The intoxicating map of ``Summary'' unfolded through the video song

ವೀಡಿಯೋ ಸಾಂಗ್ ಮೂಲಕ ತೆರೆದುಕೊಂಡ `ಸಾರಾಂಶ’ದ ನಶೆ-ನಕಾಶೆ - CineNewsKannada.com

ವೀಡಿಯೋ ಸಾಂಗ್ ಮೂಲಕ ತೆರೆದುಕೊಂಡ `ಸಾರಾಂಶ’ದ ನಶೆ-ನಕಾಶೆ

ಸೂರ್ಯ ವಸಿಷ್ಠ ನಿರ್ದೇಶನದ `ಸಾರಾಂಶ’ ಚಿತ್ರದ ಮತ್ತೊಂದು ವೀಡಿಯೋ ಸಾಂಗ್ ಬಿಡುಗಡೆಗೊಂಡಿದೆ. ಸಾರಾಂಶ ಎಂಬುದು ವಿಶೇಷ ಕಥಾ ಹಂದರದೊಳಗೆ ನಾನಾ ಬೆರಗುಗಳನ್ನು ಬಚ್ಚಿಟ್ಟುಕೊಂಡಿರುವ ಸಿನಿಮಾ ಎಂಬ ಸೂಚನೆ ಈ ಹಿಂದೆಯೇ ಸಿಕ್ಕಿತ್ತು. ಅದೀಗ ಈ ಹಾಡಿನ ಮೂಲಕ ಸಮ್ಮೋಹಕವಾಗಿ ಸಾಬೀತಾಗಿ ಬಿಟ್ಟಿದೆ. ಒಟ್ಟಾರೆ ಸಿನಿಮಾದ ಇಂಚಿಂಚನ್ನೂ ಹೊಸತನದೊಂದಿಗೆ ಸಿಂಗರಿಸಬೇಕೆಂಬಂಥಾ ತಪನೆ ಹೊಂದಿರುವವರು ಸೂರ್ಯ ವಸಿಷ್ಠ. ಅದಕ್ಕೆ ಉದಿತ್ ಹರಿತಾಸ್ ರಂಥಾ ಸಂಗೀತ ನಿರ್ದೇಶಕರ ಸಾಥ್ ಸಿಕ್ಕಿರೋದರಿಂದಾಗಿ ಸಾರಾಂಶದ ನಶೆಯ ನಕಾಶೆ ಚೆಂದದ ಹಾಡಿನ ಮೂಲಕ ಪಸರಿಸುವಂತಾಗಿದೆ.

ನಶೆಯೋ ನಕಾಶೆಯೋ ಎಂಬ ಈ ಹಾಡು ಮಾಧುರಿ ಶೇಷಾದ್ರಿ ಕಂಠಸಿರಿಯಲ್ಲಿ ಮೂಡಿ ಬಂದಿದೆ. ಕಾಂತಾರ ಖ್ಯಾತಿಯ ಪ್ರಮೋದ್ ಮರವಂತೆ ಸಾಹಿತ್ಯ ಮತ್ತು ಉದಿತ್ ಹರಿತಾಸ್ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಹಾಡು ರಾಮ್ ಕುಮಾರ್ ನೃತ್ಯ ನಿರ್ದೇಶನದೊಂದಿಗೆ ಕಳೆಗಟ್ಟಿಕೊಂಡಿದೆ. ಇದರ ಮೂಲಕವೇ ಶೃತಿ ಹರಿಹರನ್ ಪಾತ್ರದ ಝಲಕ್ ಕೂಡಾ ಜಾಹೀರಾಗಿದೆ.

ಈ ವೀಡಿಯೋ ಸಾಂಗ್ ಸಂಗೀತ, ಸಾಹಿತ್ಯದಾಚೆಗೂ ವಿಶೇಷತೆಗಳನ್ನೊಳಗೊಂಡಿದೆ. ಸಾಮಾನ್ಯವಾಗಿ ಒನ್ ಟೇಕ್ ಸಾಂಗ್ ಎಂಬ ಪರಿಕಲ್ಪನೆಯನ್ನು ದೃಷ್ಯಕ್ಕೆ ಒಗ್ಗಿಸುವುದು ವಿರಳ. ಅಂಥಾದ್ದೊಂದು ಅಪರೂಪದ ಚೌಕಟ್ಟಿನಲ್ಲಿ ಈ ಹಾಡು ರೂಪುಗೊಂಡಿದೆ. ಇನ್ನುಳಿದಂತೆ, ಕಥೆಗೆ ಪೂರಕವಾಗಿ ಸೂಕ್ಷ್ಮ ಕಾನ್ಸೆಪ್ಟಿನಲ್ಲಿ ಈ ಹಾಡು ಸಿದ್ಧಗೊಂಡಿದೆ. ಪ್ರತಿಯೊಬ್ಬರನ್ನೂ ಕಾಡುವ, ಪುಳಕಗೊಳಿಸುವ, ಎಂತೆಂಥಾದ್ದೋ ಸಾಹಸಗಳಿಗೆ ಒಡ್ಡಿಕೊಳ್ಳುವಂತೆ ಮಾಡುವ ಕನಸೆಂಬ ಮಾಯಾವಿ ಈ ಹಾಡಿನ ಹಿಂದಿರುವ ಮುಖ್ಯ ಮಾಯೆ.

ಆ ಕ್ಷಣಕ್ಕೆ ವಾಸ್ತವಿಕ ಪರಿಧಿಯಾಚೆ ಕೊಂಡೊಯ್ಯುವ, ಅಸಾಧ್ಯವಾದುದನ್ನೂ ಕೂಡಾ ಸಾಧ್ಯವಾಗುವಂತೆ ಮಾಡುವ ಶಕ್ತಿ ಕನಸಿಗಿದೆ. ನಾವು ಸವಾಲು ಅಂತ ಬಂದಾಗ ಕಳೆದುಕೊಳ್ಳುವ ಭಯದಿಂದ ಹಿಂದಡಿ ಇಡೋದಿದೆ. ಆದರೆ, ಕನಸಿಗಾಗಿ ಮಾತ್ರ ಎಂಥಾ ತ್ಯಾಗಕ್ಕಾದರೂ ಸಿದ್ಧವಾಗಿ ಬಿಡುತ್ತೇವೆ. ಯಾಕೆ ಹೀಗೆ ಎಂಬಂತೆ ನಮ್ಮೊಳಗೇ ನಾವು ಪ್ರಶ್ನೆಯಾಗುತ್ತೇವೆ; ಅಚ್ಚರಿಗೊಳ್ಳುತ್ತೇವೆ. ಅಂಥಾ ಎಲ್ಲ ಭಾವಗಳೂ ಎರಕ ಹೊಯ್ದಂತೆ ಈ ಹಾಡು ಮೂಡಿ ಬಂದಿದೆ.

ಶೃತಿ ಹರಿಹರನ್ ಜೊತೆಗೆ ಇಲ್ಲಿ ಸುಮೇಶ್ ವಿ.ಎಂ ಮತ್ತು ಐಶ್ವರ್ಯಾ ಪ್ರತಾಪ್ ಕೂಡಾ ಹಾಡಿನ ಭಾಗವಾಗಿದ್ದಾರೆ. ಹೀಗೆ ಹೊಸತನದ ಹಾಡುಗಳ ಮೂಲಕವೇ ಪ್ರೇಕ್ಷಕರನ್ನು ಮುಟ್ಟುತ್ತಿರುವ ಸಾರಾಂಶ ಚಿತ್ರದಲ್ಲಿ ದೀಪಕ್ ಸುಬ್ರಮಣ್ಯ, ಸೂರ್ಯ ವಸಿಷ್ಠ, ಶೃತಿ ಹರಿಹರನ್, ಶ್ವೇತಾ ಗುಪ್ತ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ.

ರವಿ ಕಶ್ಯಪ್ ಮತ್ತು ಆರ್.ಕೆ ನಲ್ಲಮ್ ವಿಭಾ ಕಶ್ಯಪ್ ಪೆÇ್ರಡಕ್ಷನ್ಸ್ ಮತ್ತು ಕ್ಲಾಪ್ ಬೋರ್ಡ್ ಪೆÇ್ರಡಕ್ಷನ್ ಮೂಲಕ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಆಸಿಫ್ ಕ್ಷತ್ರಿಯಾ, ರವಿ ಭಟ್, ರಾಮ್ ಮಂಜುನಾಥ್, ಸತೀಶ್ ಕುಮಾರ್, ಪೃಥ್ವಿ ಬನವಾಸಿ ಮುಂತಾದವರ ತಾರಾಗಣ, ಅಪರಾಜಿತ್ ಹಿನ್ನೆಲೆ ಸಂಗೀತ ಮತ್ತು ಪ್ರದೀಪ್ ನಾಯಕ್ ಸಂಕಲನ ಈ ಚಿತ್ರಕ್ಕಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin