ಜಿಂಗೋ” ಹೊಸ ಅವತಾರದಲ್ಲಿ ಮೋಡಿ ಮಾಡಲು ಸಿದ್ದರಾದ ಡಾಲಿ ಧನಂಜಯ

“ಡೇರ್ ಡೆವಿಲ್ ಮುಸ್ತಾಫಾ’ ಕನ್ನಡದಲ್ಲಿ ಒಂದಷ್ಟು ಹೊಸ ಪ್ರತಿಭೆಗಳನ್ನು ಚಿತ್ರರಂಗಕ್ಕೆ ಪರಿಚಯಿಸಿದ ಚಿತ್ರ. ಬಡವರ ಮಕ್ಕಳು ಪ್ರತಿಭಾನ್ವಿತರು ಬೆಳೆಯಲಿ ಎನ್ನುವ ಕಾರಣಕ್ಕೆ ನಟ, ನಿರ್ಮಾಪಕ ಡಾಲಿ ಧನಂಜಯ ಅವರು ಈ ಚಿತ್ರವನ್ನು ಪ್ರಸ್ತುತಪಡಿಸಿದ್ದರು. ಇದರಿಂದ ಸಹಜವಾಗಿ ಚಿತ್ರಕ್ಕೆ ಒಂದಷ್ಟು ಹೈಪ್ ಸಿಕ್ಕಿ ಹಲವರ ಪ್ರತಿಭೆಗಳ ಪ್ರದರ್ಶನವೂ ಆಗಿತ್ತು.

ಇದೀಗ ಡೇರ್ ಡೆವಿಲ್ ಮುಸ್ತಾಫಾ ಚಿತ್ರದ ನಿರ್ದೇಶಕ ಶಶಾಂಕ್ ಸೋಗಲ್ ಅವರ ಜೊತೆ ಡಾಲಿ ಧನಂಜಯ ಕೈಜೋಡಿದ್ದಾರೆ.ಜಿಂಗೋ ಅವತಾರದಲ್ಲಿ ಮತ್ತೊಮ್ಮೆ ವಿಭಿನ್ನ ರೀತಿಯಲ್ಲಿ ಪ್ರೇಕ್ಷಕರನ್ನು ರಂಜಿಸಲು ಮತ್ತು ಮೋಡಿ ಮಾಡಲು ಡಾಲಿ ಧನಂಜಯ ಮತ್ತವರ ತಂಡ ಸಜ್ಜಾಗಿದೆ.
ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟರಲ್ಲಿ ಒಬ್ಬರು ಡಾಲಿ ಧನಂಜಯ್. ನಾಯಕನಾಗಿ, ನಿರ್ಮಾಪಕರಾಗಿ, ಬರಹಗಾರನಾಗಿಯೂ ಗುರುತಿಸಿಕೊಂಡಿದ್ದಾರೆ. ಟಾಲಿವುಡ್ ಮತ್ತು ಕಾಲಿವುಡ್‍ನಲ್ಲೂ ಬ್ಯುಸಿಯಾಗಿರುವ ಅವರೀಗ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಧನಂಜಯ್ ಹುಟ್ಟುಹಬ್ಬದ ವಿಶೇಷವಾಗಿ “ಜಿಂಗೋ” ಎಂಬ ಚಿತ್ರ ಘೋಷಣೆಯಾಗಿದೆ.
ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಬರೆದ `ಡೇರ್ಡೆವಿಲ್ ಮುಸ್ತಫಾ’ ಕಥೆಯನ್ನು ಆಧರಿಸಿ ಅಬಚೂರಿನ ಪರಿಸರವನ್ನು ತೆರೆಗೆ ತಂದಿದ್ದ, ಜೊತೆಗೆ ಉತ್ತಮವಾದ ಸಂದೇಶವನ್ನೂ ರವಾನಿಸಿದ್ದ ಶಶಾಂಕ್ ಸೋಗಲ್ ಜಿಂಗೋ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಡಾಲಿ ಧನಂಜಯ ಅವರ ಹುಟ್ಟುಹಬ್ಬದ ಅಂಗವಾಗಿ “ಜಿಂಗೋ” ಚಿತ್ರದ ಫಸ್ಟ್ ಝಲಕ್ ಬಿಡುಗಡೆ ಮಾಡಲಾಗಿದೆ. ಅದರಲ್ಲಿ ರಾಜಕಾರಣಿಯಾಗಿ ನಟರಾಕ್ಷಸ ಕಾಣಿಸಿಕೊಂಡಿದ್ದು, ಉದ್ದ ಕೂದಲು ಬಿಟ್ಟು ಖಡಕ್ ಡೈಲಾಗ್ ಹೊಡೆಯುತ್ತಾ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಜಿಂಗೋ ಅಸಲಿಗೆ ರಾಜಕಾರಣಿನಾ ಅಥವಾ ಕ್ರಾಂತಿಕಾರಿನ ಎಂಬ ಕುತೂಹಲ ಹುಟ್ಟುಹಾಕಿದೆ. ಚಿತ್ರಕ್ಕೆ ಹಾರಿಸ್ ಅಹಮದ್ ಕಥೆ ಚಿತ್ರಕಥೆ ಬರೆದಿದ್ದು, ಶಶಾಂಕ್ ನಿರ್ದೇಶನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

ತ್ರಿಷೂಲ್ ವಿಷನರಿ ಸ್ಟುಡಿಯೋಸ್ ಹಾಗೂ ಡಾಲಿ ಪಿಕ್ಚರ್ಸ್ ಬ್ಯಾನರ್ ನಡಿ ಬಿ ನರೇಂದ್ರ ರೆಡ್ಡಿ ಹಾಗೂ ಡಾಲಿ ಧನಂಜಯ್ ಜಿಂಗೋ ಚಿತ್ರ ನಿರ್ಮಾಣ ಮಾಡುತ್ತಿದ್ದು, ರಾಘವೇಂದ್ರ ಮಾಯಕೊಂಡ ಸಂಭಾಷಣೆ ಬರೆದಿದ್ದಾರೆ. ಜಿಂಗೋ ಎಂದರೆ ವ್ಯಕ್ತಿಯೋರ್ವನ ನಿಕ್ ನೇಮ್ ಎನ್ನುತ್ತದೆ ಚಿತ್ರತಂಡ. ಹಾಗಿದ್ರೆ ಯಾರು ಜಿಂಗೋ ಎಂಬುದು ಸತ್ಯಕ್ಕಿರುವ ಕುತೂಹಲ.ನವನೀತ್ ಶ್ಯಾಮ್ ಸಂಗೀತ, ಶರತ್ ವಸಿಷ್ಠ ಸಂಕಲನ, ರಾಹುಲ್ ರಾಯ್ ಛಾಯಾಗ್ರಹಣ ಚಿತ್ರಕ್ಕಿದೆ.
ಶಶಾಂಕ್ ಸೋಗಲ್ ನಿರ್ದೇಶನದ ಚೊಚ್ಚಲ ಡೇರ್ ಡೆವಿಲ್ ಮುಸ್ತಾಫಾ ಸಿನಿಮಾವನ್ನು ಡಾಲಿ ಧನಂಜಯ್ ಅವರು ತಮ್ಮ ಡಾಲಿ ಪಿಕ್ಚರ್ಸ್ ವತಿಯಿಂದ ಪ್ರೆಸೆಂಟ್ ಮಾಡಿದ್ದರು. ಈ ಚಿತ್ರಕ್ಕೆ ಪ್ರೇಕ್ಷಕರು ಹಾಗೂ ವಿಮರ್ಷಕರ ವಲಯದಿಂದ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು. ಮೊದಲ ಹೆಜ್ಜೆಯಲ್ಲಿಯೇ ನಿರ್ದೇಶಕರಾಗಿ ಶಶಾಂಕ್ ಭರವಸೆ ಮೂಡಿಸಿದ್ದರು. ಹೀಗಾಗಿ ಧನಂಜಯ್ ಅವರ ಜೊತೆ ಜಿಂಗೋಗಾಗಿ ಕೈ ಜೋಡಿಸಿದ್ದಾರೆ. ಇವರಿಬ್ಬರ ಕಾಂಬೋದ ಚಿತ್ರ ಯಾವ ರೀತಿ ಇರಲಿದೆ ಎಂಬ ನಿರೀಕ್ಷೆ ಹೆಚ್ಚಾಗಿದೆ.