Harshika Poonachcha - Vijay Raghavendra Jodi Kasinasara's CD was released by CM

ಹರ್ಷಿಕಾ ಪೂಣಚ್ಚ –ವಿಜಯ್ ರಾಘವೇಂದ್ರ ಜೋಡಿ ಕಾಸಿನಸರ ಸಿಡಿ ಬಿಡುಗಡೆ ಮಾಡಿದ ಸಿಎಂ - CineNewsKannada.com

ಹರ್ಷಿಕಾ ಪೂಣಚ್ಚ –ವಿಜಯ್ ರಾಘವೇಂದ್ರ ಜೋಡಿ ಕಾಸಿನಸರ ಸಿಡಿ ಬಿಡುಗಡೆ ಮಾಡಿದ ಸಿಎಂ

ಸದಭಿರುಚಿಯ ಚಿತ್ರಗಳ ನಿರ್ದೇಶಕ ಎನ್.ಆರ್. ನಂಜುಂಡೇಗೌಡ ಅವರ ನಿರ್ದೇಶನ ಸಾರಥ್ಯದಲ್ಲಿ ನಟ ವಿಜಯ ರಾಘವೇಂದ್ರ ಒಬ್ಬ ಪ್ರಗತಿಪರ ರೈತನಾಗಿ ಕಾಣಿಸಿಕೊಂಡಿರುವ ಚಿತ್ರ ಕಾಸಿನಸರ. ಈ ಚಿತ್ರದ ಆಡಿಯೋ, ಟ್ದೈಲರ್ ಬಿಡುಗಡೆ ಸಮಾರಂಭ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆಯಿತು, ಸಿಎಂ. ಬಸವರಾಜ ಬೊಮ್ಮಾಯಿ ಅವರು ಚಿತ್ರದ ಹಾಡುಗಳ ಸಿಡಿ ಬಿಡುಗಡೆ ಮಾಡಿ ಶುಭ ಹಾರೈಸಿದರು. ನಂತರ ಸುರೇಶ್ ಹೆಬ್ಳೀಕರ ಅನಸೂಯಮ್ಮ, ಬಸವರಾಜ್ ಸೇರಿ ಐವರು ಕೃಷಿ ಸಾಧಕರಿಗೆ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಸಿಎಂ ಮಾತನಾಡುತ್ತ ಹಳ್ಳಿಯ ಬದುಕು ಬಹಳ ಸೊಗಸಾದ್ದು, ಪ್ರತಿಯೊಬ್ಬರೂ ಸುಖ ದುಃಖಗಳಲ್ಲಿ ಭಾಗಿಯಾಗುತ್ತಾರೆ. ಈ ಥರದ ಜೀವನ ನಮ್ಮ ದೇಶದಲ್ಲಿ ಬಿಟ್ಟು ಬೇರೆಲ್ಲೂ ಇಲ್ಲ. ಮೌಲ್ಯಗಳಿಗೆ ಒಂದು ಬೆಲೆಯಿದೆ. ಕೃಷಿಕಾಯಕ ಬಹಳ ಪವಿತ್ರವಾದುದು. ಗುಡ್ಡಗಾಡಿನ ಜನ ಪರಿಶ್ರಮವಂತರು. ಕರಾವಳಿಯ ಜನರ ಬದುಕು ಅನಿಶ್ಚಿತ. ಆದರೆ ಬಯಲುಸೀಮೆಯ ಜನ ಭರವಸೆಯಲ್ಲಿ ಬದುಕುತ್ತಾರೆ. ಅನಿಶ್ಚಿತತೆಯ ಮಧ್ಯೆ ಭರವಸೆ, ಇದು ಭೂಮಿತಾಯ ಬಳುವಳಿ. ಒಂದು ಕಾಳು ಹಾಕಿದರೆ ನೂರಾರು ಕಾಳು ವಾಪಸ್ ಬರುತ್ತದೆ. ನಮಗೆ ಸ್ವತಂತ್ರ ಬಂದಾಗ ಜನಸಂಖ್ಯೆ 33 ಕೋಟಿ ಇತ್ತು. ಈಗ 133 ಕೋಟಿ ಆಗಿದೆ. ಅದು ಸಾವಯುವ ಕೃಷಿ ಇರಬಹುದು, ನೈಸರ್ಗಿಕ ಕೃಷಿ ಇರಬಹುದು, ಹೆಚ್ಚು ಆಹಾರ ಉತ್ಪಾದನೆ ಮಾಡಬೇಕಿದೆ. ಕಾಸಿನಸರ ಚಿತ್ರದಲ್ಲಿ ಈ ಪ್ರಯತ್ನ ನಡೆದಿದೆ ಎಂದುಕೊಂಡಿದ್ದೇನೆ. ಎಲ್ಲರೂ ಈ ಚಿತ್ರವನ್ನು ನೋಡಬೇಕು, ಅದರ ಮೌಲ್ಯ ಅರಿತುಕೊಳ್ಳಬೇಕು. ನಾನು ನಿರ್ಮಾಪಕ, ನಟನಲ್ಲ, ನಟನೆ ನನಗೆ ಬರಲ್ಲ, ಸಹಜ ಬದುಕು ನನ್ನದು, ಗೌಡರು ಸೂಕ್ಷ್ಮ ವಿಚಾರಗಳನ್ನಿಟ್ಟುಕೊಂಡು ಈ ಸಿನಿಮಾ ಮಾಡಿದ್ದಾರೆ ಎಂದು ಹೇಳಿದರು.
ಚಿತ್ರದಲ್ಲಿ ಒಂದು ಪಾತ್ರವನ್ನೂ ನಿರ್ವಹಿಸಿರುವ ಸಚಿವ ಸೋಮಶೇಖರ್ ಮಾತನಾಡುತ್ತ, ಗ್ರಾಮೀಣ ಸೊಗಡಿನಲ್ಲಿ ನಡೆಯುವ ಕೌಟುಂಬಿಕ ಕಥಾಹಂದರ ಈ ಚಿತ್ರದಲ್ಲಿದೆ. ನನ್ನ ಸ್ನೇಹಿತ ದೊಡ್ಡನಾಗಯ್ಯ ಅವರಿಗೆ ಕೃಷಿ ಎಂದರೆ ತುಂಬಾ ಅಚ್ಚುಮೆಚ್ಚು. ಗ್ರಾಮೀಣ ಭಾಗದಿಂದಲೇ ಬಂದ ಅವರು ಅನೇಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಈಗ ಚಿತ್ರನಿರ್ಮಾಣವನ್ನೂ ಮಾಡಿದ್ದಾರೆ ಎಂದು ಹೇಳಿದರು.

ನಾಯಕ ವಿಜಯ ವಿಜಯ್ ರಾಘವೇಂದ್ರ ಮಾತನಾಡಿ,ಒಬ್ಬ ನಟನಿಗೆ ಎಲ್ಲಾ ಥರದ ಪಾತ್ರಗಳನ್ನು ಮಾಡುವ ಅವಕಾಶ ಸಿಗುತ್ತದೆ. ಆದರೆ ಒಬ್ಬ ರೈತನ ಪಾತ್ರ ಸಿಗುವುದು ಅಪರೂಪ, ಗೌಡರು ಈ ಸಿನಿಮಾದ ಕಥೆ, ಟೈಟಲ್ ಹೇಳಿದಾಗ ತುಂಬಾ ಖುಷಿಯಾಯ್ತು. ಕಾಸಿನಸರ ತುಂಬಾ ತೂಕವಾದ ಹೆಸರು, ಅದರ ಹಿಂದೆ ದೊಡ್ಡ ಶ್ರಮವಿದೆ. ಇಲ್ಲಿ ಕಾಸಿನಸರ ಎನ್ನುವುದು ಬರೀ ಒಡವೆಯಲ್ಲ. ಅದಕ್ಕೊಂದು ಒಳಾರ್ಥವಿದೆ. ಶ್ರೀಧರ್ ಸಂಭ್ರಮ್ ಅವರು ಭರಣಿಯ ಮಳೆ ಎಂಬ ಅದ್ಭುತವಾಗಿ ಮಾಡಿದ್ದಾರೆ. ವೇಣು ಚಿತ್ರವನ್ನು ಅಷ್ಟೇ ಅದ್ಭುತವಾಗಿ ಸೆರೆಹಿಡಿದಿದ್ದಾರೆ. ಚಿತ್ರದಲ್ಲಿ ಸುಂದರೇಶ ಎಂಬ ವ್ಯವಸಾಯದ ಮೇಲೆ ಭರವಸೆ ಇಟ್ಟಿರುವ ರೈತ ಹೋರಾಟಗಾರನಾಗಿ ನಟಿಸಿದ್ದೇನೆ ಎಂದರು.

ನಾಯಕಿ ಹರ್ಷಿಕಾ ಪೂಣಚ್ಛ ಮಾತನಾಡಿ, ಈ ಚಿತ್ರದಲ್ಲಿ ನಾನು ಕೃಷಿ ವಿದ್ಯಾರ್ಥಿನಿ ಸಂಪಿಗೆಯ ಪಾತ್ರ ಮಾಡಿದ್ದೇನೆ. ಈಗಿನ ಹುಡುಗಿಯರು ಓದುಮುಗಿಸಿ ಐಟಿ ಕಂಪನಿಗಳಲ್ಲಿ, ವಿದೇಶಗಳಲ್ಲಿ ಕೆಲಸ ಹುಡುಕುತ್ತಾರೆ, ಆದರೆ ನಾನು ಕೃಷಿಯಲ್ಲಿ ತೊಡಗಿಸಿಕೊಳ್ಳುತ್ತೇನೆ. ಅಭಿನಯಕ್ಕೆ ಸಾಕಷ್ಟು ಪ್ರಾಮುಖ್ಯತೆ ಇರೋ ಪಾತ್ರ ಎಂದರು. ಸಚಿವೆ, ನಟಿ ತಾರಾ ಮಾತನಾಡಿ ನಾನು ಹಿಂದೆ ಹೆಬ್ಬೆಟ್ ರಾಮಕ್ಕದಲ್ಲಿ ಉಳುಮೆಯನ್ನೂ ಮಾಡಿದ್ದೇನೆ. ರಾಜ್ಯವನ್ನೂ ಆಳಿದ್ದೇನೆ. ಈ ಸಿನಿಮಾದಲ್ಲಿ ನಾನೂ ಅಭಿನಯಿಸಬೇಕಿತ್ತು, ಒತ್ತಡದಿಂದ ಆಗಲಿಲ್ಲ, ದೊಡ್ಡನಾಗಯ್ಯ ನಮ್ಮ ಮಣ್ಣಿನ ಕಥೆಗಳನ್ನು ಜನರಿಗೆ ತಲುಪಿಸುವ ಪ್ರಯತ್ನ ಮಾಡಿದ್ದಾರೆ ಎಂದರು.
ನಿರ್ದೇಶಕ ನಂಜುಂಡೇಗೌಡ ಮಾತನಾಡಿ, ‘ಇಲ್ಲಿ ಕಾಸಿನ ಸರಕ್ಕೆ ಅದರದೇ ಮೌಲ್ಯ, ಪರಂಪರೆ, ಸಂಪ್ರದಾಯವಿದೆ. ಅದೇ ರೀತಿ ಕೃಷಿಗೂ ತನ್ನದೇ ಆದ ಪರಂಪರೆ ಸಂಪ್ರದಾಯವಿದೆ. ಅದನ್ನು ಇಲ್ಲಿ ಕೃಷಿಭೂಮಿಗೆ ಹೋಲಿಸಿದ್ದೇನೆ ಎಂದರು.
ನಿರ್ಮಾಪಕರಾದ ದೊಡ್ಡನಾಗಯ್ಯ ಮಾತನಾಡಿ, ನಾನೂ ಒಬ್ಬ ರೈತ, ಇಂದಿನ ದಿನಗಳಲ್ಲಿ ಕೌಟುಂಬಿಕ ಸಂಬಂಧಗಳು ದೂರವಾಗುತ್ತಿವೆ. ನಮ್ಮ ಸಂಸ್ಕೃತಿ ಮರೆಯಾಗುತ್ತಿದೆ. ಜನ ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಹೀಗಾಗಿ ಇವುಗಳ ಮಹತ್ವವನ್ನು ಸಾರುವ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಚಿತ್ರವನ್ನು ಮಾಡಿದ್ದೇವೆ ಎಂದರು.

ಪೂರ್ತಿಯಾಗಿ ಓದಿ

Editor

Leave a Reply

Your email address will not be published. Required fields are marked *

error: Our contents are protected!! We discourage piracy of our website articles and contents. Thanks -Admin