Coming on July 28 is a different story "Aachar & Co"

ಜುಲೈ 28ಕ್ಕೆ ಬರಲಿದೆ ವಿಭಿನ್ನ ಕಥೆಯ “ಆಚಾರ್ & ಕೋ” - CineNewsKannada.com

ಜುಲೈ 28ಕ್ಕೆ ಬರಲಿದೆ ವಿಭಿನ್ನ ಕಥೆಯ “ಆಚಾರ್ & ಕೋ”

ಪ್ರತಿಷ್ಠಿತ ಪಿ ಆರ್ ಕೆ ಪ್ರೊಡಕ್ಷನ್ಸ್ ಮೂಲಕ ಅಶ್ವಿನಿ ಪುನೀತ್ ರಾಜಕುಮಾರ್ ನಿರ್ಮಾಣದ ಈ ಚಿತ್ರಕ್ಕೆ ಸಿಂಧುಶ್ರೀನಿವಾಸಮೂರ್ತಿ ನಿರ್ದೇಶನ .

​​ಸದಭಿರುಚಿಯ, ಹೊಸ ಬಗೆಯ ಚಿತ್ರಗಳಿಂದ ಕನ್ನಡಿಗರ ಮನ ಗೆದ್ದಿರುವ ಪಿ.ಆರ್.ಕೆ ಪ್ರೊಡಕ್ಷನ್ಸ್ ಇದೀಗ ಮತ್ತೊಂದು ವಿಭಿನ್ನ ಚಿತ್ರವನ್ನು ಚಿತ್ರರಸಿಕರೆದುರು ತರುತ್ತಿದೆ. ಸಿಂಧು ಶ್ರೀನಿವಾಸಮೂರ್ತಿ ಅವರ ಚೊಚ್ಚಲ ನಿರ್ದೇಶನದ ‘ಆಚಾರ್ & ಕೋ’ ಚಿತ್ರ ಇದೇ ಜುಲೈ 28, 2023 ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಹೆಸರಿನಷ್ಟೇ ವಿಶೇಷವಾಗಿರುವ ಈ ಚಿತ್ರ ಮಹತ್ವಾಕಾಂಕ್ಷೆಯ ಸಹೋದರಿಯರು ಒಂದು ಕಡೆ ಆಧುನಿಕತೆಯ ಸವಾಲುಗಳನ್ನು ಎದುರಿಸುತ್ತಾ, ಇನ್ನೊಂದು ಕಡೆ ತಮ್ಮ ಬೇರುಗಳನ್ನೂ ಬಿಡದೇ ಹೇಗೆ ಯಶಸ್ವಿಯಾಗುತ್ತಾರೆ ಎಂಬ ಸುಂದರ ಕಥೆಯನ್ನು ಪ್ರೇಕ್ಷಕರಿಗೆ ಹೇಳಲು ಹೊರಟಿದೆ.

​​ಹೊಸ ಅಲೆಯ, ಹೊಸ ಆಲೋಚನೆಗಳ ಕನ್ನಡ ಚಿತ್ರಗಳನ್ನು ತಯಾರಿಸುವಲ್ಲಿ ಸದಾ ಮುಂಚೂಣಿಯಲ್ಲಿರುವ ಪಿ. ಆರ್. ಕೆ ಪ್ರೊಡಕ್ಷನ್ಸ್ ಇಲ್ಲಿಯವರೆಗೆ ವಿನೂತನ ಕಥೆಗಳಿಗೆ, ಹೊಸ ಪ್ರತಿಭೆಗಳಿಗೆ ವೇದಿಕೆಯಾಗುತ್ತಾ ಬಂದಿದೆ. ಕನ್ನಡ ಚಿತ್ರಗಳು ಕಥಾಹಂದರ ಮತ್ತು ಗುಣಮಟ್ಟದಿಂದ ಜಾಗತಿಕ ಮಟ್ಟದಲ್ಲಿ ಹೆಸರು ಮಾಡುವತ್ತ ಪ್ರಾಮಾಣಿಕ ಹೆಜ್ಜೆಗಳನ್ನು ಇಡುತ್ತಾ ಬಂದಿರುವ ಪಿ.ಆರ್.ಕೆ ಸಂಸ್ಥೆ ಇದೀಗ ‘ಆಚಾರ್ & ಕೋ’ ಚಿತ್ರದ ಮೂಲಕ ಮತ್ತೊಂದು ಹೃದಯಸ್ಪರ್ಶಿ ಕಥೆಯನ್ನು ಜನರೆದುರು ತರುತ್ತಿದೆ.

​​1960 ರ ಕಾಲಘಟ್ಟದಲ್ಲಿ ಬೆಂಗಳೂರಿನಲ್ಲಿ ನಡೆಯುವ ಈ ಕಥೆ ಒಂದು ಕುಟುಂಬ ತಮ್ಮ ಕನಸುಗಳನ್ನು ಬೆನ್ನತ್ತುವ ಹಾದಿಯಲ್ಲಿ ಹೇಗೆ ಸವಾಲುಗಳನ್ನು ಎದುರಿಸುತ್ತದೆ, ಸಂಪ್ರದಾಯಗಳನ್ನೂ ಮೀರದೇ ಆಧುನಿಕ ಜಗತ್ತಿನ ಅವಶ್ಯಕತೆಗಳನ್ನೂ ಹೇಗೆ ನಿಭಾಯಿಸಿ ಗೆಲ್ಲುತ್ತದೆ ಎಂಬುದನ್ನು ಹೇಳುವ ಒಂದು ಭಾವನಾತ್ಮಕ ಚಿತ್ರ.
​​ಅರವತ್ತರ ದಶಕದ ಸಾಮಾಜಿಕ ಮತ್ತು ಸಾಂಪ್ರದಾಯಿಕ ವ್ಯವಸ್ಥೆಯಲ್ಲಿ ವಿನೂತನ ಆಲೋಚನೆಯೊಂದನ್ನು ಯಶಸ್ವಿಯಾಗಿಸಲು ಹೋರಾಡುವ ಈ ಚಿತ್ರದಲ್ಲಿ ಭಾವುಕತೆಯಷ್ಟೇ ಹಾಸ್ಯವೂ ಇದೆ, ಆಸಕ್ತಿಕರ ಸನ್ನಿವೇಶಗಳ ಜೊತೆಗೆ ಇಡೀ ಸಮಾಜಕ್ಕೆ ಒಂದು ಪ್ರೇರಣೆಯೂ ಇದೆ.

​​ಸೂಕ್ತವಾದ ವಸ್ತ್ರವಿನ್ಯಾಸ ಮತ್ತು ಕಲಾ ನಿರ್ದೇಶನದ ಮೂಲಕ 60 ಮತ್ತು 70 ರ ದಶಕದ ಬೆಂಗಳೂರನ್ನು ತೆರೆಯ ಮೇಲೆ ಸಮರ್ಥವಾಗಿ ಮರುಸೃಷ್ಟಿ ಮಾಡಲಾಗಿದೆ. ಈ ಕುಟುಂಬದ ಕಥೆಯನ್ನು ನೋಡುತ್ತಾ ಪ್ರೇಕ್ಷಕರು ತಮಗೇ ಗೊತ್ತಿಲ್ಲದಂತೆ ಅಂದಿನ ಕಾಲಕ್ಕೆ ರವಾನೆಯಾಗುತ್ತಾರೆ, ಆ ಕುಟುಂಬದ ಪಯಣದಲ್ಲಿ ತಾವೂ ಭಾಗಿಯಾಗುತ್ತಾರೆ ಎಂಬ ಭರವಸೆ ಚಿತ್ರತಂಡಕ್ಕಿದೆ.

​​‘ಆಚಾರ್ & ಕೋ’ ಚಿತ್ರದ ಮತ್ತೊಂದು ಹೆಮ್ಮೆಯೆಂದರೆ ಹೆಚ್ಚಿನ ವಿಭಾಗಗಳಲ್ಲಿ ಮಹಿಳೆಯರೇ ಕೆಲಸ ಮಾಡಿರುವುದು. ಈ ಚಿತ್ರಕ್ಕೆ ನಿರ್ಮಾಪಕರು, ನಿರ್ದೇಶಕರು, ಸಂಗೀತ ನಿರ್ದೇಶಕರು, ಮುಖ್ಯ ಪಾತ್ರಧಾರಿ, ಸೌಂಡ್ ಇಂಜಿನಿಯರ್, ವಸ್ತ್ರ ವಿನ್ಯಾಸಕರು, ಕ್ರಿಯಾಶೀಲ ನಿರ್ಮಾಪಕರು ಮತ್ತು ಇನ್ನೂ ಹಲವು ವಿಭಾಗಗಳನ್ನು ಮಹಿಳೆಯರೇ ನಿಭಾಯಿಸಿದ್ದು, ಅನೇಕ ಮಹಿಳಾ ಪ್ರತಿಭೆಗಳ ಸಂಗಮವಾಗಿರುವ ‘ಆಚಾರ್ & ಕೋ’ ನೈಜ ಅರ್ಥದಲ್ಲಿ ಒಂದು ಕ್ರಾಂತಿಯನ್ನೇ ಮಾಡಿದೆ ಎಂದರೆ ತಪ್ಪಾಗುವುದಿಲ್ಲ. ಬಹುಮುಖ ಪ್ರತಿಭೆಯಾಗಿರುವ ಸಿಂಧು ಶ‍್ರೀನಿವಾಸಮೂರ್ತಿ ಅವರು ಈ ಚಿತ್ರದ ಬರವಣಿಗೆ, ನಿರ್ದೇಶನದ ಜವಾಬ್ದಾರಿಯ ಜೊತೆಗೆ ತಾವೇ ಮುಖ್ಯ ಪಾತ್ರವನ್ನೂ ನಿರ್ವಹಿಸಿರುವುದು ವಿಶೇಷ.

​​ಹೊಸ ಪ್ರತಿಭೆ ಸಿಂಧು ಶ್ರೀನಿವಾಸಮೂರ್ತಿ ಅವರಿಗೆ ಸಮರ್ಥವಾದ ವೇದಿಕೆಯನ್ನು ನಿರ್ಮಿಸಿ ಕೊಟ್ಟಿರುವ ಚಿತ್ರದ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಸಿಂಧು ಅವರ ಪ್ರತಿಭೆ ಮತ್ತು ಕಾರ್ಯಕ್ಷಮತೆಯ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ. “ಸಿಂಧು ಅವರ ಕ್ರಿಯಾಶೀಲತೆ ಮತ್ತು ಸಿನಿಮಾದ ಬಗ್ಗೆ ಅವರಿಗಿರುವ ಬದ್ಧತೆಯೇ ನಾವು ಅವರೊಂದಿಗೆ ಕೈ ಜೋಡಿಸಲು ಮುಖ್ಯ ಕಾರಣ. ನಿರ್ಮಾಣದ ಪ್ರತೀ ಹಂತದಲ್ಲೂ ಅತ್ಯಂತ ನಾಜೂಕಾಗಿ ಕೆಲಸ ಮಾಡಿರುವ ಸಿಂಧು ಅವರ ಆಲೋಚನೆಗಳು ಅದ್ಭುತವಾಗಿ ಸಿನಿಮಾ ರೂಪ ತಳೆದಿದೆ. ಅದು ಎಲ್ಲಾ ಪ್ರೇಕ್ಷಕರನ್ನೂ ತಲುಪುತ್ತದೆ” ಎಂದು ಅಶ‍್ವಿನಿ ಅವರು ಭರವಸೆ ವ್ಯಕ್ತಪಡಿಸಿದ್ದಾರೆ.

ಚಿತ್ರದ ಬಿಡುಗಡೆಯ ಬಗ್ಗೆ ಮಾತನಾಡಿದ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು “ಎಲ್ಲಾ ವರ್ಗದ ಪ್ರೇಕ್ಷಕರನ್ನು ಮುಟ್ಟುವಂಥಾ, ಎಲ್ಲರಿಗೂ ಆಪ್ತವಾಗುವಂಥಾ ಒಂದು ಕಥೆಯನ್ನು ಹೊತ್ತು ತಂದಿದ್ದೇವೆ, ಇಂತಹಾ ವಿಶೇಷ ಚಿತ್ರವನ್ನು ನಿರ್ಮಾಣ ಮಾಡುತ್ತಿರುವುದಕ್ಕೆ ಅತ್ಯಂತ ಖುಷಿ ಇದೆ, ಹೊಸ ಬಗೆಯ ಕಥೆಗಳಿಗೆ ವೇದಿಕೆಯಾಗುತ್ತೇವೆ ಎಂಬ ನಮ್ಮ ಬದ್ಧತೆಯನ್ನು ಈ ಚಿತ್ರವೂ ಮುಂದುವರಿಸಿಕೊಂಡು ಹೋಗುತ್ತಿದೆ, ಪ್ರತಿಭಾವಂತ ಮಹಿಳಾ ತಂತ್ರಜ್ಞರಿಗೆ ಪ್ರೋತ್ಸಾಹ ನೀಡುವ ಮೂಲಕ ಈ ಚಿತ್ರ ನಮಗೆ ಮತ್ತು ಇಡೀ ಚಿತ್ರರಂಗಕ್ಕೆ ಅತ್ಯಂತ ಸ್ಮರಣೀಯವಾಗಿದೆ” ಎಂದರು. “ಎಲ್ಲಾ ವರ್ಗದ ಪ್ರೇಕ್ಷಕರನ್ನೂ ಸೆಳೆಯುವಂತಹ ಕಥಾಹಂದರ ಹೊಂದಿರುವ ‘ಆಚಾರ್ & ಕೋ’ ಚಿತ್ರ ಕನ್ನಡ ಚಿತ್ರರಂಗದಲ್ಲಿ ಒಂದು ವಿಶಿಷ್ಟ ಚಿತ್ರವಾಗಿ ಉಳಿಯಲಿದೆ” ಎಂದು ವಿಶ್ವಾಸ ಮತ್ತು ಉತ್ಸುಕತೆಯನ್ನು ವ್ಯಕ್ತಪಡಿಸಿದರು.

ಹಾಡುಗಳು, ಟ್ರೈಲರ್ ಸೇರಿದಂತೆ ಇನ್ನಿತರ ತುಣುಕುಗಳನ್ನು ಮುಂಬರುವ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪಿ.ಆರ್.ಕೆ ಪ್ರೊಡಕ್ಷನ್ಸ್ ನ ಅಧಿಕೃತ ಚಾನಲ್ ಗಳ ಮೂಲಕ ಹಾಗೂ ಪಿ.ಆರ್.ಕೆ ಪ್ರೊಡಕ್ಷನ್ಸ್ ನ ಅಧಿಕೃತ ವೆಬ್ ಸೈಟ್ ನಲ್ಲಿ ವೀಕ್ಷಣೆಗೆ ಲಭ್ಯಗೊಳಿಸಿ ಪ್ರೇಕ್ಷಕರಿಗೆ ಆಸಕ್ತಿ ಹುಟ್ಟಿಸಲು ತಂಡ ಉತ್ಸುಕವಾಗಿದೆ.

ಬಿಂದುಮಾಲಿನಿ ನಾರಾಯಣಸ್ವಾಮಿ ಸಂಗೀತ ನಿರ್ದೇಶನ, ಇಂಚರಾ ಸುರೇಶ್ ವಸ್ತ್ರ ವಿನ್ಯಾಸ, ಸೌಂಡ್ ಇಂಜಿನಿಯರ್ ಆಗಿ ಹೇಮಾ ಸುವರ್ಣ, ವಿಶ್ವಾಸ್ ಕಶ್ಯಪ್ ಕಲಾ ನಿರ್ದೇಶನ ಹಾಗೂ ಅಭಿಮನ್ಯು ಸದಾನಂದ್ ಅವರ ಛಾಯಾಗ್ರಹಣ “ಆಚಾರ್ & ಕೋ” ಚಿತ್ರಕ್ಕಿದೆ.

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin