ಮಾನಸ ಹೊಳ್ಳ- ರೆಮೋ ಜೋಡಿಯ “ಠಾಣೆ” ಚಿತ್ರದ ಹಾಡು ಬಿಡುಗಡೆ: ಕುತೂಹಲ ಹೆಚ್ಚಳ
ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ಗಾಯಕಿ, ಸಂಗೀತ ನಿರ್ದೇಶಕಿ ಮಾನಸ ಹೊಳ್ಳ, ಸಂಗೀತ ನೀಡಿರುವ “ಠಾಣೆ” ಚಿತ್ರದ ಹಾಡು ಬಿಡುಗಡೆಯಾಗಿದ್ದು ಗಮನ ಸೆಳೆದಿದೆ, ಈ ಮೂಲಕ ಕನ್ನಡ ಚಿತ್ರರಂಗದಲ್ಲಿ ಮತ್ತೊಬ್ಬ ಗಟ್ಟಿ ಸಂಗೀತ ನಿರ್ದೇಶಕಿ ಜೊತೆಗೆ ಬೆರಳಣಿಕೆಯ ಸಂಖ್ಯೆಯಲ್ಲಿರುವ ಮಹಿಳಾ ನಿರ್ದೇಶಕಿಯರ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಎಲ್ಲಾ ಅರ್ಹತೆಗಳಿವೆ.

ಬಾಲ್ಯದ ಗೆಳತಿ ಹಾಡುಗಾರ್ತಿ,ಗೀತ ರಚನಕಾರರು ಆಗಿರುವ ರೆಮೋ ಅವರ ಸಾಹಿತ್ಯದಲ್ಲಿ ಮೂಡಿ ಬಂದಿರುವ ” ಬಾಳಿನಲಿ ಭರವಸೆಯ ಬೆಳಕನು ನೀ ಹೂಡು.. ” ಹಾಡಿಗೆ ಮಾನಸ ಹೊಳ್ಳ ಸಂಗೀತ ನೀಡಿದ್ದು ಪುಟಾಣಿ ಗಾಯಕಿಯರಾದ ಗಾಯಕಿಯೂ ಆಗಿರುವ ರೇಖಾ ಗುರುರಾಜ್ ಅವರು ಪುತ್ರಿ,
ಸರೆಗಮ ಖ್ಯಾತಿಯ ಜ್ಞಾನ ಗುರುರಾಜ್, ಗಾಯಕಿ, ನಿರೂಪಕಿ ದಿವ್ಯ ಆಲೂರ್ ಪುತ್ರಿ ಜನ್ಯ ಆದರ್ಶ್, ಗಾಯಕಿ ನಾಗಚಂದ್ರಿಕಾ ಭಟ್ ಪುತ್ರ ಅಚಿಂತ್ಯ ಕೆ ಭಟ್, ಗಾಯಕಿ ಕುಶಾಲ ಪುತ್ರಿ ಅನೂಷ್ಕಾ ಹಾಗು ವಾದ್ಯಗೋಷ್ಠಿ ಗಾಯಕಿ ಅರ್ಪಿತಾ ಪುತ್ರಿ ಮೌಲ್ಯ ಹಾಡಿರುವ ಹಾಡು ಮೋಡಿ ಮಾಡಿದೆ.
ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ಆಶೀರ್ವಾದ ಮಾಡಿ ಬಿಡುಗಡೆ ಮಾಡಿದ ಲೇಖ ಆಡಿಯೋ ಮೂಲಕ ಠಾಣೆ ಚಿತ್ರದ ಹಾಡು ಬಿಡುಗಡೆಯಾಗಿದ್ದು ದಿನದಿಂದ ದಿನಕ್ಕೆ ಹಾಡು ಮನ ಗೆಲ್ಲುತ್ತಿದೆ

ಹಿರಿಯ ಕಲಾವಿದ ಶಂಖನಾದ ಅರವಿಂದ್ ಮತ್ತು ರಮಾ ಅರವಿಂದ್ ಅವರ ಪುತ್ರಿಯಾಗಿರುವ ಮಾನಸ ಹೊಳ್ಳ ಅವರು ಗಾಯಕಿ, ಸಂಗೀತ ನಿರ್ದೇಶಕಿ, ಕೀಬೋರ್ಡ್ ವಾದಕಿ, ಪ್ರೋಗ್ರಾಮರ್ ಹಾಗು ಸೌಂಡ್ ಇಂಜಿನಿಯರ್ ಆಗಿ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದಾರೆ.
ಕಳೆದ 25 ವರ್ಷಗಳಿಂದ ಚಿತ್ರರಂಗದಲ್ಲಿ ಗಾಯಕಿಯಾಗಿ ಗುರುತಿಸಿಕೊಂಡಿರುವ ಮಾನಸ ಹೊಳ್ಳ ಅವರು ಕಳೆದ 6 ವರ್ಷದಿಂದ ಸಂಗೀತ ನಿರ್ದೇಶಕಿಯಾಗಿ ಛಾಪು ಮೂಡಿಸಿದ್ದಾರೆ. ಹತ್ತು ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ,

ಗಾಯಕಿಯಾಗಿ 500ಕ್ಕೂ ಹೆಚ್ಚು ಚಿತ್ರಗಳು ಹಾಗು ಭಕ್ತಿ ಪ್ರಧಾನ ಹಾಡುಗಳೂ ಸೇರಿದಂತೆ 1500 ಹಾಡುಗಳಿಗೆ ಧ್ವನಿಯಾಗಿದ್ದಾರೆ.ಅದರಲ್ಲಿ ಪ್ರಮುಖವಾಗಿ 99, ಅಧ್ಯಕ್ಷ, ಶಿವಲಿಂಗ, ಆಕ್ಷಿ, ರವಿಕೆ ಪ್ರಸಂಗ, ರಜನಿಕಾಂತ, ಧಮಾಕ, ಸೂಪರ್ ರಂಗ, ಡಾರ್ಲಿಂಗ್ ಸೇರಿದಂತೆ ಅನೇಕ ಚಿತ್ರಗಲ್ಲಿ ಹಾಡಿ ಮುಂಚೂಣಿಯ ಗಾಯಕಿ ಎನ್ನುವ ಹಿರಿಮೆಯನ್ನು ತನ್ನದಾಗಿಸಿಕೊಂಡಿದ್ದಾರೆ.

ಇನ್ನೂ ಸಂಗೀತ ನಿರ್ದೇಶನದ ಪೈಕಿ 6 ಟು 6, ಕನಸು ಮಾರಾಟಕ್ಕಿದೆ, ಕೆಂಪು ದೀಪ, ಮನಸಾಗಿದೆ. ಮಸಣದ ಹೂವು, ಬಯಲು ಸೀಮೆ ಹಾಗು ಚಿರತೆ ಬಂತು ಚಿರತೆ ಚಿತ್ರಕ್ಕೆ ಸಂಗೀತ ನೀಡಿದ್ದು ಇದೀಗ ಠಾಣೆ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಈ ಪೈಕಿ ಕನಸು ಮಾರಾಟಕ್ಕಿದೆ ಗೋವಾ ಅಂತರಾಷ್ಟ್ರೀಯ ಚಿತ್ರೋತ್ಸೋವದ ಸ್ಪರ್ಧಾತ್ಮಕ ವಿಭಾಗದಲ್ಲಿ ಅತ್ಯುತ್ತಮ ಸಂಗೀತ ಪ್ರಶಸ್ತಿ ಪಡೆದಿದ್ದಾರೆ. ಜೊತೆಗೆ ಮಸಣದ ಹೂವು ಚಿತ್ರಕ್ಕೆ 2022ರ ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ವಿಶೇಷ ಜೂರಿ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾರೆ.

ಇದರ ಜೊತೆಗೆ ವನಜ, ಗಂಡ ಗುಂಡಿ, ಹನಿ ಟ್ರಾಪ್, ಪಾರ್ಸೆಲ್, ಚಿರಂಜೀವಿ ನವೀನ ,ವೆಬ್ ಸೀರೀಸ್‍ನಲ್ಲಿಯೂ ಕಮಾಲು ಮಾಡಿದ್ದಾರೆ. ಇದರ ಜೊತೆ ಜೊತೆಗೆ ವಿವಿಧ ಧಾರಾವಾಹಿಗೆ ಹಿನ್ನೆಲೆ ಸಂಗೀತ ನೀಡುವ ಮೂಲಕ ಮಾನಸ ಹೊಳ್ಳ ತಮ್ಮ ಬಹುಮುಖ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ.
ಠಾಣೆ ಚಿತ್ರಕ್ಕೆ ಹಾಡು ಬರೆದಿರುವ ರೆಮೋ ಅವರೂ ಕೂಡ 100ಕ್ಕೂ ಹೆಚ್ಚು ಹಾಡುಗಳಿಗೆ ಗೀತ ಸಾಹಿತ್ಯ ಬರೆದಿದ್ದಾರೆ. ಅದರಲ್ಲಿ ಮಾನಸ ಹೊಳ್ಳ ಅವರ ಮೂರು ಚಿತ್ರಗಳಿಗೆ ಕನಸು ಮಾರಾಟಕ್ಕಿದೆ, ಮನಸಾಗಿದೆ. ಈಗ ಠಾಣೆ ಚಿತ್ರಕ್ಕೆ ಹಾಡು ಬರೆದಿದ್ದಾರೆ.


