“ರೋಲೆಕ್ಸ್” ಜೊತೆ ಕೈ ಜೋಡಿಸಿದ ನಟ ವಿನೋದ್ ಪ್ರಭಾಕರ್
ಆಂದ್ರಪ್ರದೇಶದ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಅಂಬಟಿ ಮಧು ಮೋಹನಕೃಷ್ಣ ನಿರ್ಮಾಣ ಮಾಡುತ್ತಿರುವ ಮೊದಲ ಚಿತ್ರ “ರೋಲೆಕ್ಸ್” ಚಿತ್ರಕ್ಕೆ “ಬಿಲ್ ಗೇಟ್ಸ್” ಚಿತ್ರವನ್ನು ನಿರ್ದೇಶನ ಮಾಡಿದ್ದ ಶ್ರೀನಿವಾಸ್ ಮಂಡ್ಯ ಚಿತ್ರ ನಿರ್ದೇಶಿಸುತ್ತಿದ್ದು, ನಾಯಕನಾಗಿ ಕೋಮಲ್ ಕುಮಾರ್ ನಟಿಸುತ್ತಿದ್ದಾರೆ.

ಕೋಮಲ್ ಕುಮಾರ್ “ರೋಲೆಕ್ಸ್” ಚಿತ್ರದಲ್ಲಿ ಡಿಫರೆಂಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಸೋನಾಲ್ ಮೊಂತೆರೊ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಚಿತ್ರದ ಮತ್ತೊಂದು ವಿಶೇಷವೆಂದರೆ ಅಮೋಘ ಅಭಿನಯದ ಮೂಲಕ ಕನ್ನಡಿಗರ ಮನ ಗೆದ್ದಿರುವ ನಟ ವಿನೋದ್ ಪ್ರಭಾಕರ್ ಅವರು ಚಿತ್ರದ ವಿಶೇಷಪಾತ್ರದಲ್ಲಿ ಅಭಿನಯಿಸಿದ್ದಾರೆ.
ಈವರೆಗೂ ಮಾಡಿರದ ಪಾತ್ರದಲ್ಲಿ ವಿನೋದ್ ಪ್ರಭಾಕರ್ ಕಾಣಿಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗದ ಜನಪ್ರಿಯ ನಟರಾದ ಕೋಮಲ್ ಕುಮಾರ್ ಹಾಗೂ ವಿನೋದ್ ಪ್ರಭಾಕರ್ ಅವರನ್ನು ಒಟ್ಟಾಗಿ ತೆರೆಯ ಮೇಲೆ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ವಿಶೇಷಪಾತ್ರದಲ್ಲಿ ಅಭಿನಯಿಸಿರುವ ವಿನೋದ್ ಪ್ರಭಾಕರ್ ಅವರಿಗೆ “ರೋಲೆಕ್ಸ್” ಚಿತ್ರತಂಡ ಧನ್ಯವಾದ ತಿಳಿಸಿದೆ. ಕಾಮಿಡಿಯೊಂದಿಗೆ ಕೌಟುಂಬಿಕ ಕಥಾಹಂದರವನ್ನೂ ಹೊಂದಿರುವ ಈ ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣವಾಗಿದೆ.

ಕೋಮಲ್ ಹಿಂದಿನ ಚಿತ್ರಗಳಿಗಿಂತ ವಿಭಿನ್ನ ಗೆಟಪ್ ನಲ್ಲಿ “ರೋಲೆಕ್ಸ್” ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿನೋದ್ ಪ್ರಭಾಕರ್, ಸೋನಾಲ್ ಮೊಂತೆರೊ, ಅಚ್ಯುತಕುಮಾರ್, ನವೀನ್ ಪಡೀಲ್, ಅರುಣ ಬಾಲರಾಜ್ ಪ್ರಮುಖಪಾತ್ರದಲ್ಲಿ ನಟಿಸಿದ್ದಾರೆ.

ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಜೆಸ್ಸಿ ಗಿಫ್ಟ್ ಸಂಗೀತ ಸಂಯೋಜಿಸಿದ್ದಾರೆ. ಡಾ.ವಿ.ನಾಗೇಂದ್ರಪ್ರಸಾದ್, ಕವಿರಾಜ್, ರಾಜೇಶ್ ವರ್ಮ ಹಾಗೂ ಕಿನ್ನಾಳ್ ರಾಜ್ ಗೀತರಚನೆ ಮಾಡಿದ್ದಾರೆ. ರಾಕೇಶ್ ಸಿ ತಿಲಕ್ ಛಾಯಾಗ್ರಹಣ, ಅರವಿಂದ್ ರಾಜ್ ಸಂಕಲನ, ಯೋಗಾನಂದ್ ಸಾಹಸ ನಿರ್ದೇಶನ ಹಾಗೂ ಕಲೈ – ಮುರಳಿ ನೃತ್ಯ ನಿರ್ದೇಶನವಿರುವ “ರೋಲೇಕ್ಸ್” ಚಿತ್ರಕ್ಕೆ ಮುರಳಿಕೃಷ್ಣ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ..


