ಮಾರ್ಚ್ 22 ರಿಂದ “ಲೈನ್ ಮ್ಯಾನ್” ಚಿತ್ರ ರಾಜ್ಯಾದ್ಯಂತ ಬಿಡುಗಡೆ
• ಪರ್ಪಲ್ ರಾಕ್ ಸಂಸ್ಥೆ ನಿರ್ಮಾಣದ ಚಿತ್ರಕ್ಕೆ ರಘು ಶಾಸ್ತ್ರಿ ನಿರ್ದೇಶನ
• ಕನ್ನಡದಲ್ಲಿ ಮತ್ತೊಂದು ಸದಭಿರುಚಿಯ ಚಿತ್ರ
• ಕನ್ನಡದ ಜೊತೆಗೆ ತೆಲುಗಿನಲ್ಲಿ ಬಿಡುಗಡೆಗೆ ರೆಡಿ
ಒಂದು ಹಳ್ಳಿಯಲ್ಲಿ ಯಾರಿಂದಲೂ ಮಾಡಲಾಗದ ಬದಲಾವಣೆ ತಂದ ಲೈನ್ ಮ್ಯಾನ್ ಒಬ್ಬನ ಕಥಾಹಂದರ ಹೊಂದಿರುವ “ಲೈನ್ ಮ್ಯಾನ್” ಚಿತ್ರ ಮಾಚ್ 22 ರಿಂದ ರಾಜ್ಯಾದ್ಯಂತ ತೆರೆಕಾಣುತ್ತಿದೆ.
ಕನ್ನಡ ಚಿತ್ರರಂಗಕ್ಕೆ ಸದಭಿರುಚಿಯ ಚಿತ್ರಗಳನ್ನು ನೀಡುತ್ತಾ ಬಂದಿರುವ ಪರ್ಪಲ್ ರಾಕ್ ಸಂಸ್ಥೆಯಿಂದ ನಿರ್ಮಾಣವಾಗಿರುವ “ಲೈನ್ ಮ್ಯಾನ್” ಚಿತ್ರವು ಕನ್ನಡ ಹಾಗೂ ತೆಲುಗಿನಲ್ಲಿ ನಿರ್ಮಾಣವಾಗಿದ್ದು, ಎರಡು ಭಾಷೆಗಳಲ್ಲೂ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ಮೊಬೈಲ್, ವಾಟ್ಸಾಪ್ ಅಂತ ಅದರಲ್ಲೇ ಮುಳುಗಿರುವ ಜನ ಒಟ್ಟಾಗಿ ಕೂತು ಮಾತಾಡುವುದು, ಖುಷಿಯಾಗಿರುವುದನ್ನೇ ಮರೆತುಬಿಟ್ಟಿದ್ದಾರೆ. ಭಾವನೆಗಳಿಗೆ ಸ್ಪಂದಿಸುವುದು ಇತ್ತೀಚಿಗೆ ಬಹಳ ಕಡಿಮೆಯಾಗಿದೆ. ಇಂಥ ಸುಂದರ ಕ್ಷಣಗಳನ್ನು “ಲೈನ್ ಮ್ಯಾನ್” ಚಿತ್ರ ನೆನಪಿಸುತ್ತದೆ. ಚಾಮರಾಜನಗರದ ಚಂದಕವಾಡಿಯಲ್ಲಿ ಇಡೀ ಚಿತ್ರವನ್ನು ಚಿತ್ರೀಕರಿಸಲಾಗಿದೆ. ಇತ್ತೀಚೆಗೆ ನಡೆದ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಲ್ಲಿ ಪ್ರದರ್ಶನಗೊಂಡು ಮೆಚ್ಚುಗೆ ಪಡೆದುಕೊಂಡಿದೆ.
ಪರ್ಪಲ್ ರಾಕ್ ಸಂಸ್ಥೆಯಿಂದ ನಿರ್ಮಾಣವಾಗಿರುವ ಮೂರನೇ ಚಿತ್ರವಿದು. ಯತೀಶ್ ವೆಂಕಟೇಶ್, ಗಣೇಶ್ ಪಾಪಣ್ಣ, ಶ್ರೀನಿವಾಸ್ ಬಿಂಡಿಗನವಿಲೆ, ಅಜಯ್ ಅಪರೂಪ್ ಈ ಚಿತ್ರದ ನಿರ್ಮಾಪಕರು.
ತೆಲುಗಿನ ಜನಪ್ರಿಯ ನಟ ತ್ರಿಗುಣ್ ಈ ಚಿತ್ರದ ನಾಯಕನಾಗಿದ್ದು, ಕಾಜಲ್ ಕುಂದರ್, ಬಿ.ಜಯಶ್ರೀ, ಮೈಕೋ ನಾಗರಾಜ್, ಹರಿಣಿ, ಕಮಲ, ಹಾಗೂ “ತರ್ಲೆನನ್ಮಗ” ಖ್ಯಾತಿಯ ಅಂಜಲಿ ಈ ಚಿತ್ರದ ಪ್ರಮುಖ ತಾರಾಬಳಗದಲ್ಲಿದ್ದಾರೆ.
ಶಾಂತಿ ಸಾಗರ್ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಮಣಿಕಾಂತ್ ಕದ್ರಿ ಸಂಗೀತ ನೀಡಿದ್ದಾರೆ. ಪ್ರಚುರ ಪಿ ಪಿ , ಜ್ಯೋತಿ ರಘು ಶಾಸ್ತ್ರೀ ಹಾಗೂ ಮಣಿಕಾಂತ್ ಕದ್ರಿ ಈ ಚಿತ್ರದ ಸಹ ನಿರ್ಮಾಪಕರೂ ಹೌದು.