Yash Shetty to star in 'Jungle Mangal': Simple Suni unveils title

“ಜಂಗಲ್ ಮಂಗಲ್” ಚಿತ್ರಕ್ಕೆ ಯಶ್ ಶೆಟ್ಟಿ ನಾಯಕ : ಶೀರ್ಷಿಕೆ ಅನಾವರಣ ಮಾಡಿದ ಸಿಂಪಲ್ ಸುನಿ - CineNewsKannada.com

“ಜಂಗಲ್ ಮಂಗಲ್” ಚಿತ್ರಕ್ಕೆ ಯಶ್ ಶೆಟ್ಟಿ ನಾಯಕ : ಶೀರ್ಷಿಕೆ ಅನಾವರಣ ಮಾಡಿದ ಸಿಂಪಲ್ ಸುನಿ

ಯಾವುದೇ ಪಾತ್ರ ನೀಡಿದರೂ ನೀರು ಕುಡಿದಷ್ಟು ಸಲೀಸಾಗಿ ಅಭಿನಯಿಸಿ ಜನಮನ ಗೆದ್ದಿರುವ ಪ್ರತಿಭಾನ್ವಿತ ಕಲಾವಿದ ಯಶ್ ಶೆಟ್ಟಿ “ಜಂಗಲ್ ಮಂಗಲ್ ಚಿತ್ರದ ಮೂಲಕ ನಾಯಕರಾಗಿ ಚಿತ್ರರಂಗದಲ್ಲಿ ಅದೃಷ್ಟ ಕಂಡುಕೊಳ್ಳಲು ಮುಂದಾಗಿದ್ದಾರೆ.

ಜಂಗಲ್ ಮಂಗಲ್ ಚಿತ್ರದ ಶೀರ್ಷಿಕೆಯನ್ನು ನಿರ್ದೇಶಕ ಸಿಂಪಲ್ ಸುನಿ ಅನಾವರಣ ಮಾಡಿ ಹೊಸ ತಂಡಕ್ಕೆ ಶುಭ ಹಾರೈಸಿದರು.

ಪುತ್ತೂರು ಮೂಲದ ನಿರ್ದೇಶಕ ರಕ್ಷಿತ್ ಕುಮಾರ್ ಮಾತನಾಡಿ, ಅರೆ ಮಲೆನಾಡಿನ ಕಾಡಿನಲ್ಲಿ ನಡೆಯುವ ಕಥೆ. ಅರೆ ಮಲೆನಾಡು ಎಂದರೆ ಘಟ್ಟದ ಮೇಲೆ ಹಾಗೂ ಘಟ್ಟದ ಕೆಳಗೆ ಎರಡು ಸಂಧಿಸುವ ಊರು. ಅಲ್ಲಿ ವಿವಿಧ ಸಂಸ್ಕೃತಿಯ ಜನರು ಇರುತ್ತಾರೆ. ಅಲ್ಲೊಂದು ದಟ್ಟವಾದ ಕಾಡು. ಆ ಕಾಡಿನಲ್ಲಿ ನಡೆಯುವ ಪ್ರೇಮಕಥೆಯೂ ಈ ಚಿತ್ರದಲ್ಲಿದೆ. ಚಿತ್ರದ ಅರ್ಧಕ್ಕೂ ಹೆಚ್ಚಿನ ಭಾಗದ ಚಿತ್ರೀಕರಣ ಸುಬ್ರಹ್ಮಣ್ಯದ ಬಳಿಯ ಕಾಡಿನಲ್ಲೇ ನಡೆದಿದೆ ಎಂದರು

ಹತ್ತು ವರ್ಷಗಳಿಂದ ಚಿತ್ರರಂಗದೊಂದಿಗೆ ನಂಟು. ನನಗಿರುವ ನಿರ್ದೇಶನದ ಆಸೆಗೆ ನನ್ನ ಸ್ನೇಹಿತರು ಆಸರೆಯಾದರು. ಸಹ್ಯಾದ್ರಿ ಸ್ಟುಡಿಯೋಸ್ ಸಂಸ್ಥೆ ಮೂಲಕ ಈ ಚಿತ್ರ ನಿರ್ಮಾಣವಾಗಿದ್ದು, ಸಿಂಪಲ್ ಸುನಿ ನಮ್ಮ ಸಿನಿಮಾವನ್ನು ಅರ್ಪಿಸುತ್ತಿದ್ದಾರೆ ಎಂದರು

ಯಶ್ ಶೆಟ್ಟಿ ನಾಯಕನಾಗಿ, ಹರ್ಷಿತಾ ರಾಮಚಂದ್ರ ನಾಯಕಿಯಾಗಿ ಹಾಗೂ ಉಗ್ರಂ ಮಂಜು, ಬಲ ರಾಜವಾಡಿ ಮುಂತಾದವರು ಪ್ರಮುಖಪಾತ್ರದಲ್ಲಿದ್ದಾರೆ. ಸದ್ಯ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಇನ್ನೊಂದು ತಿಂಗಳಲ್ಲಿ ಚಿತ್ರ ತೆರೆಗೆ ಬರಲು ಸಿದ್ದವಾಗುತ್ತದೆ ಎಂದು ಹೇಳಿದರು.

ನಾಯಕ ಯಶ್ ಶೆಟ್ಟಿ ಮಾತನಾಡಿ ಚಿತ್ರಕ್ಕೆ ಕಥೆಯೇ ನಿಜವಾದ ನಾಯಕ. ನಿರ್ದೇಶಕರು ಮಾಡಿಕೊಂಡಿರುವ ಕಥೆ ಚೆನ್ನಾಗಿದೆ. ವಿಭಿನ್ನ ಕಥೆ ಎನ್ನಬಹುದು. ಮೊದಲು ಉಗ್ರಂ ಮಂಜು ಅವರ ಪಾತ್ರ ನಾನು ಮಾಡಬೇಕಿತ್ತು. ಆನಂತರ ಬದಲಾಗಿ ನಿರ್ದೇಶಕರು ಈ ಪಾತ್ರ ನೀಡಿದರು. ಪಾತ್ರ ಹಾಗೂ ಚಿತ್ರ ಎರಡು ಚೆನ್ನಾಗಿದೆ. ತಂಡಕ್ಕೆ ಸಹಕಾರ ನೀಡುತ್ತಿರುವ ಸುನಿ ಅವರಿಗೆ ಧನ್ಯವಾದ ಎಂದರು.

ನಟಿ ಹರ್ಷಿತಾ ರಾಮಚಂದ್ರ ಮಾತನಾಡಿ, ದಿವ್ಯ ಎಂಬ ಮಧ್ಯಮ ವರ್ಗದ ಜವಾಬ್ದಾರಿಯುತ ಕರಾವಳಿ ಹೆಣ್ಣುಮಗಳ ಪಾತ್ರ ನನ್ನದು. ಈ ಹುಡುಗಿಗೆ ಜವಾಬ್ದಾರಿ ಇಲ್ಲದ ಹುಡುಗನ ಜೊತೆ ಪ್ರೀತಿ. ಒಂದು ಕಡೆ ಕುಟುಂಬ, ಮತ್ತೊಂದು ಕಡೆ ಪ್ರೀತಿ. ಈ ಎರಡರಲ್ಲಿ ನನ್ನ ಆಯ್ಕೆ ಏನು.ಎಂಬುದನ್ನು ಚಿತ್ರದಲ್ಲೇ ನೋಡಬೇಕು ಎಂದರು

ನಿರ್ದೇಶಕ ಸಿಂಪಲ್ ಸುನಿ ಮಾತನಾಡಿ ನನ್ನ ಕೆಲವು ಚಿತ್ರಗಳಿಗೆ ಈ ಚಿತ್ರದ ಸಂಕಲನಕಾರ ಮಂಜು ಶೇಡ್ಗಾರ್ ಸಂಕಲನ ಮಾಡಿದ್ದಾರೆ. ಅವರಿಂದ ನನಗೆ ಈ ತಂಡದ ಪರಿಚಯವಾಯಿತು. ನಾನು ಸದಾ ನಿಮ್ಮ ಜೊತೆ ಇರುತ್ತೇನೆ ಎಂದೆ. ಚಿತ್ರ ಚೆನ್ನಾಗಿ ಮೂಡಿಬಂದಿದೆ ಎಂದು ತಿಳಿಸಿದರು.

ಸಂಕಲನಕಾರ ಮನು ಶೇಡ್ಗಾರ್ ಹಾಗೂ ಬಂಡವಾಳ ಹೂಡಿರುವ ಪ್ರಜೀತ್ ಹೆಗಡೆ ಅವರು “ಜಂಗಲ್ ಮಂಗಲ್” ಚಿತ್ರವನ್ನು ಬೆಂಬಲಿಸಿ ಎಂದರು.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin