ನಿರ್ದೇಶಕ ಶಿವರಾಜ್ ಸಕ್ರೆ ಚಿತ್ರ – ‘ಷಡಕ್ಷರಿ ಸನ್ ಆಫ್ ಪಂಚಾಕ್ಷರಿ’ ಟೈಟಲ್ ಲಾಂಚ್
ಉಡುಂಬಾ’ ಸಿನಿಮಾ ಮೂಲಕ ಚಂದನವನದಲ್ಲಿ ಭರವಸೆ ಮೂಡಿಸಿರುವ ನಿರ್ದೇಶಕ ಶಿವರಾಜ್ ಸಕ್ರೆ ಹೊಸದೊಂದು ಸಬ್ಜೆಕ್ಟ್ ಹೊತ್ತು ನಿರ್ದೇಶನಕ್ಕೆ ರೆಡಿಯಾಗಿದ್ದಾರೆ. ಥ್ರಿಲ್ಲರ್ ಜಾನರ್ ಒಳಗೊಂಡ ಈ ಚಿತ್ರದ ಟೈಟಲ್ ಹೊಸ ವರ್ಷದಂದು ರಿವೀಲ್ ಆಗಿದೆ. ನಟ ಡಾರ್ಲಿಂಗ್ ಕೃಷ್ಣ ಟೈಟಲ್ ರಿವೀಲ್ ಮಾಡುವ ಮೂಲಕ ಶಿವರಾಜ್ ಸಕ್ರೆ ಸೆಕೆಂಡ್ ವೆಂಚರ್ ಗೆ ಶುಭ ಹಾರೈಸಿದ್ದಾರೆ. ‘ಷಡಕ್ಷರಿ ಸನ್ ಆಫ್ ಪಂಚಾಕ್ಷರಿ’ ಎಂದು ಚಿತ್ರಕ್ಕೆ ಟೈಟಲ್ ಇಡಲಾಗಿದೆ.
‘ಷಡಕ್ಷರಿ ಸನ್ ಆಫ್ ಪಂಚಾಕ್ಷರಿ’ ಚಿತ್ರ ಥ್ರಿಲ್ಲರ್ ಜಾನರ್ ಒಳಗೊಂಡಿದ್ದು, ಪಕ್ಕಾ ಕಮರ್ಶಿಯಲ್ ಹಾದಿಯಲ್ಲಿ ಚಿತ್ರವನ್ನು ಕಟ್ಟಿಕೊಡಲಾಗುತ್ತಿದೆ. ಉಡುಂಬಾ ಸಿನಿಮಾ ನಂತರ ಥ್ರಿಲ್ಲರ್ ಜಾನರ್ ಕಥೆ ಹೆಣೆದು ಒಂದಿಷ್ಟು ಹೊಸತನದೊಂದಿಗೆ ನಿರ್ದೇಶಕ ಶಿವರಾಜ್ ಸಕ್ರೆ ಕಂ ಬ್ಯಾಕ್ ಮಾಡ್ತಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಜವಾಬ್ದಾರಿಯನ್ನು ನಿಭಾಯಿಸಿ ನಿರ್ದೇಶನ ಮಾಡಲು ಸಜ್ಜಾಗಿದ್ದಾರೆ. ಚಿತ್ರದ ಪ್ರಿ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು ಜನವರಿ 28ಕ್ಕೆ ಸಿನಿಮಾ ಸೆಟ್ಟೇರಲಿದೆ.
ಚಿತ್ರದಲ್ಲಿ ಕಿಶೋರ್ ನಾಯಕ ನಟನಾಗಿ ನಟಿಸುತ್ತಿದ್ದಾರೆ. ‘ಐ1’ ಸಿನಿಮಾದ ಮೂಲಕ ನಾಯಕನಾಗಿ ಎಂಟ್ರಿ ಕೊಟ್ಟ ಕಿಶೋರ್ ಗಿದು ಎರಡನೇ ಸಿನಿಮಾ. ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ಸದ್ಯದಲ್ಲೇ ಚಿತ್ರತಂಡ ಆ ಬಗ್ಗೆ ಮಾಹಿತಿ ಹಂಚಿಕೊಳ್ಳಲಿದೆ. ರಂಗಾಯಣ ರಘು, ಸುಜಯ್ ಶಾಸ್ತ್ರಿ, ತೆಲುಗು ಹಾಗೂ ತಮಿಳು ಸಿನಿಮಾ ಖ್ಯಾತಿಯ ಮಧುಸೂದನ್ ಚಿತ್ರದ ತಾರಾಬಳಗದಲ್ಲಿದ್ದಾರೆ.
ಝೀ ವಾಹಿನಿಯ ಸರಿಗಮಪ ಮೆಂಟರ್ ಸುಚೇತನ್ ರಂಗಸ್ವಾಮಿ ಸಂಗೀತ ನಿರ್ದೇಶನ, ಕಬ್ಜ, ಮಾರ್ಟಿನ್, ನಟ ಸಾರ್ವಭೌಮ ಖ್ಯಾತಿಯ ಮಹೇಶ್ ರೆಡ್ಡಿ ಸಂಕಲನ ಚಿತ್ರಕ್ಕಿದೆ. ಭರ್ಜರಿ ಚೇತನ್, ಜೋಗಿ ಪ್ರೇಮ್, ಅಲೆಮಾರಿ ಸಂತು ಹಾಗೂ ಹೊಸ ಪ್ರತಿಭೆ ಸಂತೋಷ್ ಸಾಹಿತ್ಯದಲ್ಲಿ ಚಿತ್ರದ ಹಾಡುಗಳು ಮೂಡಿ ಬರಲಿದ್ದು, ಬೆಂಗಳೂರು, ಮಂಗಳೂರು, ಮೈಸೂರು, ಉಡುಪಿಯಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ.
ಎಸ್. ಪಿ ಪಿಕ್ಚರ್ಸ್ ಬ್ಯಾನರ್ ನಡಿ ಶೈಲಜಾ ಪ್ರಕಾಶ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ‘ಐ 1’, ‘ಮೃತ್ಯುಂಜಯ’ ಸಿನಿಮಾ ನಂತರ ಎಸ್ ಪಿ ಪಿಕ್ಚರ್ಸ್ ನಿರ್ಮಿಸುತ್ತಿರುವ ಐದನೇ ಸಿನಿಮಾ ಇದಾಗಿದೆ.