Bhairathi Ranagal Review : ಕ್ರೌರ್ಯು, ರಕ್ತದೋಕುಳಿ ಜೊತೆಗೆ ಮಾನವೀಯತೆ ಅನಾವರಣ ‘ಭೈರತಿ ರಣಗಲ್”
ಚಿತ್ರ: ಬೈರತಿ ರಣಗಲ್
ನಿರ್ಮಾಣ: ಗೀತಾ ಶಿವರಾಜಕುಮಾರ್
ನಿರ್ದೇಶನ: ನರ್ತನ್
ತಾರಾಗಣ: ಶಿವರಾಜಕುಮಾರ್, ರುಕ್ಮಿಣಿ ವಸಂತ್, ರಾಹುಲ್ ಬೋಸ್, ಅವಿನಾಶ್, ದೇವರಾಜ್, ಮಧು ಗುರುಸ್ವಾಮಿ, ಛಾಯಾ ಸಿಂಗ್, ಬಾಬು ಹಿರಣ್ಣಯ್ಯ ಮತ್ತಿತರರು
ರೇಟಿಂಗ್ : ** 4/ 5
ಸಾಮಾನ್ಯವಾಗಿ ಚಿತ್ರವೊಂದು ಹಿಟ್ ಆದಾಗ ಅದರ ಮುಂದುವರಿದ ಭಾಗದ ಕಥೆಯನ್ನು ಚಿತ್ರದ ಮೂಲಕ ತೆರೆಗೆ ಕಟ್ಟಿಕೊಡುವುದು ಚಿತ್ರರಂಗದಲ್ಲಿ ನಡೆದುಕೊಂಡು ಬರುತ್ತಿರುವ ಒಂದು ರೀತಿಯ ಅಘೋಷಿತ ಸಂಪ್ರದಾಯ. ಕನ್ನಡದಲ್ಲಿ ಅಪರೂಪ ಎನ್ನುವಂತೆ ಚಿತ್ರದ ಹಿಂದಿನ ಭಾಗವನ್ನು ರೋಚಕವಾಗಿ ಕಟ್ಟಿಕೊಟ್ಟಿರುವ ಚಿತ್ರ ” ಭೈರತಿ ರಣಗಲ್”
“ಮಫ್ತಿ” ಚಿತ್ರದಲ್ಲಿ ದ್ವಿತೀಯಾರ್ಧದಲ್ಲಿ ಬಂದು ಅಬ್ಬರಿಸಿದ್ದ ಹಿರಿಯ ನಟ ಶಿವರಾಜ್ ಕುಮಾರ್ ಅವರನ್ನು ಕೇಂದ್ರೀಕರಿಸಿ ” ಬೈರತಿ ರಣಗಲ್” ಮೂಲಕ ಶಿವಣ್ಣನನ್ನು ನಿರ್ದೇಶಕ ನರ್ತನ್ ಪ್ರೇಕ್ಷಕರ ಮುಂದಿಟ್ಟಿದ್ದಾರೆ.
ಮಫ್ತಿಯಲ್ಲಿ ಹೊಡೆದಾಟವಿದ್ದರೂ ಹೆಚ್ಚಿನ ಹಿಂಸೆ ಇರಲಿಲ್ಲ.ಆದರೆ ಭೈರತಿ ರಣಗಲ್ ಚಿತ್ರದಲ್ಲಿ ಹಿಂಸೆಗೆ ಆದ್ಯತೆ ನೀಡಲಾಗಿದೆ. ಹೀಗಾಗಿ ಲೆಕ್ಕವಿಲ್ಲದಷ್ಟು ಕೈ ಕಾಲುಗಳು ರುಂಡ ಮುಂಡಗಳು ಚೆಂಡಾಡಿವೆ. ಭಾವನೆಗಳ ಜೊತೆ ಜೊತೆಯಲ್ಲಿಯೇ ಹಿಂಸೆ, ಕ್ರೌರ್ಯ, ರಕ್ತದೋಕುಳಿಗೆ ಪ್ರಾಧಾನ್ಯತೆ ನೀಡಲಾಗಿದೆ. ಜೊತೆಗೆ ಮಾನವೀಯ ಮುಖವನ್ನೂ ಅನಾವರಣ ಮಾಡಿರುವ ಚಿತ್ರ ಇದು.
ಸರ್ಕಾರಿ ಕಚೇರಿ ಸ್ಪೋಟಿಸಿದ ಆಪರಾಧಕ್ಕಾಗಿ ಬರೊಬ್ಬರಿ 21 ವರ್ಷ ಜೈಲುವಾಸ ಅನುಭವಿಸಿದ ಬೈರತಿ ರಣಗಲ್ (ಶಿವರಾಜ್ ಕುಮಾರ್) ಜೈಲಿನಲ್ಲಿರುವಾಗಲೇ ಕಾನೂನು ಕಲಿತವ. ಸೆರೆಮನೆಯಿಂದ ಬಿಡುಗಡೆಯಾಗಿ ಬಂದ ಕೂಡಲೇ ವಕೀಲರಾಗಿ ವೃತ್ತಿ ಆರಂಭಿಸುತ್ತಾನೆ. ಗಣಿ ಧಣಿಗಳ ಕಪಿಮುಷ್ಠಿಯಲ್ಲಿ ಸಿಲುಕಿ ಕಾರ್ಮಿಕ ರಕ್ಷಣೆಗೆ ಹೋರಾಟ ನಡೆಸುತ್ತಾನೆ.
ಪರಾಂದೆ ಕಡೆಯವರು ತನ್ನವರನ್ನು ಸಾಯಿಸುತ್ತಾರೋ ಆಗ ಬೈರತಿ ರಣಗಲ್ ಉಗ್ರವತಾರ ತೋರುತ್ತಾನೆ,ಕಾನೂನಿನ ಮೂಲಕ ರಕ್ಷಣೆ ಸಿಗುವುದಿಲ್ಲ ಎನ್ನುವುದು ಖಾತ್ರಿಯಾದ ಕೂಡಲೇ ತನ್ನ ಕಾನೂನಿಗೆ ತಿಲಾಂಜಲಿ ಹಾಡಿ ತನ್ನ ದಾರಿ ಕಂಡುಕೊಳ್ಳುತ್ತಾನೆ ಮುಂದೇನು ಎನ್ನುವುದು ಚಿತ್ರದ ಕಥನ ಕುತೂಹಲ.
ಜನರ ಪರ ಹೋರಾಟ ಮಾಡುವ ಬೈರತಿ ರಣಗಲ್ ಗ್ಯಾಂಗ್‍ಸ್ಟರ್ ಆದ ಕಥೆಯನ್ನು ನಿರ್ದೇಶಕ ನರ್ತನ್ ರೋಚಕವಾಗಿ ತೆರೆಯ ಮೇಲೆ ಕಟ್ಟಿಕೊಟ್ಟಿದ್ದಾರೆ. ಆಕ್ಷನ್ ಪ್ರಿಯರಿಗೆ ಭರಪೂರ ಮನರಂಜನೆ ನೀಡುವ ಜೊತೆಗೆ ಸೆಂಟಿಮೆಂಟ್ ದೃಶ್ಯಗಳಿಗೂ ಹೆಚ್ಚಿನ ಒತ್ತು ನೀಡಿರುವುದು ಸಿನಿ ಪ್ರಿಯರಿಗೆ ರಂಜನೆಯ ರಸದೌತಣ ನೀಡುವುದರಲ್ಲಿ ಮೋಸವಿಲ್ಲ.
ಶಿವರಾಜ್ ಕುಮಾರ್ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿದ್ದಾರೆ. ಶಿವಣ್ಣನಿಗೆ ಶಿವಣ್ಣನೇ ಸಾಟಿ ಎಂಬಂತೆ ನಟಿಸಿದ್ದಾರೆ. ತೆರೆಯ ಮೇಲೆ ಇದ್ದಷ್ಟೂ ಸಮಯ ಹಾವ ಭಾವ, ಮತ್ತು ಮ್ಯಾನರಿಸಂನಿಂದಲೇ ಗಮನ ಸೆಳೆದಿದ್ಧಾರೆ
ನಾಯಕಿ ರುಕ್ಮಿಣಿ ವಸಂತ್‍ಗೆ ಹೆಚ್ಚು ಕೆಲಸವಿಲ್ಲ ಆದರೂ ಸಿಕ್ಕ ಸಮಯದಲ್ಲಿ ಗಮನ ಸೆಳೆದಿದದ್ಧಾರೆ. ಹಿರಿಯ ನಟಿ ಛಾಯಾ ಸಿಂಗ್, ರಾಹುಲ್ ಬೋಸ್, ಮಧು ಗುರುಸ್ವಾಮಿ, ರಾಗೋಪಾಲಕೃಷ್ಣ ದೇಶಪಾಂಡೆ, ಅವಿನಾಶ್, ಶಬೀರ್ ಕಲ್ಲರಕಲ್, ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ.
ಸಂಗೀತ ನಿರ್ದೇಶಕ ರವಿ ಬಸ್ರೂರು ಅವರ ಹಿಂದಿನ ಚಿತ್ರಗಳಲ್ಲಿ ಶಬ್ದದ ಸದ್ದು ಅಬ್ಬರ ಇಲ್ಲಿ ತುಸುಕಡಿಮೆಯಾಗಿದೆ. ಛಾಯಾಗ್ರಾಹಕ ನವೀನ್ ಕ್ಯಾಮರ ಚಿತ್ರಕ್ಕೆ ಪೂರಕವಾಗಿದೆ.
ರೇಟಿಂಗ್ : ಕಳೆಪೆ – * / ಅಷ್ಟಕಷ್ಟೆ – ** / ಪರವಾಗಿಲ್ಲ – ***/ ಉತ್ತಮ – **** / ಅತ್ಯುತ್ತಮ – *****