Actor-director Kasaragodu Chinna has been selected for the "Kalakar" award

“ಕಲಾಕಾರ್” ಪುರಸ್ಕಾರಕ್ಕೆ ನಟ,ನಿರ್ದೇಶಕ ಕಾಸರಗೋಡು ಚಿನ್ನಾ ಆಯ್ಕೆ - CineNewsKannada.com

“ಕಲಾಕಾರ್” ಪುರಸ್ಕಾರಕ್ಕೆ ನಟ,ನಿರ್ದೇಶಕ ಕಾಸರಗೋಡು ಚಿನ್ನಾ ಆಯ್ಕೆ

ಕುಂದಾಪುರದ ಕಾರ್ವಾಲ್ ಮನೆತನ ಹಾಗೂ ಮಾಂಡ್ ಸೊಭಾಣ್ ಜಂಟಿಯಾಗಿ, ಕೊಂಕಣಿ ಕಲೆ, ಸಂಸ್ಕೃತಿಗೆ ಮಹತ್ತರ ಕೊಡುಗೆ ನೀಡಿದ ಕಲಾವಿದರನ್ನು ಗೌರವಿಸಲು ನೀಡುವ 21 ನೇ ವರ್ಷದ ಕಲಾಕಾರ್ ಪುರಸ್ಕಾರಕ್ಕೆ ಕಾಸರಗೋಡು ಚಿನ್ನಾ ಇವರನ್ನು ಆಯ್ಕೆ ಮಾಡಲಾಗಿದೆ.

ನವೆಂಬರ್ 2 ರಂದು ಶಕ್ತಿನಗರದ ಕಲಾಂಗಣದಲ್ಲಿ ಸಂಜೆ 6.00 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಮಂಗಳೂರು ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್ ರೂ. 50 ಸಾವಿರ ನಗದು ಒಳಗೊಂಡ ಪುರಸ್ಕಾರ ಪ್ರದಾನ ಮಾಡಲಿರುವರು. ಭಾಷಾ ತಜ್ಞ ಡೊ ಪ್ರತಾಪ್ ನಾಯ್ಕ್, ಮತ್ತು ಮಸ್ಕತ್ ನಲ್ಲಿರುವ ಉದ್ಯಮಿ ಹಾಗೂ ಶ್ರೇಷ್ಟ ಕಲಾ ಪ್ರೋತ್ಸಾಹಕ ಸ್ಟ್ಯಾನ್ಲಿ ಫೆರ್ನಾಂಡಿಸ್ (ದಾಟ್ಟು) ಗೌರವ ಅತಿಥಿಗಳಾಗಿ ಉಪಸ್ಥಿತರಿರುವರು. ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಜೆ. ಪಿಂಟೊ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ

ಶ್ರೀನಿವಾಸ ರಾವ್ ಎಸ್, ಕಾಸರಗೋಡು ಚಿನ್ನಾ ಎಂದು ರಂಗಲೋಕದಲ್ಲಿ ಪ್ರಸಿದ್ಧರು. ನಟನೆಯಲ್ಲಿ ಚಿನ್ನದ ಪದಕದೊಡನೆ ಡಿ ಎಫ್ ಎ ಪದವಿ ಪಡೆದಿದ್ದಾರೆ. 1969 ರಲ್ಲಿ ರಂಗ ಪ್ರವೇಶ ಮಾಡಿದ ಇವರು ಕೊಂಕಣಿ, ಕನ್ನಡ, ತುಳು, ಮಲಯಾಳಂ ಹಾಗೂ ಇಂಗ್ಲೀಷಿನ 400ಕ್ಕೂ ಮಿಕ್ಕಿ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಹಲವು ನಾಟಕಗಳಿಗೆ ನಿರ್ದೇಶನ ನೀಡಿದ್ದಾರೆ. ಭಾಷಾಂತರ ಮಾಡಿದ್ದಾರೆ.

#Kasaragoduchinna

ಆಕಾಶವಾಣಿಯಲ್ಲಿ, ದೂರದರ್ಶನದಲ್ಲಿ ಪ್ರತಿಭೆ ಮೆರೆದಿದ್ದಾರೆ. ಲಾರಿ ನಾಟಕ, ಗೀತ ಸಂಗೀತ ರಥ, ಯಕ್ಷತೇರು, ಕನ್ನಡ ಸ್ವರ, ಮೂಕಾಭಿನಯ ಇತ್ಯಾದಿ ಪ್ರಯೋಗಗಳ ನೂರಾರು ಪ್ರದರ್ಶನಗಳನ್ನು ಮಾಡಿದ್ದಾರೆ. ಸಿನಿಮಾ ನಿರ್ದೇಶನ ಹಾಗೂ ನಟನೆಯಲ್ಲೂ ಕೈಯಾಡಿಸಿದ್ದಾರೆ. ಅವರು ನಿರ್ದೇಶಿಸಿದ ಉಜ್ವಾಡು ಕೊಂಕಣಿ ಚಲನಚಿತ್ರಕ್ಕೆ 2011 ರ ಕರ್ನಾಟಕ ರಾಜ್ಯ ಉತ್ತಮ ಪ್ರಾದೇಶಿಕ ಚಲನಚಿತ್ರದ ಗೌರವ ಲಭಿಸಿದೆ.

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಹಲವು ಕಾರ್ಯಕ್ರಮಗಳನ್ನು ಸಂಘಟಿಸಿದ್ದಾರೆ. ಘರ್ ಘರ್ ಕೊಂಕಣಿ ಎಂಬ ವಿನೂತನ ಕಾರ್ಯಕ್ರಮದ ಮೂಲಕ ಕೊಂಕಣಿಯ ಎಲ್ಲಾ ಸಮುದಾಯಗಳ ನಡುವೆ ಭಾಷಾಭಿಮಾನ ಮೂಡಿಸಿದ್ದಾರೆ. ರಂಗ ಚಿನ್ನಾರಿ ಟ್ರಸ್ಟ್ ಮೂಲಕ ಹಲವು ಸಾಂಸ್ಕೃತಿಕ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ. ಸಾಹಿತ್ಯಕ್ಕೂ ಕೊಡುಗೆ ನೀಡಿದ್ದಾರೆ. ಅವರ ತೀಸ್ ಕಾಣಿಯೊ ಅನುವಾದ ಸಂಗ್ರಹಕ್ಕೆ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಪುಸ್ತಕ ಪುರಸ್ಕಾರ ಲಭಿಸಿದೆ. ಕೊಂಕಣಿ ಅಕಾಡೆಮಿಯ ಗೌರವ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ರಿ, ಕೇರಳ ರಾಜ್ಯೋತ್ಸವ ಪ್ರಶಸ್ತಿ ಹಾಗೂ ನಾಟಕ ರಂಗದಲ್ಲಿ ರಾಜ್ಯ ರಾಷ್ಟ್ರ ಮಟ್ಟದ ಪ್ರಶಸ್ತಿಗಳೊಡನೆ ಹಲವಾರು ಸನ್ಮಾನಗಳು ದೇಶ ವಿದೇಶಗಳಲ್ಲಿ ಲಭಿಸಿವೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin