ನಟ ಪ್ರಮೋದ್ ಶೆಟ್ಟಿ ನಟನೆಯ “ಶಭಾಷ್ ಬಡ್ಡಿಮಗ್ನೆ” ಟ್ರೈಲರ್ ಬಿಡುಗಡೆ
ಪೋಷಕ ಪಾತ್ರಗಳ ಮೂಲಕ ಮಿಂಚು ಹರಿಸಿ , ಖಳನಟನ ಪಾತ್ರಗಳಿಗೆ ಖದರ್ ತಂದುಕೊಟ್ಟ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ಕಲಾವಿದ ಪ್ರಮೋದ್ ಶೆಟ್ಟಿ ನಟನಾಗಿಯೂ ಸೈ ಎನಿಸಿಕೊಂಡವರು. ಇದೀಗ ಅವರ ಮುಂದಿನ ಚಿತ್ರ ” ಶಭಾಷ್ ಬಡ್ಡಿ ಮಗ್ನೆ” ಚಿತ್ರದ ಟ್ರೈಲರ್ ಮತ್ತು ಹಾಡು ಬಿಡುಡಡೆಯಾಗಿದ್ದು ಕುತೂಹಲ ಹೆಚ್ಚು ಮಾಡಿದೆ.

ನಾಯಕನಾಗಿ ಮರ ಸುತ್ತುವ ಪಾತ್ರಗಳಿಗಿಂತ ಹೆಚ್ಚಾಗಿ ಮನೆ ಮಂದಿ ಇಷ್ಟ ಪಡುವ ಮತ್ತು ಕಂಟೆಂಟ್ ಓರಿಯಂಟ್ ಸಿನಿಮಾ ಮಾಡಿ ಜನರಿಗೆ ಮತ್ತಷ್ಟು ಹತ್ತಿರವಾದವರು ಪ್ರಮೋದ್ ಶೆಟ್ಟಿ. ಈಗ ಮತ್ತೊಂದು ವಿಭಿನ್ನ ಕಥೆಯ ಮೂಲಕ ಇದೇ ತಿಂಗಳ ಕೊನೆಯ ವಾರ ಪ್ರೇಕ್ಷಕರ ಮನ ಗೆಲ್ಲಲು ಬರುತ್ತಿದ್ದಾರೆ.
ವರನಟ ಡಾ.ರಾಜ್‍ಕುಮಾರ್ ಅವರು ತಮ್ಮ ಚಿತ್ರದಲ್ಲಿ ಬಳಸುತ್ತಿದ್ದ ‘ಶಭಾಷ್ ಬಡ್ಡಿಮಗ್ನೆ’ ಈಗ ಸಿನಿಮಾದ ಶೀರ್ಷಿಕೆಯಾಗಿದೆ. ಟ್ರೇಲರ್ ಹಾಗೂ ಹಾಡುಗಳ ಬಿಡುಗಡೆಯಾಗಿದ್ದು ಗಮನ ಸೆಳೆದಿದೆ.
ಕಿಶನ್ ಪ್ರೊಡಕ್ಷನ್ ಅಡಿಯಲ್ಲಿ ಚೈತ್ರಾಪ್ರಕಾಶ್ ಬಂಡವಾಳ ಹೂಡಿದ್ದು ಬರವಣಿಗೆ, ಚಿತ್ರಕಥೆ, ಸಂಭಾಷಣೆ ಬರೆದಿರುವ ಬಿ.ಎಸ್.ರಾಜಶೇಖರ್ ಆಕ್ಷನ್‍ಕಟ್ ಹೇಳಿದ್ದಾರೆ. ಶಹಬ್ಬಾಸ್ ಬಡ್ಡಿ ಮಗ್ನೆ ಚಿತ್ರದ ಶೀರ್ಷಿಕೆಯಡಿ ‘ಅಂತ ಬಾಯ್ತುಂಬ ಹೋಗ್ಳೋದಾ ಇಲ್ಲಾ ತೆಗ್ಳೋದಾ’ ಎಂಬ ಕ್ಯಾಚಿ ಅಡಬರಹ ಇರಲಿದೆ.

ನಾಯಕ ಪ್ರಮೋದ್‍ಶೆಟ್ಟಿ ಮಾತನಾಡಿ ಇಲ್ಲಿಯತನಕ ಭ್ರಷ್ಟ, ಪ್ರಾಮಾಣಿಕ, ಮುಗ್ದ, ಖಳ ಪೋಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದೆ. ರಿಯಲ್‍ದಲ್ಲಿ ಎಂದಿಗೂ ಸುಮ್ಮನೆ ಕೂತವನಲ್ಲ. ಆದರೆ ರೀಲ್‍ದಲ್ಲಿ ಸೊಂಬೇರಿ ಪೋಲೀಸ್ ಆಫೀಸರ್ ಆಗಿ ಪಾತ್ರವನ್ನು ನಿಭಾಯಿಸಿದ್ದೇನೆ ಎಂದರು
ಛಾಯಾಗ್ರಾಹಕ ಅಣಜಿ ನಾಗರಾಜ್ ಬಗ್ಗೆ ಕೇಳಿದ್ದೆ. ಭೇಟಿಯಾಗಿರಲಿಲ್ಲ. ನಂತರ ನಿರ್ದೇಶಕರು ಹೇಳಿದ ಕತೆಯಲ್ಲಿ ಕುತೂಹಲಗಳು, ಹಾಸ್ಯ ತುಂಬಿಕೊಂಡಿತ್ತು. ಇಲ್ಲ ಎನ್ನಲು ಆಗಲಿಲ್ಲ. ಇಡೀ ಸಿನಿಮಾ ಠಾಣೆ ಸುತ್ತ ನಡೆಯುತ್ತದೆ. ಅಲ್ಲಿನ ಜನರು, ಸಿಬ್ಬಂದಿಯಿಂದ ನಿಷ್ಷ್ರಯೋಜಕನೆಂದು ಕರೆಸಿಕೊಂಡಿದ್ದ ನನಗೆ ಒಂದು ಕೇಸಿನಲ್ಲಿ ಜಯ ಸಿಗುತ್ತದೆ. ಅದು ಏನು ಎಂಬುದನ್ನು ತಿಳಿಯಲು ಚಿತ್ರ ನೋಡಬೇಕು. ಶುರುವಿನಿಂದ ಕೊನೆವರೆಗೂ ಉಸಿರಾಡಲು ಬಿಡದೆ ನಗಿಸುತ್ತಲೇ ಇರುತ್ತದೆ. ಅದೇ ಪ್ಲಸ್ ಪಾಯಿಂಟ್ ಎಂದು ಹೇಳಿದರು

ನಿರ್ದೇಶಕ ರಾಜಶೇಖರ್ ಮಾತನಾಡಿ 90ರ ದಶಕದಲ್ಲಿ ಪರಿಚಿತರೊಬ್ಬರು ಹೇಳಿದ ಘಟನೆಯ ಎಳೆಯನ್ನು ಚಿತ್ರರೂಪಕ್ಕೆ ತೆಗೆದುಕೊಳ್ಳಲಾಗಿದೆ. ಅದಕ್ಕಾಗಿ ಅಂದಿನ ಕಾಲಘಟ್ಟಕ್ಕೆ ಹೊಂದಿಕೊಂಡಂತ ಸ್ಥಳಗಳು ಮತ್ತು ಕಾಸ್ಟ್ಯೂಮ್‍ಗಳನ್ನು ಬಳಸಿರುವುದು ವಿಶೇಷ ಎಂದರು
ಶತಸೊಂಬೇರಿ ಪೋಲೀಸ್ ಅಧಿಕಾರಿಯೊಬ್ಬನ ಕತೆಯಾಗಿದೆ. ಆತನು ಕರ್ತವ್ಯಕ್ಕಿಂತ ವೈಯಕ್ತಿಕ ಬದುಕಿನಲ್ಲಿ ಹೆಚ್ಚು ಆಸಕ್ತಿಯನ್ನು ತೋರಿಸುತ್ತಾ ವೃತ್ತಿ ಬದುಕನ್ನು ಗಂಭೀರವಾಗಿ ತೆಗೆದುಕೊಂಡಿರುವುದಿಲ್ಲ. ಮುಂದೆ ಈತನ ಠಾಣಾ ವ್ಯಾಪ್ತಿಯಲ್ಲಿ ಅಪರಾಧವೊಂದು ನಡೆಯುತ್ತದೆ. ಅದನ್ನು ಹೇಗೆ ತನಿಖೆ ಮಾಡುತ್ತಾನೆ ಎಂಬುದನ್ನು ನೋಡುಗರಿಗೆ ಮನರಂಜನೆ ರೀತಿಯಲ್ಲಿ ಕಾಮಿಡಿ ಪಂಚಿಂಗ್ ಡೈಲಾಗ್‍ಗಳ ಮೂಲಕ ತೋರಿಸಲಾಗಿದೆ ಎಂದು ಹೇಳಿದರು
ಚಿತ್ರದ ಚಿತ್ರೀಕರಣಚನ್ನು ಚಿಕ್ಕಮಗಳೂರು, ಕಳಸ, ಹೊರನಾಡು ಹಾಗೆಯೇ ಎರಡು ಹಾಡನ್ನು ಬ್ಯಾಂಕಾಕ್‍ದಲ್ಲಿ ಚಿತ್ರೀಕರಿಸಲಾಗಿದೆ. ನಮ್ಮ ಕೆಲಸ ಮುಗಿದಿದೆ. ತಿಂಗಳಾಂತ್ಯಕ್ಕೆ ಚಿತ್ರ ತೆರೆಗೆ ಬರಲಿದ್ದು ಎಲ್ಲರ ಸಹಕಾರ ಮತ್ತು ಬೆಂಬಲ ಬೇಕು ಎಂದು ಕೇಳಿಕೊಂಡರು.

ನಿರ್ಮಾಪಕಿ ಚೈತ್ರಾಪ್ರಕಾಶ್ ಮಾತನಾಡಿ ಸಿನಿಮಾದಲ್ಲಿ ಹಾಸ್ಯ, ರೋಮಾನ್ಸ್, ಸಾಹಸ ಎಲ್ಲವು ಇರುವುದರಿಂದ ಬೋರ್ ಅನಿಸುವುದಿಲ್ಲ. ದಯವಿಟ್ಟು ನೀವುಗಳು ಚಿತ್ರಮಂದಿರಕ್ಕೆ ಬನ್ನಿ ಎಂದು ಮನವಿ ಮಾಡಿಕೊಂಡರು
ಪ್ರಮೋದ್‍ಶೆಟ್ಟಿ ನಾಯಕ. ಆದ್ಯಪ್ರಿಯಾ ನಾಯಕಿ. ರೀಲ್ಸ್ ಮಾಡುತ್ತಾ ಹೆಸರು ಮಾಡಿರುವ ಹಾಸನ ಮೂಲದ ಸಾಮ್ರಾಟ್ ಶೆಟ್ಟಿ ಮೊದಲ ಬಾರಿ ತೆರೆ ಹಂಚಿಕೊಂಡಿದ್ದಾರೆ. ಉಳಿದಂತೆ ಕಾವ್ಯಪ್ರಕಾಶ್, ರವಿತೇಜ, ಮಿತ್ರ, ಮೂಗುಸುರೇಶ್, ಶಂಕರ್ ಅಶ್ವಥ್, ಪ್ರಕಾಶ್‍ತುಮ್ಮಿನಾಡು ಮುಂತಾದವರು ನಟಿಸಿದ್ದಾರೆ.
ಸಂಗೀತ ಸಂತೋಷ್ ಜೋಶ್ವ, ಸಹ ನಿರ್ದೇಶನ ಎಸ್.ಜೆ.ಸಂಜಯ್, ಸಂಕಲನ ಶ್ರೀನಿವಾಸ್ ಕಲಾಲ್, ನೃತ್ಯ ಧನಂಜಯ್, ಚಿನ್ನಯ್ಯ ಸಾಹಸ ಚಿತ್ರಕ್ಕಿದೆ

