Review: ಅವಿಭಕ್ತ ಕುಟುಂಬದ ಕಥೆ,ವ್ಯಥೆಯ ಸುತ್ತಾ ” ಜಸ್ಟ್ ಮ್ಯಾರೀಡ್
ಚಿತ್ರ; ಜಸ್ಟ್ ಮ್ಯಾರೀಡ್
ನಿರ್ದೇಶನ ; ಸಿ.ಆರ್ ಬಾಬಿ
ತಾರಾಗಣ: ಶೈನ್‍ಶೆಟ್ಟಿ, ಅಂಕಿತ ಅಮರ್, ದೇವರಾಜ್, ರವಿಶಂಕರ್ ಗೌಡ, ಶ್ರೀಮಾನ್, ಶೃತಿ, ಮಾಳವಿಕ, ಅನೂಪ್ ಭಂಡಾರಿ, ಸಂಗೀತಾ, ಅಚ್ಯುತ್ ಕುಮಾರ್, ಶೃತಿ ಹರಿಹನ್ ಮತ್ತಿತರರು
ರೇಟಿಂಗ್ : *** 3/5
ಕನ್ನಡದಲ್ಲಿ ಇತ್ತೀಚೆಗೆ ಕೆಲ ಚಿತ್ರಗಳು ಸದ್ದಿಲ್ಲದೆ ಬಂದು ಸುದ್ದಿ ಮಾಡುತ್ತವೆ, ಜೊತೆಗೆ ಜನರಿಂದ ಮೆಚ್ಚುಗೆಯೊಂದಿಗೆ ಗಲ್ಲಾಪೆಟ್ಟಿಗೆಯನ್ನು ತುಂಬಿಸಿಕೊಂಡು ಗೆಲುವಿನ ನಗೆ ಬೀರುತ್ತಿವೆ. ಇನ್ನೂ ಕೆಲವು ಚಿತ್ರಗಳು ಪ್ರತಿಯೊಂದಕ್ಕೂ ಸುದ್ದಿ ಮಾಡುತ್ತವೆ. ಕಥೆಯ ತಿರುಳು ಮತ್ತು ತಾತ್ಪರ್ಯ ಇಲ್ಲದೆ ಸದ್ದಿಲ್ಲದೆ ಇದ್ದು ಬಿಡುತ್ತವೆ. ಇಂತಹ ಚಿತ್ರಗಳ ನಡುವೆ ಈ ವಾರ” ಜಸ್ಟ್ ಮ್ಯಾರೀಡ್ʼ ಚಿತ್ರ ತೆರೆಗೆ ಬಂದಿದೆ.
ಸಂಗೀತ ನಿರ್ದೇಶಕಿ ಮತ್ತು ಸಂಯೋಜಕಿಯಾಗಿ ಕೆಲಸ ಮಾಡಿದ ಸಿ,ಆರ್ ಬಾಬಿ ಚೊಚ್ಚಲ ಬಾರಿಗೆ ಪ್ರತಿಭಾನ್ವಿತ ಕಲಾವಿದರ ದಂಡು ಕಟ್ಟಿಕೊಂಡು “ಜಸ್ಟ್ ಮ್ಯಾರೀಡ್ʼ ಚಿತ್ರವನ್ನು ತೆರೆಗೆ ಕಟ್ಟಿಕೊಟ್ಟಿದ್ದಾರೆ. ಅವರಿಗೆ ಮತ್ತೊಬ್ಬ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಸಾಥ್ ನೀಡಿದ್ದಾರೆ.
ಆತ ಸಂತೋಷ್ (ಶೈನ್ ಶೆಟ್ಟಿ) ಆಡ್ ಫಿಲ್ಮ್ ತಯಾರಕ. ಜೊತೆಗೆ ಅವಿಭಕ್ತ ಕುಟುಂಬದಿಂದ ಬಂದವ. ಆತನಿಗೆ ಮನೆಯಲ್ಲಿ ವಯಸ್ಸು ಮೀರುವುದೊರಳಗೆ ಮದುವೆ ಮಾಡಬೇಕು ಎನ್ನುವ ಉದ್ದೇಶ. ಈ ಕಾರಣದಿಂದ ಸಹನಾ- (ಅಂಕಿತಾ ಅಮರ್ ) ಹುಡುಗಿ ಹುಡುಕುತ್ತಾರೆ. ಆಕೆಗೋ ಮದುವೆ ಇಷ್ಟವಿಲ್ಲ, ವಿದೇಶದಲ್ಲಿ ವ್ಯಾಸಂಗ ಮಾಡಬೇಕು ಎನ್ನುವ ಗುರಿ. ಮನೆಯವರ ಕಟ್ಟುಪಾಡಿಗೆ ಬಿದ್ದು ಒಪ್ಪಂದದ ಮದುವೆ ಮಾಡಿಕೊಳ್ತಾಳೆ.
ಮದುವೆಯಾದರೂ ಸಂತೋಷ್ ಬಗ್ಗೆ ಅನುಮಾನ,ದೊಡ್ಡ ಕುಟುಂಬದ ಜೊತೆ ಇದ್ದರೂ ನಾನೊಂದು ತೀರ ನೀನೊಂದು ತೀರ ಎನ್ನುವಂತೆ ಇರುವವರು. ಈ ನಡುವೆ ಅವಿಭಕ್ತ ಕುಟುಂಬಕ್ಕೆ ೨೫೦ ವಷಗಳ ಸುದೀಘ ಇತಿಹಾಸ, ಯಾವುದೇ ತಂಟೆ ತಕರಾರು ಗೋಜಲುಗಳಿಗೆ ಹೋಗದ ಕುಟುಂಬ,ಇಂತಹ ಕುಟುಂಬವನ್ನು ಗೌರವಿಸಬೇಕು ,ಜನರಿಗೆ ಮಾಹಿತಿ ನೀಡಬೇಕು ಎಂದು ರಾಜ್ಯದ ಮುಖ್ಯಮಂತ್ರಿಗಳು ನಿರ್ಧರಿಸುತ್ತಾರೆ.
ಆದರೆ ಆ ಮನೆಯ ಒಬ್ಬೊಬ್ಬರದು ಒಂದೊಂದು ಸಮಸ್ಯೆ, ತೊಂದರೆ ಬಿಚ್ಚಿಕೊಳ್ಳುತ್ತದೆ. ಕುಟುಂಬದ ಗೌರವ ಒಂದೆಡೆ ತಮ್ಮ ಗೌರವ ಕಾಪಾಡಿಕೊಳ್ಳುವ ಸಂಕಷ್ಠದಲ್ಲಿ ಸಿಲುಕುತ್ತಾರೆ. ಇಂತಹ ಸಮಯದಲ್ಲಿ ಸಂತೋಷ್ ತಾನು ಸಮಸ್ಯೆಯಲ್ಲಿದ್ದರೂ ಕುಟುಂಬಕ್ಕೆ ಎದುರಾದ ಸಮಸ್ಯೆಯನ್ನು ಹೇಗೆ ಬಗೆಹರಿಸುತ್ತಾನೆ ಎನ್ನುವುದು ಚಿತ್ರದ ತಿರುಳು
ನಿರ್ದೇಶಕಿ ಸಿಆರ್ ಬಾಬಿ, ಆಗಷ್ಟೇ ಮದುವೆಯಾದ ಹುಡುಗ ಹುಡುಗಿ, ಮೊದಲ ರಾತ್ರಿಯ ವಿಷಯದಿಂದ ಆರಂಭಿಸಿದ ಕುಟುಂಬದಲ್ಲಿ ಪರಂಪರೆಯಿಂದ ಹೆಣ್ಣಿನ ಒಡನಾಟ, ಚಪಲತೆ ಲೋಲುಪತನಗಳನ್ನು ಬಿಚ್ಚಿಡುವ ಕೆಲಸ ಮಾಡಿದ್ಧಾರೆ. ಈ ಮೂಲಕ ಕನ್ನಡಕ್ಕೆ ಮತ್ತೊಬ್ಬರ ಮಹಿಳಾ ನಿರ್ದೇಶಕಿ ಸಿಕ್ಕಿದ್ದಾರೆ
ನಟ ಶೈನ್ ಶೆಟ್ಟಿ ಹಾಗು ನಾಯಕಿ ಅಂಕಿತಾ ಅಮರ್ ತಮಗೆ ಸಿಕ್ಕ ಪಾತ್ರಗಳಿಗೆ ನ್ಯಾಯ ಒದಿಸುವ ಕೆಲಸ ಮಾಡಿದ್ದಾರೆ. ಇನ್ನೂ ಚಿತ್ರದಲ್ಲಿ ಹಿರಿಯ ನಟರಾದ ದೇವರಾಜ್ , ತೆಲುಗಿನ ಶ್ರೀಮಾನ್, ನಿದೇಶಕ ಅನೂಪ್ ಭಂಡಾರಿ, ನಟ ರವಿಶಂಕರ್ ಗೌಡ,ಹಿರಿಯ ನಟಿಯರಾದ ಶೃತಿ, ಮಾಳವಿಕ, ಸಂಗೀತ, ವಾಣಿ ಹರಿಕೃಷ್ಣ, ಜೊತೆಗೆ ಶೃತಿ ಹರಿಹನ್, ಇದರೊಂದಿಗೆ ಹಿರಿಯ ಕಲಾವಿದರಾದ ಅಶೋಕ್, ಅಚ್ಚುತ್ ಕುಮಾರ್ ಸೇರಿದಂತೆ ಕಲಾವಿದರ ದಂಡೇ ಚಿತ್ರದಲ್ಲಿದೆ.
ಇಷ್ಟೊಂದು ಕಲಾವಿದರು ಇದ್ದ ಮೇಲೆ ಎಲ್ಲರಿಗೂ ತೆರೆಯ ಮೇಲೆ ಸೂಕ್ತ ಅವಕಾಶ ಸಿಗುತ್ತದೆ ಎಂದು ಊಹೆ ಮಾಡಿಕೊಳ್ಳುವುದು ಅಸಾಧ್ಯ. ಇಲ್ಲಿಯೂ ಕೂಡ ಅದೇ. ಕೆಲವು ಕಲಾವಿದರನ್ನು ಬಿಟ್ಟು ಉಳಿದವರಿಗೆ ಇಲ್ಲಿ ಯಾವುದೇ ಪ್ರಾಮುಖ್ಯತೆ ಇಲ್ಲ ,ಚಿತ್ರದಲ್ಲಿದ್ದಾರೆ ಎನ್ನುವದಷ್ಟೇ ತೃಪ್ತಿ, ಅಥವಾ ಈ ಪಾತ್ರಕ್ಕೆ ಅವರು ಬೇಕಿತ್ತಾ ಎನ್ನುವ ಪ್ರಶ್ನೆ ಚಿತ್ರ ನೋಡಿದ ಮಂದಿಗೆ ಕಾಡಿದರೆ ಅಚ್ಚರಿ ಏನೂ ಇಲ್ಲ.
ತೆಲುಗಿನ ಕಲಾವಿದ ಶ್ರೀಮಾನ್ ತಮ್ಮ ಪಾತ್ರಕ್ಕೆ ಅವರೇ ಡಬ್ಬಿಂಗ್ ಮಾಡಿದ್ದಾರೆ. ಕೆಲ ಪದಗಳಲ್ಲಿ ಭಾಷೆಯ ಸ್ಪಷ್ಟತೆ ಇದ್ದಿದ್ದರೆ ಪ್ರಯತ್ನ ಇನ್ನಷ್ಟು ಉತ್ತಮವಾಗಿರುತ್ತಿತ್ತು. ಆದರೂ ಅಲ್ಲಗಳೆಯುವಂತಿಲ್ಲ.
ಇಬ್ಬರು ಸಂಗೀತ ನಿರ್ದೇಶಕರು ಜೊತೆಯಾಗಿದ್ದಾರೆ ಎಂದಾಗ ಅಲ್ಲಿ ಸಂಗೀತದ ಬಗ್ಗೆ ಹೆಚ್ಚಿನ ನಿರೀಕ್ಷೆ ಮತ್ತು ಕುತೂಹಲ ಇರುತ್ತದೆ. ಹಾಡುಗಳು ಪ್ರೇಕ್ಷರನ್ನು ಮೋಡಿ ಮಾಡುತ್ತವೆ ಎನ್ನುವ ಭರವಸೆ ಖಂಡಿತ. ಅದು ಈಡೇರಿದೆಯಾ ಅಥವಾ ಇಲ್ಲವೇ ಎನ್ನುವುದು ಚಿತ್ರದಲ್ಲಿ ನೋಡಿದರೆ ಚೆನ್ನ.
ರೇಟಿಂಗ್- ಅಷ್ಟಕಷ್ಟೆ- * / ನೋಡಬಹುದು – ** / ಚೆನ್ನಾಗಿದೆ- *** / ಉತ್ತಮ – ****/ ಅತ್ಯುತ್ತಮ – ***** /

