Raakshasa Web Series Review :: ಉತ್ತರ ಕರ್ನಾಟಕದ ಕುತೂಹಲಕಾರಿ ಕಥನ ” ರಾಕ್ಷಸ”
ವೆಬ್ ಸೀರೀಸ್ ; ರಾಕ್ಷಸ
ನಿರ್ದೇಶನ : ಸುಹಾನ್ ಪ್ರಸಾದ್
ನಿರ್ಮಾಣ: ತರುಣ್ ಸುಧೀರ್
ತಾರಾಗಣ; ವಿಜಯ್ ರಾಘವೇಂದ್ರ, ಮಯೂರಿ, ಅಭಿಜಿತ್, ಜಹಂಗೀರ್, ಅಪ್ಪಣ್ಣ, ಅವಿನಾಶ್, ಚಿತ್ಕಳಾ ಬಿರಾದಾರ್ ಮತ್ತಿತರರು
ರೇಟಿಂಗ್ : ** 4/5
ಕನ್ನಡದಲ್ಲಿ ವೆಬ್ ಸರಣಿಗಳು ಆಗೊಮ್ಮೆ ಹೀಗೊಮ್ಮೆ ಬರುತ್ತಿವೆ. ಬರುತ್ತಿರುವ ಎಲ್ಲಾ ಸರಣಿಗಳು ಒಂದಷ್ಟು ಕುತೂಹಲ ಕೆರಳಿಸುತ್ತಲೇ ಮೊಬೈಲ್ ಅಥವಾ ಟಿವಿಗೆ ಅಂಟಿಕೊಂಡ ಮಂದಿಯ ಕುತೂಹಲವನ್ನು ಮತ್ತಷ್ಟು ಹೆಚ್ಚು ಮಾಡುತ್ತಿವೆ.
ಈ ನಿಟ್ಟಿನಲ್ಲಿ ಜೀ5 ಒಂದೇ ವರ್ಷದಲ್ಲಿ ನಾಲ್ಕು ಪ್ರಮುಖ ವೆಬ್ ಸರಣಿಯನ್ನು ಜನರ ಮುಂದಿಟ್ಟಿದ್ದು ಜನರನ್ನು ಹಿಡಿದಿಡುವ ಕೆಲಸ ಮಾಡುತ್ತಿದೆ. ಅದರ ಸಾಲಿಗೆ ಹೊಸ ಸೇರ್ಪಡೆ ” ರಾಕ್ಷಸ”.
ಏಳು ಎಪಿಸೋಡ್‍ಗಳ ಸರಣಿ ಪ್ರೇಕ್ಷಕರನ್ನು ಹಿಡಿದಿಡುವ ಕೆಲಸ ಮಾಡುತ್ತಿದೆ. ಅದರಲ್ಲಿಯೂ ಉತ್ತರ ಕರ್ನಾಟಕದ ಜನ ಜೀವನ ,ಭಾಷೆಯ ಸೊಗಡು, ಸಂಸ್ಕೃತಿ, ಆ ಮಣ್ಣಿನ ಸೊಗಡನ್ನು ವೆಬ್ ಸರಣಿಯ ಮೂಲಕ ಜನರ ಮುಂದಿಡುವ ಕೆಲಸವನ್ನು ನಿರ್ಮಾಪಕ ತರುಣ್ ಸುಧೀರ್ ಮಾಡಿದ್ದಾರೆ. ಅವರಿಗೆ ಜೀ 5 ಪ್ರತಿಷ್ಠಿತ ವೇದಿಕೆ ಸಾಥ್ ನೀಡಿದೆ. ಈ ಎಲ್ಲಾ ಬೆಳವಣಿಗೆಯಲ್ಲಿ ನಿರ್ದೇಶಕ ಸುಹಾನ್‍ಪ್ರಸಾದ್ ಕುತೂಹಲಕಾರಿ ಕಥನವನ್ನು ವೆಬ್ ಸರಣಿಯ ಮೂಲಕ ಜನರ ಮುಂದಿಟ್ಟಿದ್ದಾರೆ.
ಪ್ರೀತಿಸಿ ಮದುವೆಯಾದ ಸಬ್ ಇನ್ಸ್ ಪೆಕ್ಟರ್ ಹನುಮಪ್ಪ ಬಿ ಮಡ್ಲಿ (ವಿಜಯ್ ರಾಘವೇಂದ್ರ) ತುಂಬು ಗರ್ಬಿಣಿ ಪತ್ನಿ ( ಮಯೂರಿ) ಯನ್ನು ಅಷ್ಟೇ ಪ್ರೀತಿ, ಕಾಳಜಿಯಿಂದ ನೋಡಿಕೊಂಡವ. ಈ ನಡುವೆ ಸವದತ್ತಿ ಪೆÇಲಿಸ್ ಠಾಣೆಯಲ್ಲಿ ಕೆಲಸ ಮಾಡುವ ಹನುಮಪ್ಪ ಮತ್ತು ಸಿಬ್ಬಂದಿಗೆ ಮೊಸಳೆ ಭಯ ಭೀತಿ ಉಂಟು ಮಾಡುತ್ತದೆ. ಮೇಲಿಂದ ಮೇಲೆ ಸರಣಿ ಸಾವು ಪೆÇಲೀಸರನ್ನು ಚಿಂತೆಗೀಡಾಗುವಂತೆ ಮಾಡುತ್ತದೆ.
ಈ ಸಾವುಗಳು ನಿಜಕ್ಕೂ ಮೊಸಳೆಯಿಂದ ಆಗಿದ್ಯಾ ಅಥವಾ ಅದರ ಹಿಂದೆ ಬೇರೆ ಯಾರಾದರೂ ಕೈವಾಡವಿದೆಯೇ ಎನ್ನುವ ಅಂಶಗಳು ವೆಬ್ ಸರಣಿಯ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಇನ್ಸ್ ಪೆಕ್ಟರ್ ಮತ್ತು ಡಿಸಿಪಿ ಸಾವಿನ ಪ್ರಕರಣವನ್ನು ತಮ್ಮ ತಲೆಗೆ ಹಾಕೊಳ್ಳೋದು ಬೇಡ ಎಂದು ಹನುಮಪ್ಪನ ಹೆಗಲ ಮೇಲೆ ಹೊರಿಸಿ ಬಿಡ್ತಾರೆ.
ಮನೆಯಲ್ಲಿ ತುಂಬು ಗರ್ಬಿಣಿ ಒಂದೆಡೆಯಾದರೆ ಮತ್ತೊಂದೆಡೆ ಕೆಲಸ ಒತ್ತಡ. ಈ ನಡುವೆ ಹನುಮಪ್ಪ ಸರಣಿ ಸಾವಿನ ರಹಸ್ಯ ಪತ್ತೆ ಮಾಡ್ತಾನಾ. ನಿಜಕ್ಕೂ ರಾಕ್ಷಸ ಯಾರು ಎನ್ನುವುದು ಕುತೂಹಲ ಕೆರಳಿಸಿದೆ. ಅದನ್ನು ತಿಳಿದುಕೊಳ್ಳಬೇಕಾದರೆ ವೆಬ್ ಸರಣಿ ನೋಡಿದರೆ ಚೆನ್ನ.
ನಿರ್ದೇಶಕ ಸುಹಾನ್ ಪ್ರಸಾದ್ ವೆಬ್ ಸರಣಿ ಎಲ್ಲಿಯೂ ವೆಬ್ ಸರಣಿ ಅನ್ನಿಸುವುದಿಲ್ಲ. ಸಸ್ಪೆನ್ಸ್ , ಕ್ರೈಮ್ ಥ್ರಿಲ್ಲರ್ ಸಿನಿಮಾ ನೋಡುತ್ತಿದ್ದೇನೋ ಎನ್ನುಷ್ಟರ ಮಟ್ಟಿಗೆ ಕುತೂಹಲ ಕಾಪಾಡಿಕೊಂಡಿದೆ. ಜೊತೆಗೆ ನಿರ್ಮಾಣದಲ್ಲಿಯೂ ಯಾವುದೇ ಕೊರತೆ ಇಲ್ಲದಂತೆ ತರುಣ್ ಸುಧೀರ್ ನಿರ್ಮಾಣ ಮಾಡಿದ್ದಾರೆ. ಸಿನಿಮಾ ನಿರ್ಮಾಣ ಮಾಡಿದ ರೀತಿಯಲ್ಲಿ ಚಿತ್ರೀಕರಣ ಮಾಡಿದ್ದಾರೆ.
ನಟ ವಿಜಯ್ ರಾಘವೇಂದ್ರ ಮೊದಲ ಬಾರಿಗೆ ವೆಬ್ ಸರಣಿ ಪ್ರವೇಶಿಸಿದ್ದಾರೆ. ನಟನಾಗಿ ಸಿನಿಮಾ, ಕಿರುತರೆ, ವೆಬ್ ಸೀರೀಸ್ ಎನ್ನುವ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ. ಅಷ್ಟು ಸಹಜವಾಗಿ ನಟಿಸಿದ್ದಾರೆ.
ನಟಿ ಮಯೂರಿ ಕೂಡ ಅಷ್ಟೇ ಲೀಲಾ ಜಾಲವಾಗಿ ನಟಿಸಿದ್ದಾರೆ. ಜೊತೆಗೆ ಜಹಂಗೀರ್, ಅಭಿಜಿತ್, ಅಣ್ಣಪ್ಪ ಸೇರಿದಂತೆ ಹಲವು ಪಾತ್ರಗಳು ವೆಬ್ ಸರಣಿಯನ್ನು ಕುತೂಹಲದಿಂದ ನೋಡಿಸಿಕೊಂಡು ಹೋಗುವಂತೆ ನಟಿಸಿದ್ದಾರೆ.
ಉತ್ತರ ಕರ್ನಾಟಕದ ಭಾಷೆ,ಸಂಸ್ಕೃತಿ, ಸೊಗಡು,ಪರಿಸರ ಮತ್ತು ಆ ಭಾಗದ ಜನ ಜೀವನವನ್ನು ನೈಜವಾಗಿ ವೆಬ್ ಸರಣಿಯ ಮೂಲಕ ಕಟ್ಟಿಕೊಟ್ಟಿದ್ದಾರೆ. ಜೀ 5 ಗೆ ರಾಕ್ಷಸ ವೆಬ್ ಸರಣಿ ನಿರ್ಮಾಣ ಮಾಡಲು ಮತ್ತಷ್ಡು ಉತ್ತೇಜನ ನೀಡಿದೆ ಎಂದರೆ ಅತಿಶಯೋಕ್ತಿ ಆಗಲಾರದು.
ರೇಟಿಂಗ್- ಅಷ್ಟಕಷ್ಟೆ- * / ನೋಡಬಹುದು – ** / ಚೆನ್ನಾಗಿದೆ- *** / ಉತ್ತಮ – ****/ ಅತ್ಯುತ್ತಮ – *****

