ಭಾವನೆ ಬೆಸೆಯುವ ಚಿತ್ರ ಭಾವಪೂರ್ಣ: ಟ್ರೈಲರ್ ಮೂಲಕ ಸುಂದರ ಪಯಣ ಅನಾವರಣ
ರಾಷ್ಟ್ರ ಪ್ರಶಸ್ತಿ ವಿಜೇತ ಚೇತನ್ ಮುಂಡಾಡಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಮತ್ತೊಂದು ಅಪರೂಪದ ಚಿತ್ರ “ ಭಾವಪೂರ್ಣ”. ಭಾವನೆಗಳನ್ನು ಬೆಸೆಯುವ ಚಿತ್ರ ಭಾವಪೂರ್ಣ ಎನ್ನುವುದನ್ನು ಇಡೀ ತಂಡದ ಮಾತಿನ ಒಂದಂಶದ ಸಾರಾಂಶ.
“ಭಾವಪೂರ್ಣ” ಚಿತ್ರ ಹಲವು ವಿಶೇಷತೆಗಳ ಸಂಗಮವೂ ಹೌದು. ಹಿರಿಯ ಕಲಾವಿದ, ಕಲಾ ಬದುಕನ್ನೇ ಜೀವದ ಉಸಿರಾಗಿಸಿಕೊಂಡ ರಮೇಶ್ ಪಂಡಿತ್ ಈ ಚಿತ್ರದಲ್ಲಿ ನಾಯಕನಾಗಿದ್ದಾರೆ. ಹಿರಿಯ ಕಲಾವಿದ ಸುಂದರ್ ವೀಣಾ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಕಿರುತೆರೆ ಮತ್ತು ರಂಗಭೂಮಿಯಲ್ಲಿ ಗುರುತಿಸಿಕೊಂಡಿರಿವ ಶೈಲಶ್ರೀ ಧಮೇಂದ್ರ ಅರಸ್ ಬಾಯಿ ಬಡಕಿ ಹೆಂಡತಿಯಾಗಿ ಕಾಣಿಸಿಕೊಂಡಿದ್ದಾರೆ. ಇದರ ಜೊತೆಗೆ ಛಾಯಾಗ್ರಾಹಕನೊಬ್ಬನ ಪಡಪಾಟಲುಗಳನ್ನು ಅನಾವರಣ ಮಾಡಲಾಗಿದೆ.
ಪ್ರಶಾಂತ್ ಅಂಜನಪ್ಪ ನಿರ್ಮಾಣದ ಹಾಗೂ ರಮೇಶ್ ಪಂಡಿತ್ ನಾಯಕರಾಗಿ ನಟಿಸಿರುವ “ಭಾವಪೂರ್ಣ” ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಯಿತು. ಈ ವೇಳೆ ಚಿತ್ರದ ಸದಸ್ಯರ ತಮ್ಮ ತಮ್ಮ ಪಾತ್ರಗಳ ಕುರಿತು ಮಾಹಿತಿ ಹಂಚಿಕೊಂಡರು.
ನಿರ್ದೇಶಕ ಚೇತನ್ ಮುಂಡಾಡಿ ಮಾತನಾಡಿ, ” ಭಾವಪೂರ್ಣ” ಒಬ್ಬ ಮಧ್ಯ ವಯಸ್ಸು ಮೀರಿದ ಮುಗ್ಧನ ಭಾವ ತೀರ ಯಾನ. ಸಾವಿನಾಚೆಗೂ ತಾನು ಈ ಭೂಮಿ ಮೇಲೆ ಬದುಕಿದ್ದೆ ಅನ್ನೋ ಕುರುಹನ್ನು ಬಿಟ್ಟುಹೋಗುವ ಪ್ರಯತ್ನ ಎಂದು ಕೊಂಡು ಪ್ರತಿಹೆಜ್ಜೆಯಲ್ಲೂ ಪಡುವ ಬವಣೆ, ಆಗುವ ಒದ್ದಾಟ, ಅವಘಡ ಮತ್ತು ಮನತಟ್ಟುವ ಮುಗ್ದ ತಮಾಷೆಗಳು.ಇನ್ನೊಬ್ಬ ಯುವಕ. ಕನಸುಗಳಿಗೆ ಬಣ್ಣ ಹಚ್ಚಿ ಬದುಕನ್ನು ಬಲೂನ್‍ನಂತೆ ಹಾರಿ ಬಿಡುವೆ ಎನ್ನುವ ಹುಮ್ಮಸ್ಸಿನ ಪ್ರೀತಿಯ ಪಯಣ. ತನಗೆ ಬೇಕಾದಂತೆ ತನ್ನ ಬದುಕು ರೂಪಿಸಿಕೊಳ್ಳಬಹುದು ಎನ್ನುವ ಕಿಚ್ಚಿನಿಂದ ಹೊರಟವನು.ಇವರು ತಾವು ಅಂದುಕೊಂಡಿದ್ದನ್ನು ಸಾಧ್ಯವಾಗಿಸುವರೇ ಎನ್ನುವುದೇ ” ಭಾವಪೂರ್ಣ ” ಎದೆ ಬಡಿತದ ಕಥಾವಸ್ತುವಾಗಿ ಕಾಡುವುದು ಎಂದರು.
ಕಾಲಘಟ್ಟಗಳನ್ನು ನೆನೆಪಿಸುವ ಚಿತ್ರ ಊರಿನಲ್ಲಿ ಆದ ಘಟನೆಗೆ ಸಾಯುವುದನ್ನು ಕಾಯುವುದನ್ನೇ ಕಾಯುವ ಛಾಯಾಗ್ರಹಕ ಒಂದೆಡೆಯಾದರೆ ಹೆಂಡತಿಗೆ ಕೊಟ್ಟ ಮಾತು ಉಳಿಸಿಕೊಳ್ಳುತ್ತಾನಾ ಅಥವಾ ಫೋಟೋ ತಗೋತಾನಾ ಇಲ್ಲವೆ ಎನ್ನುವದು ಚಿತ್ರದ ತಿರುಳು. ಚಿತ್ರವನ್ನು ಅಂಕೋಲಾ, ತಾಳಗುಪ್ಪ, ಧರ್ಮಸ್ಥಳ, ಭೀಮೇಶ್ವರ ಮತ್ತಿತರ ಕಡೆ ಚಿತ್ರೀಕರಣ ಮಾಡಲಾಗಿದೆ ಎನ್ನುವ ಮಾಹಿತಿ ನೀಡಿದರು.
ನಾಯಕ ರಮೇಶ್ ಪಂಡಿತ್ ಮಾತನಾಡಿ ನಾಲ್ಕು ದಿನ ನಿದ್ದೆ ಮಾಡದೆ ಕೆಲಸ ಮಾಡಿಸಿದ್ದೇನೆ. ಕೋಪ ಮಾಡಿಕೊಂಡಾಗ ಸಮಾದಾನ ಮಾಡಿದ್ದಾರೆ. ಭಾವನೆಗಳನ್ನು ಬೆಸೆಯುವ ಚಿತ್ರ ಭಾವಪೂರ್ಣ. ನಾಯಕ ಎಂದಾಗ ಒಮ್ಮೆ ನಕ್ಕೆ, ನನ್ನ ಮುಸಡಿಗೆ ಯಾರು ಬಂಡವಾಳ ಹಾಕ್ತಾರೆ ಅಂತ. ಹಾಗು ಹೀಗೂ ಚಿತ್ರ ಪೂರ್ಣಗೊಂಡಿದೆ. ಹೊಸತನದ ಪಾತ್ರವಿದೆ, ನಾಯಕ ನಟ ಎನ್ನುವುದು ಜವಾಬ್ದಾರಿ, ಚಿತ್ರದಲ್ಲಿ ಕಥೆಯೇ ನಾಯಕ. ನಾನು ಪಾತ್ರ ಮಾಡಿದ್ದೇನೆ ಅಷ್ಟೆ. ಎಲ್ಲಾ ಚಿತ್ರತಂಡಗಳಲ್ಲಿ ಮನಸ್ಥಾಪ ಇದ್ದುದ್ದೆ. ಒಳ್ಳೆಯ ತಂಡ. ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಾಯಕ, ಸಿನಿಮಾ ಪೆÇ್ರತ್ಸಾಹಿಸಿ ಎಂದು ಕೇಳಿಕೊಂಡರು.
ನಿರ್ಮಾಪಕ ಪ್ರಶಾಂತ್ ಆಂಜಿನಪ್ಪ, ನನಗೆ ಸುಮಾರು ವರ್ಷಗಳಿಂದ ಚಿತ್ರರಂಗದವರೊಂದಿಗೆ ಒಡನಾಟವಿದೆ. ನಿರ್ಮಾಪಕನಾಗಿ ಇದು ಮೊದಲ ಚಿತ್ರ. ಚೇತನ್ ಒಳ್ಳೆಯ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ. ಎಲ್ಲಾ ಕಲಾವಿದರು ಚೆನ್ನಾಗಿ ನಟಿಸಿದ್ದಾರೆ. ಶೀಘ್ರದಲ್ಲೇ ಚಿತ್ರವನ್ನು ತೆರೆಗೆ ತರುತ್ತೇವೆ ಎಂದರು.
ರಮೇಶ್ ಪಂಡಿತ್ ಮುಸುಡಿ ನೋಡಿ ಚಿತ್ರಕ್ಕೆ ಬಂಡವಾಳ ಹಾಕಲಿಲ್ಲ. ಬದಲಾಗಿ ಅವರ ಪ್ರತಿಭೆ, ಪಾತ್ರವನ್ನು ಜೀವಿಸುವ ಪರಿ ಕಂಡು ಬೆರಗಾಗಿ ಬಂಡವಾಳ ಹೂಡಿದ್ದೇನೆ, ಅವರೊಬ್ಬ ನಟ ಎನ್ನುವುದಕ್ಕಿಂತ ಫರ್ಮಾರ್‍ಮರ್ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹಿರಿಯ ಕಲಾವಿದೆ ಶೈಲಶ್ರೀ ಧರ್ಮೇಂದ್ರ ಅರಸ್ ಬಾಯಿ ಬಡಕಿ ಹೆಂಡತಿ ಪಾತ್ರ. ಗಂಡ ಸೈಲೆಂಟ್ ಎನ್ನುವ ಕಾರಣಕ್ಕೆ ಬಾಯಿ ಬಡಕಿಯೋ ಅಥವಾ ನಾನು ಬಾಯಿ ಬಡಕಿ ಎನ್ನುವ ಕಾರಣಕ್ಕೆ ಗಂಡ ಸೈಲಂಟೋ ಪಾತ್ರ ಚೆನ್ನಾಗಿ ಮೂಡಿ ಬಂದಿದೆ. ಚಿತ್ರ ನೋಡಿ ಹರಸಿ ಎಂದು ಕೇಳಿಕೊಂಡರು.
ಚಿತ್ರಕ್ಕೆ ಸಂಭಾಷಣೆ ಬರೆದಿರುವ ಹಿರಿಯ ಕಲಾವಿದ ಸುಂದರ್ ವೀಣಾ, ಮೂರು ವರ್ಷನ್‍ನಲ್ಲಿ ಸಂಭಾಷಣೆ ಬರೆದಿದ್ದೇನೆ. ಜೊತೆಗೆ ಚಿತ್ರೀಕರಣ ನಡೆಯುತ್ತಿದ್ದ ಸ್ಥಳ ಮತ್ತು ಪರಿಸರದ ಭಾಷೆಯನ್ನು ಒಗ್ಗಿಸಿಕೊಂಡು ಸಂಭಾಷಣೆ ಬರೆದಿದ್ದೇನೆ. ರಮೇಶ್ ಪಂಡಿತ್ ಬಹುಕಾಲದ ಗೆಳೆಯ. ಆತನನ್ನು ಸುಧೀರ್ಘ ಕಾಲದಿಂದ ಬಲ್ಲವನಾಗಿದ್ದರಿಂದ ಮಾತು ಬರೆಯಲು ಸಹಕಾರಿಯಾಯಿತು. ನನ್ನ ಸಂಭಾವನೆಯ ಮುಕ್ಕಾಲು ಭಾಗವನ್ನು ಶೈಲಶ್ರೀ ಅವರ ಪಾತ್ರಕ್ಕೆ ಖರ್ಚು ಮಾಡಿದ್ದೇನೆ. ಚಿತ್ರ ಚೆನ್ನಾಗಿ ಮೂಡಿ ಬಂದಿದೆ ಎಲ್ಲರ ಸಹಕಾರವಿರಲಿ ಎಂದು ಕೇಳಿಕೊಂಡರು.
ಅಥರ್ವ ಪ್ರಕಾಶ್, ಛಾಯಾಗ್ರಾಹಕ ಪ್ರಸನ್ನ, ಹಿನ್ನೆಲೆ ಸಂಗೀತ ನೀಡುರುವ ಅಕ್ಷಯ್ ಹಾಗೂ ಸಂಕಲನಕಾರ ಕೀರ್ತಿರಾಜ್ . ಡಿ. “ಭಾವಪೂರ್ಣ” ದ ಬಗ್ಗೆ ಮಾಹಿತಿ ಹಂಚಿಕೊಂಡರು.