ಗುಣ ಅಲ್ಲ, ತಿದ್ದಿಕೊಳ್ಳುವ ಸ್ವಭಾವ ಹೀಗಾಗಿ ನೀವು ಯಾರನ್ನಾದರೂ ನೋಡಿಕೊಳ್ಳಿ ಎಂದು ಶೋ ನಿರೂಪಣೆಯಿಂದ ಹಿಂದೆ ಸರಿದಿದ್ದೆ ಎಂದು ತಮ್ಮ ನಿರ್ಧಾರವನ್ನು ಸ್ಪಷ್ಟಪಡಿಸಿದರು.
ಇದಾದ ಬಳಿಕ ವಾಹಿನಿ ಮತ್ತು ಶೋ ಆಯೋಜಕರು 10 ರಿಂದ 12 ಬಾರಿ ತಮ್ಮೊಂದಿಗೆ ಸಭೆ ನಡೆಸಿ ಕನ್ನಡಕ್ಕೆ ಯಾವುದೇ ರೀತಿಯ ಹಿನ್ನೆಡೆ ಅಥವಾ ಅವಮಾನವಾಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ಧಾರೆ. ಇತರೆ ಭಾಷೆಯ ಬಿಗ್‍ಬಾಸ್ ಶೋಗಳಿಗಿಂತ ಕನ್ನಡದ ಬಿಗ್ ಬಾಸ್ ಶೋ ಚೆನ್ನಾಗಿ ಬರುತ್ತಿದೆ. ಇಂತಹ ಸಮಯದಲ್ಲಿ ಕನ್ನಡವನ್ನು ಕಡೆಗಣಿಸುವುದು ಸುತರಾಂ ಇಷ್ಟವಿರಲಿಲ್ಲ, ಹೀಗಾಗಿ ಹೊರಬಂದಿದ್ದೆ. ಕನ್ನಡವನ್ನು ಗೌರವಿಸುವುದು ಎಂದರೆ ಸ್ಪರ್ಧಿಗಳನ್ನು ಗೌರವಿಸಿದಂತೆ ಜೊತೆಗೆ ಇದರಿಂದ ಶೋ ಕೂಡ ಮತ್ತಷ್ಟು ಚೆನ್ನಾಗಿ ಮೂಡಿಬರಲು ಸಹಕಾರಿಯಾಗಲಿದೆ, ಜೊತೆಗೆ ಸ್ಪರ್ಧಿಗಳ ಆಯ್ಕೆಯಲ್ಲಿ ಒಂದಷ್ಟು ಮಾನದಂಡಗಳನ್ನು ಪಾಲಿಸುವಂತೆ ಒಪ್ಪಿದ ಹಿನ್ನೆಲೆಯಲ್ಲಿ ಶೋ ನಿರೂಪಣೆ ಮಾಡಲು ಒಪ್ಪಿಕೊಂಡಿದ್ದೇನೆ ಎಂದರು.

ಬಿಗ್ ಶೋ ಮಾಡುವುದಿಲ್ಲ ಎಂದಿದ್ದು ಬೆದರಿಕೆ ಅಲ್ಲ ಬದಲಾಗಿ ನನ್ನ ಅಭಿಪ್ರಾಯ ಅಷ್ಟೆ. ಯಾರೇ ಕೂಡ ಶೋ ನಿರೂಪಣೆ ಮಾಡಿದ್ದರೂ ನಾನು ಶೋ ವೀಕ್ಷಿಸುತ್ತಿದ್ದೆ. ಬಿಗ್ ಶೋ ನಡೆಸಿಕೊಡುವುದಿಲ್ಲ ಎಂದು ಮತ್ತೆ ಒಪ್ಪಿಕೊಂಡಿರುವುದಕ್ಕೆ ಹಣದ ವಿಷಯಕ್ಕಾಗಿ ಅಲ್ಲ, ಹಣದ ಹಿಂದೆ ಹೋಗಿದ್ದರೆ ಇಷ್ಟೋತ್ತಿಗೆ ಏನೆಲ್ಲಾ ಆಗುತ್ತಿತ್ತೋ ಕನ್ನಡ ಪ್ರೀತಿಗಾಗಿ ಶೋ ನಿರೂಪಿಸಲು ಒಪ್ಪಿಕೊಂಡದ್ದು ಎಂದು ಸ್ಪಷ್ಟಪಡಿಸಿದರು
ಕಳೆದ ಬಾರಿ ಬಿಗ್ ಬಾಸ್ ರಿಯಾಲಿಟಿ ಶೋ ಮಾಡುವ ವೇಳೆ ಮ್ಯಾಕ್ಸ್ ಚಿತ್ರೀಕರಣ ಇದ್ದುದರಿಂದ ಮಹಾಬಲಿಪುರಂಗೆ ನಿತ್ಯ ಓಡಾಟವಾಗಿತ್ತು. ಇದರಿಂದ ಸಾಕಷ್ಟು ತೊಂದರೆಯೂ ಆಗಿತ್ತು.ಪ್ರತ್ಯೇಕ ವಿಮಾನದ ವ್ಯವಸ್ಥೆ ಮಾಡಿಕೊಂಡಿದ್ದೆ. ಒಪ್ಪಿಕೊಂಡ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಬೇಕು ಎನ್ನುವುದು ನನ್ನ ಉದ್ದೇಶ ಎಂದು ಹೇಳಿಕೊಂಡರು
ವರ್ಷಕ್ಕೆ ಎರಡು ಸಿನಿಮಾ
ವರ್ಷಕ್ಕೆ ಕನಿಷ್ಠ ಎರಡು ಸಿನಿಮಾ ನೀಡುವ ಉದ್ದೇಶವಿದೆ. ಈ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನ ಮಾಡಲಾಗುತ್ತಿದೆ. ನನ್ನಪ್ಪ ಯಾವುದೇ ವಿಷಯವನ್ನು ಎಷ್ಟೇ ಚೆನ್ನಾಗಿ ಮಾಡಿದರೂ ಅದು ಚೆನ್ನಾಗಿ ಮಾಡಿಲ್ಲ, ಇದು ಚೆನ್ನಾಗಿ ಮಾಡಿಲ್ಲ ಅಂತಾ ಬೈತಾರೆ. ಜೊತೆಗೆ ಮನೆಗೆ ಯಾರಾದರೂ ಬಂದರೆ ಅವರಿಗೂ ಕೂಡ ಇವನಿಗೆ ಬುದ್ದಿ ಹೇಳಿ ಅಂತಾರೆ. ಆದರೆ ನನ್ನಮ್ಮ ಹಾಗೆ ಮಾಡುತ್ತಿರಲಲ್ಲ, ನಾನು ಏನೇ ಮಾಡಿದರೂ ಅವರು ಇಷ್ಟಪಡುತ್ತಿದ್ದರು. ಬೆನ್ನುತಟ್ಟುತ್ತಿದ್ದರು. ಶೋ ತಪ್ಪದೆ ನೋಡುತ್ತಿದ್ದರು. ನನ್ನನ್ನು ಟೀಕಿಸದ ಏಕೈಕ ವ್ಯಕ್ತಿ ಅಂದರೆ ಅದು ಅಮ್ಮ ಎಂದರು
ಶೋ ಮರಳಿ ನಿರೂಪಿಸುವುದಕ್ಕೆ ಒಪ್ಪಿಕೊಂಡಿರುವುದಕ್ಕೆ ಪತ್ನಿ.ಪುತ್ರಿ ಜೊತೆಗೆ ಅಭಿಮಾನಿಗಳು ಖುಷಿಯಾಗಿದ್ದಾರೆ. ಅಭಿಮಾನಿಗಳು ಸಿನಿಮಾ ನೋಡಿ ಶಿಳ್ಳೆ ಹಾಕುವ ಸದ್ದು ಮಿಸ್ ಮಾಡಿಕೊಳ್ಳಲು ಇಷ್ಟಪಡುವುದಿಲ್ಲ ಎಂದರು

ಕಲರ್ಸ್ ಕನ್ನಡ ವಾಹಿನಿಯ ಬಿಸಿನೆಸ್ ಹೆಡ್ ಪ್ರಶಾಂತ್ ನಾಯಕ್ ಮಾತನಾಡಿ, ಎಲ್ಲಾ ಭಾಷೆಯಲ್ಲಿ ಬಿಗ್ ಬಾಸ್ ವಿಜೇತರಿಗೆ ಬಹುಮಾನದ ಹಣ 50 ಲಕ್ಷ ರೂಪಾಯಿ ಇದೆ, ಅದನ್ನು ಹೆಚ್ಚು ಮಾಡುವ ಯಾವುದೇ ಉದ್ದೇಶ ಇಲ್ಲ, ಪ್ರಶಸ್ತಿ ಮೊತ್ತ ಅಲ್ಲದೆ ಬೇರೆ ಬೇರೆ ಬಹುಮಾನವೂ ಸಿಗಲಿದೆ ಎಂದರು
ಈ ವೇಳೆ ಜಿಯೋ ಸ್ಟಾರ್ ದಕ್ಷಿಣ ಮನರಂಜನೆ ಕ್ಲಸ್ಟರ್ ಮುಖ್ಯಸ್ಥ ಕೃಷ್ಣನ್ ಕುಟ್ಟಿ, , ಕ್ಲಸ್ಟರ್ ಬಿಸಿನೆಸ್ ಹೆಡ್ ಸುಷ್ಮಾ ರಾಜೇಶ್, ಬನಿಜಯ ಏಷ್ಯಾ ಮತ್ತು ಎಂಡೆಮೋಲ್ ಶೈನ್ ಇಂಡಿಯಾ ಸಂಸ್ಥಾಪಲಕ ಹಾಗು ಸಿಇಓ ದೀಪಕ್ ಧಾರ್ ಮತ್ತಿತರಿದ್ದರು

