ಅಮ್ಮ-ಮಗಳ ಭಾವುಕ ಪಯಣದ “ರಾಣಿ” ಮಾರ್ಚ್ 9 ರಿಂದ ಆರಂಭ
ಕಲರ್ಸ್ ಕನ್ನಡ ವಾಹಿನಿ ವಿಭಿನ್ನ ಮತ್ತು ವಿಶೇಷತೆಗಳಿಂದ ಕೂಡ ಧಾರಾವಾಹಿ ಮತ್ತು ಕಾರ್ಯಕ್ರಮಗಳನ್ನು ಜನರ ಮುಂದೆ ಇಡುತ್ತಿದೆ, ಈ ಮೂಲಕ ನಾಡಿನಾದ್ಯಂತ ಹೆಚ್ಚು ಪ್ರೇಕ್ಷಕರನ್ನು ತನ್ನತ್ತ ಸೆಳೆಯುವ ಪ್ರಯತ್ನ ಮಾಡುತ್ತಿದೆ, ಇದೀಗ ಮತ್ತೊಂದು ಭಾವನಾತ್ಮಕ ಕಥೆಯನ್ನು ಜನರ ಮುಂದೆ ಇಡಲು ಮುಂದಾಗಿದೆ, ಅದುವೇ “ರಾಣಿ” ಧಾರಾವಾಹಿ.

ಅಮ್ಮ-ಮಗಳ ಬಾಂಧವ್ಯದ ಕಥೆಯನ್ನು ಜನರ ಮುಂದೆ ಇಡಲು ಮುಂದಾಗಿದೆ, ಮಾರ್ಚ್ 9 ರಿಂದ ಸಂಜೆ 6 ಗಂಟೆಗೆ ಹೊಸ ಧಾರಾವಾಹಿ ಜನರ ಮನೆಗೆ ಬರಲಿದೆ,
ನಿರ್ದೇಶಕಿ ಹಾಗೂ ನಿರ್ಮಾಪಕಿ ಸ್ವಪ್ನ ಕೃಷ್ಣ ಧಾರಾವಾಹಿಯನ್ನು ನಿರ್ದೇಶಿಸುವುದರ ಜೊತೆಗೆ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಕಥೆಯು ಕೇವಲ ದೃಶ್ಯವಲ್ಲ, ಅನುಭವ. ರಾಣಿಯಾಗಿ ಬಾಲ ನಟಿ ಧನ್ವಿ ತನ್ನ ಮುಗ್ಧ ಅಭಿನಯದ ಮೂಲಕ ಈಗಾಗಲೇ ಪ್ರೊಮೋಗಳ ಮೂಲಕ ಮನೆಮಾತಾಗಿದ್ದಾಳೆ. ನಾಯಕನಾಗಿ ಆರವ್ ಸೂರ್ಯ ಮತ್ತು ನಾಯಕಿಯಾಗಿ ಐಶ್ವರ್ಯಾ ಗಟ್ಟಿ ಪಾತ್ರಗಳ ಮೂಲಕ ಕಥೆಗೆ ಜೀವ ತುಂಬಲಿದ್ದಾರೆ.
ರಾಣಿ ಕೇವಲ ಅಪರಾಧ ಅಥವಾ ಜೈಲಿನ ಕಥೆಯಲ್ಲ; ಬದಲಾಗಿ ವಿಧಿಯಾಟದಿಂದಾಗಿ ಸೆರೆಮನೆಯ ಕಂಬಿಗಳ ನಡುವೆಯೇ ಹುಟ್ಟಿ, ಹೊರಗಿನ ಜಗತ್ತನ್ನೇ ಕಾಣದ ಮುಗ್ಧ ಮಗು ರಾಣಿ ಮತ್ತು ಮಗಳಿಗಾಗಿ ಹಂಬಲಿಸುವ ತಾಯಿಯ ಎದೆತುಂಬಿ ಬರುವ ಕತೆ. ಜೈಲಿನ ಕಲ್ಲು ಗೋಡೆಗಳೇ ತನ್ನ ಪ್ರಪಂಚ ಎಂದು ನಂಬಿರುವ ಪುಟ್ಟ ರಾಣಿಗೆ, ಅಲ್ಲಿನ ಕತ್ತಲಲ್ಲೂ ಸೂರ್ಯನ ಕಿರಣವಾಗಿ ಅಮ್ಮನ ಪ್ರೀತಿ ಸಿಗುತ್ತದೆ. ಆದರೆ, ಕಾನೂನು ಮತ್ತು ವಿಧಿ ಇಬ್ಬರನ್ನೂ ಬೇರ್ಪಡಿಸಲು ನಿಂತಾಗ, ಆ ಪುಟ್ಟ ಜೀವ ತನ್ನ ತಾಯಿಯನ್ನು ಮರಳಿ ಪಡೆಯಲು ನಡೆಸುವ ಹೋರಾಟ ಪ್ರೇಕ್ಷಕರ ಕಣ್ಣಂಚನ್ನು ಒದ್ದೆ ಮಾಡುವುದು ಖಚಿತ. ಪ್ರೊಮೋ ಗಳಲ್ಲಿ ಕಂಡ ಆ ಪುಟ್ಟ ಮಗುವಿನ ಆರ್ದ್ರತೆ ಕನ್ನಡಿಗರ ಹೃದಯಕ್ಕೆ ನೇರವಾಗಿ ತಟ್ಟಿದೆ.

ಕಥೆಯ ಸಾರ “ತಾಯಿಯಿಂದ ದೂರವಾಗುವುದೇ ರಾಣಿಗೆ ಸಿಗುವ ಅತಿದೊಡ್ಡ ಶಿಕ್ಷೆ” ಎಂಬ ಸೂಕ್ಷ್ಮ ಎಳೆಯ ಮೇಲೆ ನಿಂತಿದೆ. ಪ್ರತಿ ಮನೆಯಲ್ಲಿಯೂ ತಾಯಿ ಮಗುವಿಗೆ ಮೊದಲ ಗುರು ಮತ್ತು ರಕ್ಷಕಿ. ಆದರೆ ಇಲ್ಲಿ ಅಮ್ಮನೇ ಬಂಧಿಯಾಗಿದ್ದಾಳೆ. ತನ್ನ ತಪ್ಪಿರಲಿ ಇಲ್ಲದಿರಲಿ, ಸಮಾಜದ ದೃಷ್ಟಿಯಲ್ಲಿ ಶಿಕ್ಷೆ ಅನುಭವಿಸುತ್ತಿರುವ ತಾಯಿ, ತನ್ನ ನೋವನ್ನು ಲಾಲಿಹಾಡಿನ ಹಿಂದೆ ಅಡಗಿಸಿ ಮಗಳಿಗೆ ಪ್ರೀತಿ ನೀಡುತ್ತಾಳೆ. ಈ ಮೌನ ಸಂಕಟ ಮತ್ತು ಮಗುವಿನ ಅಚಲ ನಂಬಿಕೆಯ ನಡುವಿನ ಸಂಘರ್ಷವು ಪ್ರತಿಯೊಬ್ಬ ವೀಕ್ಷಕರ ಎದೆ ಬಡಿತವನ್ನು ಹೆಚ್ಚಿಸುವಂತೆ ಚಿತ್ರಿಸಲಾಗಿದೆ. ಪೆÇ್ರೀಮೋದ ಒಂದೊಂದು ದೃಶ್ಯವೂ ಈ ಭಾವನಾತ್ಮಕ ತಳಮಳವನ್ನು ಅತ್ಯಂತ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದೆ.ತಾಂತ್ರಿಕವಾಗಿ ಮತ್ತು ಕಲಾತ್ಮಕವಾಗಿ ಈ ಧಾರಾವಾಹಿ ಬಹಳ ಶ್ರೀಮಂತವಾಗಿದೆ.
ಸಮಾಜ ಜೈಲನ್ನು ಮತ್ತು ಅಲ್ಲಿನವರನ್ನು ನೋಡುವ ದೃಷ್ಟಿಕೋನಕ್ಕೂ, ರಾಣಿಯ ಮುಗ್ಧ ಕಣ್ಣುಗಳು ಕಾಣುವ ಪ್ರಪಂಚಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಹಗೆತನ ಅಥವಾ ಸೇಡಿನ ಬದಲು ಪ್ರೀತಿಯೇ ಜೈಲಿನ ಕಂಬಿಗಳಿಗಿಂತಲೂ ಶಕ್ತಿಶಾಲಿ ಎಂಬುದನ್ನು ಈ ಧಾರಾವಾಹಿ ಸಾರುತ್ತದೆ.
ರಾಣಿಯ ಪ್ರತಿಯೊಂದು ಪ್ರಶ್ನೆಯೂ ಸಮಾಜದ ಕಟ್ಟುಪಾಡುಗಳನ್ನು ಪ್ರಶ್ನಿಸುವಂತಿದ್ದು, ವೀಕ್ಷಕರಲ್ಲಿ ಚಿಂತನೆ ಮೂಡಿಸುತ್ತದೆ. ಇದು ಕೇವಲ ಮನರಂಜನೆಯ ಚೌಕಟ್ಟನ್ನು ಮೀರಿ, ಪ್ರತಿಯೊಬ್ಬ ಮಹಿಳೆಯ ಮತ್ತು ಮಗುವಿನ ಭಾವನಾತ್ಮಕ ಸತ್ಯವನ್ನು ಪ್ರತಿಬಿಂಬಿಸುವ ಕನ್ನಡಿಯಾಗಲಿದೆ ಎಂದು ತಂಡ ಭರವಸೆ ನೀಡಿದೆ.

ರಾಣಿ’ ಕೇವಲ ಒಂದು ಧಾರಾವಾಹಿಯಲ್ಲ, ಪ್ರೀತಿ, ಆಶಾವಾದ ಮತ್ತು ಮಗಳೊಬ್ಬಳ ಹಠದ ಹೋರಾಟದ ಪಯಣ. ಕಲರ್ಸ್ ಕನ್ನಡ ವಾಹಿನಿಯು ತನ್ನ ಗುಣಮಟ್ಟದ ಮೇಕಿಂಗ್ ಮತ್ತು ಭಾವುಕ ಕಥಾಹಂದರದ ಮೂಲಕ ಮತ್ತೆ ಕನ್ನಡಿಗರ ಹೃದಯ ಗೆಲ್ಲಲು ಸಜ್ಜಾಗಿದೆ. ಸುಂದರ ಕಾವ್ಯ ಪ್ರತಿಯೊಬ್ಬ ಕನ್ನಡಿಗನ ಮನೆಮನಗಳನ್ನು ತಲುಪಿ, ಮನಮಿಡಿಯುವ ಅನುಭವ ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ.

