ಅರ್ದಂಬರ್ಧ ಪ್ರೇಮಕಥೆ ಟ್ರೈಲರ್ ಬಿಡುಗಡೆ :ಡಿಸೆಂಬರ್ 1ಕ್ಕೆ ಚಿತ್ರ ತೆರೆಗೆ
ತುಘಲಕ್ ಖ್ಯಾತಿಯ ಅರವಿಂದ್ ಕೌಶಿಕ್ ನಿರ್ದೇಶನದ ಮತ್ತೊಂದು ಪ್ರೇಮ್‍ಕಹಾನಿ ಅರ್ದಂಬರ್ಧ ಪ್ರೇಮಕಥೆ. ಇದೇ ಶುಕ್ರವಾರ ತೆರೆಕಾಣಲು ಸಿದ್ದವಾಗಿರುವ ಈ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಗಮನ ಸೆಳೆದಿದೆ.
ಬಿಗ್‍ಬಾಸ್ ಖ್ಯಾತಿಯ ದಿವ್ಯಾ ಉರಡುಗ ಹಾಗೂ ಅರವಿಂದ್ ಕೆಪಿ. ಈ ಚಿತ್ರದಲ್ಲಿ ಯುವ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ತನ್ನ ಟೀಸರ್, ಹಾಡುಗಳಿಂದ ಚಿತ್ರಪ್ರೇಮಿಗಳ ಮನ ಗೆದ್ದಿರುವ ಈ ಚಿತ್ರ ಹಲವಾರು ಕಾರಣಗಳಿಂದ ಸುದ್ದಿಯಲ್ಲಿದೆ. ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಅವರು ಚಿತ್ರಕ್ಕೆ 4 ಸುಂದರ ಹಾಡುಗಳನ್ನು ಕಂಪೋಸ್ ಮಾಡಿದ್ದಾರೆ.
ನಿರ್ದೇಶಕ ಅರವಿಂದ್ ಕೌಶಿಕ್ ಮಾತನಾಡಿ, ಇದೇ ಶುಕ್ರವಾರ ಚಿತ್ರ ಬಿಡುಗಡೆಯಾಗುತ್ತಿದ್ದು, ಈಗ ಟ್ರೈಲರ್ ಬಿಡುಗಡೆ ಮಾಡಿದ್ದೇವೆ, ಇದೊಂದು ಲವ್‍ಸ್ಟೋರಿ ವಿಥೌಟ್ ಲವ್. ನಾಯಕ, ನಾಯಕಿ ಇಬ್ಬರೂ ಒಂದಾಗಬೇಕು ಅನ್ನೋದೇ ನೋಡುಗರ ಆಸೆಯಾಗಿರುತ್ತೆ, ಅವರು ಒಂದಾಗ್ತಾರಾ, ಇಲ್ವಾ ಅಂತ ಹೇಳೋದೇ ಈ ಚಿತ್ರ. ಇದು ಪ್ಯಾನ್ ಹೃದಯಗಳ ಕಥೆ.
ಲವ್ ಅನ್ನೋದೆಲ್ಲ ಪುಸ್ತಕದ ಬದನೇಕಾಯಿ ಅಂತ ಯಾವ ಪಾತ್ರ ಹೇಳುತ್ತೆ, ಕೊನೆಗೂ ಅವರು ಪ್ರೀತಿಯನ್ನು ನಂಬ್ತಾರಾ, ಇಲ್ವಾ ಅನ್ನೋದೇ ಸಿನಿಮಾ. ಪ್ರೀತಿ ನಮ್ಮ ಕನಸುಗಳ ಜೊತೆಗೇ ಬೆಳೆಯುತ್ತೆ, ಆದರೆ ಅದೇ ಪ್ರೀತಿ ಸಂಬಂಧವಾಗಿ ಬದಲಾದಾಗ ಅದನ್ನು ಉಳಿಸಿಕೊಳ್ಳೋದು ಕಷ್ಟ. ಕಳೆದ 48 ಗಂಟೆಗಳಲ್ಲಿ ನಾನು 6 ಸಲ ಸಿನಿಮಾನ ನೋಡಿದ್ದೇನೆ. ಇಂಟರ್ ವೆಲ್ ಬ್ಲಾಕ್ ಹಾಗೂ ಕ್ಲೈಮ್ಯಾಕ್ಸ್ ನಲ್ಲಿ ನಾಯಕ, ನಾಯಕಿ ಮಧ್ಯೆ ಮಾತುಗಳೇ ಇರಲ್ಲ, ಕ್ಲೈ ಮ್ಯಾಕ್ಸ್ ನೋಡಿ ಸ್ವತ: ನನ್ನ ಕಣ್ಣಲ್ಲೂ ನೀರುಬಂತು. ಈ 2 ಸೀನ್‍ಗಳನ್ನು ಜನರಿಗೆ ತೋರಿಸಲು ನಾನು ಉತ್ಸುಕನಾಗಿದ್ದೇನೆ ಎಂದು ಹೇಳಿದ್ದಾರೆ.
ನಾಯಕ ಅರವಿಂದ್ ಕೆಪಿ. ಮಾತನಾಡಿ ಈ ಚಿತ್ರದಲ್ಲಿ ನಾವಿಬ್ಬರೂ ಪ್ರೇಮಿಗಳೇ ಅಲ್ಲ, ಹಾಗಾಗಿ ಐ ಲವ್‍ಯು ಹೇಳುವ ಪ್ರಮೇಯವೂ ಬರಲ್ಲ, ಅದೇ ಕಾರಣದಿಂದ ಚಿತ್ರಕ್ಕೆ ಅರ್ದಂಬರ್ಧ ಪ್ರೇಮಕಥೆ ಟೈಟಲ್ ಇಟ್ಟಿರೋದು ಎಂದು ಹೇಳಿದರು,
ನಾಯಕಿ ದಿವ್ಯಾ ಮಾತನಾಡಿ ಈ ಚಿತ್ರ ನನಗೆ ಸಿಕ್ಕಾಪಟ್ಟೆ ಸ್ಪೆಷಲ್, ಏಕೆಂದರೆ ನಿರ್ದೇಶಕ ಅರವಿಂದ್ ಕೌಶಿಕ್ ಜೊತೆ 2ನೇ ಬಾರಿಗೆ ಕೆಲಸ ಮಾಡಿರೋದು, ಅಲ್ಲದೆ ಕೆಪಿ ಜೊತೆ ಸ್ಕ್ರೀನ್‍ಶೇರ್ ಮಾಡಿರೋದು, ಕಥೆ ಕೇಳುವಾಗ ನಾನು ಕೆಪಿ ಜೊತೆ ಆಕ್ಟ್ ಮಾಡ್ತೀನೆಂಬ ಯಾವ ನಿರೀಕ್ಷೆಯೂ ಇರಲಿಲ್ಲ, ರಿಯಲ್ ಲೈಫ್‍ನಲ್ಲಿ ನಾನು ಹೇಗಿದ್ದೇನೋ, ಅದಕ್ಕೆ ತದ್ವಿರುದ್ದವಾದ ಪಾತ್ರ ಚಿತ್ರದಲ್ಲಿದೆ. ಲೈಫ್ ಪ್ರಾಬ್ಲಂಗಳನ್ನು ತುಂಬಾ ಹಚ್ಚಿಕೊಳ್ಳುವ ಹುಡುಗಿ. ಆಕೆ ನೋಡಲು ಸ್ವಲ್ಪ ಮುಂಗೋಪಿಯಾದರೂ, ಆಕೆಯ ಮನಸು ಹೂವಿನಂಥದ್ದು, ಜನ ಆಕೆಯನ್ನು ಸರಿಯಾಗಿ ಅರ್ಥ ಮಾಡಿಕೊಂಡಿರಲ್ಲ, ಆದರೆ ಅರವಿಂದ್ ಅವರದು ತನ್ನೆದುರು ಬಾಂಬೇ ಬ್ಲಾಸ್ಟ್ ಆಗ್ತಿದ್ದರೂ, ಅದನ್ನು ನೋಡಿಕೊಂಡು ನಕ್ಕುಬಿಡುವಂಥ ಪಾತ್ರ, ಚಿತ್ರದ ಪ್ರೀಮಿಯರ ಶೋ ನೋಡಿದ ನಮ್ಮಮ್ಮ ಅರವಿಂದ್ ಬಗ್ಗೇನೇ ಹೆಚ್ಚು ಮಾತಾಡಿದ್ರು ಎಂದರು.
ಬಕ್ಸಸ್ ಮೀಡಿಯಾದ ಕಾರ್ತೀಕ್ ಮಾತನಾಡಿ, ನನಗೆ ಸಿನಿಮಾ ಬಗ್ಗೆ ಫುಲ್ ಕಾನಿಡೆನ್ಸ್ ಇತ್ತು, ಹಾಗಾಗೇ ನಾನು ಎಲ್ಲೂ ಕಾಣಿಸಿಕೊಂಡಿರಲಿಲ್ಲ, ಅಲ್ಲದೆ ಕೆಪಿ ಹದಿನೈದು ವರ್ಷಗಳಿಂದ ನನಗೆ ಗೊತ್ತು. ಅದಕ್ಕೇ ನಾನು ಪೂರ್ತಿ ಫ್ರೀಡಂ ಕೊಟ್ಟಿದ್ದೆ, ಮುಂದಿನ ದಿನಗಳಲ್ಲಿ ಇನ್ನೂ ಒಳ್ಳೊಳ್ಳೇ ಸಿನಿಮಾಗಳನ್ನು ನಿರ್ಮಿಸುವ ಯೋಜನೆಯಿದೆ ಎಂದರು.
ರಾಪರ್ ಅಲೋಕ್, ಶ್ರೇಯಾಬಾಬು, ವೆಂಕಟಶಾಸ್ತ್ರಿ, ಪ್ರದೀಪ್ ರೋಷನ್, ಸೂರಜ್ ಹೂಗಾರ್, ಸುಜಿಶ್ ಶೆಟ್ಟಿ ಅಲ್ಲದೆ ಹಿರಿಯನಟ ದ್ವಾರಕೀಶ್ ಪುತ್ರ ಅಭಿಲಾಷ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ, ಸೂರ್ಯ ಅವರ ಛಾಯಾಗ್ರಹಣ, ಶಿವರಾಜ್ ಮೇಹು ಅವರ ಸಂಕಲನ, ಸತೀಶ್ ಬ್ರಹ್ಮಾವರ್ ಅವರ ನಿರ್ಮಾಣ, ನಿರ್ವಹಣೆ ಈ ಚಿತ್ರಕ್ಕಿದೆ.