ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ ಹಾಡುಗಳು ಬಿಡುಗಡೆ
ಕನ್ನಡದಲ್ಲಿ ಈಗಾಗಲೇ ತರಹವೇವಾರಿ ಶೀರ್ಷಿಕೆ ಇರುವ ಚಿತ್ರಗಳು ಬಂದಿವೆ. ಆ ಸಾಲಿಗೆ ಈಗ ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ ಸಿನಿಮಾ ಕೂಡ ಸೇರಿದೆ. ಈಗಾಗಲೇ ಸಿನಿಮಾ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಬಿಡುಗಡೆಗೂ ಮುನ್ನ ಚಿತ್ರದ ಹಾಡುಗಳು ಅದ್ಧೂರಿಯಾಗಿ ರಿಲೀಸ್ ಆಗಿವೆ.
ಆಡಿಯೋ ರಿಲೀಸ್ ವೇಳೆ ಅತಿಥಿಯಾಗಿ ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ರವರು ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿ ನೂತನ ಅಧ್ಯಕ್ಷರು ಹಾಗೂ ಕನ್ನಡ ಚಲನಚಿತ್ರದ ಹಿರಿಯ ಛಾಯಾಗ್ರಾಹಕ ಅಶೋಕ್ ಕಶ್ಯಪ್ ಆಗಮಿಸಿ ಹಾಡು ರಿಲೀಸ್ ಮಾಡಿ ತಂಡಕ್ಕೆ ಶುಭ ಕೋರಿದರು.
ಹಿರಿಯ ಛಾಯಾಗ್ರಾಹ ಅಶೋಕ್ ಕಶ್ಯಪ್ ಮಾತನಾಡಿ, ” ಮಲೆನಾಡಿನ ಸೌಂದರ್ಯಕ್ಕೆ ತಾನು ಬೆರಗಾಗಿ, ಅಲ್ಲೇ ಹಲವು ವರ್ಷಗಳ ಕಾಲ ಅಲ್ಲೇ ಇದ್ದು ಅಲ್ಲಿಯ ಭಾಷೆ – ಸಂಸ್ಕೃತಿಯ ಬಗ್ಗೆ ಮಾರು ಹೋಗಿದ್ದೆ, ಈಗ ಈ ಸಿನೆಮಾ ಮತ್ತೆ ತನ್ನನ್ನು ಅಲ್ಲಿಗೆ ಕರೆದುಕೊಂಡು ಹೋಗಿದೆ, ಒಬ್ಬ ಫೋಟೋಗ್ರಾಫರ್ ಜೀವನದ ಬಗ್ಗೆ ಇದುವರೆಗೆ ಬರದ ಕಥೆ ಇಲ್ಲಿದೆ. ಒಂದೊಂದು ಫ್ರೇಮ್ ಕೂಡ ಅದ್ಭುತವಾಗಿ ಮೂಡಿ ಬಂದಿದೆ, ಚಿತ್ರಕ್ಕೆ ಗೆಲುವು ಸಿಗಲಿ ಎಂದು ಶುಭ ಹಾರೈಸಿದರು.
ವಿಜಯ ರಾಘವೇಂದ್ರ ಮಾತನಾಡಿ, “ಊರು ಕಥೆಯ ಬೇರು, ಒಂದು ಊರಿನಲ್ಲಿ ಹಲವು ತರಹದ ಕಥೆ ಇರೋದು ಸಹಜ. ಅದು ಹೃದಯದಿಂದ ಹುಟ್ಟೋ ಕಥೆಯಾಗಿ ಹೊರಬರುತ್ತೆ, ಅಂತಹ ಕಥೆಗಳು ಸೋತಿರೋ ಉದಾರಹಣೆ ತುಂಬಾ ಕಡಿಮೆ, ಇಂತಹ ಸಿನಿಮಾವನ್ನು ಜನರು ಇಷ್ಟ ಪಡುತ್ತಾರೆ, ಈಗಿನ ಸಿನೆಮಾ ನೋಡೋ ಮಂದಿ ಇದನ್ನೇ ಎದುರು ನೋಡುತ್ತಿದ್ದಾರೆ, ಈ ತಂಡದ ಜೊತೆ ನಾನು ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ, ನಾನೊಬ್ಬ ಕಲಾವಿದನಾಗಿ ಈ ಸಿನೆಮಾ ನೋಡಿ ಅಂತ ಹೇಳಲ್ಲ ಒಬ್ಬ ಪ್ರೇಕ್ಷಕನಾಗಿ ಈ ಸಿನಿಮಾ ನಾನು ನೋಡ್ತೀನಿ ನೀವು ನೋಡಿ ” ಎಂದರು.
ನಿರ್ಮಾಪಕ ವೆಂಕಟೇಶ್ವರ ರಾವ್, ಬಳ್ಳಾರಿ ಮೊದಲ ಸಲ ಸೃಜನ ಪ್ರೊಡಕ್ಷನ್ ಅಡಿ ಸಿನಿಮಾ ನಿರ್ಮಿಸಿದ್ದಾರೆ. ಅವರು,
“ಹಲವಾರು ಜನ ಸಿನಿಮಾ ಮಾಡಲು ಹೊರಟಾಗ ಬೇಡ ಎಂದು ತಲೆಕೆಡಿಸಲು ಪ್ರಯತ್ನ ಪಟ್ಟರು., ಆದರೆ ಈ ಸಿನೆಮಾ ಎಲ್ಲರ ಮನಸ್ಸನ್ನು ಗೆಲ್ಲೋದರಲ್ಲಿ ಯಾವುದೇ ಸಂಶಯ ಇಲ್ಲ,ಈ ಸಿನಿಮಾ ಮಾಡಿದಕ್ಕೆ ನನಗೆ ತೃಪ್ತಿ ಇದೆ ಎಂದು ತಿಳಿಸಿದರು, ಈ ವೇಳೆ ಚಿತ್ರತಂಡ ಚಿತ್ರೀಕರಣದ ಅನುಭವ ಹಂಚಿಕೊಂಡಿತು.
ನಿರ್ದೇಶಕ ರಾಜೇಶ್ ಧ್ರುವ ಮಾತನಾಡಿ, “23 ದಿನ ಮಳೆಯಲ್ಲೇ ಈ ಸಿನೆಮಾ ಚಿತ್ರೀಕರಣ ಮಾಡಲಾಗಿದ್ದು, ಕೇವಲ 5 ತಿಂಗಳಲ್ಲಿ ತೆರೆಗೆ ತರಲು ಸಜ್ಜು ಮಾಡಿದ್ದೇವೆ, ಯಾವುದೇ ಸಿನಿಮಾ ಇಟ್ಟುಕೊಂಡು ಹಳೆಯದಾದಷ್ಟು ಅದರ ಸಾರ ಹೊರಟು ಹೋಗುತ್ತೆ, ನನ್ನ ಊರಿನಲ್ಲಿ ಅನುಭವಕ್ಕೆ ಬಂದ ಹಲವು ಅನುಭವನ್ನು, ಭಾಷೆಯನ್ನು ಈ ಸಿನೆಮಾದಲ್ಲಿ ಬಳಸಿಕೊಂಡು ಎಲ್ಲ ಕಲಾವಿದರಿಗೆ 30 ದಿನಗಳ ಕಾಲ ಅಲ್ಲಿಯ ಭಾಷೆಯ ಅರಿವು ಮಾಡಿಸಿ ಪಾತ್ರಕ್ಕೆ ತಕ್ಕಂಗೆ ತಯಾರು ಮಾಡಲಾಗಿದ್ದು, ಎಲ್ಲ ಕಲಾವಿದರು ಹೊಸಬರೇ. ಆದರೆ ಎಲ್ಲಿಯೂ ಕೂಡ ನೋಡುಗರಿಗೆ ಅದರ ಅರಿವೇ ಆಗದಂತೆ ನೈಜವಾಗಿ ಅಭಿನಯ ಮಾಡಿಸಲಾಗಿದೆ ” ಎಂದರು.
ಸಿನಿಮಾ ಕಲಾವಿದರು ಹಾಗೂ ತಂತ್ರಜ್ಞರು ಈ ವೇಳೆ ಅನುಭವನ್ನು ಹಂಚಿಕೊಂಡರು, ಈ ಸಿನೆಮಾ ಜನವರಿಯಲ್ಲಿ ಬಿಡುಗಡೆಯಾಗಲಿದೆ.
ಕಿರುತೆರೆ ಟು ಬೆಳ್ಳಿತೆರೆ…
ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗ ಪ್ರಯೋಗತ್ಮಕ ಚಿತ್ರದ ಕಡೆ ಮುಖ ಮಾಡಿದೆ, ಅದರಲ್ಲಿ ಹಳ್ಳಿ ಸೊಗಡಿನ ಚಿತ್ರಗಳ ಸಂಖ್ಯೆ ಜಾಸ್ತಿ, ಆ ಸಾಲಿಗ “ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ” ಚಿತ್ರ ಕೂಡ ಸೇರಿದೆ. ಇಡೀ ಚಿತ್ರ ಶಿರಸಿ, ಯಲ್ಲಾಪುರ, ಹೊನ್ನಾವರ ಸುತ್ತ ಮುತ್ತ ಚಿತ್ರೀಕರಣ ವಾಗಿದೆ. ಅಲ್ಲಿಯ ಸ್ಥಳೀಯ ಪ್ರತಿಭೆಗಳು ಕಾಣಿಸಿಕೊಂಡಿವೆ.
ಈ ಚಿತ್ರದ ವಿಶೇಷತೆ ಅಂದರೆ, ಬಳಸಿರುವ ಉತ್ತರ ಕನ್ನಡ ಭಾಷೆ. ಕಥೆ ಬಗ್ಗೆ ಹೇಳುವುದಾದರೆ, ಒಬ್ಬ ಫೋಟೋಗ್ರಾಫರ್ ಹಾಗೂ ಫೋಟೋ ಸ್ಟುಡಿಯೋ ನಡುವಿನ ಭಾವನಾತ್ಮಕ ಸಂಬಂಧ ಚಿತ್ರದ ಹೈಲೈಟ್. ಜೊತೆಗೊಂದು ನವಿರಾದ ಲವ್ ಸ್ಟೋರಿ.
ನಿರ್ದೇಶಕರಾಗಿ ಹಾಗೂ ಮುಖ್ಯ ಪಾತ್ರದಲ್ಲಿ ಕಿರುತೆರೆಯ 6 ವರ್ಷಗಳ ಕಾಲ ಸಂಚಲನ ಮೂಡಿಸಿದ್ದ ನಟ ರಾಜೇಶ್ ಧ್ರುವ ಇಲ್ಲಿದ್ದಾರೆ. ಉಳಿದಂತೆ ರವಿ ಸಾಲಿಯಾನ್, ರಾಧಿಕಾ ಅಚ್ಯುತ್ ರಾವ್, ಸಂಪತ್ ಜೆ ರಾಮ್, ಕಾಮಿಡಿ ಕಿಲಾಡಿಗಳು 4 ಖ್ಯಾತಿಯ ಶುಭಲಕ್ಷ್ಮಿ, ಕನ್ಯಾಕುಮಾರಿ ಧಾರವಾಹಿ ಖ್ಯಾತಿಯ ನಕುಲ್ ಶರ್ಮ, ರಕ್ಷಿತ್, ಬಿಗ್ ಬಾಸ್ 4 ಖ್ಯಾತಿಯ ರವಿ ಮೂರೂರು ಹಾಗೂ ವಿಶೇಷ ಪಾತ್ರದಲ್ಲಿ ಕಿರುತೆರೆ ನಟ ಶಿಶಿರ್ ಹಾಗೂ ಹಲವಾರು ಹೊಸ ಕಲಾವಿದರು ಕಾಣಿಸಿಕೊಂಡಿದ್ದಾರೆ.
ಕಥೆ – ಚಿತ್ರಕಥೆಗೆ ಅಭಿಷೇಕ್ ಶಿರಸಿ ಪಲ ಹಾಗೂ ಪೃಥ್ವಿಕಾಂತ ಪೆನ್ನು ಹಿಡಿದಿದ್ದಾರೆ. ಅಜಿತ್ ಬೊಪ್ಪನಳ್ಳಿ ಸಂಭಾಷಣೆ ಬರೆದಿದ್ದಾರೆ.
ಮನೋಜ್ ಸಿನಿ ಸ್ಟುಡಿಯೋ ಛಾಯಾಗ್ರಹಣವಿದೆ. ಗಣಪತಿ ಭಟ್ ಸಂಕಲನ ಮಾಡಿದ್ದಾರೆ. ಚಿತ್ರದಲ್ಲಿ 2 ಹಾಡುಗಳಿಗೆ ಶ್ರೀರಾಮ್ ಗಂಧರ್ವ ಸಂಗೀತ ನೀಡಿದ್ದಾರೆ ಕಾಂತಾರ ಖ್ಯಾತಿಯ ಪ್ರಮೋದ್ ಮರವಂತೆ ಸಾಹಿತ್ಯ ಇದೆ, ಸ್ವಸ್ತಿಕ್ ಕಾರೆಕಾಡ್ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ.