Actress Ranjani Raghavan- Aditya starrer 'Kangaroo' trailer released

ನಟಿ ರಂಜನಿ ರಾಘವನ್- ಆದಿತ್ಯ ಅಭಿನಯದ “ಕಾಂಗರೂ” ಚಿತ್ರದ ಟ್ರೇಲರ್ ಬಿಡುಗಡೆ - CineNewsKannada.com

ನಟಿ ರಂಜನಿ ರಾಘವನ್- ಆದಿತ್ಯ ಅಭಿನಯದ “ಕಾಂಗರೂ” ಚಿತ್ರದ ಟ್ರೇಲರ್ ಬಿಡುಗಡೆ

ಕನ್ನಡ ಚಿತ್ರರಂಗದ ಭರವಸೆಯ ಪ್ರತಿಭೆಗಳಾದ ನಟಿ ರಂಜನಿ ರಾಘವನ್ ಮತ್ತು ನಟ ಆದಿತ್ಯ ಅಭಿನಯದ ‘ ಕಾಂಗರೂ” ಚಿತ್ರ ಬಿಡುಗಡೆ ಸಜ್ಜಾಗಿದೆ, ಈ ಹಿನ್ನೆಲೆಯಲ್ಲಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಗಮನ ಸೆಳೆದಿದೆ.

ಚೆನ್ನಕೇಶವ ಬಿ.ಸಿ, ನರಸಿಂಹಮೂರ್ತಿ ಚಕ್ರಭಾವಿ, ರಮೇಶ್ ಬಂಡೆ, ಸ್ವಾಮಿ ಚಕ್ರಭಾವಿ, ರವಿ ಕೀಲಾರ ಮಂಡ್ಯ ಹಾಗೂ ಕೆ.ಜಿ.ಆರ್.ಗೌಡ ನಿರ್ಮಿಸಿರುವ ಹಾಗೂ ಕಿಶೋರ್ ಮೇಗಳಮನೆ ನಿರ್ದೇಶನವಿದೆ. ಬಹು ನಿರೀಕ್ಷಿತ ಈ ಚಿತ್ರ ಮೇ 3 ರಂದು ಬಿಡುಗಡೆಯಾಗಲಿದೆ.

ಈ ವೇಳೆ ಮಾತನಾಡಿದ ನಟ ಆದಿತ್ಯ, ನಿರ್ಮಾಪಕರೇ ನಮ್ಮ ಅನ್ನದಾತರು. ಹಾಗಾಗಿ ಅವರಿಂದಲೇ ಟ್ರೇಲರ್ ರಿಲೀಸ್ ಮಾಡಿಸಬೇಕೆಂದು ನಾನು ಹಾಗೂ ನಿರ್ದೇಶಕರು ಅಂದುಕೊಂಡೆವು. ಈ ಚಿತ್ರದ ನಿರ್ಮಾಪಕರೆ ಟ್ರೇಲರ್ ಬಿಡುಗಡೆ ಮಾಡಿದ್ದಾರೆ. ಚಿತ್ರದಲ್ಲಿ ಹಾರರ್ ಇದೆ, ಸಸ್ಪೆನ್ಸ್ ಇದೆ, ಥ್ರಿಲ್ಲರ್ ಇದೆ, ಎಲ್ಲಕ್ಕಿಂತ ಹೆಚ್ಚಾಗಿ ತಾಯಿ ಹೃದಯದ ಮಮತೆಯಿದೆ, ‘ನೀನೊಂದು ಮುಗಿಯದ ಮೌನ’ ದಂಥ ಎವರ್ ಗ್ರೀನ್ ಹಾಡನ್ನು ನನಗೆ ಕೊಟ್ಟವರು ಸಾಧು ಕೋಕಿಲ. ಅವರು ಮತ್ತೊಮ್ಮೆ ನನ್ನ ಚಿತ್ರಕ್ಕೆ ಅದ್ಭುತವಾದ ಮ್ಯೂಸಿಕ್ ಮಾಡಿಕೊಟ್ಟಿದ್ದಾರೆ. ಸಂಗೀತದ ನಂತರ ನಮ್ಮ ಚಿತ್ರದ ಮತ್ತೊಂದು ಹೈಲೈಟ್ ಎಂದರೆ ಕ್ಯಾಮೆರಾ ವರ್ಕ್, ಉದಯಲೀಲಾ ಅವರು ಅದ್ಭುತವಾಗಿ ಛಾಯಾಗ್ರಹಣ ಮಾಡಿಕೊಟ್ಟಿದ್ದಾರೆ. ನಾನು ಈ ಚಿತ್ರದಲ್ಲಿ ತನಿಖಾಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಮೇ 4 ನನ್ನ ಹುಟ್ಟುಹಬ್ಬ. ಮೇ 3 ರಂದು ನಮ್ಮ ಚಿತ್ರ ಬಿಡುಗಡೆಯಾಗಲಿದೆ ಎಂದರು.

ನಟಿ ರಂಜನಿ ರಾಘವನ್ ಮಾತನಾಡಿ, ನಾನು ಆದಿತ್ಯ ಅವರ ಸಿನಿಮಾಗಳನ್ನು ನೋಡುತ್ತಾ ಬೆಳೆದವಳು, ಈ ಚಿತ್ರದಲ್ಲಿ ಅವರ ಜೊತೆಗೆ ಅಭಿನಯಿಸುವ ಅವಕಾಶ ಸಿಕ್ಕಿತ್ತು. ಒಬ್ಬ ಪ್ರೇಕ್ಷಕಳಾಗಿ ನಾನು ಸಿನಿಮಾನ ನೋಡಿದ್ದೇನೆ. ನಿರ್ದೇಶಕರು ಪ್ರತಿ ಪಾತ್ರವನ್ನು ಅಚ್ಚುಕಟ್ಟಾಗಿ ತಂದಿದ್ದಾರೆ ಎಂದು ಹೇಳಿದರು

ನಿರ್ಮಾಪಕ ರಮೇಶ್ ಬಂಡೆ ಮಾತನಾಡಿ, ನಾವು 6 ಜನ ಸ್ನೇಹಿತರು ಪೀಣ್ಯದಲ್ಲಿ ಇಂಡಸ್ಟ್ರಿ ನಡೆಸುತ್ತಿದ್ದೇವೆ. ಏನಾದರೂ ಹೊಸತನ್ನು ಮಾಡೋಣ ಅಂತ ಈ ಸಿನಿಮಾ ಮಾಡಿದ್ದೇವೆ, ಜನ ಕೊಟ್ಟ ದುಡ್ಡಿಗೆ ನ್ಯಾಯ ಒದಗಿಸುತ್ತೇವೆ ಎಂದು ಹೇಳಿದರು.

ರವಿ ಕೀಲಾರ ಮಂಡ್ಯ ಮಾತನಾಡಿ ನಿರ್ದೇಶಕರು ಅನಿಮೇಶನ್‍ನಲ್ಲೇ ಚಿತ್ರವನ್ನು ನಮಗೆ ತೋರಿಸಿದ್ದರು, ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ ಎಂದು ಹೇಳಿದರು.

ಮತ್ತೊಬ್ಬ ನಿರ್ಮಾಪಕ ಚೆನ್ನಕೇಶವ ಮಾತನಾಡಿ ಕನ್ನಡದ ಜನರಿಗಾಗಿ ಒಳ್ಳೆಯ ಸಿನಿಮಾ ಮಾಡಿರುವ ಖುಷಿಯಿದೆ. ಚಿತ್ರದ ಮೋಷನ್ ಪೋಸ್ಟರ್ ಅನ್ನು ಶಿವರಾಜಕುಮಾರ್ ರಿಲೀಸ್ ಮಾಡಿಕೊಟ್ಟಿದ್ದರು. ಇನ್ನು ಸಾಧು ಕೋಕಿಲ ಉತ್ತಮ ಮ್ಯೂಸಿಕ್ ಮಾಡಿದ್ದಾರೆ. ನಮ್ಮ ಚಿತ್ರಕ್ಕೆ ಜನ ಬೆಂಬಲ ದೊರೆತರೆ , ಇನ್ನೂ ಹತ್ತಾರು ಸಿನಿಮಾ ಮಾಡುತ್ತೇವೆ ಎಂದರು. ನಿರ್ಮಾಪಕರಾದ ಸ್ವಾಮಿ ಚಕ್ರಭಾವಿ, ಕೆ.ಜಿ.ಆರ್. ಗೌಡ, ಮ ಜೋಗ್ ಸ ಚಕ್ರಭಾವಿ ಅವರು ಸಹ ಚಿತ್ರದ ಕುರಿತು ಮಾತನಾಡಿದರು.

ನಿರ್ದೇಶಕ ಕಿಶೋರ್ ಮೇಗಳಮನೆ ಮಾತನಾಡಿ, ಸಿನಿಮಾ ತುಂಬಾ ಚೆನ್ನಾಗಿ ಬಂದಿದೆ. ಕಥೆಗೆ ತಕ್ಕಂತೆ ಖರ್ಚಾಗಿದೆ. 150 ರಿಂದ 200 ಥಿಯೇಟರ್‍ಗಳಲ್ಲಿ ರಿಲೀಸ್ ಮಾಡುತ್ತಿದ್ದೇವೆ. ವಿಶೇಷವಾಗಿ ಫ್ಯಾಮಿಲಿ ಆಡಿಯನ್ಸ್ ಗಾಗಿ ಮಾಡಿದ ಕಥೆ, ಬೆಂಗಳೂರು, ಶೃಂಗೇರಿ, ಚಿಕ್ಕಮಗಳೂರು, ಕೊಪ್ಪ ಹಾಗೂ ಹೊರನಾಡು ಸುತ್ತಮುತ್ತ ಚಿತ್ರೀಕರಿಸಿದ್ದೇವೆ. ಯೂ ಟರ್ನ್ ಚಿತ್ರದ ಇನ್ ಸ್ಪೈರ್ ನಿಂದ ಈ ಚಿತ್ರ ನಿರ್ದೇಶನ ಮಾಡಿದ್ದೇನೆ. ಒಂದು ಸಣ್ಣ ತಪ್ಪಿನಿಂದ ಮುಂದೆ ಏನೇನೆಲ್ಲ ಆಗಬಹುದೆಂದು ಚಿತ್ರದಲ್ಲಿ ತೋರಿಸಿದ್ದೇವೆ ಎಂದು ಹೇಳಿದರು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin