ರಾಯರ ಮಹಿಮೆಯನ್ನು ಸಾರುವ “ನಮ್ಮ ರಾಯರು” ಚಿತ್ರೀಕರಣ ಆರಂಭ
ನಾಡಿನ ಶ್ರೇಷ್ಠ ಹರಿದಾಸರ ಜೀವನ ಚರಿತ್ರೆಯನ್ನು ಸಿನಿಮಾ ಮೂಲಕ ಜನರಿಗೆ ತಲುಪಿಸಿದವರು ಮಧುಸೂದನ್ ಹವಾಲ್ದಾರ್ ಮುಂದಿನ ನಿರ್ದೇಶನದ ಚಿತ್ರ ” ನಮ್ಮ ರಾಯರು”. ಪ್ರಸ್ತುತ ಚಿತ್ರದ ಚಿತ್ರೀಕರಣಕ್ಕೆ ಬೆಂಗಳೂರಿನಲ್ಲಿ ಚಾಲನೆ ದೊರಕಿದೆ.

ಮಾತಾಂಬುಜ ಮೂವೀಸ್ ಮೂಲಕ ನಿರ್ಮಾಣವಾಗುತ್ತಿರುವ ಆರನೇ ಚಿತ್ರ “ನಮ್ಮ ರಾಯರು” ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಸಂಗೀತ ಸಂಯೋಜಿಸುವುದರ ಜೊತೆಗೆ ನಿರ್ಮಾಣ ಹಾಗೂ ನಿರ್ದೇಶನ ಮಾಡಿದ್ದಾರೆ ನಿರ್ದೇಶಕ ಮಧುಸೂಧನ್ ಹವಲ್ದಾರ್.
ಜೆ.ಎಂ.ಪ್ರಹ್ಲಾದ್ ಸಂಭಾಷಣೆ ಬರೆಯುತ್ತಿದ್ದಾರೆ. ಬೆಂಗಳೂರಿನ “ತಂಬೂರಿ ಮೀಟಿದವ” ಹಾಡಿನ ಚಿತ್ರೀಕರಣದೊಂದಿಗೆ ಚಿತ್ರದ ಚಿತ್ರೀಕರಣಕ್ಕೆ ಚಾಲನೆ ನೀಡಲಾಗಿದೆ. ಖ್ಯಾತ ಗಾಯಕಿ ಸಂಗೀತ ಕಟ್ಟಿ ಕುಲಕರ್ಣಿ ಹಾಡನ್ನು ಹಾಡಿದ್ದಾರೆ. “ನಮ್ಮ ರಾಯರು” ಈಗಿನ ಕಾಲಘಟ್ಟ ಹಾಗೂ ಶ್ರೀರಾಘವೇಂದ್ರಸ್ವಾಮಿಗಳ ಜೀವನದ ಕಾಲಘಟ್ಟ ಎರಡು ಕಾಲಘಟ್ಟದಲ್ಲಿ ನಡೆಯುವ ಕಥೆ. ರಾಯರ ಮಹಿಮೆಯನ್ನು ಸಾರುವ ಚಿತ್ರವೂ ಹೌದು. ಈ ಚಿತ್ರದ ದ್ವಿತೀಯಾರ್ಧದ ಕಥೆ ಪೂರ್ತಿ ಮಂತ್ರಾಲಯದಲ್ಲಿ ನಡೆಯಲಿದೆ.

ಮಂತ್ರಾಲಯ ಮಠದ ಪ್ರಸ್ತುತ ಪೀಠಾಧಿಪತಿಗಳಾದ ಶ್ರೀಸುಬುಧೇಂದ್ರ ತೀರ್ಥರು ಸಹ ಚಿತ್ರದಲ್ಲಿ ರಾಯರ ಭಕ್ತರಿಗೆ ಅನುಗ್ರಹ ಸಂದೇಶ ನೀಡಲಿದ್ದಾರೆ. “ಜಗನ್ನಾಥದಾಸರು” ಚಿತ್ರದಲ್ಲಿ ಶ್ರೀದ ವಿಠಲರ ಪಾತ್ರ ನಿರ್ವಹಿಸಿದ್ದ ಪುಷ್ಕರ್ ದೇಶಪಾಂಡೆ ಚಿತ್ರದ ನಾಯಕನಾಗಿ ಹಾಗೂ ಭರತನಾಟ್ಯ ಕಲಾವಿದೆ ಪ್ರೇರಣ ಕುಂಶಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.
ಈ ಚಿತ್ರದಲ್ಲಿ ಐದು ಹಾಡುಗಳಿದ್ದು, ಎರಡು ಪುರಂದರದಾಸರ ಕೃತಿಗಳನ್ನು ಬಳಸಿಕೊಳ್ಳುತ್ತಿದ್ದು, ಉಳಿದ ಮೂರು ಹಾಡುಗಳನ್ನು ನಾನೇ ಬರೆದಿದ್ದೇನೆ ಎಂದು ನಿರ್ದೇಶಕ – ನಿರ್ಮಾಪಕ ಮಧುಸೂದನ್ ಹವಾಲ್ದಾರ್ ತಿಳಿಸಿದ್ದಾರೆ.

