Balaramana Dinagalu Movie Review: ಬದುಕು ಕಟ್ಟಿಕೊಳ್ಳಲು ಬಂದು ಬದುಕನ್ನೇ ಕಳೆದುಕೊಂಡ ಯುವಕನ ಕಥೆ
ಚಿತ್ರ : ಬಲರಾಮನ ದಿನಗಳು
ನಿರ್ದೇಶನ :ಕೆ.ಎಂ ಚೈತನ್ಯ
ತಾರಾಗಣ: ವಿನೋದ್ ಪ್ರಭಾಕರ್, ಪ್ರಿಯಾ ಆನಂದ್, ಆಶಿಶ್ ವಿದ್ಯಾರ್ಥಿ, ಅವಿನಾಶ್, ಅತುಲ್ ಕುಲಕರ್ಣಿ, ರಮೇಶ್ ಇಂದಿರಾ, ವಿನಯ್ ಗೌಡ, ಆದಿತ್ಯ ಆಶ್ರೀ, ಸಿದ್ಲಿಂಗು ಶ್ರೀಧರ್ ಮತ್ತಿತರರು
ರೇಟಿಂಗ್ : *** 3.5/ 5
ರೌಡಿಸಂ ಮತ್ತು ಭೂಗತ ಜಗತ್ತಿನ ಆಳ್ವಿಕೆ ನಿರ್ಧಿಷ್ಠ ಕಾಲಘಟ್ಟಕ್ಕೆ ಮಾತ್ರ ಸೀಮಿತ, ಅದು ಹೆಚ್ಚು ದಿನ ಉಳಿಯುವುದಿಲ್ಲ, ಹೆಸರು ಹಣ, ಖ್ಯಾತಿ ಪಡೆಯಲು ಜೊತೆಯಲ್ಲಿದ್ದವೇ ಮಸಲತ್ತು ಮಾಡ್ತಾರೆ ಎನ್ನುವುದನ್ನು ಹಿಂದಿನಿಂದ ನೋಡಿಕೊಂಡು ಬಂದಿರುವ ವಾಸ್ತವ. ಅಂತಹುದೇ ಕಥೆ ಆಧರಿಸಿದ ಚಿತ್ರ “ ಬಲರಾಮನ ಆ ದಿನಗಳು”..
ಬೆಂಗಳೂರಿನ ಭೂಗತ ಜಗತ್ತಿನ ಒಳ-ಹೊರಗಿನ ಕಥೆನ್ನು ನೈಜವಾಗಿ ತೆರೆಯ ಮೇಲೆ “ ಆ ದಿನಗಳು” ಚಿತ್ರದ ಮೂಲಕ ದಶಕಗಳ ಹಿಂದೆ ಕಟ್ಟಿಕೊಟ್ಟಿದ್ದ ನಿರ್ದೇಶಕ ಕೆ,ಎಂ ಚೈತನ್ಯ, ಈಗ ಆ ಕಾಲಘಟ್ಟದಲ್ಲಿದ್ದ ಮತ್ತೊಬ್ಬ ರೌಡಿಯ ಕಥೆಯನ್ನು ತೆರೆಗೆ ಕಟ್ಟಿಕೊಟ್ಟಿದ್ದಾರೆ ಅದುವೇ ಬಲರಾಮನ ದಿನಗಳು
ಖಾದಿ, ಖಾವಿ, ಖಾಕಿ ಕೈಬಿಟ್ಟಾದ ನಾವು ನಿಮ್ಮ ಕೈಹಿಡಿಯುತ್ತೇವೆ ಎನ್ನುವ ಭರವಸೆಯನ್ನು ರೌಡಿಸಂ ಮೂಲಕ ನೀಡಿರುವ ನಿರ್ಧೇಶಕರು, ಬೆಂಗಳೂರು ಭೂಗತ ಜಗತ್ತು ಆಳಿದ ಜಯರಾಜ್, ಕೊತ್ವಾಲ್ ರಾಮಚಂದ್ರ ಮತ್ತು ಮುತ್ತಪ್ಪ ರೈ ಘಟನೆಗಳನ್ನು ಮುಂದಿಟ್ಟುಕೊಂಡು ಬಲರಾಮನ ಜೀವನದ ಕಥೆಯನ್ನು ಪ್ರೇಕ್ಷಕರ ಮುಂದಿಡಲಾಗಿದೆ, ಬದುಕು ಕಟ್ಟಿಕೊಳ್ಳಲು ಹಳ್ಳಿ ಬಿಟ್ಟು ನಗರಕ್ಕೆ ಬಂದ ಹುಡುಗ ರೌಡಿಸಂ ಸೆಳೆತಕ್ಕೆ ಸಿಲುಕಿ ಬದುಕು ಕಳೆದುಕೊಂಡ ಮನಮಿಡಿಯುವ ಕಥೆ ಇದು.
ಬುದ್ದಿಬಂದಾಗಿನಿಂದ ಮಾತಿಗಿಂತ ಹೆಚ್ಚಾಗಿ ಕೈ ನಲ್ಲಿ ಮಾತನಾಡುದ ಜಾಯಮಾನದ ಬಲರಾಮ ( ವಿನೋದ್ ಪ್ರಭಾಕರ್)ಗೆ ಅನ್ಯಾಯ ಕಂಡರೆ ಸಹಿಸದ, ಜನರ ಕಷ್ಟಗಳಿಗೆ ಮರುಗುವ ವ್ಯಕ್ತಿತ್ವ, ನಿವೃತ್ತ ಕರ್ನಲ್ ಪುತ್ರಿ ರೇವತಿ ( ಪ್ರಿಯಾ ಆನಂದ್) ಈತನ ನಡೆ ನುಡಿಗೆ ಮನ ಸೋಲುತ್ತಾಳೆ. ಆಚಾನಕ್ ಆಗಿ ರೌಡಿಯೊಬ್ಬನ್ನು ಹತ್ಯೆ ಮಾಡಿಬಿಡ್ತಾನೆ,
ರೌಡಿಸಂ ಗಂಧ ಗಾಳಿ ಗೊತ್ತಿಲ್ಲದ ಬಲರಾಮ ಭೂಗತ ಲೋಕದ ಒಳಹೊಕ್ಕುವ ಆತ ಆಗಿನ ಕಾಲದಲ್ಲಿ ಬೆಂಗಳೂರು ಆಳಿದ ಗ್ಯಾಂಗ್ ಅನ್ನೇ ಎದುರು ಹಾಕಿಕೊಂಡು ಯಶಸ್ಸು ಗಳಿಸಿ ತಾನು ಬೆಳೆಸಿದ ಹುಡುಗರಿಂದಲೇ ಧಾರುಣ ಸಾವನ್ನಪ್ಪಿದ ಕಥೆ, ಅದು ಹೇಗಾಯಿತು, ಯಾರು ಮಾಡಿದರು ಎನ್ನುವುದನ್ನು ತೆರೆ ಮೇಲೆ ನೋಡಿದರೆ ಚೆನ್ನ.
ನಿರ್ದೇಶಕ ಕೆ,ಎಂ ಚೈತನ್ಯ, 1985ರ ಭೂಗತ ಜಗತ್ತಿನ ಕಥೆಯಾದರೂ ಹೆಚ್ಚಿನ ರಕ್ತಪಾತಕ್ಕೆ ಆಸ್ಪದ ನೀಡದೆ, ಪದ ಪ್ರಯೋಗದಲ್ಲಿ ಎಲ್ಲಿಯೂ ಎಲ್ಲೆ ದಾಟದ ಇತಿ ಮಿತಿಯಲ್ಲಿ ಭಾಷೆ ಬಳಸುವ ಮೂಲಕ ರೌಡಿಸಂ ಚಿತ್ರವನ್ನು ಎಲ್ಲರೂ ನೋಡಬಹುದು ಎನ್ನುವುದನ್ನು ನಿರೂಪಿಸಿದ್ದಾರೆ. ಕೆಲವು ಕಡೆ ಚಿತ್ರವನ್ನು ಇನ್ನೊಂದಿಷ್ಟು ಎಡಿಟ್ ಮಾಡಿದ್ದರೆ ಚಿತ್ರದ ವೇಗೆ ಮತ್ತಷ್ಟು ಹೆಚ್ಚುತ್ತಿತ್ತು,
ನಾಯಕ ವಿನೋದ್ ಪ್ರಭಾಕರ್, ಇಡೀ ತೆರೆಯನ್ನು ಆವರಿಸಿಕೊಂಡಿದ್ದಾರೆ. ರಗಡ್ ಲುಕ್ನಲ್ಲಿ ಮಾದೇವ ಚಿತ್ರದ ನಂತರ ಮತ್ತೊಮ್ಮೆ ಮನಗೆದ್ದಿದ್ದಾರೆ. ನಟನೆಯಲ್ಲಿ ಎಲ್ಲಿಯೂ ಅತಿ ಅನ್ನಿಸಿಲ್ಲ ಪಾತ್ರಕ್ಕೆ ಎಷ್ಟು ಬೇಕೋ ಅಷ್ಟು ಮಾಡಿದ್ಧಾರೆ.
ನಟಿ ಪ್ರಿಯಾ ಆನಂದ್ ಅವರ ಪಾತ್ರಕ್ಕೆ ಹೆಚ್ಚಿನ ಮಹತ್ವವಿಲ್ಲದಿದ್ದರೆ ಬಲರಾಮನ ಪ್ರೇಯಸಿ ಹಾಗು ಹೆಂಡತಿಯಾಗಿ ಗಮನ ಸೆಳೆದಿದ್ದಾರೆ, ಇನ್ನುಳಿದಂತೆ ಆಶಿಶ್ ವಿದ್ಯಾರ್ಥಿ, ಅವಿನಾಶ್, ಅತುಲ್ ಕುಲಕರ್ಣಿ, ರಮೇಶ್ ಇಂದಿರಾ, ವಿನಯ್ ಗೌಡ, ಆದಿತ್ಯ ಆಶ್ರೀ, ಸಿದ್ಲಿಂಗು ಶ್ರೀಧರ್, ವಿಶ್ವ ಮತ್ತಿತರರು ಪಾತ್ರದ ಮೂಲಕ ಗಮನ ಸೆಳೆದಿದ್ದಾರೆ.
ಆ ದಿನಗಳು ಚಿತ್ರವನ್ನು ಮನಸ್ಸಿನಲ್ಲಿಟ್ಟುಕೊಳ್ಳದೆ ಬಲರಾಮನ ದಿನಗಳು ಚಿತ್ರ ನೋಡಿದರೆ ಜನರಿಗೆ ಹೊಸತನದ ಪಾತ್ರಗಳು ಕಥೆ ಇಷ್ಟವಾಗಲಿದೆ, ಆ ದಿನಗಳ ಗುಂಗಿನಲ್ಲಿ ಸಿನಿಮಾ ನೋಡಿದವರಿಗೆ ಚಿತ್ರ ರುಚಿಸದು. ಅಲ್ಲಿ ಇಳಯರಾಜ ಸಂಗೀತಮ ಹಾಡು ಹಿನ್ನೆಲೆ ಸಂಗೀತ ಇಂದಿಗೂ ಮತ್ತೆ ಮತ್ತೆ ನೋಡುವಂತೆ ಮಾಡುತ್ತದೆ, ಬಲರಾಮನ ದಿನಗಳು ಚಿತ್ರದಲ್ಲಿ ಸಂತೋಷ್ ನಾರಾಯಣ್ ಸಂಗೀತ ಒಂದಷ್ಟು ಅಬ್ಬರ ಮಾಡಿದೆ.
ರೇಟಿಂಗ್- ಅಷ್ಟಕಷ್ಟೆ- * / ನೋಡಬಹುದು – ** / ಚೆನ್ನಾಗಿದೆ- *** / ಉತ್ತಮ – ****/ ಅತ್ಯುತ್ತಮ – *****

