ಸಂಗೀತ ನಿರ್ದೇಶಕ ಜೋಡಿ “ ಜಸ್ಟ್ ಮ್ಯಾರೀಡ್” ಮೂಲಕ ಅಜನೀಶ್ ಲೋಕನಾಥ್ -ಸಿ.ಆರ್ ಬಾಬ್ಬಿ ಹೊಸ ಹೆಜ್ಜೆ
ಕನ್ನಡದ ಪ್ರತಿಭಾನ್ವಿತ ಸಂಗೀತ ನಿರ್ದೇಶಕರಾದ ಅಜನೀಶ್ ಲೋಕನಾಥ್ ಹಾಗೂ ಸಿ.ಆರ್ ಬಾಬಿ “ಜಸ್ಟ್ ಮ್ಯಾರೀಡ್” ಮೂಲಕ ಹೊಸ ಹೆಜ್ಜೆ ಇಟ್ಟಿದ್ದು ಅದರಲ್ಲಿ ಅದೃಷ್ಟ ಕಂಡುಕೊಳ್ಳಲು ಮುಂದಾಗಿದ್ದಾರೆ.
ಅಜನೀಶ್ ಲೋಕನಾಥ್ ನಿರ್ಮಿಸಿರುವ, ಸಿ.ಆರ್.ಬಾಬಿ ನಿರ್ದೇಶನದಲ್ಲಿ ಬಿಗ್ ಬಾಸ್ ಖ್ಯಾತಿಯ ಶೈನ್‍ಶೆಟ್ಟಿ ಹಾಗೂ ಅಂಕಿತ ಅಮರ್ ನಾಯಕ-ನಾಯಕಿಯಾಗಿ ನಟಿಸಿರುವ ಬಹು ನಿರೀಕ್ಷಿತ “ಜಸ್ಟ್ ಮ್ಯಾರೀಡ್” ಚಿತ್ರದ ಟೀಸರ್ ಬಿಡುಗಡೆಯಾಗಿದೆ.
ದಕ್ಷಿಣ ಭಾರತದ ಖ್ಯಾತ ನಿರ್ದೇಶಕರಾದ ರಿಯಲ್ ಸ್ಟಾರ್ ಉಪೇಂದ್ರ, ನಿಥಿಲನ್ ಹಾಗೂ ಅಜಯ್ ಭೂಪತಿ . ಒಟ್ಟಾಗಿ “ಜಸ್ಟ್ ಮ್ಯಾರೀಡ್” ಟೀಸರ್ ಅನಾವರಣ ಮಾಡಿದರು. ಬಳಿಕ ಮೂರು ನಿರ್ದೇಶಕರು ಚಿತ್ರಕ್ಕೆ ಶುಭಕೋರಿದರು.
ಟೀಸರ್ ಬಿಡುಗಡೆಗೂ ಮುನ್ನ ಅಜನೀಶ್ ಲೋಕನಾಥ್ ಅವರ ತಂದೆ -ತಾಯಿ ಹಾಗೂ ಈಗಷ್ಟೇ ಮದುವೆಯಾಗಿರುವ ನೂತನ ದಂಪತಿಗಳನ್ನು ಸನ್ಮಾನಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ನಿರ್ದೇಶಕ ಉಪೇಂದ್ರ ಮಾತನಾಡಿ,ಸಿ.ಆರ್ ಬಾಬಿ ಅವರ ಕೆಲಸವನ್ನು ಹತ್ತಿರದಿಂದ ನೋಡಿದ್ದೇನೆ.ಅದ್ಭುತ ಕಾರ್ಯವೈಖರಿ ಅವರದು. ಅಜನೀಶ್ ಅವರ ಬಗ್ಗೆ ಹೇಳುವ ಹಾಗೆ ಇಲ್ಲ. ನನ್ನ ಚಿತ್ರಕ್ಕೂ ಅವರೆ ಸಂಗೀತ ನಿರ್ದೇಶಕರು. ಕೈತುಂಬಾ ಕೆಲಸ ಇದ್ದರೂ ಸ್ವಲ್ಪವೂ ಅಹಂ ಇಲ್ಲ ಅವರಿಗೆ. ಇನ್ನು ಚಿತ್ರದ ಟೀಸರ್ ತುಂಬಾ ಚೆನ್ನಾಗಿದೆ. ಅಷ್ಟೇ ಚೆನ್ನಾಗಿ ಕಲಾವಿದರ ಅಭಿನಯ ಹಾಗೂ ತಂತ್ರಜ್ಞರ ಕಾರ್ಯವೂ ಇದೆ. ನಿಥಿಲನ್ ಹಾಗೂ ಅಜಯ್ ಭೂಪತಿ ಅವರನ್ನು ಭೇಟಿ ಮಾಡಿಸಿದಕ್ಕೆ ತಂಡಕ್ಕೆ ಧನ್ಯವಾದ ಎಂದರು
ನಿರ್ದೇಶಕರಾದ ನಿಥಿಲನ್ ಹಾಗೂ ಅಜಯ್ ಭೂಪತಿ ಮಾತನಾಡಿ ಸಿ.ಆರ್ ಬಾಬಿ ಹಾಗೂ ಅಜನೀಶ್ ಅವರ ಜೊತೆಗಿನ ಒಡನಾಟವನ್ನು ಹಂಚಿಕೊಂಡ ಅವರು ಚಿತ್ರದ ಟೀಸರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ. ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದರು. ಉಪೇಂದ್ರ ಅವರ ನಿರ್ದೇಶನಕ್ಕೆ ನಾವು ಅಭಿಮಾನಿಗಳು ಎಂದು ಇಬ್ಬರು ನಿರ್ದೇಶಕರು ಈ ಸಂದರ್ಭದಲ್ಲಿ ತಿಳಿಸಿದರು.
ನಿರ್ದೇಶಕಿ ಸಿ.ಆರ್ ಬಾಬಿ ಮಾತನಾಡಿ,ಸಿನಿಮಾ ನಿರ್ದೇಶನ ನನ್ನ ಬಹು ವರ್ಷಗಳ ಕನಸು ಮೊದಲ ನಿರ್ದೇಶನದ ಚಿತ್ರವನ್ನು ಅಜನೀಶ್ ನಿರ್ಮಾಣ ಮಾಡಿದ್ದಾರೆ. ದಕ್ಷಿಣ ಭಾರತದ ಮೂವರು ಜನಪ್ರಿಯ ನಿರ್ದೇಶಕರು ಚಿತ್ರದ ಟೀಸರ್ ಬಿಡುಗಡೆ ಮಾಡಿಕೊಟ್ಟಿದ್ದು ತುಂಬಾ ಖುಷಿಯಾಗಿದೆ. ಟೀಸರ್ ಚೆನ್ನಾಗಿ ಬಂದಿದೆ ಎಂದರೆ ನನ್ನ ತಂಡದ ಸಹಕಾರವೇ ಕಾರಣ ಅವರೆಲ್ಲರಗೂ ಧನ್ಯವಾದ. ಸದ್ಯದಲ್ಲೇ “ಜಸ್ಟ್ ಮ್ಯಾರೀಡ್” ನಿಮ್ಮ ಮುಂದೆ ಬರಲಿದೆ ಎಂದರು.
ನಿರ್ಮಾಪಕ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಮಾತನಾಡಿ ನನ್ನ ಮೊದಲ ಗುರು ನನ್ನ ತಂದೆ ಲೋಕನಾಥ್ ಅವರು. ಚಿತ್ರರಂಗದ ನನ್ನ ಗುರುಗಳು ಎಂದರೆ ಕೆ.ಕಲ್ಯಾಣ್ ಹಾಗೂ ಸಿ.ಆರ್.ಬಾಬಿ. ಅವರಿಬ್ಬರಿಗೂ ಧನ್ಯವಾದ ಹೇಳುತ್ತೇನೆ. ಬಾಬಿ ಅವರು ಉತ್ತಮ ಕಥೆ ಮಾಡಿಕೊಂಡಿದ್ದಾರೆ. ಅವರೆ ನಿರ್ದೇಶನ ಕೂಡ ಮಾಡಿದ್ದಾರೆ. ಟೀಸರ್ ಬಿಡುಗಡೆಯಾಗಿ, ಚಿತ್ರ ರಿಲೀಸ್ ಹಂತಕ್ಕೆ ತಲುಪಿದೆ. ಟೀಸರ್ ಬಿಡುಗಡೆ ಮಾಡಿಕೊಟ್ಟ ಗಣ್ಯರಿಗೆ ಹಾಗೂ ತಂಡಕ್ಕೆ ಧನ್ಯವಾದ ಎಂದು ಹೇಳಿದರು.
ನಾಯಕ ಶೈನ್‍ಶೆಟ್ಟಿ ಮಾತನಾಡಿ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದು ಸಂತೋಷವಾಗಿದೆ. ಸಂಗೀತ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಬಾಬಿ ಹಾಗೂ ಅಜನೀಶ್ ಅವರು ಚಿತ್ರದ ಮೂಲಕ ಹೊಸ ಹೆಜ್ಹೆ ಇಟ್ಟಿದ್ದಾರೆ. ನಟಿ ಅಂಕಿತ ಅಮರ್ ಉತ್ತಮ ಕಲಾವಿದೆ. ಅವರ ಕನ್ನಡ ಹಾಗೂ ನಟನೆ ಎರಡು ಚೆಂದ. ನಿಮ್ಮೆಲ್ಲರ ಪೆÇ್ರೀತ್ಸಾಹ ನಮ್ಮ ಚಿತ್ರಕ್ಕಿರಲಿ ಎಂದು ಕೇಳಿಕೊಂಡರು
ನಾಯಕಿ ಅಂಕಿತ ಅಮರ್ ಮಾತನಾಡಿ ಅಜನೀಶ್ ಅವರ ಹಾಡುಗಳಿಗೆ ಅಭಿಮಾನಿ. ಒಂದು ದಿನ ಅವರೆ ಕರೆ ಮಾಡಿ, ನೀವೇ ನಮ್ಮ ಚಿತ್ರದ ನಾಯಕಿ ಎಂದರು. ಇದಕ್ಕಿಂತ ಭಾಗ್ಯ ಬೇಕೆ. ಸಿ.ಆರ್ ಬಾಬಿ ಅವರು ನಿರ್ದೇಶಕಿಯಾಗಿ ಮೊದಲ ಚಿತ್ರವನ್ನೇ ಎಲ್ಲರೂ ಮೆಚ್ಚುವ ಹಾಗೆ ನಿರ್ದೇಶಿಸಿದ್ದಾರೆ. ನನ್ನ ಪಾತ್ರ ಕೂಡ ಚೆನ್ನಾಗಿದೆ. ಸಹನ ನನ್ನ ಪಾತ್ರದ ಹೆಸರು ಎಂದರು
ಹಿರಿಯ ನಟಿ ಶ್ರುತಿ, ರವಿಶಂಕರ್ ಗೌಡ, ಶ್ರೀಮಾನ್, ವಾಣಿ ಹರಿಕೃಷ್ಣ, ಸಾಕ್ಷಿ ಅಗರವಾಲ್ ಮುಂತಾದ ಕಲಾವಿದರು ಹಾಗೂ ಸಂಭಾಷಣೆ ಬರೆದಿರುವ ರಘು ನಿಡುವಳ್ಳಿ ಸೇರಿದಂತೆ ಅನೇಕ ತಂತ್ರಜ್ಞರು “ಜಸ್ಟ್ ಮ್ಯಾರೀಡ್” ಬಗ್ಗೆ ಮಾತನಾಡಿದರು.
ಆನಂದ್ ಆಡಿಯೋದ ಆನಂದ್ ಅವರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಹಿರಿಯ ನಟ ದೇವರಾಜ್, ನಿರ್ದೇಶಕ ಅನೂಪ್ ಭಂಡಾರಿ ಮುಂತಾದವರು “ಜಸ್ಟ್ ಮ್ಯಾರೀಡ್” ನಲ್ಲಿ ಅಭಿನಯಿಸಿದ್ದಾರೆ.